Homeಮುಖಪುಟಸುಗ್ರೀವಾಜ್ಞೆ ಮೂಲಕ APMC ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯಗಳಿಗೆ ಪತ್ರ ಬರೆದಿದ್ದ ಕೇಂದ್ರ..

ಸುಗ್ರೀವಾಜ್ಞೆ ಮೂಲಕ APMC ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯಗಳಿಗೆ ಪತ್ರ ಬರೆದಿದ್ದ ಕೇಂದ್ರ..

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಕರ್ನಾಟಕ ಸರ್ಕಾರದ ಅಡಿಷನಲ್‌ ಚೀಫ್ ಸೆಕ್ರಟರಿ ಡಾ.ನಾಗಾಂಬಿಕಾ ದೇವಿಯವರಿಗೆ ಪತ್ರ ಬರೆದಿದ್ದು, ನೀವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎಪಿಎಲ್‌ಎಂ 2017ರ ಕಾಯ್ದೆಗೆ ಆದಷ್ಟು ಬೇಗ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಬೇಕೆಂದು ಒತ್ತಾಯಿಸಿತ್ತು.

- Advertisement -
- Advertisement -

ಕಳೆದೊಂದು ವಾರದಿಂದ ದೇಶಾದ್ಯಂತ ರೈತರು ಬೀದಿಗಿಳಿದಿದ್ದಾರೆ. ರೈತವಿರೋಧಿ ಸುಗ್ರೀವಾಜ್ಞೆ, ಮಸೂದೆಗಳನ್ನು ಹಿಂಪಡೆಯುವಂತೆ ಕೇಂದ್ರ, ರಾಜ್ಯ ಸರ್ಕಾರಗಳ ಮೇಲೆ ತೀವ್ರ ಒತ್ತಡ ಹೇರುತ್ತಿವೆ. ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಧಾನಿ ಮೋದಿ “ಈ ರೈತ ಮಸೂದೆಗಳು ರೈತರ ಮಂಡಿ ಮಾರುಕಟ್ಟೆಗೆ ವಿರುದ್ಧವಿವೆ ಎಂಬುದು ಸುಳ್ಳು ಎಂದು ನಾನು ಸ್ಪಷ್ಟಪಡಿಸುತ್ತೇನೆ. ಇದು ಕೃಷಿಮಂಡಿಗಳನ್ನು ಮತ್ತಷ್ಟು ಅಭಿವೃದ್ದಿಪಡಿಸಲಿದೆ. ಈ ಸಂದರ್ಭಕ್ಕೆ ತುರ್ತು ಅಗತ್ಯವಿದ್ದ ಕಾರಣಕ್ಕೆ ನಮ್ಮ ಸರ್ಕಾರ ಇವುಗಳನ್ನು ಅಂಗೀಕರಿಸಿದೆ. ಈಗ ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆಗಳನ್ನು ಲಾಭದ ದರಕ್ಕೆ ಮಾರುವ ಅಧಿಕಾರ ಹೊಂದಿದ್ದಾರೆ” ಎಂದು ತಿಳಿಸಿದ್ದಾರೆ.

ಖುದ್ದು ಮೋದಿಯವರೇ ಕೃಷಿ ಮಸೂದೆಗಳನ್ನು ಸಮರ್ಥಿಸಿಕೊಳ್ಳುವ ಮಟ್ಟಿಗೆ ರೈತರ ವಿರೋಧ ಬೆಳೆದುನಿಂತಿದೆ. ಅಷ್ಟೇ ಅಲ್ಲದೇ ನಿನ್ನೆ ಕೇಂದ್ರದ 6 ಸಚಿವರು ಪತ್ರಿಕಾಗೋಷ್ಠಿ ನಡೆಸಿ ಕೃಷಿ ಮಸೂದೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಆದರೂ ರೈತರು ತನ್ನ ಪ್ರತಿಭಟನೆಗಳನ್ನು ನಿಲ್ಲಿಸಿಲ್ಲ ಎಂದರೆ ಈ ಮಸೂದೆಗಳು ರೈತವಿರೋಧಿ ಎಂಬುದರಲ್ಲಿ ಸಂಶಯವಿಲ್ಲ ಎನಿಸುತ್ತದೆ.

ಇನ್ನು ಕೃಷಿ ಮಸೂದೆಗಳಲ್ಲಿ ಒಂದಾದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ವಿವಾದ ಭುಗಿಲೆದ್ದಿದೆ. ಕೇಂದ್ರ ಸರ್ಕಾರವೇ ಈ ಕಾಯ್ದೆಗೆ ತಿದ್ದುಪಡಿ ತರಲು ಕಳೆದ ಏಪ್ರಿಲ್ ತಿಂಗಳಿನಲ್ಲಿಯೇ ಮುಂದಾಗಿತ್ತು. ಆದರೆ ಎಪಿಎಂಸಿ ರಾಜ್ಯಪಟ್ಟಿಯಲ್ಲಿ ಬರುವುದರಿಂದ ಮೇ 04ರಂದು ಕೇಂದ್ರವು ಹಲವು ರಾಜ್ಯಸರ್ಕಾರಗಳಿಗೆ ಸುತ್ತೋಲೆಯೊಂದನ್ನು ಕಳಿಸಿ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರುವಂತೆ ಒತ್ತಡ ತಂದಿತ್ತು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಈ ಕುರಿತು ಕರ್ನಾಟಕ ಸರ್ಕಾರದ ಅಡಿಷನಲ್‌ ಚೀಫ್ ಸೆಕ್ರಟರಿ ಡಾ.ನಾಗಾಂಬಿಕಾ ದೇವಿಯವರಿಗೆ ಪತ್ರ ಬರೆದಿದ್ದು, ನೀವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎಪಿಎಲ್‌ಎಂ 2017ರ ಕಾಯ್ದೆಗೆ ಆದಷ್ಟು ಬೇಗ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಬೇಕೆಂದು ಸೂಚಿಸಿರುವ ಪತ್ರವು ಆಗ ವೈರಲ್ ಆಗಿತ್ತು. ಅಷ್ಟೇ ಅಲ್ಲದೇ ಅದಕ್ಕೆ ಮುಂಚೆಯೇ ಕೇಂದ್ರವು ತಯಾರಿಸಿದ್ದ ಮಾದರಿ ಕಾಯ್ದೆಯ ಪ್ರತಿಯು ರೈತ ಮುಖಂಡರಿಂದ ನಾನುಗೌರಿ.ಕಾಂಗೆ ಲಭ್ಯವಾಗಿತ್ತು.

“ಮಾದರಿ ಎಪಿಎಲ್ಎಂ ಕಾಯ್ದೆ 2017 ರಲ್ಲಿ ತಿಳಿಸಿರುವಂತೆ ನಿಮ್ಮ ರಾಜ್ಯವು ಈಗಾಗಲೇ ಸುಧಾರಣೆಯ ಒಂಬತ್ತು ಕ್ಷೇತ್ರಗಳಲ್ಲಿ ಎಂಟು ಸುಧಾರಣೆಗಳನ್ನು ಅಳವಡಿಸಿಕೊಂಡಿರುವುದಕ್ಕೆ ಪ್ರಶಂಸಿಸಲಾಗುತ್ತದೆ. ಆದರೂ ಎಪಿಎಂಸಿಯನ್ನು ಕೇವಲ ಮಂಡಿ ಮಾರುಕಟ್ಟೆಗಳಿಗೆ ಸೀಮಿತಗೊಳಿಸಿರುವುದು ಸರಿಯಿಲ್ಲ. ಈ ನಿಟ್ಟಿನಲ್ಲಿ, ನೀತಿ ಆಯೋಗದ ಕೊನೆಯ ಆಡಳಿತ ಮಂಡಳಿ ಸಭೆಯಲ್ಲಿ, ಭಾರತದ ಗೌರವಾನ್ವಿತ ಪ್ರಧಾನಿ ರಾಜ್ಯಗಳು ಮಾದರಿ ಎಪಿಎಲ್ಎಂ ಕಾಯ್ದೆ 2017 ಅನ್ನು ಅಂಗೀಕರಿಸುವ ಬಗ್ಗೆ ಒತ್ತು ನೀಡಿದ್ದರು. ಆದ್ದರಿಂದ ನಿಮ್ಮ ರಾಜ್ಯವು ರೈತರು ಮತ್ತು ಉತ್ಪಾದಕರ ಹಿತದೃಷ್ಟಿಯಿಂದ ಸುಗ್ರೀವಾಜ್ಞೆ ಮಾರ್ಗದ ಮೂಲಕ ತುರ್ತಾಗಿ ಅಳವಡಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ಇದನ್ನು ನಿಮ್ಮ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಯ ಗಮನಕ್ಕೆ ತಂದು ಸುಗ್ರೀವಾಜ್ಞೆಯ ನಂತರ ತಿದ್ದುಪಡಿ ಮಾಡಿದ ಕಾಯಿದೆಯ ಪ್ರತಿಯನ್ನು ಸಚಿವಾಲಯಕ್ಕೆ ಬೇಗನೆ ಕಳುಹಿಸಬೇಕು” ಎಂದು ಕೇಂದ್ರದ ಪತ್ರದಲ್ಲಿ ಬರೆಯಲಾಗಿತ್ತು.

ಈ ನಡುವೆ ಅದೇ ಸಮಯದಲ್ಲಿ ಕರ್ನಾಟಕದ ರಾಜ್ಯಪಾಲರ ಕಚೇರಿಯು ಆದಷ್ಟು ಬೇಗ ತಿದ್ದುಪಡಿ ತರಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿತ್ತೆಂಬ ಸುದ್ದಿ ಹರಿದಾಡಿತ್ತು. ಅದು ಎಷ್ಟರಮಟ್ಟಿಗೆಂದರೆ ಪ್ರತಿ ಗಂಟೆಗೊಮ್ಮೆ ಸುಗ್ರೀವಾಜ್ಞೆಯ ಸಹಿಗಾಗಿ ರಾಜ್ಯಪಾಲರ ಕಚೇರಿಗೆ ಆದಷ್ಟು ಬೇಗ ಕಳಿಸಿಕೊಡಬೇಕೆಂದು ಒತ್ತಾಯಿಸಲಾಗುತ್ತಿತ್ತು ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.

ಈ ರೀತಿಯಾಗಿ ತನ್ನ ವ್ಯಾಪ್ತಿಗೆ ಬಾರದ ತಿದ್ದುಪಡಿಯನ್ನು ಸಹ ಕೇಂದ್ರ ಸರ್ಕಾರವು ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಸುಗ್ರೀವಾಜ್ಞೆಗಳ ಮೂಲಕ ತಂದಿತ್ತು. ಈಗಲೂ ಸಹ ಅವುಗಳನ್ನು ಸಮರ್ಪಕವಾಗಿ ಚರ್ಚಿಸದೇ ತರಾತುರಿಯಲ್ಲಿ ಅಂಗೀಕರಿಸಲಾಗುತ್ತಿದೆ. ವಿರೋಧಿಸಿದ ಸಂಸದರನ್ನು ಅಧಿವೇಶನದಿಂದ ದೂರ ಇಡಲಾಗುತ್ತಿದೆ. ದೇಶದ ರೈತರ ಮೇಲೆ ಗಮನಾರ್ಹ ಪರಿಣಾಮ ಬೀರುವ ತಿದ್ದುಪಡಿಗಳನ್ನು ರಾಜ್ಯಗಳಿಗೆ ಒತ್ತಡ ಹೇರಿ ಸುಗ್ರೀವಾಜ್ಞೆಗಳ ಮೂಲಕ ತಂದು ಈಗ ತರಾತುರಿಯಲ್ಲಿ ಅಂಗೀಕರಿಸುತ್ತಿರುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಅಂತಹ ರೈತರನ್ನು ಕಂಗನಾ ರಾಣಾವತ್‌ರಂತಹ ನಟಿಯರು ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ. ಆದರೆ ರೈತರು ಇದರ ವಿರುದ್ಧ ತಿರುಗಿಬಿದ್ದಿರುವುದು ಸರ್ಕಾರಕ್ಕೆ ತಲೆನೋವಾಗಿದೆ. ಆದ ಕಾರಣವೇ ನಿನ್ನೆ ಮೋದಿ ಸೇರಿದಂತೆ ಹಲವು ಸಚಿವರು ಕೃಷಿ ಮಸೂದೆಗಳ ಸಮರ್ಥನೆಗಿಳಿದಿದ್ದಾರೆ. ಕಳೆದ ಹಲವು ದಿನಗಳಿಂದ ವಿದ್ಯಾರ್ಥಿ ಯುವಜನರು ಪರೀಕ್ಷೆ ಮುಂದೂಡಿಕೆ ಮತ್ತು ಉದ್ಯೋಗದ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದರು. ಈಗ ರೈತರು ದನಿಯೆತ್ತುತ್ತಿದ್ದಾರೆ. ಸರ್ಕಾರ ಇನ್ನೆಷ್ಟು ಜನರ ಕೋಪ ಆಕ್ರೋಶಗಳಿಗೆ ಗುರಿಯಾಗಿಲಿದೆ ಎಂದು ಕಾದು ನೋಡಬೇಕಿದೆ.


ಇದನ್ನೂ ಓದಿ: ಕೃಷಿ ಮಸೂದೆಗಳು ರೈತರನ್ನು ಬಲಶಾಲಿಗಳನ್ನಾಗಿಸಲಿವೆ: ಪ್ರಧಾನಿ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...