ಖ್ಯಾತ ಮಾಜಿ ಕ್ರಿಕೆಟಿಗ ಮತ್ತು ಐಪಿಎಲ್ ಕಾಮೆಂಟ್ರಿ ಸುನಿಲ್ ಗವಾಸ್ಕರ್ ಗುರುವಾರದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯ ವಿರುದ್ಧ ಅನುಷ್ಕಾ ಶರ್ಮಾ ತಿರುಗೇಟು ನೀಡಿದ್ದು, ಸದ್ಯ ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಐಪಿಎಲ್ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಆರ್‌ಸಿಬಿ ಮುಖಾಮುಖಿಯಾಗಿತ್ತು. ಇದರಲ್ಲಿ ಆರ್‌ಸಿಬಿ 97 ರನ್‌ಗಳಿಂದ ಸೋತಿತ್ತು. ಆರ್‌ಸಿಬಿ ನಾಯಕ ಕೊಹ್ಲಿ, ಕೇವಲ 1 ರನ್ ಗಳಿಸಿ ಔಟಾಗಿದ್ದರು. ಈ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ನಿಡಿದ ಹೇಳಿಕೆಯು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಇದರ ವಿರುದ್ಧ ಕೊಹ್ಲಿ ಅಭಿಮಾನಿಗಳೂ ತಿರುಗಿಬಿದ್ದಿದ್ದು, ಅನುಷ್ಕಾ ಶರ್ಮಾ ಕೂಡ ಇನ್ಸ್‌ಟಾಗ್ರಾಂನಲ್ಲಿ ಇದನ್ನು ಖಂಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಬೇಡ, ಐಪಿಎಲ್ ಬೇಕು.. ಬದಲಾಗ್ತಿದೆ ಕ್ರಿಕೆಟಿಗರ ಮೈಂಡ್‍ಸೆಟ್!
ಗವಾಸ್ಕರ್ ತನ್ನ ಕಾಮೆಂಟ್ರಿಯಲ್ಲಿ, “ಲಾಕ್‌ಡೌನ್ ವೇಳೆ ಅನುಷ್ಕಾ ಅವರ ಬೌಲಿಂಗ್‌ಗೇ ಕೊಹ್ಲಿ ಹೆಚ್ಚು ಉತ್ತರಿಸಿದ್ದಾರೆ. ಅದು ಇಲ್ಲಿ ಪ್ರಯೋಜನಕ್ಕೆ ಬರಲಿಲ್ಲ” ಎಂದು ಹಿಂದಿಯಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅನುಷ್ಕಾ, “ಇದು ಸದಭಿರುಚಿಯ ಹೇಳಿಕೆಯಲ್ಲ. ಇದಕ್ಕೆ ಗವಾಸ್ಕರ್ ಸ್ಪಷ್ಟನೆ ನೀಡಬೇಕು” ಎಂದು ಹೇಳಿದ್ದರು.
ಅನುಷ್ಕಾ ತನ್ನ ಇನ್‌ಸ್ಟಾಗ್ರಾಂನಲ್ಲಿ, “ಗೌರವಾನ್ವಿತ ಸುನಿಲ್ ಗವಾಸ್ಕರ್ ಅವರೇ, ಪಂದ್ಯದಲ್ಲಿ ಪತಿಯ ಸಾಮರ್ಥ್ಯಕ್ಕೂ ಪತ್ನಿಯ ಜೊತೆಗಿನ ಸಂಬಂಧಕ್ಕೂ ತಾಳೆ ಹಾಕಿ ಹೇಳಿಕೆ ನೀಡುವಂಥ ಚಾಳಿ ನಿಮಗೆ ಯಾಕೆ ಬಂತು ಎಂಬುದು ಅರ್ಥವಾಗುತ್ತಿಲ್ಲ. ಇಷ್ಟು ವರ್ಷ ಕ್ರಿಕೆಟಿಗರ ಖಾಸಗೀ ಜೀವನದ ಬಗ್ಗೆ ನೀವು ಇಷ್ಟೇನಾ ಗೌರವ ಹೊಂದಿರುವುದು?” ಎಂದು ಬರೆದುಕೊಂಡಿದ್ದರು.

ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಸುನಿಲ್ ಗವಾಸ್ಕರ್, “ಲಾಕ್‌ಡೌನ್ ಸಮಯದಲ್ಲಿ, ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮನೆಯ ಆವರಣದಲ್ಲಿ ಕ್ರಿಕೆಟ್ ಆಡುತ್ತಿರುವ ವೀಡಿಯೋವೊಂದನ್ನು ನೋಡಿದ್ದೆ. ಅದರಲ್ಲಿ ಅನುಷ್ಕಾ ಬೌಲಿಂಗ್ ಮಾಡುತ್ತಿದ್ದರು. ನಾನು ಅದನ್ನಷ್ಟೇ ಪ್ರಸ್ತಾಪಿಸಿದ್ದೆ. ಸಾಕಷ್ಟು ಅಭ್ಯಾಸ ಮಾಡಲು ಅವಕಾಶ ಸಿಗಲಿಲ್ಲ ಎಂಬುದನ್ನು ಹೇಳಲು ಈ ಮಾತನ್ನು ಬಳಸಿದ್ದೆ” ಹೇಳಿದರು.
ಇದನ್ನೂ ಓದಿ: ಕೊರೊನಾ ವಾರಿಯರ್ಸ್‌ಗೆ ವಿಭಿನ್ನವಾಗಿ ಗೌರವ ಸಲ್ಲಿಸಿದ ಆರ್‌ಸಿಬಿ ತಂಡ!


