ಶಿರಾ ಉಪಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಕಾಡು ಗೊಲ್ಲ ಅಬಿವೃದ್ಧಿ ನಿಗಮವನ್ನು ಸೆಪ್ಟೆಂಬರ್ 28 ರಂದು ಬೆಳಗ್ಗೆ ಘೋಷಣೆ ಮಾಡಿದರು. ಸಂಜೆ ವೇಳೆಗೆ ಅದು ಗೊಲ್ಲ ಅಭಿವೃದ್ಧಿ ನಿಗಮವಾಗಿ ದಿಢೀರ್ ಬದಲಾವಣೆ ಮಾಡಿದ್ದೂ ಆಯಿತು. ಊರುಗೊಲ್ಲ ಸಮುದಾಯಕ್ಕೆ ಸೇರಿದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಕಾಡುಗೊಲ್ಲ ಎಂಬುದನ್ನು ಸಂಜೆ ವೇಳೆಗೆ ಬದಲಾಗುವಂತೆ ಮಾಡಿದರು ಎನ್ನಲಾಗಿದೆ. ಇದಕ್ಕೆ ಕಾಡುಗೊಲ್ಲ ಸಮುದಾಯ ಸಿಡಿದೆದ್ದು ನಿಂತಿದೆ.
ಮೊದಲಿನಂತೆ ಮುಖ್ಯಮಂತ್ರಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಬದಲಾವಣೆ ಮಾಡದಿದ್ದರೆ ಸರ್ಕಾರದ ವಿರುದ್ಧ ಸಮುದಾಯ ಬೀದಿಗೆ ಇಳಿಯಲಿದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ. ರಾಜ್ಯದ ಚಿತ್ರದುರ್ಗ, ತುಮಕೂರು, ಹಾಸನ, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯ ಅಧಿಕ ಸಂಖ್ಯೆಯಲ್ಲಿದೆ. ಅಲೆಮಾರಿಗಳಂತೆ ಜೀವನ ನಡೆಸುತ್ತಿದ್ದಾರೆ. ಕುರಿ, ಮೇಕೆ ಸಾಕಾಣಿಕೆ, ಪಶುಪಾಲನೆ ಕಾಡುಗೊಲ್ಲರ ಮುಖ್ಯ ಕಸುಬು. ಇದೇ ಜೀವನ ಎನ್ನುತ್ತಾರೆ ಸಮುದಾಯದ ಮುಖಂಡರು.
ಇದನ್ನೂ ಓದಿ: ತುಮಕೂರು ಜಿ.ಪಂ ಅಧ್ಯಕ್ಷ ಸ್ಥಾನ: ಇದ್ದಕ್ಕಿದ್ದಂತೆ ಗೊಲ್ಲರ ಮೇಲೆ ಪ್ರೀತಿ ಉಕ್ಕಿದ್ದೇಕೆ?
ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಇದುವರೆಗೂ ರಾಜಕೀಯದಲ್ಲಿ ಸಮರ್ಥ ನಾಯಕರೇ ಬಂದಿಲ್ಲ. ಇಂದಿಗೂ ಕಾಡುಗೊಲ್ಲ ಸಮುದಾಯ ಮುಖ್ಯವಾಹಿನಿಗೆ ಬಂದಿಲ್ಲ. ಮುಟ್ಟುಚಟ್ಟು, ಋತುಸ್ರಾವ ಕಾಲದಲ್ಲಿ, ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ವಾರೊಂಭತ್ತು ದಿನಗಳು ಊರ ಹೊರಗೇ ಕಾಲ ಕಳೆಯುವಂತಹ ಮೂಢನಂಬಿಕೆಯುಳ್ಳ ಜನಾಂಗವಾಗಿದೆ. ಹಟ್ಟಿಗಳು ಕಂದಾಯ ಗ್ರಾಮಗಳಾಗಿಲ್ಲ. ಊರುಗೊಲ್ಲರು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲರಾಗಿದ್ದು ಬುಡಕಟ್ಟು ಅಲೆಮಾರಿ ಸಮುದಾಯವಾಗಿರುವ ಕಾಡುಗೊಲ್ಲರ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಾರೆ ಮುಖಂಡರು.
ಮುಖ್ಯಮಂತ್ರಿಗಳು ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುತ್ತಿದ್ದಂತೆಯೇ ಶಾಸಕಿ ಪೂರ್ಣಿಮ ಶ್ರೀನಿವಾಸ್ ರಾಜಿನಾಮೆ ನೀಡುವ ಬೆದರಿಕೆ ಹಾಕಿದ್ದಾರೆಂದು ಹೇಳಲಾಗುತ್ತಿದೆ. ಪೂರ್ಣಿಮಾ ಶಾಸಕಿಯಾಗಿದ್ದರೂ ಕಾಡುಗೊಲ್ಲರಿಗೆ ಅವರಿಂದೇನೂ ಪ್ರಯೋಜನವಾಗಿಲ್ಲ. ಅಕ್ಷರ ಜ್ಞಾನ ಇಲ್ಲದ ಸಮುದಾಯವನ್ನು ತುಳಿಯುವ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡಿದೆ. ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡುವಲ್ಲಿ ವಿಫಲರಾದ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ನಿಗಮ ತಡೆಗೆ ಕಾರಣರಾದವರ ವಿರುದ್ಧ ತುಮಕೂರಿನಲ್ಲಿ ಶೀಘ್ರವೇ ರಾಜ್ಯ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಯುವ ಸೇನೆಯ ಜಿಲ್ಲಾಧ್ಯಕ್ಷ ಜಯಕೃಷ್ಣ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದಲಿತನೆಂಬ ಕಾರಣಕ್ಕೆ ಸಂಸದರಿಗೇ ಗೊಲ್ಲರಹಟ್ಟಿ ಗ್ರಾಮ ಪ್ರವೇಶಕ್ಕೆ ನಿರಾಕರಣೆ: ಎಲ್ಲೆಡೆ ತೀವ್ರ ಆಕ್ರೋಶ
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಡುಗೊಲ್ಲರಿಗೆ ದ್ರೋಹ ಮಾಡುತ್ತಿದ್ದಾರೆ. ಹಿರಿಯೂರಿನಲ್ಲಿ ಅಧಿಕ ಸಂಖ್ಯೆಯಲ್ಲಿರುವ ಕಾಡುಗೊಲ್ಲರ ಓಟುಗಳನ್ನು ಪಡೆದು ಗೆದ್ದು ಬಂದಿರುವ ಪೂರ್ಣಿಮಾ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ಕಾಡುಗೊಲ್ಲರ ಮುಖಂಡರು ಮುಖ್ಯಮಂತ್ರಿಗಳ ಮೇಲೆ ಒತ್ಡ ಹೇರಿದ್ದು ಕಾಡುಗೊಲ್ಲ ಅಭಿವೃದ್ದಿ ನಿಗಮ ಎಂದೇ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇದು ಶಿರಾ ಚುನಾವಣೆಯಲ್ಲಿ ಕಾಡುಗೊಲ್ಲರ ಮತಗಳನ್ನು ಪಡೆಯಲು ಮಾಡಿರುವ ತಂತ್ರ. ನಿಗಮ ಘೋಷಿಸಿದ್ದರೂ ಹಣ ಘೋಷಿಸಿಲ್ಲ ಎಂಬ ಬಗ್ಗೆ ಚರ್ಚೆ ಸಾರ್ವಜನಿಕರೆಡೆಯಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: ಶಿರಾ ಉಪಚುನಾವಣೆ: ಜಯಚಂದ್ರ ಅವರಿಗೆ ‘ಒಳೇಟು’ ನೀಡುವರೇ ಕೆಎನ್ಆರ್?


