ವಿಶ್ವಕಪ್ ಬೇಡ, ಐಪಿಎಲ್ ಬೇಕು.. ಬದಲಾಗ್ತಿದೆ ಕ್ರಿಕೆಟಿಗರ ಮೈಂಡ್‍ಸೆಟ್!

ಬಿಸಿಸಿಐ ಅನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಹಣಬಲದ ಜೊತೆಗೆ ತೋಳ್ಬಲ ಬೇಕು ಅಂತಾರಲ್ಲ, ಹಾಗೆಯೇ ಬಿಸಿಸಿಐ ಬೆಳೆದುಬಿಟ್ಟಿದೆ.

0
19

ಐಪಿಎಲ್ ಬೇಕಾ? ವರ್ಲ್ಡ್‌ಕಪ್ ಬೇಕಾ? ಆರೋಗ್ಯ ಮುಖ್ಯನಾ? ಆಟ ಮುಖ್ಯನಾ? ಇಂತಹದ್ದೊಂದು ಚರ್ಚೆ ಜೋರಾಗಿ ನಡೆಯುತ್ತಿದೆ. ಇತ್ತ ಬಿಸಿಸಿಐ ಐಪಿಎಲ್‍ ಅನ್ನು ಶತಾಯಗತಾಯವಾಗಿ ನಡೆಸಲೇಬೇಕೆಂದು ಪಣತೊಟ್ಟಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗರು ಕೂಡ ಐಪಿಎಲ್ ಬೆನ್ನಿಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ ಅನ್ನು ಕಂಟ್ರೋಲ್ ಮಾಡುತ್ತಿರುವ ಐಸಿಸಿ, ಬಿಸಿಸಿಐ ಅನ್ನೇ ಏನೂ ಮಾಡಲು ಆಗದ ಸ್ಥಿತಿ ತಲುಪಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ತನ್ನ ಮಾತ ಮೇಲೆ ತಾನು ನಿಲ್ಲುತ್ತಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಕ್ರಿಕೆಟ್ ಸೌತ್ ಆಫ್ರಿಕಾಕ್ಕೆ ಬಿಸಿಸಿಐ ಹೇಳಿದ್ದೇ ವೇದವಾಕ್ಯ. ಹೀಗಾಗಿ ಬಿಸಿಸಿಐ ಕೊರೊನಾ ಮಧ್ಯದಲ್ಲೂ ಐಪಿಎಲ್‍ ನಡೆಸೇ ನಡೆಸ್ತೀವಿ ಅಂತ ಜಂಭದಿಂದ ಹೇಳುತ್ತಿದೆ. ಆಟಗಾರರು ಕೂಡ ಅಷ್ಟೇ, ಐಪಿಎಲ್ ಇದ್ರೆ ಸಾಕಪ್ಪ ಅನ್ನುವ ಮನಸ್ಥಿತಿಗೆ ಬಂದುಬಿಟ್ಟಿದ್ದಾರೆ.

ಟಿ20 ವಿಶ್ವಕಪ್ ಕ್ಯಾನ್ಸಲ್, ಐಪಿಎಲ್ ಆನ್!

ವಿಶ್ವಕಪ್ ಆಡುವುದು ಪ್ರತಿಯೊಬ್ಬ ಆಟಗಾರನ ಕನಸು. ಆದರೆ ಈಗ ಕ್ರಿಕೆಟ್ ಲೋಕದಲ್ಲಿ ಈ ಪ್ರತೀತಿ ಬದಲಾಗಿದೆ. ಪ್ರತಿಯೊಬ್ಬನೂ ಕೂಡ ಐಪಿಎಲ್ ಆಡಿದ್ರೆ ಸಾಕಪ್ಪ ಅನ್ನುವ ಕನಸು ಕಾಣಲು ಶುರು ಮಾಡಿದ್ದಾನೆ. ಹೀಗಾಗಿ ಕೊರೊನಾ ಕಾರಣ ಮುಂದಿಟ್ಟುಕೊಂಡು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕ್ಯಾನ್ಸಲ್ ಆಗಿದೆ. ಆದರೆ ಕೊರೊನಾ ಮಧ್ಯೆಯೇ ಐಪಿಎಲ್ ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ.

ಟಿ20 ವಿಶ್ವಕಪ್ ನಡೆಯಬೇಕಿದ್ದ ಆಸ್ಟ್ರೇಲಿಯಾದ ವಿವಿಧೆಡೆ ತಂಡಗಳು ಪ್ರಯಾಣ ನಡೆಸಬೇಕಿತ್ತು. ಖರ್ಚು ಕೂಡ ಹೆಚ್ಚಾಗುತ್ತಿತ್ತು. ಪ್ರತಿ ತಂಡದ ಆಟಗಾರರು ಕೊರೊನಾ ಸಂಬಂಧಿ ಜೈವಿಕ ಐಸೋಲೇಷನ್ ನಿಯಮಗಳನ್ನು ಪಾಲಿಸಬೇಕಿತ್ತು. ಇದೆಲ್ಲವೂ ಐಸಿಸಿಗೆ ತಲೆನೋವು ತಂದಿತ್ತು. ಖರ್ಚು ಹೆಚ್ಚಾಗುತ್ತಿತ್ತು. ಆಟಗಾರರ ಜೇಬು ಕೂಡ ತುಂಬುತ್ತಿರಲಿಲ್ಲ. ಮೀಟಿಂಗ್ ಮೇಲೆ ಮೀಟಿಂಗ್ ನಡೆಸಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಸದ್ಯಕ್ಕೆ ಕ್ಯಾನ್ಸಲ್ ಮಾಡಿದೆ. ಕೊರೊನಾ ಮುಗಿದ ಮೇಲೆ ಆಟ ಆಡಿಸೋಣ ಅನ್ನುವ ನಿರ್ಧಾರಕ್ಕೆ ಬಂದಿದೆ.

ಇತ್ತ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾದಿಂದಾಗಿ ರದ್ದಾಗಿತ್ತು. ಬಿಸಿಸಿಐ ಸಣ್ಣ ಅವಧಿಯ ಸಮಯ ಸಿಕ್ಕರೆ ಸಾಕು ಆಟ ಆಡಿಸೋದೆ ಅನ್ನುವ ತೀರ್ಮಾನಕ್ಕೆ ಬಂದಿತ್ತು. ಐಸಿಸಿ ಟಿ20 ಶೆಡ್ಯೂಲ್ ಕ್ಯಾನ್ಸಲ್ ಆಗಿದ್ದೇ ಆಗಿದ್ದು, ಬಿಸಿಸಿಐ ಉಸಿರು ಜೋರಾಯಿತು. ಭಾರತದಲ್ಲಿ ಐಪಿಎಲ್ ಆಟ ಆಗದೇ ಇದ್ರೆ ಏನಂತೆ..? ಬೇರೆ ದೇಶ ಇದೆಯಲ್ಲಾ ಅನ್ನೋ ವಿಶ್ವಾಸವಿತ್ತು. ಕೊನೆಗೆ ಯುಎಇನಲ್ಲಿ ಐಪಿಎಲ್ ಆಟ ಆಡಿಸಲು ನಿರ್ಧಾರ ಮಾಡಿದೆ. ಆಟಗಾರರಿಗೂ ಇದೇ ಬೇಕಿತ್ತು. ಜೇಬು ತುಂಬಿಸಿಕೊಂಡ್ರೆ ಸಾಕು ಅನ್ನುವವರಿಗೆ ಟಿ20 ವಿಶ್ವಕಪ್‍ಗಿಂತ ಐಪಿಎಲ್ ಮುಖ್ಯವಾಗಿ ಕಂಡಿತ್ತು..!

ತಂಡ ಮುಖ್ಯವಲ್ಲ, ಅಕೌಂಟ್ ಬ್ಯಾಲೆನ್ಸ್ ಮುಖ್ಯ!

ಐಸಿಸಿ ಟೂರ್ನಿಗಳನ್ನು ಆಡಿದ್ರೆ ಎಲ್ಲಾ ಆಟಗಾರರಿಗೂ ಸಂಭಾವನೆ ಸಿಕ್ಕೇ ಸಿಗುತ್ತದೆ. ಆದರೆ ತಂಡಕ್ಕೆ ಬರುವ ಮೊತ್ತದಲ್ಲಿ ಎಲ್ಲವೂ ವಿಂಗಡನೆ ಆಗುತ್ತದೆ. ಆಯಾ ಬೋರ್ಡ್ ತಮ್ಮ ತಮ್ಮ ಲೆಕ್ಕಾಚಾರಕ್ಕೆ ಅನುಗುಣವಾಗಿ ಆಟಗಾರರ ಜೇಬು ತುಂಬಿಸುತ್ತವೆ. ಆದರೆ ಐಪಿಎಲ್‍ನಲ್ಲಿ ಹಾಗಲ್ಲ. ಹರಾಜಿನಲ್ಲಿ ಸಿಕ್ಕ ದುಡ್ಡು ಆಟಗಾರರಿಗೆ ಮಾತ್ರ ಮೀಸಲು. ಅದರ ಜೊತೆಗೆ ಪ್ರತಿ ಆಟಗಾರನಿಗೂ ಪಂದ್ಯ ಸಂಭಾವನೆ ಜೊತೆಗೆ ಅದೂ ಇದು ಎಂಬ ಹಲವು ಭತ್ಯೆಗಳೆಲ್ಲವೂ ಸಿಗುತ್ತದೆ.

ಐಸಿಸಿ ದುಡ್ಡು ತಂಡದ ಜೊತೆಗೆ ಗುಂಪಿನಲ್ಲಿ ಗೋವಿಂದ ಆಗಿ ಬಿಡುತ್ತದೆ. ಆದ್ರೆ ಐಪಿಎಲ್ ದುಡ್ಡು ನೇರವಾಗಿ ಆಟಗಾರರ ಅಕೌಂಟ್ ಸೇರಿಬಿಡುತ್ತದೆ. ಹೀಗಾಗಿ ಪ್ರತಿಯೊಬ್ಬ ಆಟಗಾರ ಕೂಡ ಐಪಿಎಲ್ ನಡೆದ್ರೆ ಸಾಕಪ್ಪಾ ಅಂತ ಗಟ್ಟಿಯಾಗಿ ಹೇಳುತ್ತಿದ್ದಾರೆ. ಇನ್ನು ಕೆಲವರು ವರ್ಷವಿಡೀ ಕ್ರಿಕೆಟ್ ನಡೆಯದೇ ಇದ್ದರೂ ಪರವಾಗಿಲ್ಲ ಐಪಿಎಲ್‍ಗೆ ಮಾತ್ರ ಯಾವುದೇ ವಿಘ್ನ ಬರದಿರಲಪ್ಪ ಅಂತ ಬೇಡಿಕೊಳ್ತಿದ್ದಾರೆ.

ಟಿವಿ ರೈಟ್ಸ್, ಮಾರ್ಕೆಟಿಂಗ್ ಟ್ರಿಕ್ಸ್! ಬಿಸಿಸಿಐ ಖಜಾನೆಗೂ ನೋಟು ಫಿಕ್ಸ್!

ಬಿಸಿಸಿಐ ಕೂಡ ಒಂದು ಐಪಿಎಲ್ ನಡೆದ್ರೆ ಸಾಕು ಅನ್ನುವ ಲೆಕ್ಕಾಚಾರದಲ್ಲಿದೆ. ವರ್ಷವಿಡೀ ಟೀಮ್ ಇಂಡಿಯಾ ಕ್ರಿಕೆಟ್ ಆಡಿದರೂ ಐಪಿಎಲ್‍ನಲ್ಲಿ ಬರುವಷ್ಟು ಇನ್‍ಕಂ ಬರೋದಿಲ್ಲ. ಕೇವಲ 60 ದಿನದ ಆಟದಲ್ಲಿ ಬಿಸಿಸಿಐ ಖಜಾನೆಗೆ ನೋಟಿನ ಕಂತೆಗಳೇ ಬಂದುಬೀಳುತ್ತವೆ. ಟಿವಿ ರೈಟ್ಸ್ ಮತ್ತು ಮಾರ್ಕೆಟಿಂಗ್ ಟ್ರಿಕ್ಸ್ ಬಿಸಿಸಿಐ ಅಕೌಂಟ್‍ಅನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಐಪಿಎಲ್ ಅನ್ನುವ ಒಂದೇ ಒಂದು ಬ್ರಾಂಡ್ ಐಸಿಸಿಯ ಲೆಕ್ಕಾಚಾರವನ್ನೂ ಬುಡಮೇಲು ಮಾಡುತ್ತದೆ.

ಐಪಿಎಲ್‍ಗಾಗಿ ಜನರ ಕಾತರ!

ಆರ್‌ಸಿಬಿ ವಿಶ್ವದಲ್ಲೇ ಅತೀಹೆಚ್ಚು ಫ್ಯಾನ್‍ಫಾಲೋವರ್ಸ್ ಹೊಂದಿರುವ ಕ್ರಿಕೆಟ್ ಟೀಮ್. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಕ್ರಿಕೆಟ್‍ನ ಶ್ರೇಷ್ಠ ತಂಡ. ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್, ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ಹೀಗೆ ಎಲ್ಲಿ ನೋಡಿದ್ರೂ ಫ್ರಾಂಚೈಸಿ ಆಧರಿತ ತಂಡಗಳಿಗೆ ಅಭಿಮಾನಿಗಳ ದಂಡೇ ಇದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಈಗ ಇಂಟನ್ರ್ಯಾಷನಲ್ ಪ್ರೀಮಿಯರ್ ಲೀಗ್ ಎಂದು ಹೇಳುವ ಮಟ್ಟಕ್ಕೆ ಬೆಳೆದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ದೂರವಾದ ಕ್ರಿಕೆಟಿಗರು ಕೂಡ ವರ್ಷಂಪ್ರತಿ ಐಪಿಎಲ್‍ನಲ್ಲಿ ಬಂದು ಆಡುತ್ತಾರೆ. ಆಡುವ ಸಾಮಥ್ರ್ಯ ಕಳೆದುಕೊಂಡಿದ್ದರೆ ಕೋಚ್ ಆಗಿಯೋ ಅಥವಾ ಮೆಂಟರ್ ಆಗಿಯೋ 60 ದಿನ ಕಾಲ ಕಳೆಯುತ್ತಾರೆ. ದುಡ್ಡಿನ ಮುಂದೆ ಸಾಂಪ್ರದಾಯಿಕ ಕ್ರಿಕೆಟ್ ಲೆಕ್ಕಕ್ಕೇ ಇಲ್ಲ. ಈ ಹೊಡಿಬಡಿ ಆಟ ಕೇವಲ ಬೌಲರ್‍ಗಳಿಗೆ ಮಾತ್ರ ಮಾರಕವಲ್ಲ, ಇಡೀ ಅಂತಾರಾಷ್ಟ್ರೀಯ ಕ್ರಿಕೆಟ್ ಸಮುದಾಯಕ್ಕೂ ಮಾರಕವೇ ಎಂದು ನಿಧಾನವಾಗಿ ಅರ್ಥವಾಗುತ್ತಿದೆ.

ತಲೆ ಮೇಲೆ ಕೈಯಿಟ್ಟುಕೊಂಡ ಐಸಿಸಿ, ಬಿಸಿಸಿ ಮುಂದೆ ಎಲ್ಲರೂ ಕೈಗೊಂಬೆ

ಬಿಸಿಸಿಐ ಆಟಕ್ಕೆ ಯಾರೂ ಏನೂ ಮಾಡಲು ಸಾಧ್ಯ ಇಲ್ಲವೇ? ಇಂತಹ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಸದ್ಯ ಮಟ್ಟಿಗೆ ಬಿಸಿಸಿಐ ಅನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಹಣಬಲದ ಜೊತೆಗೆ ತೋಳ್ಬಲ ಬೇಕು ಅಂತಾರಲ್ಲ, ಹಾಗೆಯೇ ಬಿಸಿಸಿಐ ಬೆಳೆದುಬಿಟ್ಟಿದೆ.

ಬಿಸಿಸಿಐ ಜೊತೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಕೈಜೋಡಿಸಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಕೂಡ ಬಿಸಿಸಿಐ ಮಾತಿಗೆ ತಲೆ ಅಲ್ಲಾಡಿಸುತ್ತಿದೆ. ಕ್ರಿಕೆಟ್ ಸೌತ್‍ಆಫ್ರಿಕಾದ ಪಾಲಿಗೆ ಬಿಸಿಸಿಐ ಮಾತೇ ವೇದವಾಕ್ಯ. ಈ ನಾಲ್ಕು ರಾಷ್ಟ್ರಗಳ ಕ್ರಿಕೆಟ್ ಬೋರ್ಡ್‍ಗಳು ನಕರ ಮಾಡಿದರೆ ಮಾತ್ರ ಬಿಸಿಸಿಐಗೆ ಹಿನ್ನಡೆ ಆಗುತ್ತದೆ. ಆದರೆ ಬಿಸಿಸಿಐ ಬಲಿಷ್ಠ ಬೋರ್ಡ್‍ಗಳನ್ನೇ ಆಪರೇಷನ್ ಮಾಡಿಬಿಟ್ಟಿದೆ. ಕಾಮೆಂಟೇಟರ್‍ಗಳಿಂದ ಹಿಡಿದು ಮಾಧ್ಯಮಗಳತನಕ ಯಾರೂ ಟಿ20 ವಿಶ್ವಕಪ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ ಐಪಿಎಲ್ ಹುಚ್ಚು ಹಿಡಿಸಿಕೊಂಡಿರುವುದು ವಿಪರ್ಯಾಸವಲ್ಲದೆ ಮತ್ತಿನ್ನೇನು?

  • ಸುನಿಲ್ ಮತ್ತು ಜೀವನ್ 

ಇದನ್ನು ಓದಿ: ಬಾಲಿವುಡ್ ಗ್ಯಾಂಗ್! ಸ್ವಜನಪಕ್ಷಪಾತದ ಸುಳಿಯಲ್ಲಿ ಹಿಂದಿ ಚಿತ್ರರಂಗ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here