ಇದೀಗ ಪರಿಶಿಷ್ಠ ಜಾತಿಯ ಮೀಸಲಾತಿಯಲ್ಲಿ ಒಳ ಮೀಸಲಾತಿಯ ಚರ್ಚೆಗಳು ಮುನ್ನಲೆಗೆ ಬಂದಿವೆ. ಈ ಮೀಸಲಾತಿಗೆ ಒಳಗಾಗುವ ಸಮುದಾಯಗಳು ಒಂದು ರಾಜಕೀಯ ಪಕ್ಷದ `ಒಳ’ ಮೀಸಲಾತಿಯಲ್ಲಿ ಯಾವ ಸ್ಥಾನ ಪಡೆದಿವೆ ಎನ್ನುವುದು ಕುತೂಹಲದ ವಿಷಯ. 2018ರ ಆಗಸ್ಟ್ 1 ರಂದು `ದಿ ಪ್ರಿಂಟ್’ ರುಹಿ ತಿವಾರಿ ಮತ್ತು ಪ್ರ್ರಾಗ್ಯ ಕೌಶಿಕ್ ಅವರುಗಳು ಬರೆದ ಸಂಶೋಧನ ವರದಿಯೊಂದನ್ನು ಪ್ರಕಟಿಸಿತ್ತು. ಇದು ಒಂದು ಸಾವಿರ ಬಿಜೆಪಿ ನಾಯಕರುಗಳನ್ನು ಸಮೀಕ್ಷೆಗೆ ಒಳಪಡಿಸಿ ಬಿಜೆಪಿಯು `ಬ್ರಾಹ್ಮಣ-ಬನಿಯಾ ಕ್ಲಬ್’ ಎಂದು ವಿಶ್ಲೇಷಿಸಿತು. ಈ ಎರಡು ವರ್ಷದ ಅವಧಿಯಲ್ಲಿ ಅಂಕೆಸಂಖ್ಯೆಗಳು ಚೂರು ಬದಲಾಗಿದ್ದರೂ ಈ ಬ್ರಾಹ್ಮಣ-ಬನಿಯಾ ಕ್ಲಬ್ ಮಾದರಿ ಹಿಡಿತ ಸಡಿಲವಾಗಿಲ್ಲ. ಈ ವರದಿಯ ಕೆಲವು ಮುಖ್ಯಾಂಶಗಳು ಈ ಕೆಳಗಿನಂತಿವೆ.
2011ರ ಜನಗಣತಿಯ ಪ್ರಕಾರ ದಲಿತರು ದೇಶದ ಜನಸಂಖ್ಯೆಯ ಶೇಕಡಾ 16.6ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಶೇಕಡಾ 8.6 ರಷ್ಟಿದೆ. ಮುಸ್ಲಿಮರು ಶೇಕಡಾ 14ರಷ್ಟಿದ್ದರೆ, 2007ರಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‍ಎಸ್‍ಎಸ್‍ಒ) ನಡೆಸಿದ ಸಮೀಕ್ಷೆಯ ಪ್ರಕಾರ ಒಬಿಸಿ ಜನಸಂಖ್ಯೆ ಶೇಕಡಾ 41ರಷ್ಟಿದೆ. ಈ ಪ್ರಾತಿನಿಧ್ಯಕ್ಕೆ ತಕ್ಕ ಹಾಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜಕೀಯ ಪಕ್ಷವೊಂದು ಪ್ರಾತಿನಿಧ್ಯ ನೀಡಿದೆಯೇ?
36 ರಾಜ್ಯ ಘಟಕಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಜೆಪಿ ಅಧ್ಯಕ್ಷರಲ್ಲಿ ಯಾರೂ ದಲಿತರಿಲ್ಲ. ಏಳು ಮಂದಿ ಬ್ರಾಹ್ಮಣರು, 17 ಮಂದಿ ಇತರ ಜಾತಿಗಳಿಗೆ ಸೇರಿದವರು, ಆರು ಮಂದಿ ಎಸ್‍ಟಿಗಳು, ಐದು ಮಂದಿ ಒಬಿಸಿಗಳು ಮತ್ತು ಒಬ್ಬರು ಮುಸ್ಲಿಂ. ಇದರಲ್ಲಿ ಶೇಕಡಾ 66 ಕ್ಕಿಂತ ಹೆಚ್ಚು ಜನರು ಮೇಲ್ಜಾತಿಯವರು. ಜಿಲ್ಲಾ ಮಟ್ಟದಲ್ಲಿಯೂ ಸಹ, ಪಕ್ಷದ ಅಧ್ಯಕ್ಷರಲ್ಲಿ 65 ಪ್ರತಿಶತ ಜನರು ಮೇಲ್ಜಾತಿಯವರಾಗಿದ್ದು, ಅವರಲ್ಲಿ ನಾಲ್ಕನೇ ಒಂದು ಭಾಗದಷ್ಟು ಬ್ರಾಹ್ಮಣರಾಗಿದ್ದಾರೆ. ಬಿಜೆಪಿಯಲ್ಲಿ 752 ಜಿಲ್ಲಾಧ್ಯಕ್ಷರು ಇರಬೇಕಿದ್ದರೆ, ಮೂರು ಹುದ್ದೆಗಳು ಖಾಲಿ ಇರುವುದರಿಂದ 746 ಕ್ಕೆ ದತ್ತಾಂಶಗಳು ಲಭ್ಯವಿದ್ದು, ಮೂವರು ಜಿಲ್ಲಾಧ್ಯಕ್ಷರ ಜಾತಿಗಳು ಸ್ಪಷ್ಟವಾಗಿಲ್ಲ. ಈ ಪೈಕಿ 487 ಮೇಲ್ಜಾತಿಯವರಾಗಿದ್ದರೆ, ಶೇಕಡಾ 25 ರಷ್ಟು ಒಬಿಸಿ, ಬಿ.ಸಿ, ಎಂಬಿಸಿ ವರ್ಗಗಳಿಗೆ ಸೇರಿದವರಾಗಿದ್ದಾರೆ. ಶೇಕಡಾ 4 ಕ್ಕಿಂತ ಕಡಿಮೆ ಎಸ್‍ಸಿಗಳು. ಶೇಕಡಾ 2 ರಷ್ಟು ಸಹ ಅಲ್ಪಸಂಖ್ಯಾತ ಸಮುದಾಯಗಳಿಂದ ಬಂದವರಿಲ್ಲ. ಇವುಗಳಲ್ಲಿ ಯಾವುದೂ ಜನಸಂಖ್ಯೆಯನ್ನಾಧರಿಸಿದ ಪಾಲುದಾರಿಕೆಯಿಲ್ಲ.

ಬಿಜೆಪಿಯ 50 ರಾಷ್ಟ್ರೀಯ ಪದಾಧಿಕಾರಿಗಳಲ್ಲಿ 17 ಮಂದಿ ಬ್ರಾಹ್ಮಣರು, 21 ಮಂದಿ ಇತರ ಮುಂದುವರಿದ ಬಲಾಢ್ಯ ಜಾತಿ, ನಾಲ್ಕು ಒಬಿಸಿಗಳು, ಮೂವರು ಪರಿಶಿಷ್ಟ ಜಾತಿ, ಇಬ್ಬರು ಪರಿಶಿಷ್ಟ ಪಂಗಡ, ಇಬ್ಬರು ಮುಸ್ಲಿಂ ಸಮುದಾಯದವರು, ಮತ್ತು ಒಬ್ಬರು ಸಿಖ್. ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಅಲ್ಪಸಂಖ್ಯಾತರ ಕನಿಷ್ಠ ಪ್ರಾತಿನಿಧ್ಯ ಇದೆ: ಮೂವರು ದಲಿತರಲ್ಲಿ ಒಬ್ಬರು ಪಕ್ಷದ ಎಸ್‍ಸಿ ಮೋರ್ಚಾದ ಮುಖ್ಯಸ್ಥರಾಗಿದ್ದರೆ, ಇಬ್ಬರು ಮುಸ್ಲಿಮರಲ್ಲಿ ಒಬ್ಬರು ಅಲ್ಪಸಂಖ್ಯಾತ ಮೋರ್ಚಾದ ಮುಖ್ಯಸ್ಥರಾಗಿದ್ದಾರೆ. ಬುಡಕಟ್ಟು ಪ್ರತಿನಿಧಿಗಳ ವಿಷಯದಲ್ಲಿ ಇದು ಇನ್ನೂ ಕೆಟ್ಟದಾಗಿದೆ, ಏಕೆಂದರೆ ಒಬ್ಬರು ಪಕ್ಷದ ಎಸ್‍ಟಿ ಮೋರ್ಚಾದ ಮುಖ್ಯಸ್ಥರಾಗಿದ್ದರೆ, ಇನ್ನೊಬ್ಬರು ಮಧ್ಯಪ್ರದೇಶದ ಜ್ಯೋತಿ ಧ್ರುವೆ. ರಾಜ್ಯ ಸರ್ಕಾರ ಆಕೆಯ ಎಸ್‍ಟಿ ಪ್ರಮಾಣಪತ್ರವನ್ನು ರದ್ದುಪಡಿಸಿದೆ. ಈ ವಿಷಯ ಇನ್ನೂ ನ್ಯಾಯಾಲಯದಲ್ಲಿದೆ. ಪರಿಣಾಮ, ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳಲ್ಲಿ ಶೇಕಡಾ 76 ರಷ್ಟು ಮೇಲ್ಜಾತಿಯವರಾಗಿದ್ದರೆ, ಕೇವಲ ಶೇ.8ರಷ್ಟು ಮಾತ್ರ ಒಬಿಸಿ ಮತ್ತು ಶೇ.6ರಷ್ಟು ಎಸ್‍ಸಿ. ಇನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿರುವ 97 ಸದಸ್ಯರಲ್ಲಿ 29 ಮಂದಿ ಬ್ರಾಹ್ಮಣರು, 37 ಮಂದಿ ಇತರ ಮೇಲ್ಜಾತಿಯವರು, 18 ಮಂದಿ ಒಬಿಸಿಗಳು ಅಥವಾ ಬಿ.ಸಿ.ಗಳು, ಏಳು ಮಂದಿ ಪರಿಶಿಷ್ಟ ಜಾತಿ, ಮೂವರು ಅಲ್ಪಸಂಖ್ಯಾತ ಸಮುದಾಯಗಳು, ಒಬ್ಬರು ಸಿಖ್ ಮತ್ತು ಒಬ್ಬರು ಎಸ್.ಟಿ. ಪರಿಣಾಮವಾಗಿ, ಶೇಕಡಾ 69 ರಷ್ಟು ಜನರು ಮುಂದುವರಿದ ಜಾತಿಗಳಿಂದ ಬಂದವರು ಮತ್ತು ಕೇವಲ 27 ಪ್ರತಿಶತದಷ್ಟು ಜನರು ಇತರ ಸಮುದಾಯಗಳಿಂದ ಬಂದವರು.
2018 ರಲ್ಲಿ `ದಿ ಪ್ರಿಂಟ್’ ಪತ್ರಿಕೆ ಮಾಡಿರುವ ಈ ಸರ್ವೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ದೇಶದ ದಲಿತರು, ದಮನಿತರು, ಬುಡಕಟ್ಟು ಅಲೆಮಾರಿಗಳು, ಅಲ್ಪಸಂಖ್ಯಾತರನ್ನು ಬಹಳ ಪೂರ್ವಯೋಜಿತವಾಗಿ ಒಂದು ಪ್ರಭಾವಿ ರಾಜಕೀಯ ಪಕ್ಷ ದೂರ ಇಡಲಾಗಿರುವುದು ಕಣ್ಣಿಗೆ ರಾಚುವಂತೆ ಕಾಣುತ್ತದೆ. ದೇಶವನ್ನು ಆಳುವ ರಾಜಕೀಯ ಪಕ್ಷವೊಂದು ತನ್ನ ಆಂತರಿಕ ಆಡಳಿತದಲ್ಲಿ ಹೀಗೆ ಎಸ್‍ಸಿ/ಎಸ್‍ಟಿ/ಒಬಿಸಿ/ಅಲ್ಪಸಂಖ್ಯಾತ/ಮಹಿಳಾ ಪ್ರಾತಿನಿಧ್ಯವನ್ನು ಕಡಿತಗೊಳಿಸಿದರೆ, ಈ ಪಕ್ಷದ ಆಡಳಿತವಿರುವ ಸರಕಾರದ ಆದ್ಯತೆಯೇನು ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ನಮ್ಮ ಸಂವಿಧಾನಬದ್ಧ ಪಾಲನ್ನೆ ಇಲ್ಲವಾಗಿಸುತ್ತಿರುವ ಈ ಬಿಜೆಪಿಗರು ಮೀಸಲಾತಿ, ಒಳ ಮೀಸಲಾತಿ ನೀಡುವರೆ ಎಂಬುದು ಪ್ರಶ್ನೆಯಾಗಿದೆ.


