ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಸೆಪ್ಟೆಂಬರ್ 25ರಂದು ಅಖಿಲ ಭಾರತ ಬಂದ್ ಗೆ ಕರೆ ನೀಡಲಾಗಿದೆ. ಕರ್ನಾಟಕದಲ್ಲಿಯೂ ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ರೈತ ಸಂಘಟನೆಗಳು ನೀಡಿರುವ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಬೆಂಬಲ ವ್ಯಕ್ತಪಡಿಸಿದೆ.
ಈಗಾಗಲೇ ಕಳೆದ 2 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜನತಾ ಅಧಿವೇಶನದ ಹೆಸರಿನಲ್ಲಿ ಐಕ್ಯಹೋರಾಟ ನಡೆಸಲಾಗುತ್ತಿದೆ. ರೈತರ ವಿರುದ್ಧವಿರುವ, ಕಾರ್ಪೊರೇಟ್ ಕಂಪನಿಗಳಿಗೆ ಪ್ರಯೋಜನ ನೀಡುವ ಈ ಸುಗ್ರಿವಾಜ್ಞೆಗಳನ್ನು ಹಿಂಪಡೆಯಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಕನಸಿನ ಭೂ ಹಂಚಿಕೆ ಜಾರಿಯಾಗಲಿ: ನೂರ್ ಶ್ರೀಧರ್
ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಲ್ಲಿ ಇಡೀ ಕೃಷಿಕ್ಷೇತ್ರಕ್ಕೆ ದೊಡ್ಡ ಬಿಕ್ಕಟ್ಟು ಎದುರಾಗಲಿದೆ. ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಲಕ್ಷಾಂತರ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಅವರ ಭೂಮಿ ಕಸಿದು, ಕಾರ್ಪೊರೇಟರ್‌ಗಳಿಗೆ ನೀಡಿ ರೈತರನ್ನು ಕೂಲಿಯಾಳುಗಳನ್ನಾಗಿಸಲು ಸರ್ಕಾರ ಮುಂದಾಗಿದೆ. ಸರ್ಕಾರ ನೀತಿಗಳನ್ನು ಖಂಡಿಸಿ ರೈತ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ನೀಡುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಬಂದ್‌ನಲ್ಲಿ ಪಾಲ್ಗೊಂಡು ಪ್ರತಿಭಟನೆ ವ್ಯಕ್ತಪಡಿಸಲಿದ್ದಾರೆ ಎಂದಿದ್ದಾರೆ.

ದೇವರಾಜ್ ಅರಸು ಅವರು ಜಾರಿಗೆ ತಂದ ಉಳುವವನೇ ಭೂಮಿಯ ಒಡೆಯ ಎಂಬ ಮಹೋನ್ನತ ಆದರ್ಶ ನೀತಿಯನ್ನು ಈಗಿನ ಸರ್ಕಾರ ತಿರುಚಿ ದುಡ್ಡಿದ್ದವನೇ ಭೂಮಿಯ ಒಡೆಯ ಎಂಬ ನೀತಿಯನ್ನು ತಂದು ಜನರನ್ನು ಭಿಕ್ಷುಕರನ್ನಾಗಿಸುವ ಕ್ರೌರ್ಯಕ್ಕೆ ಸರ್ಕಾರ ಇಳಿದಿದೆ ಎಂದು ಟಿ.ಎ.ನಾರಾಯಣ ಆರೋಪಿಸಿದ್ದಾರೆ.
ಇತ್ತ ಕೃಷಿ ಮಸೂದೆಗಳನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಪಂಜಾಬ್‌ನಲ್ಲಿಯೂ ಮೊದಲ ಬಾರಿಗೆ ಡೊಡ್ಡ-ಸಣ್ಣ ಸೇರಿದಂತೆ 31 ರೈತ ಸಂಘಟನೆಗಳು ಒಟ್ಟುಗೂಡಿವೆ. ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಸೆಪ್ಟಂಬರ್ 25ರಂದು ಬೃಹತ್ ರಾಜ್ಯವ್ಯಾಪಿ ಬಂದ್ ನಡೆಸಲಿವೆ.


