ಕೊರೊನಾ ಸೋಂಕಿಗೆ ಒಳಗಾಗಿ, ಇತರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದ ಮತ್ತು ಅಕಾಲಿಕವಾಗಿ ಜನಿಸಿದ, ಕೇವಲ 980 ತೂಕದ ಹೆಣ್ಣುಮಗು, ಕೊರೊನಾ ಸೋಂಕನ್ನು ಗೆದ್ದು ಈಗ ಚೇತರಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈಗ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಬೆಂಗಳೂರಿನ ಖಾಸಗೀ ನರ್ಸಿಂಗ್ ಹೋಂ ನಲ್ಲಿ ಹೆರಿಗಯಾದ ಹೆಣ್ಣುಮಗು ಕೇವಲ 980 ಗ್ರಾಂ ತೂಕವಿತ್ತು (ಸಾಮಾನ್ಯವಾಗಿ ಆರೋಗ್ಯಕರ ಮಗುವಿನ ತೂಕವು 2.8-2.9 ಕಿಲೋಗ್ರಾಂ ಇರಬೇಕು). ಅತ್ಯಂತ ಕಡಿಮೆ ತೂಕವಿದ್ದುದರಿಂದ ಆಗಸ್ಟ್ 13ರಂದು ವಾಣಿವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಈ ಹೆಣ್ಣುಮಗು 5 ದಿನಗಳ ಕಾಲ, ಮಕ್ಕಳ ಪ್ರತ್ಯೇಕ ವಾರ್ಡ್‌ನಲ್ಲಿತ್ತು. ನಂತರ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಯ ಆಘಾತ ಆರೈಕೆ ಕೇಂದ್ರಕ್ಕೆ (TCC) ಸ್ಥಳಾಂತರಿಸಲಾಯಿತು. ಮಗುವಿಗೆ ತೀವ್ರವಾದ ಆರೋಗ್ಯ ಸಮಸ್ಯೆಗಳಿದ್ದುದರಿಂದ, ಆರೋಗ್ಯ ಚೇತರಿಕೆಯು ಸವಾಲಿನಿಂದ ಕೂಡಿತ್ತು, ಆದರೆ ಮಗುವಿಕೆ ಲಕ್ಷಣರಹಿತ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ ಮಗುವಿಗೆ ಕೊರೊನಾ ಮತ್ತು ನವಜಾಜ ಸೆಪ್ಸಿಸ್‌ಗೆ (ಸೋಂಕು) ಚಿಕಿತ್ಸೆ ನೀಡಲಾಯಿತು. ಮಗುವು TCCನಲ್ಲಿದ್ದಾಗ ಎಕ್ಸ್‌ಪ್ರೆಸ್ ಬ್ರೆಸ್ಟ್ ಫೀಡಿಂಗ್ ಮುಖಾಂತರ ಮಗುವಿಗೆ ಹಾಲುಣಿಸಲಾಯಿತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೊರೊನಾ ಸರಣಿ-1: ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬರುವುದಿಲ್ಲವಾ? – ಡಾ.ವಾಸು ಎಚ್.ವಿ
ಮಗುವಿಗೆ ಕೊರೊನಾ ಸೋಂಕು ನಿವಾರಣೆಯಾದ ನಂತರ, ಕಡಿಮೆ ತೂಕದ ಜನನಕ್ಕೆ ಚಿಕಿತ್ಸೆ ನೀಡಲು ವಾಣಿವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (BMCRI) ಪೀಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ.ಮಲ್ಲೇಶ್ ಹೇಳಿದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಸ್ತನ್ಯಪಾನ ಮತ್ತು ಭಾವನಾತ್ಮಕ ಬೆಂಬಲಕ್ಕಾಗಿ ತಾಯಿಯನ್ನು ಆಸ್ಪತ್ರೆಗೆ ಕರೆಸಲಾಯಿತು. ಮಗುವು, ಹೈಪೊಗ್ಲಿಸಿಮಿಯಾ (ಕಡಿಮೆ ರಕ್ತದ ಸಕ್ಕರೆ) ಮತ್ತು ಹೈಪೋಕಾಲ್ಕೆಮಿಯಾ (ಕಡಿಮೆ ಕ್ಯಾಲ್ಸಿಯಂ ಮಟ್ಟ)ದಿಂದ ಬಳಲುತ್ತಿತ್ತು. ಮಗುವು ಆರಂಭದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಹಾಗಾಗಿ, ಆಮ್ಲಜನಕದ ಸಹಾಯದಲ್ಲಿತ್ತು’ ಎಂದು BMCRI ಸಹಾಯಕ ಪ್ರಾಧ್ಯಾಪಕ ಡಾ.ರವಿಚಂದ್ರ ಹೇಳಿದರು.
ಹಾಗಾಗಿ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಡಿಸ್ಚಾರ್ಜ್ ಸಮಯದಲ್ಲಿ, ಮಗು 1.2 ಕೆಜಿ ತೂಕವಿತ್ತು ಎಂದು ವೈದ್ಯರು ಹೇಳಿದರು.
ಇದನ್ನೂ ಓದಿ: ಭಾರತದಲ್ಲಿ ಕೊರೊನಾ: ಸೋಂಕಿತರ ಚೇತರಿಕೆಯ ಪ್ರಮಾಣ ಏರಿಕೆ


