ಕಾಂಗ್ರೆಸ್ ಹೊಸ‌ ನಾಯಕತ್ವ; ಒಟ್ಟಾಗಿ ಹುಡುಕೋಣ: ಸೋನಿಯಾ ಗಾಂಧಿ
Photo Courtesy: HindusthanTimes

ಹತ್ರಾಸ್‌ನಲ್ಲಿ ನಡೆದ ಭೀಕರ ದುರ್ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಆದಿತ್ಯಾನಾಥ್ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂತ್ರಸ್ತೆಯು ನಿರ್ದಯಿ ಸರ್ಕಾರದಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕು ಮೇಲ್ಜಾತಿಯ ಪುರುಷರು ಹದಿನೈದು ದಿನಗಳ ಹಿಂದೆ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಚಿತ್ರಹಿಂಸೆ ನೀಡಿ ಆಕೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ ಪೊಲೀಸರು ಕೂಡಾ ಸಂತ್ರಸ್ತೆಯ ಕುಟುಂಬವನ್ನು ದೂರವಿಟ್ಟು, ಮೃತದೇಹವನ್ನು ಮಧ್ಯರಾತ್ರಿಯಲ್ಲಿ ಸುಟ್ಟುಹಾಕಿದ್ದರು. ಮೃತದೇಹ ನೀಡುವಂತೆ ಸಂತ್ರಸ್ತೆ ಕುಟುಂಬ ಪೊಲೀಸರೊಂದಿಗೆ ವಾಗ್ವಾದ ಮಾಡುತ್ತಿರುವ ಮತ್ತು ಅಳುತ್ತಿರುವ ಹೃದಯವಿದ್ರಾವಕ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದವು.

ಈ ಘಟನೆ ದೇಶಾದ್ಯಂತ ತೀವ್ರ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ “ಹತ್ರಾಸ್‌ನ ನಿರ್ಭಯಾ ಸಾಯಲಿಲ್ಲ. ಬದಲಾಗಿ ಆಕೆ ನಿರ್ದಯಿ ಸರ್ಕಾರದಿಂದ, ಅದರ ಆಡಳಿತದಿಂದ ಮತ್ತು ಯುಪಿ ಸರ್ಕಾರದ ಅಜ್ಞಾನದಿಂದ ಕೊಲ್ಲಲ್ಪಟ್ಟಳು” ಎಂದಿದ್ದಾರೆ.

ಇದನ್ನೂ ಓದಿ: ಹತ್ರಾಸ್ ಪ್ರಕರಣ ಪಕ್ಷಕ್ಕೆ ರಾಜಕೀಯ ಹಾನಿಯುಂಟುಮಾಡಿದೆ: BJP ದಲಿತ ಸಂಸದರ ಉವಾಚ

ಕಾಂಗ್ರೆಸ್ಸಿನ ಅಧಿಕೃತ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಈ ಹೇಳಿಕೆಗಳನ್ನು ಅವರು ನೀಡಿದ್ದಾರೆ. ಮೊದಲು ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಸಂತ್ರಸ್ತೆಗೆ ಸಮಯೋಚಿತ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.

“ಆಕೆ ಜೀವಂತವಾಗಿದ್ದಾಗ ಆಕೆಯ ಮಾತುಗಳನ್ನು ಕೇಳಿಸಿಕೊಂಡು, ಆಕೆಯನ್ನು ರಕ್ಷಿಸಿಲ್ಲ. ಮರಣದ ನಂತರವೂ, ಆಕೆಯನ್ನು ಅವರ ಕುಟುಂಬಕ್ಕೆ ಒಪ್ಪಿಸಿಲ್ಲ. ದುಖಃದಿಂದ ಅಳುವ ತಾಯಿಗೆ ತನ್ನ ಮಗಳಿಗೆ ಕೊನೆಯ ವಿದಾಯ ಹೇಳಲು ಸಹ ಅವಕಾಶ ನೀಡಲಿಲ್ಲ. ಇದು ಅತಿ ದೊಡ್ಡ ಪಾಪ” ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಪೊಲೀಸರು “ಬಲವಂತವಾಗಿ ಸಂತ್ರಸ್ತೆ ಮೃತದೇಹವನ್ನು ಸುಟ್ಟುಹಾಕಿದ್ದಾರೆ. ಯುವತಿ ಸಾವಿನಲ್ಲೂ ಸಹ ತನ್ನ ಘನತೆಯನ್ನು ಕಳೆದುಕೊಂಡಿದ್ದು, ಅನಾಥೆಯಂತೆ ಆಕೆಯನ್ನು ಸುಟ್ಟುಹಾಕಲಾಗಿದೆ” ಎಂದು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.

ಆದಿತ್ಯನಾಥ್ ಸರ್ಕಾರದ ಅಡಿಯಲ್ಲಿ ಉತ್ತರಪ್ರದೇಶದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ವಿರುದ್ಧ ದೇಶ ಮಾತನಾಡಲಿದೆ ಎಂದು ಸೋನಿಯಾ ಗಾಂಧಿ ಹೇಳಿದರು. “ಇದು ಯಾವ ರೀತಿಯ ನ್ಯಾಯ..? ಇದು ಯಾವ ರೀತಿಯ ಸರ್ಕಾರ…? ನೀವು ಏನು ಮಾಡಿದರೂ, ದೇಶ ಸುಮ್ಮನೆ ನೋಡುತ್ತಲೇ ಇರುತ್ತದೆ ಎಂದು ಭಾವಿಸಿದ್ದೀರಿ.. ಆದರೆ ಇಲ್ಲ, ನಿಮ್ಮ ಅನ್ಯಾಯದ ವಿರುದ್ಧ ದೇಶವು ಮಾತನಾಡುತ್ತದೆ” ಎಂದಿದ್ದಾರೆ.

ಸದ್ಯ ದೇಶದಲ್ಲಿ ತೀವ್ರ ಪ್ರತಿಭಟನೆಯಲ್ಲಿ ತೊಡಗಿರುವ ವಿರೋಧ ಪಕ್ಷಗಳಲ್ಲಿ ಕಾಂಗ್ರೆಸ್ ಮೊದಲ ಸಾಲಿನಲ್ಲಿದೆ. ಮೊರಾದಾಬಾದ್, ಸಹರಾನ್ಪುರ್, ಜಲೌನ್ ಮತ್ತು ಕಾಸ್‌ಗಂಜ್ ಸೇರಿದಂತೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ವಾಲ್ಮೀಕಿ ಸಮುದಾಯ ಪ್ರತಿಭಟನೆ ಮಾಡುತ್ತಿದೆ. ಪ್ರತಿಭಟನೆ ತೀವ್ರಗೊಂಡಿದ್ದು, ಸಂಜೆ 5 ರ ಸುಮಾರಿಗೆ ದೆಹಲಿಯಲ್ಲಿ ದೊಡ್ಡ ಆಂದೋಲನವನ್ನು ಸಹ ಹಮ್ಮಿಕೊಳ್ಳಲಾಗಿದೆ.


ಇದನ್ನೂ ಓದಿ: ಹತ್ರಾಸ್ ಗ್ಯಾಂಗ್ ರೇಪ್ ಕೇಸ್: ಸಾಮಾಜಿಕ ಮಾಧ್ಯಮಗಳಲ್ಲಿ ಸ್ಫೋಟಗೊಂಡ ಆಕ್ರೋಶ

LEAVE A REPLY

Please enter your comment!
Please enter your name here