Homeಕರ್ನಾಟಕಪವರ್ ಟಿವಿ ಪ್ರಕರಣ ಎತ್ತುವ ಪ್ರಶ್ನೆಗಳು ಯಾರ ಮನೆ ಬಾಗಿಲೆದುರು ನಿಲ್ಲುತ್ತವೆ?

ಪವರ್ ಟಿವಿ ಪ್ರಕರಣ ಎತ್ತುವ ಪ್ರಶ್ನೆಗಳು ಯಾರ ಮನೆ ಬಾಗಿಲೆದುರು ನಿಲ್ಲುತ್ತವೆ?

ಪವರ್ ಟಿವಿಯ ಮಾಲೀಕರೂ ಬ್ಲ್ಯಾಕ್‍ಮೇಲ್‍ಗಿಳಿದಿದ್ದರು ಎಂಬುದು ಊಹೆ ಅಥವಾ ವಿಶ್ಲೇಷಣೆಯಷ್ಟೇ. ಅದಕ್ಕೆ ಯಾವ ಪುರಾವೆಯೂ ಇಲ್ಲ. ಆದರೆ, ಸಿಎಂ ಪುತ್ರ ವಿಜಯೇಂದ್ರರ ಆರೋಪಿತ ಅಕ್ರಮಕ್ಕೆ ಸಾಕ್ಷ್ಯಗಳಿವೆ ಮತ್ತು ಅದನ್ನು ಪವರ್ ಟಿವಿಯು ಪ್ರಸಾರ ಮಾಡಿದೆ.

- Advertisement -
- Advertisement -

ಕೆಲ ಸಮಯದ ಹಿಂದೆ ನಮ್ಮ (ಕಟು ಪ್ರಾಮಾಣಿಕ) ಪತ್ರಕರ್ತ ಸ್ನೇಹಿತರೊಬ್ಬರು ಸಾರ್ವಜನಿಕ ಕೆಲಸವೊಂದರ ನಿಮಿತ್ತ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಆ ಮಾಜಿ ಮುಖ್ಯಮಂತ್ರಿಗಳು ಆಗ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯ ಭ್ರಷ್ಟತೆ ಕುರಿತು ವಿವರಿಸಿದ್ದರು. ‘ನೋಡಿ, ಇಂತಹದೊಂದು ಕಂಪೆನಿಯು ನಾನು ಸಿಎಂ ಆಗಿದ್ದಾಗ ಬಂದು ಈ ಕೆಲಸವನ್ನು ಮಾಡಿಕೊಟ್ಟರೆ 50 ಕೋಟಿ ಕೊಡುತ್ತೇವೆಂಬ ಆಫರ್ ಕೊಟ್ಟಿದ್ದರು. ಅವರು ಈ ಸಿಎಂ ಹತ್ತಿರವೂ ಹೋಗಿ ಕೇಳಿದ್ದಾರೆ. ಸಿಎಂ ಮೊದಲು 50 ಕೋಟಿಗೆ ಒಪ್ಪಿದ್ದವರು, ಒಂದು ತಿಂಗಳು ಬಿಟ್ಟು ಇನ್ನೊಬ್ಬರು 60 ಕೋಟಿ ಕೊಡಲು ಬಂದರೆ ಮೊದಲನೆಯವರಿಗೆ ಕ್ಯಾನ್ಸೆಲ್ ಮಾಡಿ ಇವರಿಗೆ ಕೊಟ್ಟಿದ್ದಾರೆ. ಈ ಥರಾ ಕೆಟ್ಟೋಗಿದೆ ನೋಡಿ ಪರಿಸ್ಥಿತಿ’ ಎಂದಿದ್ದರು.

‘ಈ ಥರಾ ಕೆಟ್ಟೋಗಿದೆ ನೋಡಿ ಪರಿಸ್ಥಿತಿ’ ಎಂದು ಹೇಳುವ ಸರದಿ ಈಗ ನಮ್ಮದು. ಅಂದರೆ ಈ ಮಾಜಿ ಸಿಎಂ ಹತ್ತಿರ 50 ಕೋಟಿ ರೂ.ಗಳ ಡೀಲ್ ಇಟ್ಟುಕೊಂಡು ಯಾರೋ ಬರುವುದರ ಕುರಿತು ಯಾವ ಮುಜುಗರವನ್ನೂ ಹೊಂದಿಲ್ಲದೇ ಅವರೇ ಪ್ರಾಮಾಣಿಕ ಪತ್ರಕರ್ತರೊಬ್ಬರ ಬಳಿ ಹೇಳಿಕೊಳ್ಳುವಷ್ಟು ಪರಿಸ್ಥಿತಿ ಕೆಟ್ಟೋಗಿತ್ತು. ನಮ್ಮ ಗೆಳೆಯರೇನೋ ಕಟು ಪ್ರಾಮಾಣಿಕರಾಗಿದ್ದರು. ಆದರೆ ಎಲ್ಲಾ ಪತ್ರಕರ್ತರ ಕುರಿತೂ ಅದನ್ನು ಹೇಳಲು ಸಾಧ್ಯವಿಲ್ಲವಾಗಿದೆ. ಕೆಲವು ಪತ್ರಕರ್ತರು ದೊಡ್ಡ ದೊಡ್ಡ ಡೀಲರ್‌ಗಳಾಗಿದ್ದಾರೆ. ಕೆಲವು ಡೀಲರ್‌ಗಳು ಪತ್ರಕರ್ತರೂ ಆಗುತ್ತಿದ್ದಾರೆ. ಬೇರೆ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಪತ್ರಕರ್ತರು ತಾವೇ ಸ್ವಂತ ಪತ್ರಿಕೆ/ಚಾನೆಲ್‍ಗಳ ಮಾಲೀಕರಾಗಲು ಸಾಧ್ಯವಾದಾಗ ಅದನ್ನು ಹೆಮ್ಮೆಯ ಸಂಗತಿಯೆಂದು ಅವರೇ ಹೇಳಿಕೊಳ್ಳಲಿಲ್ಲ. ಏಕೆಂದರೆ ಅವರು ಭಾರೀ ಗಾತ್ರದ ಡೀಲರ್‌ಗಳಾಗಿ ಸಂಪಾದಿಸಿದ್ದಾರೆಂದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತಿತ್ತು.

ಬಿ.ವೈ ವಿಜಯೇಂದ್ರ. photo courtesy: The News Minute

ಈಗ ಪವರ್ ಟಿವಿ ವಿಚಾರದಲ್ಲೂ ಅಂತಹ ಮಾತುಗಳು ಕೇಳಿಬರುತ್ತಿವೆ. ಪವರ್ ಟಿವಿ ಮಾಲೀಕರು ಸಿಎಂ ಪುತ್ರ ವಿಜಯೇಂದ್ರರ ಜೊತೆ ಆಡಿದ ಮಾತು ಸ್ಟಿಂಗ್ ಭಾಗವಾಗಿ ಆಡಿದ್ದೋ ಅಥವಾ ‘ಮೀಡಿಯೇಟ್’ ಮಾಡಲು ಹೊರಟಿದ್ದರೋ ಎಂದು ಹಲವರು ಕೇಳುತ್ತಿದ್ದಾರೆ. 1ನೇ ತಾರೀಕಿನಂದು ಈ ಹಗರಣದ ಕುರಿತು ಸ್ಟೋರಿ ಮಾಡಿದವರು ನಂತರ 15 ದಿನಗಳ ಕಾಲ ಕೈಗೆತ್ತಿಕೊಳ್ಳದಿದ್ದುದು ಏಕೆಂಬ ಪ್ರಶ್ನೆಗಳೂ ಉಳಿದುಬಿಟ್ಟಿವೆ. ಪತ್ರಕರ್ತರ ಕುರಿತು ಇಂತಹ ಪ್ರಶ್ನೆಗಳು ಏಕೆ ಏಳುತ್ತಿವೆ ಎಂಬ ಬಗ್ಗೆ ಪತ್ರಕರ್ತರೆಂದು ಕರೆಯಲ್ಪಡುವವರು ಆತ್ಮನಿರೀಕ್ಷಣೆಗೆ ತೊಡಗಬಹುದೆಂಬ ಯಾವ ವಿಶ್ವಾಸವೂ ಇಲ್ಲ; ಬದಲಿಗೆ ಸಾರ್ವಜನಿಕರ ಕಣ್ಣಲ್ಲಿ ಈಗಿನ ರೀತಿಯ ಜರ್ನಲಿಸಮ್ಮೇ ಅಪ್ರಸ್ತುತವಾಗಿಬಿಡುತ್ತದೆ ಅಷ್ಟೇ.


ಇದನ್ನೂ ಓದಿ: ಸಿಎಂ ಮಗನ ಭ್ರಷ್ಟಾಚಾರ ಬಯಲು: ಪವರ್‌ ಟಿವಿ ಪ್ರಸಾರಕ್ಕೆ ತಡೆ!


ಆದರೆ ಈ ಯಾವ ಸಂಗತಿಗಳೂ ಪವರ್ ಟಿವಿ ವಿಚಾರದಲ್ಲಿ ಯಡಿಯೂರಪ್ಪನವರ ಸರ್ಕಾರ ನಡೆದುಕೊಂಡ ರೀತಿಯನ್ನು ಸಮರ್ಥಿಸುವುದಿಲ್ಲ. ಬದಲಿಗೆ ಯಡಿಯೂರಪ್ಪನವರು ಅಮಿತ್‍ಶಾ ಮತ್ತು ನರೇಂದ್ರ ಮೋದಿಯವರಿಗಿಂತ ಯಾವ ರೀತಿಯಲ್ಲೂ ಕಡಿಮೆಯಲ್ಲ; ಅವರ ಪುತ್ರನ ಅವ್ಯವಹಾರದ ವಿಚಾರದಲ್ಲಿ ಅವರು ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರು ಎಂಬುದನ್ನು ಹೇಳುತ್ತದೆ. ಇಲ್ಲದಿದ್ದರೆ ಯಡಿಯೂರಪ್ಪನವರು ಕೇವಲ ಉತ್ಸವ ಮೂರ್ತಿ ಅಷ್ಟೇ; ವಿಜಯೇಂದ್ರ ಸರ್ಕಾರದ ಯಂತ್ರಾಂಗದ ಮೇಲೆ ನೇರ ಹತೋಟಿಯನ್ನು ಹೊಂದಿದ್ದು, ಟಿವಿ ಚಾನೆಲ್ ಒಂದಕ್ಕೆ ನುಗ್ಗಿ ಅಕ್ರಮಗಳನ್ನೆಸಗಲು ಪೊಲೀಸರಿಗೆ ಆದೇಶ ನೀಡುವಷ್ಟು ‘ಸಂವಿಧಾನ ಬಾಹಿರ’ ಶಕ್ತಿಯನ್ನು ಹೊಂದಿದ್ದಾಎಂದು ಸಾಬೀತಾಗುತ್ತದೆ.

ಇಲ್ಲದಿದ್ದರೆ ಯಾವ ಹಗರಣವನ್ನು ಟಿವಿ ಚಾನೆಲ್‍ಒಂದು ಬಿತ್ತರಿಸಿ, ಅದು ವಿಧಾನಸಭಾ ಅಧಿವೇಶನದಲ್ಲೂ ಚರ್ಚೆಯಾಗುತ್ತದೆಯೋ, ಆ ಚಾನೆಲ್‍ನ ಕಚೇರಿಗೆ ಅಧಿವೇಶನ ಮುಗಿದ ಮರುದಿನವೇ ಪೊಲೀಸರು ಹೋಗಿ ವಿಚಾರಣೆಯ ನೆಪದಲ್ಲಿ ಲೈವ್ ಟೆಲಿಕಾಸ್ಟ್ ಕೊಡಬಲ್ಲ ಉಪಕರಣಗಳನ್ನೆಲ್ಲಾ ಹೊತ್ತೊಯ್ಯುವುದು ಸಾಧ್ಯವೇ ಇಲ್ಲ. ದೇಶದ ಇತಿಹಾಸದಲ್ಲಿ ಅತ್ಯಂತ ಕಡುಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದ ಇಂದಿರಾಗಾಂಧಿ-ಸಂಜಯ್‍ಗಾಂಧಿ ಅಥವಾ ಮೋದಿ-ಅಮಿತ್‍ಶಾ ಅವರುಗಳೂ ಸಹಾ ಪರೋಕ್ಷ ದಾರಿಗಳನ್ನು ಹುಡುಕಿಕೊಂಡಿದ್ದರಷ್ಟೇ. ಇದು ಪತ್ರಿಕೆಯೊಂದರ ಕಚೇರಿಗೆ ನುಗ್ಗಿ ಪ್ರಿಂಟಿಂಗ್ ಪ್ರೆಸ್‍ಅನ್ನು ಹೊತ್ತೊಯ್ದರೆ ಹೇಗೋ ಹಾಗಿದೆ.


ಇದನ್ನೂ ಓದಿ: Power TV ಬೆಂಬಲಕ್ಕೆ ನಿಂತ ಜನತೆ: ಮುಖ್ಯಮಂತ್ರಿಗೆ ಪತ್ರ ಬರೆದ ಕಾರ್ಯನಿರತ ಪತ್ರಕರ್ತರ ಸಂಘ


ಪವರ್ ಟಿವಿಯ ಮಾಲೀಕರೂ ಬ್ಲ್ಯಾಕ್‍ಮೇಲ್‍ಗಿಳಿದಿದ್ದರು ಎಂಬುದು ಊಹೆ ಅಥವಾ ವಿಶ್ಲೇಷಣೆಯಷ್ಟೇ. ಅದಕ್ಕೆ ಯಾವ ಪುರಾವೆಯೂ ಇಲ್ಲ. ಆದರೆ, ಸಿಎಂ ಪುತ್ರ ವಿಜಯೇಂದ್ರರ ಆರೋಪಿತ ಅಕ್ರಮಕ್ಕೆ ಸಾಕ್ಷ್ಯಗಳಿವೆ ಮತ್ತು ಅದನ್ನು ಪವರ್ ಟಿವಿಯು ಪ್ರಸಾರ ಮಾಡಿದೆ. ಇಂದಿನ ಪರಿಸ್ಥಿತಿಯಲ್ಲಿ ಆ ಆರೋಪಗಳು ನೂರಕ್ಕೆ ನೂರರಷ್ಟು ಸತ್ಯ ಎಂದು ನಂಬಬಹುದಾಗಿದೆ; ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯಾಗಿದೆ. ಒಂದು ವೇಳೆ ವಿಜಯೇಂದ್ರ ಅಥವಾ ಇನ್ನಾರಿಗಾದರೂ ತಕರಾರಿದ್ದರೆ ಅವರು ಅದನ್ನು ನಿರಾಕರಿಸುವುದಷ್ಟೇ ಅಲ್ಲದೇ, ಟಿವಿಯ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಸ್ವರೂಪದ ಮೊಕದ್ದಮೆ ಹೂಡಬಹುದಿತ್ತು. ಅದನ್ನು ಹೂಡುವ ಧೈರ್ಯ ಅಥವಾ ನೈತಿಕತೆ ಅವರಿಗಿಲ್ಲವೆಂಬುದನ್ನು ಇಲ್ಲಿನ ವಿದ್ಯಮಾನ ಎತ್ತಿ ತೋರಿಸುತ್ತಿದೆ.

ಸಿಎಂ ಯಡಿಯೂರಪ್ಪ: photo courtesy: The Hindu

ಸದರಿ ಟಿವಿಯ ಮಾಲೀಕರನ್ನೂ ಈಗ ನೀಡಲಾಗಿರುವ ದೂರಿನ ಮೇಲೆ ವಿಚಾರಣೆ ನಡೆಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಘಟನೆ ನಡೆದಿರುವ ದಿನ ಬೇರೆ ಅನುಮಾನಗಳನ್ನು ಮೂಡಿಸುತ್ತಿದೆ. ಪೊಲೀಸರು ಸಿಎಂ ಅಥವಾ ಅವರ ಪುತ್ರನ ಅಣತಿಯಂತೆ ನಡೆದಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ಎರಡನೆಯದಾಗಿ, ದೂರಿನ ವಿಚಾರಣೆ ನಡೆಸುವುದು ಬೇರೆ. ಸಂಬಂಧಿತ ಚಾನೆಲ್ ತನ್ನ ಲೈವ್ ಟೆಲಿಕಾಸ್ಟ್ ಮಾಡಲಾಗದಂತೆ ಮಾಡುವುದು ಬೇರೆ. ಇದಕ್ಕೆ ಸ್ವತಃ ಯಡಿಯೂರಪ್ಪನವರೇ ಹೊಣೆಗಾರರು. ಯಡಿಯೂರಪ್ಪನವರು ಮೃದು ವ್ಯಕ್ತಿತ್ವ, ಮೋದಿ-ಅಮಿತ್‍ಶಾ ಇತ್ಯಾದಿಗಳಿಗಿಂತ ಬೇರೆ ಎಂಬ ಮಾತುಗಳಿಗೆ ಅರ್ಥವೇ ಇಲ್ಲ. ಸ್ವತಃ ಮೋದಿ-ಅಮಿತ್‍ಶಾ ಇಂದಿರಾಗಾಂಧಿ ಮತ್ತು ಸಂಜಯ್‍ಗಾಂಧಿಗಳಿಗಿಂತ ಕೆಟ್ಟ ಸರ್ವಾಧಿಕಾರಿಗಳು ಎಂದು ಸಾಬೀತುಪಡಿಸಿ ಬಹಳ ಕಾಲವಾಗಿಬಿಟ್ಟಿದೆ.

ಈ ಪ್ರಕರಣವು ಕೇವಲ ಯಡಿಯೂರಪ್ಪನವರ ಕುರಿತು ಬೆರಳು ಮಾಡಿ ತೋರಿಸುವುದಿಲ್ಲ. ಇತರೆಲ್ಲಾ ಮಾಧ್ಯಮ ಸಂಸ್ಥೆಗಳ ಕುರಿತೂ ಪ್ರಶ್ನೆ ಎತ್ತುತ್ತದೆ. ಪವರ್‍ಟಿವಿಯ ಬೆನ್ನಿಗೆ ಈ ಸಂದರ್ಭದಲ್ಲಿ (ವಿಚಾರಣೆಯ ನೆಪದಲ್ಲಿ ಆ ಟಿವಿಯ ಲೈವ್ ಬ್ರಾಡ್‍ಕಾಸ್ಟ್‌ಗೆ ತೊಂದರೆ ಕೊಟ್ಟಿರುವ ವಿಚಾರದಲ್ಲಿ) ಗಟ್ಟಿಯಾಗಿ ನಿಲ್ಲುವುದು ಹೋಗಲಿ, ಸಾಕ್ಷ್ಯಾಧಾರಗಳ ಮುಖಾಂತರ ವಿಜಯೇಂದ್ರ ವಿರುದ್ಧ ಕೇಳಿಬಂದ ಆರೋಪಗಳನ್ನು ಇವರ್ಯಾರೂ ಏಕೆ ಪ್ರಸಾರ ಮಾಡಲಿಲ್ಲ ಎಂಬುದು ಪ್ರಮುಖ ಪ್ರಶ್ನೆ. ಉತ್ತರ ಕರ್ನಾಟಕದ ರಾಜಕಾರಣಿಯೊಬ್ಬರು ಸಚಿವರಾಗಿದ್ದಾಗ ಖಾಸಗಿಯಾಗಿ (ಸರಿಯೋ ತಪ್ಪೋ ಆ ವಿಚಾರ ಬೇರೆ) ನಡೆಸಿದ ರಾಸಲೀಲೆಯ ವಿಡಿಯೋವನ್ನು ಈ ಟಿವಿ ಚಾನೆಲ್‍ಗಳು ‘ಬೇರೆ ಚಾನೆಲ್‍ನಲ್ಲಿ ಬಂದದ್ದು’ ಎಂದು ಬಿಟ್ಟುಬಿಟ್ಟರೇ? ಅದೂ ಹೋಗಲಿ, ಒಂದು ನಿರ್ದಿಷ್ಟ ಮಾಧ್ಯಮಸಂಸ್ಥೆಗೆ ಮಾತ್ರ ಲಭ್ಯವಾಗಿದ್ದ ಸಚಿವರೊಬ್ಬರು ಗೆಳೆಯನ ಹೆಂಡತಿಯ ಜೊತೆಗೆ ರಾಸಲೀಲೆ ನಡೆಸಿದರು ಎನ್ನಲಾದ ಸುದ್ದಿಯನ್ನು ಮಿಕ್ಕವರು ಪ್ರಸಾರ ಮಾಡಲಿಲ್ಲವೇ?

ಆಗೆಲ್ಲಾ ಜೊಲ್ಲು ಸುರಿಸಿಕೊಂಡು ಅಸಹ್ಯವಾಗಿ ಅದನ್ನು ಬಿತ್ತರಿಸಿದವರಿಗೆ ಈಗೇನಾಗಿದೆ? ಖಚಿತವಾದ ಸಾಕ್ಷ್ಯಗಳೊಂದಿಗೆ ಟಿವಿ ವಾಹಿನಿಯೊಂದು ಆಳುವ ಪಕ್ಷಕ್ಕೆ ಸೇರಿದವರು (ಅದರಲ್ಲೂ ಯಾವುದೋ ಆಳುವ ಪಕ್ಷವಲ್ಲ; ಬಿಜೆಪಿಗೆ ಸೇರಿದವರು) ನಡೆಸಿದರೆನ್ನಲಾದ ಹಗರಣ ಬೆಳಕಿಗೆ ಬಂದರೆ ಉಳಿದ ಮಾಧ್ಯಮ ಸಂಸ್ಥೆಗಳಿಗೆ ಅದೇಕೆ ದೊಡ್ಡ ಸುದ್ದಿಯಲ್ಲ? ಈ ಪ್ರಶ್ನೆಗೆ ಮಾಧ್ಯಮ ಸಂಸ್ಥೆಗಳು ಉತ್ತರಿಸಲೇಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಬೆಳವಣಿಗೆಯು ಈಗಾಗಲೇ ಕುಂಠಿತವಾಗಿರುವ ಮಾಧ್ಯಮ ಸ್ವಾತಂತ್ರ್ಯದ ಭವಿಷ್ಯದ ಕುರಿತು ಗಂಭೀರ ಪ್ರಶ್ನೆಯನ್ನು ಉಳಿಸುತ್ತದೆ.


ಇದನ್ನೂ ಓದಿ: ಮುಖ್ಯಮಂತ್ರಿಗಳ ದಾಳಿಗೆ ಬಗ್ಗುವುದಿಲ್ಲ, ಪವರ್ ಟಿವಿ ಪುಟಿದೇಳಲಿದೆ: ರಹಮಾನ್ ಹಾಸನ್


ಪರಿಸ್ಥಿತಿ ಹೀಗಿರುವಾಗ ಪವರ್‌ಟಿವಿಯ ಆಂಕರ್ ಮತ್ತು ಪ್ರಿನ್ಸಿಪಲ್ ಎಡಿಟರ್ ರಹಮಾನ್ ಹಾಸನ್ ಫೇಸ್‍ಬುಕ್ ಲೈವ್‍ನಲ್ಲಿ ಮಾತಾಡಿದ ಕೆಲವು ಅಂಶಗಳು ಇನ್ನೂ ಕೆಲವು ಪ್ರಶ್ನೆಗಳನ್ನು ಎತ್ತುತ್ತದೆ. ಸಕಾರಣವಾಗಿಯೇ ಅವರು ಯಡಿಯೂರಪ್ಪನವರನ್ನು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮತ್ತು ನೂರಾರು ಸಿಬ್ಬಂದಿಯನ್ನು ಬೀದಿಗೆ ತಳ್ಳುವುದರ ಕುರಿತು ಭಾವನಾತ್ಮಕವಾಗಿಯೂ ಮಾತಾಡಿದರು. ಆದರೆ, ‘ನೀವು ಹಿಂದೆ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದಾಗ ನಮಗೆ ನೋವಾಯಿತು’ ಎಂಬರ್ಥದಲ್ಲಿ ರಹಮಾನ್ ಮಾತಾಡಿದ್ದು ಅಚ್ಚರಿ ಮೂಡಿಸಿತು. ಆ ರೀತಿ ಪದವಿಯಿಂದ ಕೆಳಗಿಳಿದಿದ್ದು ಏಕೆ ಎಂಬುದು ಅವರಿಗೆ ಮರೆತು ಹೋದಂತಿದೆ, ಅದರ ನಂತರ ಯಡಿಯೂರಪ್ಪನವರು ಜೈಲಿಗೆ ಹೋಗಿದ್ದರು ಎಂಬುದನ್ನು ಸಾಮಾನ್ಯ ಜನರ ನೆನಪಿನ ಶಕ್ತಿಯು ಮರೆಯಬಹುದು; ಆದರೆ ಸಮಕಾಲೀನ ಸಂದರ್ಭದ ಪ್ರಮುಖ ಪತ್ರಕರ್ತರೊಬ್ಬರು ಮರೆಯಬಹುದೇ? ಒಂದು ವೇಳೆ ಆಗಿನ ಅವರ ಭ್ರಷ್ಟಾಚಾರದ ಕುರಿತು ಪತ್ರಕರ್ತರಿಗೆ ತಕರಾರಿಲ್ಲದೇ ಅವರು ಕೆಳಗಿಳಿದಿದ್ದಕ್ಕೆ ನೋವಾಗುವುದಾದರೆ, ಈಗಿನ ಅವರ ಮತ್ತು ಪುತ್ರನ ಭ್ರಷ್ಟಾಚಾರವನ್ನು ಹೊರಗೆಳೆಯುವ ಕೆಲಸವನ್ನೇಕೆ ಈ ಚಾನೆಲ್ ಮಾಡಿತು? ಯಡಿಯೂರಪ್ಪನವರು ಒಳ್ಳೆಯವರು, ಕುಟುಂಬವೇ ಹಾಳು ಮಾಡಿತು ಎಂಬ ಉದಾರ ಅವಕಾಶವನ್ನು ಮುಖ್ಯಮಂತ್ರಿಯೊಬ್ಬರಿಗೆ ಯಾರಾದರೂ ನೀಡಬಹುದೇ? ಅದರಲ್ಲೂ ಒಬ್ಬ ಪತ್ರಕರ್ತರು?

photo courtesy: Youtube

ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ವಿಜಯೇಂದ್ರ ಭ್ರಷ್ಟಾಚಾರ ಹಾಗೂ ಪವರ್‌ಟಿವಿಯ ಮೇಲಿನ ದಬ್ಬಾಳಿಕೆಗಳು ಈಗಿಂದೀಗಲೇ ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕಾದ ಸಂಗತಿಗಳಲ್ಲ. ಹೀಗೆಯೇ ಮುಂದುವರೆದು ಬಿಜೆಪಿಯ ಪಾಪದ ಕೊಡ ತುಂಬಿದರೆ ಮುಂದಿನ ಚುನಾವಣೆಯಲ್ಲಿ ಒಳ್ಳೆಯದಾಗಬಹುದು ಎಂಬ ಆಶಾಭಾವನೆ ಮೂಡಿಸಿರಬಹುದು ಎಂಬ ಅನುಮಾನವೂ ಹುಟ್ಟುತ್ತದೆ. ಕುಮಾರಸ್ವಾಮಿಯವರ ಸಿಎಂ ಭೇಟಿ ಮತ್ತು ಸಿದ್ದರಾಮಯ್ಯನವರು ಮಂಡಿಸಿದ ಪರಿಣಾಮಕಾರಿಯಲ್ಲದ ಅವಿಶ್ವಾಸ ನಿರ್ಣಯಗಳ ಬಗ್ಗೆ ಅನುಮಾನ ಹುಟ್ಟಿರುವ ಹಿನ್ನೆಲೆಯಲ್ಲೂ ಇದನ್ನು ನೋಡಬಹುದು.

ಈ ಇಡೀ ಪ್ರಕರಣವು ಬಿಜೆಪಿಯೊಳಗಿನ ಆಂತರಿಕ ಕಲಹದ ಭಾಗ ಎಂದು ಹೇಳುವವರಿದ್ದಾರೆ. ದೇಶದ ಇಂದಿನ ಪರಿಸ್ಥಿತಿಯಲ್ಲಿ ಬಿಜೆಪಿ ಮುಖಂಡರ ಹಗರಣದ ಕುರಿತು ನೇರವಾಗಿ ಚಾಲೆಂಜ್ ಮಾಡಿ ಟಿವಿಯ ಮುಖ್ಯಸ್ಥರೇ ಮಾತಾಡುವ ಧೈರ್ಯ ಬರಬೇಕಾದರೆ, ಅದರ ಹಿಂದೆ ಬಿಜೆಪಿಯೇ ಇರಬೇಕು ಎನ್ನುವುದು ಅಂಥವರ ವಿಶ್ಲೇಷಣೆ. ಅದು ನಿಜವೋ ಅಲ್ಲವೋ ಕಾಲ ಉತ್ತರ ಹೇಳಬೇಕು. ಆದರೆ, ಈ ವಿದ್ಯಮಾನದ – ಅಂದರೆ ವಿಜಯೇಂದ್ರ ಭ್ರಷ್ಟಾಚಾರ ಮತ್ತು ಮಾಧ್ಯಮದ ಮೇಲಿನ ದಬ್ಬಾಳಿಕೆ ನಡೆಸುವ ಸರ್ವಾಧಿಕಾರದ – ಕುರಿತು ಉತ್ತರ ಹೇಳಬೇಕಾದ್ದರಲ್ಲಿ ಬಿಜೆಪಿ ಪಕ್ಷವೂ ಇದೆಯೆಂಬುದನ್ನು ಮರೆಯಲಾಗದು. ಬಿಜೆಪಿ ಪಕ್ಷವೆಂದರೆ ಅವರು ಏನು ಬೇಕಾದರೂ ಮಾಡಿಕೊಂಡು ಹೋಗಬಹುದು ಎಂಬ ಪರಿಸ್ಥಿತಿ ಈ ದೇಶದಲ್ಲಿ ಬಂದಿದೆ ಎಂದು ಭಾವಿಸಿದ್ದರೆ ಅದು ಸುಳ್ಳೆಂಬುದನ್ನು ನಿನ್ನೆಯಷ್ಟೇ ಪರಿಣಾಮಕಾರಿ ಕರ್ನಾಟಕ ಬಂದ್ ಎತ್ತಿ ತೋರಿಸಿದೆ.

ಈ ಎಲ್ಲಾ ಪ್ರಶ್ನೆಗಳನ್ನೂ ಪವರ್‌ಟಿವಿಯ ಪ್ರಕರಣವು ಸಂಬಂಧಪಟ್ಟವರ ಮುಂದೆ ಇಡುತ್ತಿದೆ ಹಾಗೂ ಅವು ಹಾಗೆಯೇ ಮರೆಯಾಗದೇ ಮತ್ತೆ ಮುನ್ನೆಲೆಗೆ ಬಂದೇ ಬರುತ್ತವೆ.


ಇದನ್ನೂ ಓದಿ: ಸಿಎಂ ಪುತ್ರನ ಭ್ರಷ್ಟಾಚಾರದ ಬಗ್ಗೆ ನಿರಂತರ ವರದಿ ಮಾಡಿದ ಪವರ್‌ ಟಿವಿ MD ಮನೆ ಮೇಲೆ ಪೊಲೀಸರ ದಾಳಿ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...