ವಲಸೆ ಕಾರ್ಮಿಕರ ರಕ್ಷಣೆಯಲ್ಲಿ ಎಡವಿದ ಕೇಂದ್ರ; ಸುಳ್ಳುಸುದ್ಧಿಗಳ ಮೇಲೆ ಆರೋಪ!
PC: Prajavani

ವಲಸೆ ಹೊರಟಿದ್ದ ಕಾರ್ಮಿಕರ ಸಾವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ ಒಂದು ದಿನದ ನಂತರ, “ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಾರ್ಚ್‌ನಿಂದ ದೇಶದಾದ್ಯಂತ ಲಾಕ್‌ಡೌನ್ ಮಾಡಿದ ನಂತರ ಸಾಮೂಹಿಕ ವಲಸೆಗೆ ಸುಳ್ಳುಸುದ್ಧಿಗಳೇ ಕಾರಣ” ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ಹೇಳಿದೆ.

ಮಾರ್ಚ್ 25 ರಂದು ಲಾಕ್‌ಡೌನ್ ಘೋಷಿಸುವ ಮೊದಲು ವಲಸೆ ಕಾರ್ಮಿಕರನ್ನು ರಕ್ಷಿಸಲು ಕೈಗೊಂಡ ಕ್ರಮಗಳ ಬಗ್ಗೆ ತೃಣಮೂಲ ಕಾಂಗ್ರೆಸ್‌ನ ಸಂಸದ ಮಾಲಾ ರಾಯ್ ಪ್ರಶ್ನಿಸಿದ್ದರು.

“ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರ ವಲಸೆಯು ಲಾಕ್‌ಡೌನ್ ಅವಧಿಯ ಬಗ್ಗೆ ನಕಲಿ ಸುದ್ದಿಗಳಿಂದ ಉಂಟಾದ ಭೀತಿಯಿಂದ ಪ್ರಚೋದಿಸಲ್ಪಟ್ಟಿದ್ದು, ದೇಶದ ಜನರು, ವಿಶೇಷವಾಗಿ ವಲಸೆ ಕಾರ್ಮಿಕರು, ಆಹಾರ, ಕುಡಿಯುವ ನೀರು, ಆರೋಗ್ಯ ಸೇವೆಗಳು ಮತ್ತು ಆಶ್ರಯದಂತಹ ಮೂಲಭೂತ ಅವಶ್ಯಕತೆಗಳ ಸಮರ್ಪಕ ಪೂರೈಕೆಯ ಬಗ್ಗೆ ಚಿಂತಿತರಾಗಿದ್ದರು” ಎಂದು ಕೇಂದ್ರ ಸಚಿವ ನಿತ್ಯಾನಂದ್ ರೈ ಹೇಳಿದ್ದಾರೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.

ಇದನ್ನೂ ಓದಿ: ಎಲ್ಲಾ ವಲಸೆ ಕಾರ್ಮಿಕರು ತಮ್ಮೂರು ತಲುಪಿದ್ದಾರೆಯೇ? ಎಷ್ಟು ಜನ ಉಳಿದುಕೊಂಡಿದ್ದಾರೆ? ಇಲ್ಲಿದೆ ಮಾಹಿತಿ

“ಆದಾಗ್ಯೂ, ಕೇಂದ್ರ ಸರ್ಕಾರವು ಈ ಬಗ್ಗೆ ಸಂಪೂರ್ಣ ಜಾಗೃತಿ ವಹಿಸಿತ್ತು. ಅನಿವಾರ್ಯವಾದ ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ನಾಗರಿಕನೂ ಆಹಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯಗಳು ಇತ್ಯಾದಿಗಳ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ, ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡರು” ಎಂದು ಸಚಿವರು ಹೇಳಿದರು.

“ಮಾರ್ಚ್ 28 ರಂದು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯನ್ನು (SDRF) ಬಳಸಲು ಅವಕಾಶ ಮಾಡಿಕೊಟ್ಟು, “ಮನೆಯಿಲ್ಲದ ಜನರಿಗೆ ಮತ್ತು ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ, ಆಹಾರ, ಬಟ್ಟೆ, ವೈದ್ಯಕೀಯ ಆರೈಕೆ ಇತ್ಯಾದಿಗಳನ್ನು ಒದಗಿಸಲು ಕೇಂದ್ರವು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಕೇಂದ್ರವು ರಾಜ್ಯ ವಿಪತ್ತು ನಿಧಿಯಿಂದ 11, 092 ಕೋಟಿ ಮುಂಗಡ ಹಣವನ್ನು ಏಪ್ರಿಲ್ 3 ರಂದು ರಾಜ್ಯಗಳಿಗೆ ಬಿಡುಗಡೆ ಮಾಡಿದೆ” ಎಂದು ಸಚಿವರು ಹೇಳಿದರು.

ಕೊರೊನಾ ಲಾಕ್‌ಡೌನ್ ವೇಳೆ ದೇಶದ ಹೆದ್ದಾರಿಗಳಲ್ಲಿ ರಕ್ತಸುರಿಸುತ್ತಾ ತಮ್ಮ ಮನೆಗೆ ಹೊರಟವರಲ್ಲಿ, ಮೃತಪಟ್ಟ ವಲಸಿಗರ ಕುರಿತು ತನ್ನ ಬಳಿ ಯಾವುದೇ ಮಾಹಿತಿ ಇಲ್ಲ, ಆದ್ದರಿಂದ ಮೃತಪಟ್ಟವರಿಗೆ ಪರಿಹಾರ ಒದಗಿಸುವ ಪ್ರಶ್ನೆಯು ಏಳುವುದಿಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಂಸತ್ತಿಗೆ ತಿಳಿಸಿತ್ತು.

ಇದನ್ನೂ ಓದಿ: ಯಾವೊಬ್ಬ ವಲಸೆ ಕಾರ್ಮಿಕರೂ ಆಹಾರವಿಲ್ಲದೆ ಸಾವನ್ನಪ್ಪಿಲ್ಲ: ನಳಿನ್ ಕುಮಾರ್‌ ಕಟೀಲ್

ವಲಸಿಗ ಕಾರ್ಮಿಕರು ಲಾಕ್‌ಡೌನ್ ವೇಳೆ ಎದುರಿಸಬಹುದಾದ ಸಂಕಷ್ಟವನ್ನು ಅಂದಾಜಿಸಲು ಕೇಂದ್ರ ಸರ್ಕಾರ ವಿಫಲವಾಗಿತ್ತೇ ಎಂಬ ಕುರಿತಾದ ಪ್ರಶ್ನಗೆ ಉತ್ತರಿಸಿದ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್, “ಕೊರೊನಾ ಸಮಸ್ಯೆ ಹಾಗೂ ಲಾಕ್‌ಡೌನ್‍‌ನಿಂದಾಗಿ ಎದುರಾದ ಸಂಕಷ್ಟಗಳಿಗೆ ಕೇಂದ್ರ, ರಾಜ್ಯ ಸರಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು ಹಾಗೂ ಸರಕಾರೇತರ ಸಂಘಟನೆಗಳು ಸ್ಪಂದಿಸಿವೆ” ಎಂದು ಹೇಳಿದ್ದರು.

ಕೇಂದ್ರ ಸರ್ಕಾರವು ಕೇವಲ ಕೆಲವೆ ಗಂಟೆಗಳ ಅಂತರದಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ ಪರಿಣಾಮದಿಂದಾಗಿ ಕೋಟ್ಯಾಂತರ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿ ತಮ್ಮ ಊರುಗಳಿಗೆ ತಲುಪಲು ಹರಸಾಹಸ ಪಡುವಂತಾಗಿತ್ತು.

ಇದರ ನಂತರ ದೇಶದ ಮಹಾವಲಸೆ ಪ್ರಾರಂಭವಾಗಿ ನೂರಾರು ಮಂದಿ ವಲಸೆ ಕಾರ್ಮಿಕರು ದೇಶದ ಹೆದ್ದಾರಿಗಳಲ್ಲಿ, ರೈಲುಗಳಲ್ಲಿ, ರೈಲಿನ ಹಳಿಗಳಲ್ಲಿ, ಅಫಘಾತ, ದಣಿವು ಹಾಗೂ ಹಸಿವಿನಿಂದ ಪ್ರಾಣ ಬಿಡುವಂತಾಯಿತು.


ಇದನ್ನೂ ಓದಿ: ಲಾಕ್‌‌ಡೌನ್‌ ಸಮಯದಲ್ಲಿ ಮೃತಪಟ್ಟ ವಲಸಿಗರ ಮಾಹಿತಿ ಇಲ್ಲ: ಕೇಂದ್ರ ಸರ್ಕಾರ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts