Homeಮುಖಪುಟನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ

ನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ

ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಲೆಂದು ಜರ್ಮನ್ ನೆರವು ಪಡೆಯಲು ನಾವು ಸರ್ವಥಾ ಬಯಸುವುದಿಲ್ಲ. ಸರಿಯಾಗಿ ಸಂಘಟಿಸಿದಲ್ಲಿ ಜಗತ್ತಿನ ಅತ್ಯಂತ ಹಿಂಸಾತ್ಮಕವಾದ ಎಲ್ಲಾ ಶಕ್ತಿಗಳ ಎಂತಹ ಕೂಟಕ್ಕೂ ಸರಿಸಾಟಿಯಾಗಬಲ್ಲ ಶಕ್ತಿಯನ್ನು ನಾವು ಅಹಿಂಸೆಯಲ್ಲಿ ಕಂಡುಕೊಂಡಿದ್ದೇವೆ.

- Advertisement -
- Advertisement -

1940ರಲ್ಲಿ ಎರಡನೇ ಮಹಾಯುದ್ಧದ ವೇಳೆ ಜರ್ಮನಿಯ ನಾಯಕ ಅಡಾಲ್ಫ್ ಹಿಟ್ಲರ್ ಗೆ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಪತ್ರವೊಂದನ್ನು ಬರೆದಿದ್ದರು. ಅದನ್ನು ಹಿರಿಯ ಹೋರಾಟಗಾರರಾದ ಸಿರಿಮನೆ ನಾಗರಾಜ್ ರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.

ಆತ್ಮೀಯ ಮಿತ್ರ,

ನಾನು ನಿಮ್ಮನ್ನು ಆತ್ಮೀಯ ಮಿತ್ರನೆಂದು ಸಂಬೋಧಿಸುತ್ತಿರುವುದು ಬರೀ ಔಪಚಾರಿಕವಲ್ಲ. ನಾನು ಯಾರನ್ನೂ ಶತ್ರುವೆಂದು ತಿಳಿಯುವುದಿಲ್ಲ.

ಯಾವುದೇ ಜನಾಂಗ, ಬಣ್ಣ, ಪಂಥಗಳ ಗೊಡವೆಯಿಲ್ಲದೆ ಮನುಷ್ಯ ಕುಲದೊಂದಿಗೆ ಸ್ನೇಹ ಬೆಳೆಸಿ, ಇಡೀ ಮಾನವತೆಯನ್ನು ಮಿತ್ರನನ್ನಾಗಿ ಮಾಡಿಕೊಳ್ಳುವುದು ಕಳೆದ ಮೂವತ್ತಮೂರು ವರ್ಷಗಳಿಂದಲೂ ಬದುಕಿನಲ್ಲಿ ನನ್ನ ವೃತ್ತಿಯಾಗಿದೆ. ಇಂತಹ ಸಾರ್ವತ್ರಿಕ ವಿಶ್ವಸ್ನೇಹಿ ತತ್ವದ ಪ್ರಭಾವದಡಿ ಬದುಕುತ್ತಿರುವ ಮಾನವತೆಯ ಗಣನೀಯ ಭಾಗದ ಜನರು ನಿಮ್ಮ ಕೃತ್ಯವನ್ನು ಯಾವ ರೀತಿ ಪರಿಭಾವಿಸುತ್ತಾರೆಂಬುದನ್ನು ತಿಳಿಯಲು ಸಮಯವೂ, ಅಂತಹ ಅಪೇಕ್ಷೆಯೂ ನಿಮ್ಮಲ್ಲಿದೆ ಎಂದು ನಂಬುತ್ತೇನೆ. ನಿಮ್ಮ ಪರಾಕ್ರಮದ ಬಗೆಗಾಗಲಿ, ಮಾತೃಭೂಮಿಯನ್ನು ಕುರಿತ ನಿಮ್ಮ ನಿಷ್ಠೆಯ ಬಗೆಗಾಗಲಿ ನಮಗೆ ಯಾವುದೇ ಸಂದೇಹವೂ ಇಲ್ಲ; ಅಥವಾ ನಿಮ್ಮ ವಿರೋಧಿಗಳು ನಿಮ್ಮನ್ನು ವರ್ಣಿಸುವ ರೀತಿಯಲ್ಲಿ ನೀವೊಬ್ಬ ರಾಕ್ಷಸನೆಂದೂ ನಾವು ನಂಬುವುದಿಲ್ಲ. ಆದರೆ ನಿಮ್ಮ ಅನೇಕ ಕೃತ್ಯಗಳು ರಾಕ್ಷಸ ಸದೃಶವಾಗಿವೆ, ಮಾನವ ಘನತೆಗೆ ಒಪ್ಪುವಂತಿಲ್ಲ ಎಂಬುದನ್ನು ನಿಮ್ಮ ಹಾಗೂ ನಿಮ್ಮ ಮಿತ್ರರು ಮತ್ತು ಅಭಿಮಾನಿಗಳ ಬರಹಗಳು ಮತ್ತು ಘೋಷಣೆಗಳು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ತೋರಿಸುತ್ತಿವೆ; ವಿಶೇಷವಾಗಿ ಸಾರ್ವತ್ರಿಕ ವಿಶ್ವಸ್ನೇಹದಲ್ಲಿ ನಂಬಿಕೆಯಿರುವ ನನ್ನಂತಹ ಮನುಷ್ಯರ ದೃಷ್ಟಿಯಲ್ಲಿ ಹಾಗೆ ತೋರುತ್ತಿದೆ. ಜೆಕೊಸ್ಲೊವೇಕಿಯ, ಪೋಲೆಂಡ್ ಹಾಗೂ ಡೆನ್ಮಾರ್ಕಿನ ವಿರುದ್ಧ ನೀವೆಸಗಿದ ಅಪಮಾನ, ಸುಲಿಗೆ ಮತ್ತು ದಬ್ಬಾಳಿಕೆಗಳು ಇಂತಹ ಕೃತ್ಯಗಳಾಗಿವೆ. ಬದುಕಿನ ಬಗೆಗಿನ ನಿಮ್ಮ ದೃಷ್ಟಿಕೋನವು ಇಂತಹ ಸೂರೆಯನ್ನು ಸದ್ಗುಣವೆಂದು ಪರಿಗಣಿಸುತ್ತದೆಂಬುದು ನನಗೆ ಗೊತ್ತಿದೆ. ಆದರೆ ಅಂಥವು ಮಾನವತೆಗೆ ಕಳಂಕಪ್ರಾಯವಾದ ಕೃತ್ಯಗಳೆಂದು ಪರಿಭಾವಿಸುವುದನ್ನು ನಮಗೆ ಚಿಕ್ಕಂದಿನಿಂದಲೂ ಕಲಿಸಲಾಗಿದೆ. ಆದಕಾರಣ ನಾವು ಬಹುಶಃ ನಿಮ್ಮ ಶಸ್ತ್ರಾಸ್ತ್ರ, ತೋಳ್ಬಲಗಳಿಗೆ ಯಶಸ್ಸನ್ನು ಕೋರಲಾರೆವು. ಆದರೆ ನಮ್ಮದು ಒಂದು ಅನನ್ಯವಾದ ನಿಲುವು. ನಾವು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನೂ ನಾಜಿಸಂನಷ್ಟೇ ತೀವ್ರವಾಗಿ ವಿರೋಧಿಸುತ್ತೇವೆ.

ಇವೆರಡರ ನಡುವೆ ವ್ಯತ್ಯಾಸ ಇರುವುದಾದರೆ ಅದು ಪ್ರಮಾಣದಲ್ಲಿ ಮಾತ್ರ. ಬ್ರಿಟಿಷ್ ಆಳ್ವಿಕೆಯು ಯಾರೂ ಸಮರ್ಥಿಸಲಾಗದ ವಿಧಾನಗಳಿಂದ ಮಾನವ ಕುಲದ ಐದರಲ್ಲೊಂದು ಭಾಗವನ್ನು ತನ್ನ ಅಡಿಯಾಳಾಗಿ ಮಾಡಿಕೊಂಡಿದೆ. ಆದರೆ ಅದಕ್ಕೆ ನಮ್ಮ ವಿರೋಧವು ಬ್ರಿಟಿಷ್ ಜನತೆಗೆ ಹಾನಿ ಮಾಡುವುದಲ್ಲ. ನಾವು ಅವರನ್ನು ಪರಿವರ್ತಿಸಲು ಬಯಸುತ್ತೇವೆ, ಯುದ್ಧರಂಗದಲ್ಲಿ ಸೋಲಿಸುವುದಲ್ಲ. ನಮ್ಮದು ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಿಃಶಸ್ತ್ರವಾದ ಬಂಡಾಯ. ನಾವು ಅವರನ್ನು ಪರಿವರ್ತಿಸುತ್ತೇವೋ ಇಲ್ಲವೋ; ಆದರೆ ಅವರ ಆಳ್ವಿಕೆಯನ್ನು ಅಹಿಂಸಾತ್ಮಕ ಅಸಹಕಾರದ ಮೂಲಕ ಅಸಾಧ್ಯಗೊಳಿಸಲಂತೂ ದೃಢ ನಿರ್ಧಾರ ಮಾಡಿದ್ದೇವೆ. ನಮ್ಮ ಈ ವಿಧಾನವು ಸ್ವಭಾವತಃ ಸಮರ್ಥನೀಯವಾಗಿ ಕಾಣುವುದಿಲ್ಲ. ಬಲಿಪಶುವು ಒಪ್ಪಿಗೆಯಿಂದಲೋ ಅಥವಾ ಬಲವಂತದಿಂದಲೋ ಒಂದು ಮಟ್ಟಿಗಾದರೂ ಸಹಕರಿಸದಿದ್ದಲ್ಲಿ ಯಾವನೇ ಲೂಟಿಕೋರನು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ತಿಳುವಳಿಕೆ ನಮ್ಮ ಈ ವಿಧಾನಕ್ಕೆ ಆಧಾರ. ನಮ್ಮನ್ನಾಳುತ್ತಿರುವವರು ನಮ್ಮ ದೇಶವನ್ನೂ ನಮ್ಮ ದೇಹಗಳನ್ನೂ ಆಕ್ರಮಿಸಿಕೊಳ್ಳಬಹುದು, ಆದರೆ ನಮ್ಮ ಆತ್ಮಗಳನ್ನಲ್ಲ. ನಮ್ಮ ದೇಹ-ದೇಶಗಳನ್ನು ಅವರು ಪ್ರತಿಯೊಬ್ಬ ಭಾರತೀಯ ಪುರುಷ-ಮಹಿಳೆ-ಮಕ್ಕಳು ಎಲ್ಲರನ್ನೂ ನಾಶ ಮಾಡುವುದರಿಂದ ಮಾತ್ರವೇ ವಶಪಡಿಸಿಕೊಳ್ಳಲು ಸಾಧ್ಯ.

ಇದೇ ಪ್ರಮಾಣದ ಶೌರ್ಯ ಎಲ್ಲರಲ್ಲೂ ಕಾಣದಿರಬಹುದು, ಒಂದು ಮಟ್ಟಿನ ಭಯವು ಬಂಡಾಯವನ್ನು ಅಷ್ಟರಮಟ್ಟಿಗೆ ತಗ್ಗಿಸಬಹುದು ಎನ್ನುವುದು ನಿಜ. ಆದರೆ ಇದು ಮುಖ್ಯವಲ್ಲ. ಯಾಕೆಂದರೆ, ಲೂಟಿಕೋರರ ವಿರುದ್ಧ ಯಾವುದೇ ದ್ವೇಷ ಭಾವನೆಯಿಲ್ಲದ, ಆದರೆ ಅವರೆದುರು ಮಂಡಿಯೂರುವ ಬದಲು ತಮ್ಮ ಪ್ರಾಣವನ್ನೇ ಬಲಿಗೊಡಲು ಸಿದ್ಧರಿರುವ ಭಾರತೀಯ ಪುರುಷರು-ಮಹಿಳೆಯರು ಯೋಗ್ಯ ಸಂಖ್ಯೆಯಲ್ಲಿ ದೊರೆತಲ್ಲಿ ಹಿಂಸೆ, ದಬ್ಬಾಳಿಕೆಗಳಿಂದ ಸ್ವತಂತ್ರಗೊಳ್ಳುವ ಹಾದಿಯನ್ನು ಅವರು ತೋರಿಸಿಕೊಡಬಲ್ಲರು. ಭಾರತದಲ್ಲಿ ಇಂತಹ ಪುರುಷರು-ಮಹಿಳೆಯರು ನೀವು ನಿರೀಕ್ಷಿಸಿರದಷ್ಟು ದೊಡ್ಡ ಸಂಖ್ಯೆಯಲ್ಲಿ ದೊರೆಯುತ್ತಾರೆಂಬುದನ್ನು ನೀವು ನಂಬಬೇಕು. ಕಳೆದ ಇಪ್ಪತ್ತು ವರ್ಷಗಳಿಂದ ಅವರು ಅಂತಹ ತರಬೇತಿಯನ್ನು ಪಡೆಯುತ್ತಿದ್ದಾರೆ. ನಾವು ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯಲು ಕಳೆದ ಅರ್ಧ ಶತಮಾನದಿಂದಲೂ ಪ್ರಯತ್ನಿಸುತ್ತಿದ್ದೇವೆ. ಸ್ವಾತಂತ್ರ್ಯ ಚಳವಳಿ ಇಂದು ಹಿಂದೆಂದೂ ಇರದಿದ್ದಷ್ಟು ಪ್ರಬಲವಾಗಿದೆ. ಅತ್ಯಂತ ಬಲಿಷ್ಠ ರಾಜಕೀಯ ಸಂಘಟನೆಯಾದ ಕಾಂಗ್ರೆಸ್ಸು ಈ ಧ್ಯೇಯವನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಅಹಿಂಸಾತ್ಮಕ ಪ್ರಯತ್ನದಿಂದಲೇ ನಾವು ಗಣನೀಯ ಪ್ರಮಾಣದ ಯಶಸ್ಸನ್ನು ಸಾಧಿಸಿದ್ದೇವೆ. ಜಗತ್ತಿನಲ್ಲೇ ಅತ್ಯಂತ ಸಂಘಟಿತವಾದ ಹಿಂಸೆಯನ್ನು ಪ್ರತಿನಿಧಿಸುತ್ತಿರುವ ಬ್ರಿಟಿಷ್ ಅಧಿಕಾರದ ವಿರುದ್ಧ ಹೋರಾಡಲು ಸರಿಯಾದ ವಿಧಾನಕ್ಕಾಗಿ ನಾವು ತಡಕಾಡುತ್ತಿದ್ದೆವು. ನೀವು ಅದಕ್ಕೆ ಸವಾಲು ಹಾಕಿದ್ದೀರಿ. ಜರ್ಮನ್ ಅಥವಾ ಬ್ರಿಟಿಷ್ – ಇವೆರಡರಲ್ಲಿ ಯಾವುದು ಹೆಚ್ಚು ಸುಸಂಘಟಿತವಾದ ಹಿಂಸೆ ಎಂಬುದನ್ನು ಕಾದು ನೋಡಬೇಕಿದೆ. ನಮ್ಮ ಪಾಲಿಗೆ ಹಾಗೂ ಜಗತ್ತಿನ ಇತರೆಲ್ಲ ಯೂರೋಪೇತರ ಜನಾಂಗಗಳ ಪಾಲಿಗೆ ಬ್ರಿಟಿಷ್ ದಬ್ಬಾಳಿಕೆಯೆಂದರೆ ಏನೆಂಬುದು ಅರಿವಿದೆ.

photo courtesy: Not Even Past

ಆದರೆ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಲೆಂದು ಜರ್ಮನ್ ನೆರವು ಪಡೆಯಲು ನಾವು ಸರ್ವಥಾ ಬಯಸುವುದಿಲ್ಲ. ಸರಿಯಾಗಿ ಸಂಘಟಿಸಿದಲ್ಲಿ ಜಗತ್ತಿನ ಅತ್ಯಂತ ಹಿಂಸಾತ್ಮಕವಾದ ಎಲ್ಲಾ ಶಕ್ತಿಗಳ ಎಂತಹ ಕೂಟಕ್ಕೂ ಸರಿಸಾಟಿಯಾಗಬಲ್ಲ ಶಕ್ತಿಯನ್ನು ನಾವು ಅಹಿಂಸೆಯಲ್ಲಿ ಕಂಡುಕೊಂಡಿದ್ದೇವೆ. ನಾನು ಮೊದಲೇ ಹೇಳಿದಂತೆ, ಅಹಿಂಸಾ ತಂತ್ರದಲ್ಲಿ ಸೋಲು ಎಂಬುದಿಲ್ಲ. ಇರುವುದೆಲ್ಲ – ಕೊಲ್ಲದೆ ಅಥವಾ ನೋಯಿಸದೆಯೇ “ಮಾಡು ಇಲ್ಲವೆ ಮಡಿ” ಅಷ್ಟೇ. ಅದಕ್ಕೆ ಯಾವುದೇ ಖರ್ಚಿಲ್ಲ; ಅಥವಾ ಯಾವ ವಿನಾಶದ ವಿಜ್ಞಾನವನ್ನು ನೀವು ಅತ್ಯುಚ್ಚ ಮಟ್ಟಕ್ಕೆ ಬೆಳೆಸಿದ್ದೀರೋ, ಅದರ ನೆರವಿಲ್ಲದೆಯೇ ಇದನ್ನು ವಾಸ್ತವದಲ್ಲಿ ಬಳಕೆಗೆ ತರಲು ಸಾಧ್ಯ. ಇದು ಯಾರದ್ದೇ ಏಕಸ್ವಾಮ್ಯವಲ್ಲ ಎನ್ನುವುದು ನಿಮ್ಮ ಅರಿವಿಗೆ ಬಂದಿಲ್ಲ ಎನ್ನುವುದೇ ನನಗೊಂದು ಆಶ್ಚರ್ಯವಾಗಿದೆ. ಬ್ರಿಟಿಷರಲ್ಲದಿದ್ದರೆ ಮತ್ಯಾವುದೋ ಒಂದು ಶಕ್ತಿ ನಿಮ್ಮ ವಿಧಾನವನ್ನು ಇನ್ನಷ್ಟು ಸುಧಾರಿಸಿಕೊಂಡು ನಿಮ್ಮದೇ ಹತಾರದಿಂದ ನಿಮ್ಮನ್ನು ಖಂಡಿತಾ ಸೋಲಿಸುತ್ತದೆ. ಮುಂದೆ ನಿಮ್ಮ ಜನತೆ ಅಭಿಮಾನ ಪಡುವಂತಹ ಯಾವುದೇ ಉದಾತ್ತ ಪರಂಪರೆಯನ್ನೂ ನೀವು ಹುಟ್ಟುಹಾಕುತ್ತಿಲ್ಲ. ಕ್ರೂರ ಕೃತ್ಯಗಳನ್ನು ಎಷ್ಟೇ ಕೌಶಲ್ಯಪೂರ್ಣವಾಗಿ ಯೋಜಿಸಿರಲಿ, ಅವುಗಳ ವೃತ್ತಾಂತಗಳನ್ನು ವಿವರಿಸಲು ಅವರಿಗೆಂದೂ ಹೆಮ್ಮೆ ಎನ್ನಿಸುವುದು ಸಾಧ್ಯವಿಲ್ಲ.

ಆದ್ದರಿಂದ ಯುದ್ಧವನ್ನು ನಿಲ್ಲಿಸಬೇಕೆಂದು ನಾನು ಮಾನವತೆಯ ಪರವಾಗಿ ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ. ನಿಮಗೂ ಬ್ರಿಟಿನ್ನಿಗೂ ನಡುವಿನ ಎಲ್ಲಾ ವಿವಾದಗಳನ್ನು ನಿಮಗಿಬ್ಬರಿಗೂ ಒಪ್ಪಿಗೆಯಾಗುವ ಅಂತರರಾಷ್ಟ್ರೀಯ ನ್ಯಾಯಮಂಡಳಿಯೊಂದಕ್ಕೆ ವಹಿಸಿದಲ್ಲಿ ನಿಮಗೆ ಯಾವುದೇ ನಷ್ಟವೂ ಇಲ್ಲ. ಒಂದು ವೇಳೆ ನೀವು ಯುದ್ಧದಲ್ಲಿ ಗೆದ್ದರೂ ಸಹ ನಿಮ್ಮದು ಸರಿಯೆಂದೇನೂ ಅದರಿಂದ ಸಾಬೀತಾಗುವುದಿಲ್ಲ. ವಿನಾಶದ ನಿಮ್ಮ ಶಕ್ತಿ ಅವರದ್ದಕ್ಕಿಂತಲೂ ಮಿಗಿಲಾಗಿತ್ತು ಎಂಬುದನ್ನಷ್ಟೇ ಅದು ಸಾಬೀತು ಮಾಡುತ್ತದೆ. ಅದೇ ವೇಳೆ, ಪಕ್ಷಪಾತರಹಿತ ನ್ಯಾಯಮಂಡಳಿಯೊಂದು ನೀಡುವು ತೀರ್ಪು – ಮನುಷ್ಯರಿಗೆ ಸಾಧ್ಯವಿರುವ ಮಟ್ಟಿಗೂ – ಯಾರದ್ದು ಸರಿಯಿತ್ತೆಂಬುದನ್ನು ತೋರಿಸಿಕೊಡಬಲ್ಲದು. ಕೆಲವೇ ಸಮಯದ ಹಿಂದೆ ನಾನು ನನ್ನ ಅಹಿಂಸಾತ್ಮಕ ಪ್ರತಿರೋಧದ ವಿಧಾನವನ್ನು ಅನುಸರಿಸುವಂತೆ ಪ್ರತಿಯೊಬ್ಬ ಬ್ರಿಟನ್ನರಿಗೂ ಮನವಿ ಮಾಡಿರುವುದು ನಿಮಗೆ ಗೊತ್ತಿದೆ. ನಾನು ಒಬ್ಬ ಬಂಡಾಯಗಾರನಾದರೂ ಅವರ ಮಿತ್ರನೆಂಬುದು ಬ್ರಿಟನ್ನರಿಗೆ ಗೊತ್ತಿರುವುದರಿಂದ ನನಗೆ ಹಾಗೆ ಮನವಿ ಮಾಡಲು ಸಾಧ್ಯವಾಯಿತು. ಆದರೆ ನಿಮಗೂ ನಿಮ್ಮ ಜನತೆಗೂ ನಾನೊಬ್ಬ ಅಪರಿಚಿತ. ಪ್ರತಿಯೊಬ್ಬ ಬ್ರಿಟನ್ನರಿಗೆ ಮಾಡಿದಂಥ ಮನವಿಯನ್ನು ನಿಮಗೂ ಮಾಡಲು ನನಗೆ ಧೈರ್ಯ ಸಾಲದು. ಅದು ಬ್ರಿಟಿಷರಿಗೆ ಎಷ್ಟು ಪ್ರಬಲವಾಗಿ ಅನ್ವಯಿಸುತ್ತದೋ ಅಷ್ಟೇ ಪ್ರಮಾಣದಲ್ಲಿ ನಿಮಗೆ ಅನ್ವಯಿಸುವುದಿಲ್ಲ ಎಂದು ಇದರ ಅರ್ಥವಲ್ಲ. ಬದಲಿಗೆ ನಿಮ್ಮ ಮುಂದಿಡುತ್ತಿರುವ ನನ್ನ ಈ ಪ್ರಸ್ತಾಪವು ಅದಕ್ಕಿಂತಲೂ ಹೆಚ್ಚು ಸರಳವಾಗಿದೆ. ಯಾಕೆಂದರೆ ಇದು ಹೆಚ್ಚು ವಾಸ್ತವಿಕವೂ ಪರಿಚಿತವೂ ಆಗಿದೆ. ಯೂರೋಪಿನ ಜನತೆಯ ಹೃದಯಗಳು ಶಾಂತಿಗಾಗಿ ಹಾತೊರೆಯುತ್ತಿರುವ ಇಂದಿನ ದಿನಗಳಲ್ಲಿ ನಾವು ನಮ್ಮ ಶಾಂತಿಯುತ ಹೋರಾಟವನ್ನು ಕೂಡ ಮುಂದೂಡಿದ್ದೇವೆ. ಕೋಟ್ಯಾಂತರ ಮೂಕ ಜನರ ಕೂಗು ಕೇಳಿಸಿಕೊಳ್ಳುವುದು ನನ್ನ ಕಿವಿಗಳಿಗೆ ಅಭ್ಯಾಸವಾಗಿರುವುದರಿಂದ, ಶಾಂತಿಗಾಗಿ ಕೋಟ್ಯಾಂತರ ಯೂರೋಪಿಯನ್ನರು ಇಡುತ್ತಿರುವ ಮೂಕ ಮೊರೆ ನನಗೆ ಕೇಳಿಸುತ್ತಿದೆ. ಈ ಕಾಲಘಟ್ಟವು ವ್ಯಕ್ತಿಗತವಾಗಿ ನಿಮಗೆ ಏನೂ ಅಲ್ಲದಿರಬಹುದು, ಆದರೆ ಅದು ಇಂತಹ ಯೂರೋಪಿಯನ್ನರ ಪಾಲಿಗೆ ಬಹಳ ಗುರುತರವಾಗಿದೆ. ಇಂಥ ಹೊತ್ತಿನಲ್ಲಿ, ಶಾಂತಿಗಾಗಿ ಪ್ರಯತ್ನ ಮಾಡುವಂತೆ ನಿಮ್ಮನ್ನು ಕೋರುವುದು ಅತಿಯಾಗುತ್ತದೆಯೆ?

ನಾನು ನಿಮಗೂ ಮಾನ್ಯ ಮುಸೋಲಿನಿಯವರಿಗೂ ಒಂದು ಜಂಟಿ ಮನವಿಯನ್ನು ಮಾಡಬೇಕೆಂದು ಬಯಸಿದ್ದೆ. ನಾನು ದುಂಡು ಮೇಜಿನ ಪರಿಷತ್ತಿನ ಒಬ್ಬ ಪ್ರತಿನಿಧಿಯಾಗಿ ಇಂಗ್ಲೆಂಡಿಗೆ ಹೋದಾಗ ರೋಮ್‍ನಲ್ಲಿ ಅವರನ್ನು ಭೇಟಿಯಾಗುವ ಸದವಕಾಶವೂ ದೊರೆತಿತ್ತು. ಈಗ ಈ ಮನವಿಯನ್ನೇ ಅವರು ಅಗತ್ಯ ಮಾರ್ಪಾಡಿನೊಂದಿಗೆ ತನ್ನನ್ನೂ ಕುರಿತಿದ್ದೆಂದು ಪರಿಗಣಿಸುತ್ತಾರೆಂದು ಆಶಿಸುತ್ತೇನೆ.

ನಿಮ್ಮ ಪ್ರಾಮಾಣಿಕ ಮಿತ್ರ,

ಎಂ. ಕೆ. ಗಾಂಧಿ.

(ಈ ಪತ್ರವನ್ನು ಬ್ರಿಟಿಷ್ ಸರಕಾರ ತಡೆಹಿಡಿದಿತ್ತು)

ವಾರ್ಧಾ, ಡಿಸೆಂಬರ್ 24, 1940.


ಇದನ್ನು ಓದಿ: ಪ್ರಧಾನಿಗಳನ್ನು ನಾನು ನಂಬುತ್ತೇನೆ, ಅವರು ಹೇಳಿದ್ದೆಲ್ಲವನ್ನೂ ನಂಬುತ್ತೇನೆ – ಎಚ್ ಎಸ್ ದೊರೆಸ್ವಾಮಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...