Homeಕರ್ನಾಟಕತುಮಕೂರು ಸ್ಮಾರ್ಟ್ ಸಿಟಿ: ಕಳಪೆ ಕಾಮಗಾರಿಯಿಂದ ಅಧ್ವಾನಗೊಂಡ ನಗರ: ಆರೋಪ

ತುಮಕೂರು ಸ್ಮಾರ್ಟ್ ಸಿಟಿ: ಕಳಪೆ ಕಾಮಗಾರಿಯಿಂದ ಅಧ್ವಾನಗೊಂಡ ನಗರ: ಆರೋಪ

ಗುತ್ತಿಗೆದಾರರಿಗೆ ಪ್ರಭಲರ ಬೆಂಬಲವಿರುವುದರಿಂದ ಯಾರೂ ಚಕಾರ ಎತ್ತುತ್ತಿಲ್ಲ ಎಂದು ಜನತೆ ಆರೋಪಿಸಿದ್ದಾರೆ. 

- Advertisement -
- Advertisement -

ಸ್ಮಾರ್ಟ್ ಸಿಟಿ ಕಾಮಗಾರಿಗಳು ತುಮಕೂರು ನಗರದೆಲ್ಲೆಡೆ ನಡೆಯುತ್ತಿದ್ದು ನಗರ ಅಧ್ವಾನಗೊಂಡಿದೆ. ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿರುವುದರಿಂದ ಮಳೆ ನೀರು ರಸ್ತೆಯ ಮೇಲೆ ಹರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಮಾರ್ಟ್ ಸಿಟಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಕೂಗುಹಾಕಿದವರು ಸೊಲ್ಲೇ ಎತ್ತದೆ ಮೌನಕ್ಕೆ ಜಾರಿದ್ದಾರೆ. ಕಳಪೆ ಕಾಮಗಾರಿಯ ತನಿಖೆ ನಡೆಸಬೇಕೆಂದರೂ ಅದು ಅಲ್ಲಿಗೆ ನಿಂತುಹೋಗಿದೆ. ಗುತ್ತಿಗೆದಾರರಿಗೆ ಪ್ರಭಲರ ಬೆಂಬಲವಿರುವುದರಿಂದ ಯಾರೂ ಚಕಾರ ಎತ್ತುತ್ತಿಲ್ಲ ಎಂದು ಜನತೆ ಆರೋಪಿಸಿದ್ದಾರೆ.

ಮಳೆಗಾಲದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅರ್ಧಕ್ಕೆ ನಿಂತು ಹೋಗಿರುವುದರಿಂದ ಜನರು ತೊಂದರೆ ಪಡುವಂತಾಗಿದೆ. ರಸ್ತೆಯ ಉದ್ದಕ್ಕೂ ತೋಡಿರುವ ಗುಂಡಿಗಳು ಹಾಗೆಯೇ ಉಳಿದಿವೆ. ಮಳೆ ಬಂದು ತೋಡಿದ ಚರಂಡಿಯ ಮಣ್ಣು ಮತ್ತೆ ಗುಂಡಿಗೆ ಕೊಚ್ಚಿಕೊಂಡು ಹೋಗಿರುವಂತಹ ನಿದರ್ಶನಗಳು ನಗರ ಹೃದಯ ಭಾಗದಲ್ಲಿ ಎತ್ತನೋಡಿದರೂ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣನ್ನು ಅಗೆದಿರುವ ದೃಶ್ಯಗಳೇ ಕಣ್ಣಿಗೆ ರಾಚುತ್ತವೆ.

ಆಡಳಿತ ಪಕ್ಷ ಬಿಜೆಪಿಯ ಮಾಜಿ ಸಚಿವ ಸೊಗಡು ಶಿವಣ್ಣ, ಸಂಸದ ಜಿ. ಎಸ್. ಬಸವರಾಜು ಮತ್ತು ಶಾಸಕ ಜಿ. ಬಿ. ಜ್ಯೋತಿಗಣೇಶ್, ಕಾಂಗ್ರೆಸ್ ಮಾಜಿ ಶಾಸಕ ರಫೀಕ್ ಅಹಮದ್ ಎಲ್ಲರೂ ಕೂಡ ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಸ್ಥೆ ಮತ್ತು ಕಳಪೆ ಕಾಮಗಾರಿ ಬಗ್ಗೆ ಮಾಧ್ಯಮಗಳ ಮೂಲಕ ಧ್ವನಿ ಎತ್ತಿದ್ದರು. ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಆದರೆ ಅದ್ಯಾಕೋ ಎಲ್ಲರೂ ಸುಮ್ಮನಾಗಿದ್ದಾರೆ.

ನಗರದಲ್ಲಿ ಕೋಟ್ಯಂತರ ರೂಪಾಯಿ ವೆಚ್ದದ ವಿವಿಧ ಕಾಮಗಾರಿಗಳು ಚಾಲ್ತಿಯಲ್ಲಿವೆ. ಬಾರ್ ಲೈನ್ ರಸ್ತೆ, ಅಶೋಕ ರಸ್ತೆ, ಗುಂಚಿಚೌಕ, ಮಂಡಿಪೇಟೆ, ಜೆ.ಸಿ.ರಸ್ತೆ, ವಿವೇಕಾನಂದ ರಸ್ತೆ, ಡಾ.ರಾಧಾಕೃಷ್ಣ ರಸ್ತೆ, ಹೀಗೆ ನಗರದ ಬಹುತೇಕ ಕಡೆಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಕೆಲವು ಕಡೆ ನಿಂತುಹೋಗಿವೆ. ಹಾಗಾಗಿ ನಗರದ ಜನತೆ ಸಮಸ್ಯೆ ಎದುರಿಸಬೇಕಾಗಿ ಬಂದಿದೆ.

ಒಳಚರಂಡಿ, ವಿವಿಧ ಕೇಬಲ್ ಅಳವಡಿಕೆಗೆ, ಹೊಸ ಚರಂಡಿ, ಮ್ಯಾನ್ ಹೋಲ್  ನಿರ್ಮಾಣ, ಹೀಗೆ ಹತ್ತು ಹಲವು ರೀತಿಯ ಕಾಮಗಾರಿಗಳಿಗೆ ರಸ್ತೆ ನಡುವೆ ಮತ್ತು ಇಕ್ಕೆಲೆಗಳಲ್ಲಿ ದೊಡ್ಡದೊಡ್ಡ ಚರಂಡಿಗಳನ್ನು ತೋಡಿ ಹಾಗೆಯೇ ಬಿಟ್ಟಿದ್ದು ಅನಾಹುತಕ್ಕೆ ಬಾಯಿ ತೆರೆದಿವೆ. ಬಿ.ಎಚ್. ರಸ್ತೆಯಲ್ಲಿ ಚರಂಡಿ ನಿರ್ಮಾಣಕ್ಕಾಗಿ ತೋಡಿದ್ದು ಅವುಗಳನ್ನು ಸರಿಯಾಗಿ ಮುಚ್ಚಿಲ್ಲ. ವಿವೇಕಾನಂದ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಮಾಡಿದ್ದು ಪದೇಪದೇ ರಸ್ತೆ ನಡುವೆಯೇ ಗುಂಡಿ ಬೀಳುತ್ತದೆ. ಅದನ್ನು ಮುಚ್ಚಿದರೆ ಮತ್ತೊಂದು ಕಡೆ ಗುಂಡಿ ಳೀಳುತ್ತದೆ. ಇದು ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಜನತೆ ದೂರಿದ್ದಾರೆ.

ಗುಣಮಟ್ಟದ ಕಾಮಗಾರಿಗಳನ್ನು ಕೊರತೆ, ಕಾಮಗಾರಿಗಳ ಅವ್ಯವಸ್ಥೆಯಿಂದ ಕನ್ನಡ ಭವನದ ಕೆಳಹಂತದ ಶಭಾ ಭವನಕ್ಕೆ ನೀರು ನುಗ್ಗಿತ್ತು. ಪೀಠೋಪಕರಣಗಳು, ನೂರಾರು ಬಂಡಲ್ ಪೇಪರ್ ಗಳು ನೀರಿನಲ್ಲಿ ಮುಳುಗಿ ಹೋಗಿದ್ದವು.. ಸ್ಮಾರ್ಟ್ ಸಿಟಿ ಕಾಮಗಾರಿಗೆ ರಸ್ತೆ ಬದಿಯಲ್ಲಿ ತೋಡಿದ ಗುಂಡಿಯನ್ನು ಸರಿಯಾಗಿ ಮುಚ್ಚದೆ ನೀರು ನುಗ್ಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ ಆರೋಪಿಸಿದ್ದಾರೆ.

ಸ್ಮಾರ್ಟ್ ಸಿಟಿ ಕಾರ್ಯಕ್ಕೆ ತುಮಕೂರು ಮಹಾನಗರ ಪಾಲಿಕೆಗೆ ಪ್ರಶಸ್ತಿಗಳ ಬರುತ್ತಲೇ ಇವೆ. ಆದರೆ ನಗರ ಗಬ್ಬೆದ್ದು ಹೋಗಿರುವುದನ್ನು ನೋಡಿದರೆ ಅದು ಹೇಗೆ ಪ್ರಶಸ್ತಿಗಳನ್ನು ನೀಡಲಾಯಿತು ಎಂದು ಜನರ ಪ್ರಶ್ನಿಸುತ್ತಿದ್ದಾರೆ.

ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ಕಾಮಗಾರಿಗಳಿಗೆ ಸುರಿಯುತ್ತಿದ್ದರೂ ನಗರ ಮಾತ್ರ ಸ್ಮಾರ್ಟ್ ಆಗುತ್ತಿಲ್ಲ.ಕೆಲವರ ಜೇಬುಗಳು ಸ್ಮಾರ್ಟ್ ಗೊಳ್ಳುತ್ತಿವೆ. ಜನರಿಗೆ ಮಾತ್ರ ಮೂರು ಕಾಸಿನ ಉಪಯೋಗವೂ ಇಲ್ಲ ಎಂದು ದೂರಲಾಗಿದೆ.


ಓದಿ: ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಮೈದಾಳಕೆರೆಗೆ ವಿಷಕಾರಿ ಪ್ಲಾಸ್ಟಿಕ್ ಬೂದಿ!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ಕೃಪಾಂಕ ರದ್ದು ಹಗರಣ ಮುಚ್ಚಿ ಹಾಕುವ ಪ್ರಯತ್ನ : ಎಂ.ಕೆ ಸ್ಟಾಲಿನ್

0
ನೀಟ್ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿರುವುದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ 1,563...