Homeಅಂಕಣಗಳುಟಿವಿ ವಾಹಿನಿಗಳೇ ಲಿಂಚಿಂಗ್ ಕೇಂದ್ರಗಳಾಗಿರುವ ಕಾಲದಲ್ಲಿ... ನಾವೇನು ಮಾಡಬೇಕು?

ಟಿವಿ ವಾಹಿನಿಗಳೇ ಲಿಂಚಿಂಗ್ ಕೇಂದ್ರಗಳಾಗಿರುವ ಕಾಲದಲ್ಲಿ… ನಾವೇನು ಮಾಡಬೇಕು?

ಟಿವಿ ಆಂಕರ್‌ಗಳು ಕಿರುಚುವ ರೀತಿ, ನಿರ್ದಿಷ್ಟ ಸಮುದಾಯ, ಗುಂಪು, ವ್ಯಕ್ತಿಗಳ ವಿರುದ್ಧ ಪ್ರಚೋದಿಸುವ ರೀತಿಯನ್ನು ನೋಡಿದವರಿಗೆ ಸ್ಪಷ್ಟವಾಗುವ ಸಂಗತಿ ಏನೆಂದರೆ, ಅವರು ಲಿಂಚಿಂಗ್ (ಗುಂಪು ಹತ್ಯೆ)ಗೆ ದಾರಿ ಮಾಡಿಕೊಡುತ್ತಿದ್ದಾರೆ.

- Advertisement -
- Advertisement -

ಇದೀಗ ತಾನೇ ಸುಪ್ರೀಂಕೋರ್ಟು ಟಿವಿ ಚಾನೆಲ್‍ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ‘ಯುಪಿಎಸ್‍ಸಿ ಜಿಹಾದ್’ ಹೆಸರಿನಲ್ಲಿ ಸುಳ್ಳು ಮತ್ತು ದ್ವೇಷಪೂರಿತವಾದ ವರದಿ ಪ್ರಸಾರ ಮಾಡಿದ ಸುದರ್ಶನ್ ಟಿವಿಯ ವಿಚಾರದಲ್ಲಿ ಕೆಲವು ಸುಪ್ರೀಂಕೋರ್ಟು ನ್ಯಾಯಾಧೀಶರು ನಿಷ್ಠುರವಾದ ಮಾತುಗಳನ್ನು ಆಡಿದ್ದಾರೆ. ಆದರೆ, ಸಮಸ್ಯೆಯೇನೆಂದರೆ ಮಾಧ್ಯಮಗಳನ್ನು ನಿಯಂತ್ರಣ ಮಾಡಬೇಕೆಂದು ಕೋರ್ಟು ಸೂಚಿಸಿದಲ್ಲಿ, ಆ ನಿಯಂತ್ರಣವನ್ನು ಯಾರು ಮಾಡುತ್ತಾರೆ ಮತ್ತು ಯಾರನ್ನು ಮಾಡುತ್ತಾರೆ ಎಂಬ ಪ್ರಶ್ನೆ ಏಳುತ್ತದೆ. ಏಕೆಂದರೆ ಎಲ್ಲಾ ನಿಯಂತ್ರಕ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ನಿಯಂತ್ರಣಕ್ಕೆ ತೆಗೆದುಕೊಂಡಾಗಿದೆ. ಅಂತಹ ಸಾಧ್ಯತೆಯು ಬೇರೆ ಸರ್ಕಾರಗಳಿರುವಾಗಲೂ ಇದೆ. ಹೀಗಾಗಿ ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಯಾರೂ ಇಂತಹ ನಿಯಂತ್ರಣವನ್ನು ಎಂತಹ ಸಂದರ್ಭದಲ್ಲೂ ಒಪ್ಪುವುದಿಲ್ಲ.

ಹಾಗೆಂದು, ಮಾಧ್ಯಮಗಳ ಮೇಲೆ ಯಾರ ಕಡಿವಾಣವೂ ಇರಬಾರದೇ ಎಂಬ ಪ್ರಶ್ನೆಯು ಏಳದೇ ಇರದು. ಏಕೆಂದರೆ ಇದುವರೆಗೆ ಪ್ರಭಾವಶಾಲಿಗಳಾಗಿರುವ ಟಿವಿ ಚಾನೆಲ್‍ಗಳಲ್ಲಿ ಹಲವು ಮಾಧ್ಯಮ ಸಂಸ್ಥೆಗಳಾಗಿ ಉಳಿದಿಲ್ಲ; ಅವು ಲಿಂಚಿಂಗ್ ಕೇಂದ್ರಗಳಾಗಿವೆ. ಇವು ಟಿವಿ ಚಾನೆಲ್‍ಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಲವಾರು ಪತ್ರಿಕೆಗಳೂ ಅದನ್ನು ಮಾಡಿವೆ. ಪ್ರಜಾತಾಂತ್ರಿಕ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ನಿಷ್ಠುರವಾದ ಅಭಿಪ್ರಾಯವನ್ನು ಮುಂದಿಟ್ಟ ಸಾಹಿತಿಗಳ ಮೇಲೆ ಅಂತಹ ಸಮರವನ್ನು ಕನ್ನಡದ ಪತ್ರಿಕೆಯ ಸಂಪಾದಕರೊಬ್ಬರು ಆರಂಭಿಸಿದ್ದರು. ಓದುಗರ ಅಭಿಪ್ರಾಯದ ಹೆಸರಿನಲ್ಲಿ ಅವರುಗಳ ಮೇಲೆ ವಾಗ್ದಾಳಿಯನ್ನು ನಡೆಸಲಾಯಿತು. ಈ ಓದುಗರ ಅಭಿಪ್ರಾಯ ಎನ್ನುವುದಕ್ಕೊಂದು ಸಾಧ್ಯತೆ ಇರುತ್ತದೆ. ನಿರ್ದಿಷ್ಟವಾದ ರೀತಿಯ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಬಿಂಬಿಸಿ, ತಾವು ಆ ಜನಾಭಿಪ್ರಾಯವನ್ನು ಎತ್ತಿ ಹಿಡಿಯುತ್ತಿದ್ದೇವೆ ಎಂದು ಮಾಡುವುದು. ಹಾಗೆ ಮಾಡುವ ಮೂಲಕ ಇತರ ಓದುಗರಿಗೂ ಇದೇ ಪ್ರಬಲವಾದ ಜನಾಭಿಪ್ರಾಯ ಎಂಬ ಭಾವನೆ ಮೂಡುವಂತಾಗುತ್ತದೆ. ಸಮಾಜದ ಪ್ರಬಲ ಅಭಿಪ್ರಾಯ ಯಾವುದೋ ಅದರ ಜೊತೆಗೆ ತೂರಿಕೊಂಡು ಹೋಗುವ ಮಂದೆ ಸ್ವಭಾವ ಯಾವುದೇ ಸಮಾಜದಲ್ಲಿ ಸಾಕಷ್ಟಿರುವುದರಿಂದ, ನಿರ್ದಿಷ್ಟವಾದ ಜನಾಭಿಪ್ರಾಯವನ್ನು ಆ ಮೂಲಕ ಉತ್ಪಾದಿಸಲಾಗುತ್ತದೆ.

ಇಂತಹುದನ್ನು ಮಾಡಲು ಶುರು ಮಾಡಿದ ಮಾಧ್ಯಮಗಳು ಯಾವ ಮಟ್ಟಕ್ಕೆ ಮುಟ್ಟಿದವೆಂದರೆ, ಕರ್ನಾಟಕದ ಖ್ಯಾತ ವಿದ್ವಾಂಸ ಕಲಬುರ್ಗಿಯವರಿಂದ ಅವರದ್ದಲ್ಲದ ಹೇಳಿಕೆಯನ್ನು ತಪ್ಪೆಂದು ಬಿಂಬಿಸಿ ಅವರಿಂದ ಕ್ಷಮೆಯನ್ನೂ ಕೇಳಿಸಿಬಿಟ್ಟವು. ಅದೇ ಸಂಗತಿಯು ಅವರ ಹತ್ಯೆ ಮಾಡಲು ಹೊರಟ ಕಾಲಾಳುವಿಗೆ ಉತ್ತೇಜಿಸಲು ಅನುಕೂಲ ಮಾಡಿಕೊಟ್ಟಿತು.

ಎಂ ಎಂ ಕಲಬುರ್ಗಿ. ಚಿತ್ರಕೃಪೆ: Deccan Herald

ಇಂಥದ್ದೇ ಕೆಲಸವನ್ನು ಉಮರ್ ಖಾಲಿದ್, ಕನ್ಹಯ್ಯ ಕುಮಾರ್ ಥರದ ಜೆಎನ್‍ಯು ವಿದ್ಯಾರ್ಥಿಗಳ ಮೇಲೂ ಮಾಡಲಾಯಿತು. 8-10 ತಿಂಗಳ ಕೆಳಗೆ ಅಮೂಲ್ಯ ಎಂಬ ವಿದ್ಯಾರ್ಥಿನಿಯು ತನ್ನ ಬಾಲಿಶತನದ ಕಾರಣಕ್ಕಾಗಿ, ಸಾರ್ವಜನಿಕ ಸಭೆಯೊಂದರಲ್ಲಿ ಏನೋ ಹೇಳಲು ಹೋಗಿ ಇನ್ನೇನೋ ಹೇಳಿದಾಗಲೂ ಅದೇ ನಡೆಯಿತು. ಅಂದು ಕನ್ನಡದ ಟಿವಿ ಚಾನೆಲ್‍ನಲ್ಲಿ ಆಂಕರ್ ಕೂಗಿದ್ದನ್ನು ಕೇಳಿದ ಅಧಿಕಾರಿಯೊಬ್ಬರು ಗಾಬರಿಯಾಗಿ ಫೋನ್ ಮಾಡಿದರು.He  is asking for her blood, how can he do like that? Something has to be done about it ಎಂದಿದ್ದರು.

ತೀರಾ ಇತ್ತೀಚೆಗೆ ಕಾಂಗ್ರೆಸ್‍ನ ರಾಜ್ಯಸಭಾ ಸದಸ್ಯ ರಾಜೀವ್ ತ್ಯಾಗಿಯವರು ಟಿವಿ ಚಾನೆಲ್ಲೊಂದರಲ್ಲಿ ಪ್ಯಾನೆಲ್ ಚರ್ಚೆ ಮುಗಿಸಿಕೊಂಡು ಮನೆಗೆ ಹೋಗಿ ಹೃದಯಾಘಾತದಿಂದ ತೀರಿಕೊಂಡರು. ಸಾಯುವ ಮುನ್ನ ಟಿವಿ ಆಂಕರ್‌ಗಳ ಕುರಿತು ಅವರಾಡಿದ ಕೊನೆ ಮಾತೆಂದರೆ, ‘ಇವರು ನನ್ನನ್ನು ಅವಹೇಳನ ಮಾಡಿದರು, ನನ್ನನ್ನು ಕೊಂದುಬಿಟ್ಟರು’. ಇದನ್ನು ಕೇಳಿದ ಇನ್ನೊಬ್ಬ ಕಾಂಗ್ರೆಸ್ ವಕ್ತಾರ ಪ್ರೊ.ಗೌರವ್ ವಲ್ಲಭ್, ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್‍ರಿಗೆ ‘ಟಿವಿಗೊಂದು ನೀತಿ ಸಂಹಿತೆ ರೂಪಿಸಲು’ ಆನ್‍ಲೈನ್ ಪಿಟಿಷನ್ ಆರಂಭಿಸಿದ್ದಾರೆ.

ರಾಜೀವ್ ತ್ಯಾಗಿ:Photo Courtesy: National Herald

ಟಿವಿ ಆಂಕರ್‌ಗಳು ಕಿರುಚುವ ರೀತಿ, ನಿರ್ದಿಷ್ಟ ಸಮುದಾಯ, ಗುಂಪು, ವ್ಯಕ್ತಿಗಳ ವಿರುದ್ಧ ಪ್ರಚೋದಿಸುವ ರೀತಿಯನ್ನು ನೋಡಿದವರಿಗೆ ಸ್ಪಷ್ಟವಾಗುವ ಸಂಗತಿ ಏನೆಂದರೆ, ಅವರು ಲಿಂಚಿಂಗ್ (ಗುಂಪು ಹತ್ಯೆ)ಗೆ ದಾರಿ ಮಾಡಿಕೊಡುತ್ತಿದ್ದಾರೆ. ಬೇರೆ ಬೇರೆ ರೀತಿಯ ಲಿಂಚಿಂಗ್‍ಗೆ ಸಮ್ಮತಿಯನ್ನು ಉತ್ಪಾದಿಸುತ್ತಿದ್ದಾರೆ. ಇದರಲ್ಲಿ ಸಂದೇಹವೇ ಇಲ್ಲ.

ಎಂದಿನಂತೆ ಪ್ರಶ್ನೆಯಿರುವುದು ಇದರ ಕುರಿತು ಇನ್ನಷ್ಟು ವಿಶ್ಲೇಷಣೆ ಮಾಡುವುದರಲ್ಲಲ್ಲ. ಬದಲಿಗೆ ಇದನ್ನು ಹೇಗೆ ಬದಲಿಸುತ್ತೇವೆ ಎಂಬುದರಲ್ಲಿ. ಇಂದಿನ ಪರಿಸ್ಥಿತಿಯಲ್ಲಿ ಟಿವಿ ಚಾನೆಲ್‍ಗಳ ಮೇಲೆ ನಿಯಂತ್ರಣ ಹೇರಿ ಎಂದು ಸರ್ಕಾರ ಅಥವಾ ನ್ಯಾಯಾಲಯದ ಮೊರೆ ಹೋಗುವುದು ಮೂರ್ಖತನದ ಕೆಲಸವಾದೀತು. ಬದಲಿಗೆ ಪ್ರಜಾತಾಂತ್ರಿಕವಾದ ಮಾಧ್ಯಮ ಸಾಧ್ಯತೆಗಳನ್ನು ಅವಿಷ್ಕರಿಸಿ ವ್ಯಾಪಕವಾದ ಮತ್ತು ಬೃಹತ್ತಾದ ಪ್ರಮಾಣದಲ್ಲಿ ಜಾರಿಗೊಳಿಸುವುದು ಮಾತ್ರ ಇದನ್ನು ತಡೆಯಬಲ್ಲುದು ಮತ್ತು ಇಂದಿನ ಮುಖ್ಯವಾಹಿನಿಯನ್ನು ಅಪ್ರಸ್ತುತಗೊಳಿಸಬಲ್ಲದು. ಆ ನಿಟ್ಟಿನಲ್ಲಿ ಈಗಾಗಲೇ ದೇಶದ ಕೆಲವೆಡೆ ಸೃಜನಶೀಲವಾದ ಪ್ರಯತ್ನಗಳು ನಡೆಯುತ್ತಿದೆ. ಗೌರಿ ಮೀಡಿಯಾ ಸಹಾ ಅದಕ್ಕೆ ಪೂರಕವಾದ ಕೆಲಸದಲ್ಲಿ ತೊಡಗಿದೆ. ನಮ್ಮ ಪ್ರಜ್ಞಾವಂತ ಓದುಗರೂ ಜೊತೆಯಾಗುತ್ತಾರೆಂಬ ವಿಶ್ವಾಸವಿದೆ.


ಇದನ್ನೂ ಓದಿ: ಸುದರ್ಶನ ಟಿವಿಯ ವಿವಾದಾತ್ಮಕ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...