ಕಳೆದ ಒಂದು ವರ್ಷದಿಂದ ಗೃಹ ಬಂಧನದಲ್ಲಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಮಂಗಳವಾರ (ಅ.13) ತಡರಾತ್ರಿ ಬಿಡುಗಡೆ ಮಾಡಲಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಮುಫ್ತಿ ಅವರನ್ನು ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ (ಪಿಎಸ್‌ಎ) ಬಂಧಿಸಲಾಗಿತ್ತು.
ಬಂಧನದಿಂದ ಬಿಡುಗಡೆಯಾದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ, ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರದಿಂದ ಉಂಟಾದ ಅವಮಾನವನ್ನು ಕಾಶ್ಮೀರದ ನಾಯಕರು ಮತ್ತು ಜನರು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
“ಒಂದು ವರ್ಷದ ನಂತರ ನಾನು ಇಂದು ಬಿಡುಗಡೆಯಾಗಿದ್ದೇನೆ” ಎಂದು ಮುಫ್ತಿ ಬಿಡುಗಡೆಯಾದ ನಂತರ ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. “ಬಂಧನದ ಸಮಯದಲ್ಲಿ, ಆಗಸ್ಟ್ 5 ರ ’ಕಪ್ಪು ದಿನ’ ನನ್ನನ್ನು ಗಾಯಗೊಳಿಸುತ್ತಲೇ ಇತ್ತು. ಜಮ್ಮು ಮತ್ತು ಕಾಶ್ಮೀರದ ಜನರು ಸಹ ಈ ರೀತಿಯ ತೊಂದರೆ ಅನುಭವಿಸಿದ್ದಾರೆ. ಆ ದಿನದ ಅವಮಾನವನ್ನು ನಮ್ಮಲ್ಲಿ ಯಾರೂ ಮರೆಯಲು ಸಾಧ್ಯವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಮೆಹಬೂಬಾ ಮುಫ್ತಿ ಬಂಧನದಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿ: ರಾಹುಲ್ ಗಾಂಧಿ
’ಕೇಂದ್ರ ಸರ್ಕಾರ ನಮ್ಮಿಂದ ಪ್ರಜಾಪ್ರಭುತ್ವ ವಿರೋಧಿ ಮತ್ತು ಕಾನೂನುಬಾಹಿರ ರೀತಿಯಲ್ಲಿ ಕಸಿದುಕೊಂಡದ್ದನ್ನು ನಾವು ಮರಳಿ ಪಡೆಯಬೇಕಾಗಿದೆ. ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಆದರೆ ನಮ್ಮ ಧೈರ್ಯ ಮತ್ತು ದೃಢನಿಶ್ಚಯ ನಮ್ಮನ್ನು ನಮ್ಮ ಗುರಿಯತ್ತ ಕರೆದೊಯ್ಯುತ್ತದೆ” ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಕಳೆದ 14 ತಿಂಗಳುಗಳಿಂದ ಗೃಹ ಬಂಧನದಲ್ಲಿ ಇದ್ದ ಮುಫ್ತಿ ಅವರ ಬಂಧನದ ಅವಧಿಯನ್ನು ಪದೇ ಪದೇ ವಿಸ್ತರಣೆ ಮಾಡುವುದನ್ನು ಪ್ರಶ್ನಿಸಿ ಅವರ ಮಗಳು ಇಲ್ತಿಜಾ ಸುಪ್ರೀಂಕೋರ್ಟ್‌ನಲ್ಲಿ ಕಾಶ್ಮೀರ ಆಡಳಿತ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸಿದ್ದರು.
ಭಾರತೀಯ ಸಂವಿಧಾನದ 370 ನೇ ಪರಿಚ್ಛೇದದ ಅಡಿಯಲ್ಲಿ ಕೇಂದ್ರ ಸರ್ಕಾರವು ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಅದನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ಸಂಪೂರ್ಣ ಲಾಕ್‌ಡೌನ್ ವಿಧಿಸಿತ್ತು. ಅಂದಿನಿಂದ ಮೆಹಬೂಬಾ ಮುಫ್ತಿ ಬಂಧನದಲ್ಲಿದ್ದರು.
ಹಲವು ರಾಜಕೀಯ ನಾಯಕರು ಮುಫ್ತಿಯವರ ಬಿಡುಗಡೆಯನ್ನು ಸ್ವಾಗತಿಸಿದ್ದಾರೆ.
I’m pleased to hear that @MehboobaMufti Sahiba has been released after more than a year in detention. Her continued detention was a travesty & was against the basic tenets of democracy. Welcome out Mehbooba.
— Omar Abdullah (@OmarAbdullah) October 13, 2020
“ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಧನದಲ್ಲಿದ್ದ ನಂತರ ಮೆಹಬೂಬಾ ಮುಫ್ತಿ ಸಾಹಿಬಾ ಅವರನ್ನು ಬಿಡುಗಡೆ ಮಾಡಲಾಗಿದೆ ಎಂಬುದನ್ನು ಕೇಳಲು ನನಗೆ ಸಂತೋಷವಾಗಿದೆ” ಎಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೆಹಬೂಬಾ ಮುಫ್ತಿ ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಗಳು ಇಲ್ತಿಜಾ
Thank God at last @MehboobaMufti has been released after more than15 months.This detention like that of Farooqsahib&@OmarAbdullah was unique one in our country,where the govt. ordered detention themselves don’t know reason and crime committed by these 3leaders.Jai ho democracy ki
— Ghulam Nabi Azad (@ghulamnazad) October 13, 2020
ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಮುಫ್ತಿ ಬಿಡುಗಡೆಯ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. “ಧನ್ಯವಾದಗಳು ದೇವರೆ. ಕೊನೆಗೂ 15 ತಿಂಗಳಿಗಿಂತ ಹೆಚ್ಚು ಸಮಯದ ನಂತರ ಮೆಹಬೂಬಾ ಮುಫ್ತಿ ಬಿಡುಗಡೆಯಾಗಿದೆ” ಎಂದು ಅವರು ಹೇಳಿದರು. “ಫಾರೂಕ್ ಸಾಹಿಬ್ ಮತ್ತು ಉಮರ್ ಅಬ್ದುಲ್ಲಾರಂತಹ ವ್ಯಕ್ತಿಗಳ ಈ ಬಂಧನ ನಮ್ಮ ದೇಶದಲ್ಲಿ ವಿಶಿಷ್ಟವಾಗಿದೆ. ಇವರ ಬಂಧನಕ್ಕೆ ಆದೇಶಿಸಿದ ಸರ್ಕಾರಕ್ಕೂ ಈ ಮೂವರು ನಾಯಕರು ಮಾಡಿದ ಅಪರಾಧ ತಿಳಿದಿಲ್ಲ. ಜೈ ಹೋ ಪ್ರಜಾಪ್ರಭುತ್ವ” ಎಂದು ವ್ಯಂಗ್ಯವಾಡಿದ್ದಾರೆ.


