ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳನ್ನು(NET) ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಕೇಂದ್ರದ ಸಚಿವರು, ಅಧಿಕಾರಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಪತ್ರ ಬರೆದು ಒತ್ತಾಯಿಸಿದ್ದಾರೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಸಂಸ್ಥೆಯು ಪ್ರತೀ ವರ್ಷ ಎರಡು ಬಾರಿ ನಡೆಸಲಾಗುವ NET ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇರುವುದರಿಂದ ದಕ್ಷಿಣ ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸಾಕಷ್ಟು ತೊಂದರೆಯಾಗುತ್ತಿದ್ದು ಈ ಬಗ್ಗೆ ಕೂಡಲೇ ಗಮನಹರಿಸಿ ಕನ್ನಡದಲ್ಲಿಯೂ ಪರೀಕ್ಷೆ ಎದುರಿಸಲು ಸಹಕಾರ ನೀಡುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ರಮೇಶ್ ಪೊಕ್ರಿಯಲ್ ನಿಶಾಂಕ್‌ಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಸೆಪ್ಟಂಬರ್ 14 ಹಿಂದಿ ದಿವಸ ಆಚರಣೆಗೆ ಕನ್ನಡಿಗರ ತೀವ್ರ ವಿರೋಧ
“ರಾಜ್ಯ ಸರ್ಕಾರಗಳು ಪದವಿ ಕಾಲೇಜುಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ನಡೆಸುತ್ತದೆ. ಸದರಿ ನೇಮಕಾತಿಗೆ ಅರ್ಹತೆ ಪಡೆಯಲು ಪ್ರತೀ ಯುಜಿಸಿ ನಡೆಸುವ NET ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಅವಶ್ಯಕವಾಗಿರುತ್ತದೆ. ಆದರೆ ಸದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಪ್ರಾದೇಶಿಕ ಭಾಷೆಯಲ್ಲಿ ಇರದ ಕಾರಣ ದಕ್ಷಿಣ ರಾಜ್ಯದ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇದು ಸಂವಿಧಾನದ 14 ಮತ್ತು 15ನೇ ವಿಧಿಯ ಸಂಪೂರ್ಣ ಉಲ್ಲಂಘನೆಯಾಗುತ್ತದೆ” ಎಂದು ತಿಳಿಸಿದ್ದಾರೆ.
“ಒಕ್ಕೂಟ ವ್ಯವಸ್ಥೆಯಲ್ಲಿ ಭಾರತ ಸರ್ಕಾರದ ಸಂವಿಧಾನದ 8ನೇ ಪರಿಚ್ಚೇದದಲ್ಲಿರುವ ಕನ್ನಡವೂ ಸೇರಿದಂತೆ 22 ಭಾಷೆಗಳಿಗೂ ಮಾನ್ಯ ನೀಡಬೇಕಿದೆ. ಆ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸಬೇಕಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ನಡ್ ಸುದ್ದಿಗ್ ಏನ್ರಾ ಬಂದ್ರೆ ಮಾನಾ ಉಳ್ಸಾಕಿಲ್ಲ; ‘ರಸೋಕಿನ’ ತಂಡದಿಂದ ವಿಶಿಷ್ಟ ಪ್ರತಿರೋಧ
1976ರ ಕೇಂದ್ರ ಭಾಷಾ ನೀತಿ ಅನ್ವಯ ದಕ್ಷಿಣ ರಾಜ್ಯಗಳಿಗೆ ಹಿಂದಿ ಭಾಷೆಯು ಆಯ್ಕೆಯೇ ಹೊರತು ಅನಿವಾರ್ಯವಲ್ಲ. ಹಾಗಾಗಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಕೇಂದ್ರ ಸರ್ಕಾರ ಪರೀಕ್ಷೆಗಳನ್ನು ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಒತ್ತಾಯಿಸಿದ್ದಾರೆ.
“ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಿದರೆ ಆರೋಗ್ಯಕರ ಸ್ಪರ್ಧೆ ಉಂಟಾಗುವಂತೆ ನೋಡಿಕೊಳ್ಳಲು ಭಾಷೆ ಸಹ ಪ್ರಮುಖ ಸಾಧನವಾಗಲಿದೆ. ಹಾಗಾಗಿ ಈ ಮಾದರಿಯ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿಯೇ ನಡೆಸಿದಲ್ಲಿ ದಕ್ಷಿಣ ರಾಜ್ಯದ ವಿದ್ಯಾರ್ಥಿಗಳು ಸಹ ಉತ್ತರ ರಾಜ್ಯದ ವಿದ್ಯಾರ್ಥಿಗಳಿಗೆ ಸ್ಪರ್ಧೆ ನೀಡಬಲ್ಲರು ಎಂಬುದನ್ನು ತಿಳಿಸಿರುವ ಪ್ರಾಧಿಕಾರದ ಅಧ್ಯಕ್ಷರು, ಕೂಡಲೇ ದಕ್ಷಿಣ ರಾಜ್ಯದ ವಿದ್ಯಾರ್ಥಿಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಪರೀಕ್ಷೆಯನ್ನು ನಡೆಸಸಲು ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ” ಎಂದು ಟಿ.ಎಸ್.ನಾಗಾಭರಣ ಅವರ ಆಪ್ತ ಸಹಾಯಕಿ ಪಂಕಜ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಉತ್ತರ ಭಾರತೀಯರ ಹೆಸರುಗಳ ವಿಜೃಂಭಣೆ: ಹೀಗಾದರೆ ಕನ್ನಡದ ಅಸ್ಮಿತೆಯ ಕತೆಯೇನು?


