Homeಅಂಕಣಗಳು“ನಿನ್ನ ಕಪಟತನ ಗೊತ್ತಿಲ್ಲ ಅನ್ನಕಂಡ್ಯಾ” - ಥೂತ್ತೇರಿ ಯಾಹೂ

“ನಿನ್ನ ಕಪಟತನ ಗೊತ್ತಿಲ್ಲ ಅನ್ನಕಂಡ್ಯಾ” – ಥೂತ್ತೇರಿ ಯಾಹೂ

- Advertisement -
- Advertisement -

ಕೋವಿಡ್ ಸೋಂಕಿನ ನಿರ್ವಹಣೆಯಲ್ಲಿ ಯಡೂರಪ್ಪ ಸರಕಾರದ ಸಚಿವರು ಬರೋಬರಿ ಎರಡು ಸಾವಿರ ಕೋಟಿಯನ್ನು ಈಗಾಗಲೇ ಭರ್ತಿಯಾಗಿದ್ದ ತಮ್ಮ ಜೋಬುಗಳಿಗೆ ತುರುಕಿದ್ದಾರೆ ಎಂಬ ಸಿದ್ದರಾಮಯ್ಯನ ಆರೋಪಕ್ಕೆ ಸಂಬಂಧಿಸಿದಂತೆ, ಅವರನ್ನೆ ಕೇಳಿದರೆ ಹೇಗೆ ಅನ್ನಿಸಿ, ಯಾಹೂ ಬದಲಿಗೆ ಟಿವಿ ನಿರ್ವಾಹಕನ ಹೆಸರಲ್ಲಿ ಕೇಳಿದರೆ ಹೇಗೆ ಅನ್ನಿಸಿದ್ದರಿಂದ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್ ಠೊನ್ “ಕರಿಯ ಕಂಬಳಿ ಗದ್ದಿಗೆ ಮಾಡಿ ವೀರದೊಳ್ಳ ತಂದಿರಿಸಿದರೊ”………. “ಹಲೊ ಯಾರು”

“ನಾನು ಸಾರ್ ಟಿವಿ ಸಿಕ್ಸ್‍ನಿಂದ ಮಾತಾಡ್ತಯಿರೋದು.”

“ಟಿವಿ ಸಿಗಸೆ.”

“ಸಿಕ್ಸ್ ಸಾರ್ ಆರು.”

“ಅದ್ಯಾವುದ್ರೀ.”

“ನೈನ್ ಉಲ್ಟಾ ಬರದ್ರೆ ಸಿಕ್ಸು ಸಾರ್.”

“ಯರಡು ನಿಮ್ದೆಯಾ.”

“ಹೌದು ಸಾರ್ ಒಂದೆರಡು ಪ್ರಶ್ನೆ ಕೇಳ್ತಿನಿ ಸಾರ್.”

“ಏನ್ನಿನ್ನೆಸರು.”

“ಶ್ಯಾನುಭೊಗ್ ಹೆಮ್ಮಿಗನೂರು ಸಾರ್.”

“ಶ್ಯಾನುಭೊಗರ ಪೈಕಿನಾ.”

“ಹೌದು ಸಾರ್.”

“ಯಲ್ಲ ಊರು ಬುಟ್ಟು ಬಂದು ಟಿವಿವಳಿಕೆ ಸೇರ್ಕಂಡುಬುಟ್ಟಿದ್ದಿರಿ.”

“ಹೌದು ಸಾರ್.”

“ಅದೇನು ಪ್ರಶ್ನೆ ಕೇಳು.”

“ಕೋವಿಡ್ ಸೋಂಕಿನ ನಿರ್ವಹಣೆಯಲ್ಲಿ ಈ ಸರಕಾರ ಭ್ರಷ್ಟಾಚಾರ ಮಾಡಿದೆ ಅಂತ ತಾವು ಆಪಾದನೆ ಮಾಡಿದ್ದಿರಿ ಸಾರ್, ಇದು ನಿಮಗೆಂಗೆ ಗೊತ್ತಾಯ್ತು ಸಾರ್.”

“ನಾನು ಮುಖ್ಯಮಂತ್ರಿಯಾಗಿದ್ದೊನು ಐದು ವರ್ಷ ಸರಕಾರ ನಡೆಸಿದ್ದೀನಿ.”

“ಅಂದ್ರೆ ಭ್ರಷ್ಟಾಚಾರ ಹೇಗೆ ನಡೆಯುತ್ತೆ ಅಂತ ನಿಮಗೆ ಗೊತ್ತಲ್ಲವ ಸಾರ್.”

“ಹೌದು ಗೊತ್ತು.”

“ನೀವು ಆಪಾದನೆ ಮಾಡ್ತಾಯಿರೊ ಮಂತ್ರಿಗಳು ನಿಮ್ಮ ಜೊತೆಲೂ ಇದ್ರಲವ ಸಾರ್.”

“ಇದ್ರು ಈಗಿಲ್ಲ ಅಲ್ಲಿಗೋಗಿ ಮಂತ್ರಿಗಳಾಗ್ಯವುರೆ ಹಾಗಂತ ಸುಮ್ಮನಿರಕ್ಕಾಗಲ್ಲ.”

“ನಿಮ್ಮ ಕಾಲದಲ್ಲೂ ಭ್ರಷ್ಟಾಚಾರ ನಡೆದಿತ್ತಲವ್ ಸಾರ್.”

“ಯಾರು ಮಾಡಿದ್ರ್ರು.”

“ಅಂಜನೇಯರ ಮೇಲೆ ದೂರು ಬಂದಿತ್ತು.”

“ಆತ ಸದನದಲ್ಲೇ ಉತ್ತರ ಕೊಟ್ಟ.”

“ಭ್ರಷ್ಟಾಚಾರ ಆಪಾದನೆ ಆಮೇಲೆ ಮಾಡಿ ಬೇಕಾದ್ರೆ ಸದನದಲ್ಲಿ ಪ್ರಶ್ನೆ ಮಾಡಿ ಈಗ ವಿಪತ್ತು ನಿರ್ವಹಿಸಿ ಅಂತ ದೇವೇಗೌಡ್ರು ಹೇಳಿದಾರೆ ಸಾರ್.”

“ಸರಿಯಯ್ಯಾ ವಿಪ್ಪತ್ತು ನಿರ್ವಹಿಸುವವಾಗಲೇ ನಡೆದಿರೋ ಅಕ್ರಮ ಕೇಳಬಾರದಾ.”

“ಏನಾಧಾರ ಇಟಗಂಡು ಕೇಳ್ತಿರಿ ಅಂತಾಯಿದಾರೆ.”

“ನಾನು ವಿರೊಧಪಕ್ಷದ ನಾಯಕ. ಆಪಾದನೆ ಮಾಡಬೇಕಾದ್ರೆ ಸಾಕ್ಷಾಧಾರ ಇಟಗಂಡೇ ಕೇಳ್ತಿನಿ.”

“ನಿಮ್ಮ ಆಪಾದನೆಗಳಿಗೆ ಕಾಂಗ್ರೆಸ್ಸಲ್ಲೇ ಸಹಮತ ಇಲ್ಲವಂತಲ್ಲಾ ಸಾರ್.”

“ಈ ವಿಷಯದಲ್ಲಿ ಕಾಂಗ್ರೆಸ್‍ನಲ್ಲಿ ಸಹಮತ ಇದೆ.”

“ಡಿ.ಕೆಶಿವಕುಮಾರ್ ನಿಮ್ಮ ಸಂಬಂಧ ಹೇಗಿದೆ ಸಾರ್.”

“ಚನ್ನಾಗಿದ್ದಿವಿ.”

“ನೀವು ವಿರೊಧಪಕ್ಷದ ನಾಯಕರು, ಅವರು ಪಾರ್ಟಿ ಅಧ್ಯಕ್ಷರು. ಭ್ರಷ್ಟಾಚಾರ ಆಪಾದನೆಯಲ್ಲಿ ಸಹಮತ ಇಲ್ಲ ಅಂತ ಸುದ್ದಿ ಇದೆ ಸಾರ್.”

“ನೋಡೋ ಶಾನುಭೊಗ, ನೀನು ಫೋನ್ ಮಾಡಿದ್ದು ಎಡೂರಪ್ಪನ ಸರಕಾರದಲ್ಲಿ ಕೋವಿಡ್ ನಿರ್ವಹಣೆಗೆ ಖರೀದಿ ಮಾಡಿದ ಸಾಮಾಗ್ರಿ ವಿಷಯದಲ್ಲಿ ಎರಡು ಸಾವಿರ ಕೋಟಿ ಭ್ರಷ್ಟಾಚಾರದ ವಿಷಯ ಕೇಳಕ್ಕೆ, ಅದು ಬುಟ್ಟು ನಮ್ಮ ಪಾರ್ಟಿ ವಿಷಯ ಕೇಳ್ತಿಯಲ್ಲ ನಾವೇನು ಪವರಲಿದ್ದಿವಾ.”

“ಪವರಿಗೆ ಬರ್ತಿರ ಸಾರ್.”

“ಅದಾಮೇಲೆ ಕಣಯ್ಯ, ಈ ಕೋವಿಡ್‍ನಲ್ಲಿ ಉಳುದು ಬದುಕಿದ ಮೇಲಿನ ಮಾತಾಲ್ಲವಾ.”

“ಅಂತೂ ಮುಖ್ಯಮಂತ್ರಿ ಸ್ಪರ್ಧೆಲಿ ನೀವೂ ಇದೀರಿ.”

“ಲೇ ಶಾನುಭೊಗ, ಎಷ್ಟೇ ಆಗಲಿ ಹಳ್ಳಿ ಜನಗಳಿಗೆ ಮಂಕುಬೂದಿ ಎರಚಿ ನೂರಾರು ವರ್ಷ ಹಳ್ಳಿ ಆಳಿದೋನು ನೀನು ಅಂಗಂತ ಈಗ್ಲು ನನ್ನನ್ನ ಯಾಮಾರಸಕ್ಕೆ ಬರಬೇಡ.”

“ನಾನೇನು ತಪ್ಪು ಮಾತಾಡಿದ್ನ ಸಾರ್.”

“ತಪ್ಪಲ್ಲ ನಿಮ್ಮ ಕಪಟತನ ಜನಗಳಿಗೆ ಗೊತ್ತಿಲ್ಲ ಅಂತ ತಿಳಕೊಬ್ಯಾಡ ವಿರೊಧಪಕ್ಷದ ಕೆಲಸನ ನೀವೂಕೂಡ ಮಾಡಬೇಕಾಗಿತ್ತು. ಸರಕಾರನ ಪ್ರಶ್ನೆ ಮಾಡಬೇಕಾಗಿತ್ತು. ಖರೀದಿ ಮಾಡಿದ ಪದಾರ್ಥನ ತಂದು ಜನಗಳಿಗೆ ಕೊಡಬೇಕಾಗಿತ್ತು. ಅದನ್ಯಲ್ಲ ಬಿಟ್ಟು ದೇಶಾಗೃಹಗಳಿಗೆ ಕ್ಯಾಮರ ಹೊತ್ತುಗಂಡು ಹೋಗ್ತಾಯಿದ್ದಿರಿ. ಈ ಕಡೆ ರಾಮುಲು, ಸುಧಾಕರ, ಆಶೋಕನ್ನ ಪ್ರಶ್ನೆ ಮಾಡದು ಬುಟ್ಟು ನನ್ನನ್ನ ಕುರುತು ನನ್ನ ಪಾರ್ಟಿ ವಿಷಯ ಕೇಳ್ತಯಿದ್ದಿ, ಕೇಳಿದ ಜನಗಳು ನಗತಾಯಿಲ್ಲ ಅಂತ ತಿಳಕೊಂಡಿದ್ದಿಯಾ.”

“ಆಯ್ತು ಸಾರ್ ಭ್ರಷ್ಟಾಚಾರ ನಡೆದಿದೆ ಅಂತ ನೀವು ಹೇಳ್ತಿರ, ಅಂತದ್ದೇನು ಆಗಿಲ್ಲ ಅಂತ ಅವುರುಳ್ತಾಯಿದಾರೆ. ನೀವೆ ಪವರಲ್ಲಿದ್ರೆ ಏನು ಮಾಡತಿದ್ರೀ?”

“ಒಂದು ವೇಳೆ ನಾನೇ ಇದ್ರೆ ಸಮಸ್ಯೆ ಬಗ್ಗೆ ಚನ್ನಾಗಿ ತಿಳಕಂಡಿರೋರು ಜೊತೆ ಮಾತಾಡತಿದ್ದೆ. ಅವುರ ಅನುಭವನ ಬಳಸಿಕೊಳ್ತಿದ್ದೆ. ಅನಾಹುತಗಳಿಗೂ ಮೊದ್ಲು ತಯಾರಿ ನಡೆಸತಿದ್ದೆ. ನಮ್ಮ ತಪ್ಪುಗಳನ್ನ 24 ಗಂಟೆ ತೋರಸೊ ನಿಮ್ಮನ್ನ ವಿಶ್ವಾಸಕ್ಕೆ ತಗಳತಿದ್ದೆ. ಆದ್ರೆ ನಿಮ್ಮಂತ ಸುಳ್ಳು ಜನನ ನನ್ನ ಜನುಮದಲ್ಲಿ ನೋಡಿಲ್ಲ.”

“ಯಾಕ್ ಸಾರ್ ಹಾಗಂತಿರಿ.”

“ಇಂದಿರಾ ಕ್ಯಾಂಟೀನಲ್ಲಿ ಜಿರ್ಲೆ ಸಿಕ್ಕುತು ಅಂತ ಅದ ತಂದು ತೋರಿಸಿದ್ರ, ಸಿದ್ದರಾಮಯ್ಯ ಕೊಡ್ತಾಯಿರದು ನಿಜವಾದ ಅಕ್ಕಿಯಲ್ಲ ಪ್ಲಾಸ್ಟಿಕ್ ಅಕ್ಕಿ ಅಂತ ಚರ್ಚೆ ಮಾಡಿದ್ರಿ, ಇಲ್ಲದಕ್ಕೆ ಬಣ್ಣಕಟ್ಟಿ ಹೇಳತಿದ್ರಿ, ಆದ್ರೆ ಇವತ್ತು ನೀವ್ಯಲ್ಲ ಧ್ವನಿನೆ ಕಳಕಂಡಿದ್ದಿರಿ. ಒಂಥರ ಸತ್ತೊಗಿದ್ದಿರಿ, ಆದ್ರೆ ತಿಳಕಳಿ ನೀವಿಲ್ಲದೆನೂ ದೇಶ ನಡೆಯುತ್ತೆ. ಆದ್ರೆ ಸರಿಯಾಗಿ ನಡೆಯಕ್ಕೆ ನೀವು ಬುಡಲ್ಲ. ಅಲವೇನೂ ಶ್ಯಾನಭೋಗ.”

“ಸಾರಿ ಸಾರ್.”


ಇದನ್ನು ಓದಿ: ನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...