ಭಾರತೀಯ ಚಿತ್ರರಂಗದ ಅಪ್ರತಿಮ ನಟಿ, ನೃತ್ಯಸಂಯೋಜಕಿ, ರಂಗಕಲಾವಿದೆ ಜೊಹ್ರಾ ಮುಮ್ತಾಜ್ ಸೆಹಗಲ್‌ಗೆ ಗೂಗಲ್ ವಿಶೇಷ ಗೌರವ ಸಲ್ಲಿಸಿದೆ. ಹಿರಿಯ ನಟಿ ಜೊಹ್ರಾ ಸೆಗಲ್‌ರನ್ನು ಶಾಸ್ತ್ರೀಯ ನೃತ್ಯ ಭಂಗಿಯಲ್ಲಿ, ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ ಅನಿಮೇಟೆಡ್ ಚಿತ್ರವನ್ನು ಡೂಡಲ್ ತೋರಿಸಿದೆ. ಈ ಡೂಡಲ್ ಅನ್ನು ಕಲಾವಿದೆ ಪಾರ್ವತಿ ಪಿಳ್ಳೈ ವಿನ್ಯಾಸಗೊಳಿಸಿದ್ದಾರೆ.
ನಟಿ ಜೊಹ್ರಾ ಅವರ ಚಿತ್ರ ‘ನೀಚಾ ನಗರ’ 1946ರ ಇದೇ ದಿನ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಿಡುಗಡೆಯಾಗಿತ್ತು, ಮತ್ತು ಉತ್ಸವದ ಅತ್ಯುನ್ನತ ಗೌರವವಾದ ಪಾಮ್ ಡಿ ಓರ್ ಪ್ರಶಸ್ತಿಯನ್ನು ಪಡೆದಿತ್ತು. ಆ ನೆನಪಿಗಾಗಿ ಗೂಗಲ್ ಈ ವಿಶೇಷ ಗೌರವ ಸಲ್ಲಿಸಿದೆ. ಗೂಗಲ್ ತನ್ನ ಟಿಪ್ಪಣಿಯಲ್ಲಿ ನಟಿಯನ್ನು ‘ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಿಜವಾಗಿಯೂ ಮನ್ನಣೆಗಳಿಸಿದ ದೇಶದ ಮೊದಲ ಮಹಿಳಾ ನಟಿಯರಲ್ಲಿ ಒಬ್ಬರು’ ಎಂದು ಬಣ್ಣಿಸಿದೆ.

ಇದನ್ನೂ ಓದಿ: ಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ್ದು ಏನನ್ನು? : ಆಗಸ್ಟ್ ತಿಂಗಳ ಮಾಹಿತಿ
ಹಿರಿಯ ನಟಿ ಸೆಹಗಲ್ ಏಪ್ರಿಲ್ 27, 1912 ರಂದು ಉತ್ತರಪ್ರದೇಶದಲ್ಲಿ ಜನಿಸಿದರು. ತನ್ನ 20 ರ ದಶಕದ ಆರಂಭದಲ್ಲಿ ಬ್ಯಾಲೆ ನೃತ್ಯ ಕಲಿಯಲು ಜರ್ಮನಿಯ ಪ್ರತಿಷ್ಠಿತ ಶಾಲೆಗೆ ಸೇರಿಕೊಂಡಿದ್ದರು. ಭಾರತೀಯ ಪ್ರಸಿದ್ಧ ನೃತ್ಯಗಾರ ಉದಯ್ ಶಂಕರ್ ಅವರೊಂದಿಗೆ ಅಂತರರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದರು. ನಂತರ ಉದಯ್ ಶಂಕರ್ ಅವರ ತಂಡದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. 1942ರ ಆಗಸ್ಟ್‌ನಲ್ಲಿ ಕಾಮೇಶ್ವರ ಸೆಹಗಲ್‌ರನ್ನು ವಿವಾಹವಾದರು.

ಜೊಹ್ರಾ ಸೆಹಗಲ್ ಬಾಲಿವುಡ್‌ಗೆ ಭಾರಿ ಕೊಡುಗೆ ನೀಡಿದ್ದು, ಅವರು ಕೊನೆಯ ಬಾರಿಗೆ ಸಂಜಯ್ ಲೀಲಾ ಭನ್ಸಾಲಿಯವರ ‘ಸಾವರಿಯಾ’ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಸೋನಮ್ ಕಪೂರ್ ಜೊತೆ ಕಾಣಿಸಿಕೊಂಡಿದ್ದಾರೆ. ಅವರು ಯಶಸ್ವಿ ಚಿತ್ರಗಳಾದ ‘ಚೀನಿ ಕಮ್’, ‘ಹಮ್ ದಿಲ್ ದೇ ಚುಕೆ ಸನಮ್’, ‘ದಿಲ್ ಸೆ’, ‘ಕಭಿ ಖುಷಿ ಕಭಿ ಗಮ್’, ಮತ್ತು ‘ವೀರ್ ಜಾರಾ’ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ನಿ ಗುರ್ಷರಣ್ ಕೌರ್ ನವದೆಹಲಿಯಲ್ಲಿ ಜೊಹ್ರಾ ಸೆಹಗಲ್ ಅವರ 100ನೇ ಹುಟ್ಟುಹಬ್ಬದಂದು ‘ಜೊಹ್ರಾ ಸೆಗಲ್’ ಪುಸ್ತಕವನ್ನು ಬಿಡುಗಡೆ ಮಾಡಿದ್ದರು.
ಪದ್ಮಶ್ರೀ (1998), ಕಾಳಿದಾಸ್ ಸಮ್ಮನ್ (2001), ಮತ್ತು ಪದ್ಮವಿಭೂಷಣ್ (2010) ಸೇರಿ ಹಲವು ಗೌರವಗಳನ್ನು ಸೆಹಗಲ್ ಪಡೆದಿದ್ದಾರೆ. ತಮ್ಮ 102 ನೇ ವಯಸ್ಸಿನಲ್ಲಿ ನವದೆಹಲಿಯಲ್ಲಿ ನಿಧನರಾದರು.


