ಪೀಕೆ |
ಒಂದು ಆಡಿಯೋ ಸುತ್ತ ನಡೆಯುತ್ತಿರುವ ಒಟ್ಟೂ ಪ್ರಹಸನ ಬಿಚ್ಚಿಡುತ್ತಿರುವ ಸತ್ಯ ಏನೆಂದರೆ, ಆಪರೇಷನ್ ಕಮಲಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬೆಂಬಲವಿದೆ ಎಂಬುದನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಒಪ್ಪಿಕೊಳ್ಳುತ್ತಿದ್ದಾರೆ ಬಿಜೆಪಯ ನಾಯಕರು!
ಸದನದಲ್ಲಿ ಈ ಆಡಿಯೋ ವಿಚಾರವಾಗಿ ಮಾತನಾಡಿದ ಬಿಜೆಪಿಯ ಎಲ್ಲ ನಾಯಕರು ಪದೇ ಪದೇ, ‘ಸ್ಪೀಕರ್ ರಮೇಶಕುಮಾರವರೇ, ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ತಮ್ಮ ಹೆಸರು ಉಲ್ಲೇಖವಾದುದಕ್ಕೆ ನಮಗೂ ಬೇಜಾರಾಗಿದೆ’ ಎಂದು ಸ್ಪೀಕರ್ ಅವರ ಪ್ರಾಮಾಣಿಕತೆಗೆ ಸರ್ಟಿಫಿಕೆಟ್ ಕೊಡುತ್ತಿದ್ದಾರೆ. ಆದರೆ, ಆ ಆಡಿಯೋದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೆಸರೂ ಪ್ರಸ್ತಾಪವಾಗಿದೆಯಲ್ಲ? ಆ ಬಗ್ಗೆ ಇಲ್ಲಿವರೆಗೂ ಯಾವ ಬಿಜೆಪಿ ನಾಯಕನೂ ಖೇದ ವ್ಯಕ್ತಪಡಿಸಿಲ್ಲ, ನೊಂದುಕೊಂಡಿಲ್ಲ. ಅಂದರೆ ಅವರಿಗೆ ಪಕ್ಕಾ ಗೊತ್ತಿದೆ: ಮೋದಿ-ಶಾ ಬೆಂಬಲದಿಂದಲೇ ಇದೆಲ್ಲ ನಡೆಯುತ್ತಿದೆ ಎಂಬುದು. ಆದರೆ ಬಾಹ್ಯವಾಗಿಯಾದರೂ ಈ ಕುರಿತಂತೆ ಮಾತಾಡಬಹುದಿತ್ತಲ್ಲ? ಎಂಟು ತಿಂಗಳಿಂದ ನಡೆದಿರುವ ಅಸಹ್ಯ ಆಪರೇಷನ್ ಕಮಲದಲ್ಲಿ ತಮ್ಮ ರಾಷ್ಟ್ರೀಯ ನಾಯಕರೂ ಭಾಗಿ ಎಂಬುದು ಮನದಟ್ಟಾಗಿರುವುದರಿಂದ ಅರ‍್ಯಾರಿಗೂ ಆಡಿಯೊದಲ್ಲಿ ಬಂದ ‘ಸತ್ಯ’ವನ್ನು ವಿರೋಧಿಸಲು ಆಗುತ್ತಿಲ್ಲವೇ?
ಇಲ್ಲಿ ಒಂದಿಷ್ಟು ಅಂಶಗಳನ್ನು ಸುಮ್ಮನೆ ಗಮನಿಸಿ:
* ಸೋಮವಾರ ಸ್ಪೀಕರ್ ಈ ವಿಷಯ ಎತ್ತಿದ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಮಾಧುಸ್ವಾಮಿ, ‘ಎಲ್ಲೋ ಯಾರೋ ಮಾತಾಡಿದ್ದಕ್ಕೆ ತಾವು (ಸ್ಪೀಕರ್) ನೊಂದುಕೊಳ್ಳಬೇಡಿ. ನಿಮ್ಮ ಬಗ್ಗೆ ನಮಗೆಲ್ಲ ಗೌರವವಿದೆ. ಏನೋ ಅಚಾತುರ್ಯ ನಡೆದಿದೆ, ಅದನ್ನು ಮರೆತುಬಿಡಿ, ಮನ್ನಿಸಿಬಿಡಿ’ ಎಂದರು. ಅಂದರೆ ಈ ‘ಅಚಾತುರ್ಯ’ ನಡೆದಿರುವುದು ಸತ್ಯ ಎಂದು ಪರೋಕ್ಷವಾಗಿ ಅವರು ಒಪ್ಪಿಕೊಂಡರು. ಆದರೆ ರಮೇಶಕುಮಾರ್ ಹೆಸರು ಪ್ರಸ್ತಾಪವಾದುದಕ್ಕೆ ಕಳವಳ ವ್ಯಕ್ತಪಡಿಸಿದ ಅವರಿಗೆ, ಮೋದಿ-ಶಾ ಹೆಸರು ಪ್ರಸ್ತಾಪವಾಗಿದ್ದರ ಬಗ್ಗೆ ಯಾವ ಬೇಜಾರೂ ಇಲ್ಲವೆಂದಾಯಿತಲ್ಲ? ಅವತ್ತು ಮಾತಾಡಿದ ಬಿಜೆಪಿಯ ಎಲ್ಲ ನಾಯಕರೂ ಸ್ಪೀಕರ್ ಹೆಸರು ಬಂದುದಕ್ಕೆ ಬೇಸರ ವ್ಯಕ್ತಪಡಿಸಿದರೆ ಹೊರತು ತಮ್ಮ ರಾಷ್ಟ್ರೀಯ ನಾಯಕರ ಹೆಸರು ಪ್ರಸ್ತಾಪವಾದುದಕ್ಕೆ ಖೇದ ಪಡಲೇ ಇಲ್ಲ!
* ಮಂಗಳವಾರ, ಬುಧವಾರ ಎಸ್‌ಐಟಿ ತನಿಖೆಗೆ ವಿರೋಧ ವ್ಯಕ್ತ ಮಾಡುವಾಗಲೂ, ಆಡಿಯೋದ ಸಣ್ಣ ಭಾಗ ಮಾತ್ರ ರಿಲೀಸ್ ಮಾಡಲಾಗಿದೆ ಎಂದರೆ ಹೊರತು ಅದು ನಕಲಿ ರಂದೂ ಗಟ್ಟಿಯಾಗಿ ಪ್ರತಿಪಾದಿಸಲೇ ಇಲ್ಲ!
* ಶರಣಗೌಡ ಎಂಬ 37 ವರ್ಷದ ಜೆಡಿಎಸ್ ಕಾರ್ಯಕರ್ತನೊಂದಿಗೆ ಒಂದೆರಡು ತಾಸು ಮಾತಾಡಿದ್ದಾರಂತೆ ಯಡಿಯೂರಪ್ಪ ಮತ್ತು ಶಿವನಗೌಡ ನಾಯಕ್. ಆ ‘ಹುಡುಗ’ನ ಜೊತೆ ಮಾತಾಡಿದ ಪೂರ್ತಿ ಆಡಿಯೋ ಬಿಡಿಗಡೆಯಾದರೂ, ಈಗ ರಲೀಸ್ ಆಗಿರುವ ವಿಷಯ ಸತ್ಯ ಎಂಬುದು ಗ್ಯಾರಂಟಿಯಾಯಿತಲ್ಲ. ಅಷ್ಟಕ್ಕೂ ಶರಣಗೌಡನಿಗೆ ಪ್ರಜಾಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ ಯಡಿಯೂರಪ್ಪ ಬೋಧಿಸುತ್ತ ಕುಳಿತಿದ್ದರೆ? ಮಧ್ಯರಾತ್ರಿಯಲ್ಲಿ ದೇವದುರ್ಗದ ಶಾಸಕ ಶಿವನಗೌಡ, ಸರ್ಕಾರ ತಾನಾಗೇ ಬೀಳುತ್ತೆ. ಆಗ ನಮ್ಮ ಜೊತೆ ನೀನು ಇರು ಸಾಕು. ಎಲ್ಲ ನ್ಯಾಯಯುತವಾಗಿಯೇ ನಡೆಯಲಿದೆ/ ಎಂದು ಶರಣಗೌಡನಿಗೆ ಉಪದೇಶ ಮಾಡುತ್ತಿದ್ದರೆ?
ಹೀಗೆ ಸುಮ್ಮನೆ ಸರಳ ತರ್ಕ ಉಪಯೋಗಿಸಿದರೂ, ಬಿಜೆಪಿಯ ಹಿಪಾಕ್ರಸಿ ಬಯಲಾಗುತ್ತ ಹೋಗುತ್ತದೆ. ಆಡಿಯೋದಲ್ಲಿರುವ ಧ್ವನಿ ತನ್ನದೇ ಎಂದ ಮೇಲೆ, ಎಸ್‌ಐಟಿ ತನ್ನನ್ನು ಹಣಿಯಲಿದೆ ಎಂಬುದು ಖಾತ್ರಿಯಾಗಿದ್ದರಿಂದಲೇ ಯಡಿಯೂರಪ್ಪ ಈಗ ಸದಸನದ ಕಲಾಪಗಳನ್ನೆಲ್ಲ ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಇದರಲ್ಲಿ ಮಾಧುಸ್ವಾಮಿಯಂತವರು ಸಂಪೂರ್ಣ ಬೆತ್ತಲಾಗುತ್ತಿದ್ದಾರೆ. ಯಡಿಯೂರಪ್ಪ, ಶಿವನಗೌಡರನ್ನು ಬಿಡಿ, ಅವರು ಎಂದೋ ವಿವಸ್ತ್ರರಾಗಿ ಬಿಟ್ಟಿದ್ದಾರೆ.


