ತುಮಕೂರು ಜಿ.ಪಂ ಅಧ್ಯಕ್ಷರ ಬದಲಾವಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಧ್ಯಕ್ಷ ಸ್ಥಾನ ಬೇರೆಯವರಿಗೆ ಬಿಟ್ಟುಕೊಡಬೇಕು ಎಂಬ ಪಟ್ಟು ಆಡಳಿತ ಪಕ್ಷದ ಸದಸ್ಯರದ್ದು. ಇದಕ್ಕೆ ಪಕ್ಷಾತೀತವಾಗಿ ಎಲ್ಲರೂ ಸಹಿ ಮಾಡಿದ್ದಾರೆ. ಗೊಲ್ಲ ಸಮುದಾಯದ ಸದಸ್ಯರೊಬ್ಬರಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕೆಂಬ ಕೂಗು ಎದ್ದಿದೆ. ಈ ಬಗ್ಗೆ ಬಿಜೆಪಿಯ ಕೂಗು ಜೋರಾಗಿಯೇ ಇದೆ. ದಿಢೀರನೇ ಗೊಲ್ಲರ ಮೇಲೆ ಬಿಜೆಪಿಗೆ ಪ್ರೀತಿ ಹೆಚ್ಚಾಗಲು ಕಾರಣ ರಹಸ್ಯವಾಗಿ ಉಳಿದಿಲ್ಲ. ಶಿರಾ ಉಪಚುನಾವಣೆಯಲ್ಲಿ ಗೊಲ್ಲರ ಮತ ಸೆಳೆಯಲು ಈ ತಂತ್ರ ಹೆಣೆಯಲಾಗಿದೆ.
ಅಧ್ಯಕ್ಷರನ್ನು ಬದಲಿಸಬೇಕೆಂಬ ಅವಿಶ್ವಾಸ ಪತ್ರಕ್ಕೆ ಎಲ್ಲಾ ಪಕ್ಷದ ಸದಸ್ಯರು ಸಹಿ ಹಾಕಿರುವುದು ವಿಶೇಷ. ಎಲ್ಲರಿಗೂ ಗೊಲ್ಲ ಸಮುದಾಯದ ಮೇಲೆ ಅತೀವ ಪ್ರೀತಿ ಉಕ್ಕಿ ಹರಿಯತೊಡಗಿದೆ. ಶಿರಾ ಕ್ಷೇತ್ರದಲ್ಲಿ ಗೊಲ್ಲ ಸಮುದಾಯದ ಮತಗಳ ಪ್ರಮಾಣ ಹೆಚ್ಚಾಗಿದ್ದು, 46 ಸಾವಿರ ಮತಗಳ ಮೇಲೆ ಎಲ್ಲ ಪಕ್ಷಗಳ ಕಣ್ಣುಬಿದ್ದಿದೆ. ಹಾಗಾಗಿ ಜಿ.ಪಂ ಅಧ್ಯಕ್ಷರ ಬದಲಾವಣೆಯ ವಿಷಯ ಕಾವು ಪಡೆದುಕೊಂಡಿದೆ.
ಕಳೆದ ಎರಡು ಸಭೆಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯರು ಬೇಕೆಂದೇ ಹಾಜರಾಗಿಲ್ಲ. ಕೃತಕ ಕೋರಂ ಕೊರತೆ ಸೃಷ್ಟಿಸಿ, ಸಭೆ ನಡೆಯದಂತೆ ನೋಡಿಕೊಳ್ಳಲಾಗಿದೆ. ಸದಸ್ಯರುಗಳು ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊರೊನಾದ ಕಾರಣ ನೀಡಿ ಮೌನವಾಗಿದ್ದ ಸದಸ್ಯರು, ಶಿರಾ ಶಾಸಕರ ನಿಧನದ ನಂತರ ಅಧ್ಯಕ್ಷರನ್ನು ಬದಲಾಯಿಸಿಯೇ ತೀರಬೇಕು ಎಂದು ಪಟ್ಟುಹಿಡಿದು ಕುಳಿತಿದ್ದಾರೆ.
ಇದು ನೈಜ ಪ್ರೀತಿಯಲ್ಲ. ತೋರಿಕೆಯ ಪ್ರೀತಿ. ಚುನಾವಣೆ ಮುಗಿಯುವರೆಗೂ ಇರುವ ಪ್ರೀತಿ. ಈ ನಾಟಕ ಯಾರಿಗೆ ತಾನೇ ಗೊತ್ತಿಲ್ಲ. ಚುನಾವಣೆ ಬಂದರೆ ಬಿಜೆಪಿಗೆ ಗೊಲ್ಲರ ಮೇಲೆ ಪ್ರೀತಿ ಉಕ್ಕುತ್ತದೆ ಎಂಬ ಚರ್ಚೆಗೆ ವೇದಿಕೆ ಒದಗಿಸಿಕೊಟ್ಟಿದೆ.
ತುಮಕೂರು ಜಿ.ಪಂನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಧಿಕಾರ ಹಿಡಿದಿವೆ. ಮೈತ್ರಿ ಧರ್ಮದಂತೆ ತಲಾ 30 ತಿಂಗಳು ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಯನ್ನು ಹಂಚಿಕೆ ಮಾಡಿಕೊಳ್ಳಲು ತೀರ್ಮಾನಿಸಿತ್ತು. ಆದರೆ ರಾಜಕೀಯ ಮೇಲಾಟದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರು ಒಪ್ಪಂದದಂತೆ ರಾಜಿನಾಮೆ ನೀಡಿ ಬೇರೆಯವರಿಗೆ ಸ್ಥಾನ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಜೆಡಿಎಸ್‌ನ ಲತಾ ರವಿಕುಮಾರ್ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ. ಆದರೆ ಅಧ್ಯಕ್ಷ-ಉಪಾಧ್ಯಕ್ಷರಿಬ್ಬರೂ ರಾಜೀನಾಮೆಗೆ ಮುಂದಾಗುತ್ತಿಲ್ಲ.
ಬಿಜೆಪಿಯ ಶಾರದಾ ನರಸಿಂಹಮೂರ್ತಿ ಜಿ.ಪಂ ಉಪಾಧ್ಯಕ್ಷರಾಗಿದ್ದಾರೆ. ಇವರು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡರಿಗೆ ಆಪ್ತರು. ಅದೇ ಕಾರಣಕ್ಕೆ ರಾಜೀನಾಮೆ ನೀಡದೆ ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ ಬಜೆಪಿ ಪಕ್ಷವು ಅಧ್ಯಕ್ಷರು ಮಾತ್ರ ರಾಜಿನಾಮೆ ನೀಡುವಂತೆ ಒತ್ತಾಯಿಸುತ್ತಿದೆ. ಇದಕ್ಕೆ ಅಧ್ಯಕ್ಷರು ಸೊಪ್ಪು ಹಾಕುತ್ತಿಲ್ಲ.
ಗುಬ್ಬಿ ತಾಲೂಕಿನ ಬಿಜೆಪಿ ಜಿ.ಪಂ ಸದಸ್ಯೆ ಯಶೋದಮ್ಮ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಗೊಲ್ಲ ಸಮುದಾಯದ ಮುಖಂಡ ಸಣ್ಣಮುದ್ದಯ್ಯ ಗೊಲ್ಲರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದ್ದರು. ಸಣ್ಣಮುದ್ದಯ್ಯ ಬಿಜೆಪಿ ಬಗ್ಗೆ ಒಲವುಳ್ಳವರು. ಮಾಜಿ ಸಚಿವ ಸೊಗಡು ಶಿವಣ್ಣಗೆ ಆಪ್ತರಾಗಿರುವವರು. ಹಾಗಾಗಿ ಸೊಗಡು ಶಿವಣ್ಣ ಅವರು ಸಣ್ಣಮುದ್ದಯ್ಯ ಮೂಲಕ ಈ ವಿಷಯ ತೇಲಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ಉರುಳಿಸಿದ ದಾಳಕ್ಕೆ ಅನಿವಾರ್ಯವಾಗಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಿಕ್ಕಿಕೊಳ್ಳುವಂತಾಗಿದೆ. ಗೊಲ್ಲರಿಗೆ ಜಿಪಂ ಅಧ್ಯಕ್ಷ ಹುದ್ದೆ ನೀಡುವುದನ್ನು ವಿರೋಧಿಸಿರುವವರಿಗೆ ಶಿರಾ ಕ್ಷೇತ್ರದಲ್ಲಿ ಗೊಲ್ಲರ ಮತ ಸಿಗುವುದಿಲ್ಲ. ಹಾಗಾಗಿಯೇ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಎಲ್ಲರೂ ಸಹಿ ಹಾಕಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ.
“ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇಬ್ಬರೂ ಒಟ್ಟಿಗೆ ರಾಜಿನಾಮೆ ನೀಡಿ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಬೇಕು. ಅದು ಬಿಟ್ಟು ಕೇವಲ ಅಧ್ಯಕ್ಷರ ಬದಲಾವಣೆಗೆ ಮಾತ್ರ ಆಗ್ರಹಿಸುವುದು ಸರಿಯಾದ ಕ್ರಮವಲ್ಲ. ಕೇವಲ ಶಿರಾ ಕ್ಷೇತ್ರದಲ್ಲಿ ಗೊಲ್ಲರ ಮತಗಳನ್ನು ಪಡೆಯುವ ಉದ್ದೇಶದಿಂದ ಬಿಜೆಪಿ ಇಂತಹ ಗೊಂದಲಗಳನ್ನು ಸೃಷ್ಟಿಮಾಡಿದೆ. ಇತರೆ ಪಕ್ಷದ ಸದಸ್ಯರು ಕೂಡ ಸಹಿ ಹಾಕಿದ್ದಾರೆ. ಇದು ರಾಜಕೀಯ, ಏನೂ ಮಾಡಲು ಆಗುವುದಿಲ್ಲ” ಎಂಬುದು ಹೆಸರು ಹೇಳಲು ಇಚ್ಚಿಸದ ಜೆಡಿಎಸ್ ಮುಖಂಡರೊಬ್ಬರ ಅಭಿಪ್ರಾಯ.
“ಗೊಲ್ಲರಹಟ್ಟಿ, ಬಂಜಾರ ತಾಂಡಾಗಳು, ಕುರುಬರಹಟ್ಟಿ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿಲ್ಲ. ಗೊಲ್ಲರಹಟ್ಟಿಗಳು ಇಂದಿಗೂ ಗುಡಿಸಲು ಮುಕ್ತವಾಗಿಲ್ಲ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ನರಳುತ್ತಿರುವ ಹಟ್ಟಿಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿಲ್ಲ. ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಮಾಡಬೇಕೆಂದು ಕಾಯ್ದೆಯಾಗಿದ್ದರೂ ಅದನ್ನು ಅನುಷ್ಠಾನಗೊಳಿಸಲು ಯಾರೂ ಮುಂದಾಗುತ್ತಿಲ್ಲ. ರಾಜಕೀಯ ಪಕ್ಷಗಳು ನಾಟಕ ಮಾಡುವುದನ್ನು ಬಿಡಬೇಕು” ಎಂದು ಗೊಲ್ಲ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಶಿರಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷರ ಬದಲಾವಣೆ ರಾಜಕೀಯ ಗಿಮಿಕ್. ಇನ್ನು ಎಂಟು ತಿಂಗಳು ಮಾತ್ರ ಅಧಿಕಾರವಧಿ ಇದೆ. ಈ ಅವಧಿಯಲ್ಲಿ ಅಧ್ಯಕ್ಷ ಹುದ್ದೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟರೆ ಯಾವ ಅಭಿವೃದ್ದಿ ಮಾಡಲು ಸಾಧ್ಯ. ಇದನ್ನು ಎಲ್ಲರೂ ಅರ್ಥಮಾಡಿಕೊಂಡರೆ ಒಳಿತು ಎಂದು ಪ್ರಜ್ಞಾವಂತರ ಸಮೂಹ ಹೇಳುತ್ತಿದೆ.
ಇದನ್ನೂ ಓದಿ: ತುಮಕೂರು ಸ್ಮಾರ್ಟ್ ಸಿಟಿ: ಕಳಪೆ ಕಾಮಗಾರಿಯಿಂದ ಅಧ್ವಾನಗೊಂಡ ನಗರ: ಆರೋಪ


