ರಸ್ತೆಯ ನಡುವಿನ ಹೊಂಡದಿಂದ ಅಪಘಾತದಲ್ಲಿ ಸಾವನ್ನಪ್ಪಿದ್ದ ತನ್ನ ಮಗನ ನೆನಪಿನಲ್ಲಿಯೇ ಸಾಧ್ಯವಾದಷ್ಟು ಮಟ್ಟಿಗೆ ಅಪಘಾತ ಸಂಭವಿಸದಂತೆ ತಡೆಯಲು ಇಲ್ಲೊಬ್ಬ ಭಗೀರಥ ಹೊರಟಿದ್ದಾರೆ. ರಸ್ತೆಯ ಹೊಂಡಗಳನ್ನು ಸಮತಟ್ಟಾಗಿಸುವ ಕೆಲಸವನ್ನು ದಾದಾರಾವ್ ಭಿಲ್ಲೋರೆ ಮಾಡಿಕೊಂಡು ಬರುತ್ತಿದ್ದಾರೆ. ಇವರ ಕೆಲಸಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
2015 ರಲ್ಲಿ ದಾದಾರಾವ್ ಭಿಲ್ಲೋರೆಯವರ 16 ವರ್ಷ ಪ್ರಾಯದ ಮಗ ಚಲಿಸುತ್ತಿದ್ದ ಗಾಡಿ ರಸ್ತೆ ಹೊಂಡಕ್ಕೆ ಸಿಕ್ಕಿ ಅಪಘಾತಕ್ಕೀಡಾಗಿ ಮೃತ ಪಟ್ಟನು. ಒಂದು ತಿಂಗಳ ನಂತರ ಮಗನ ಅಕಾಲಿಕ ಮರಣದ ಆಘಾತದಿಂದ ಹೊರ ಬಂದ ಭಿಲ್ಲೋರೆ, ಇಂತಹ ದುಃಖ ಬೇರಾವ ತಂದೆಗೂ ಬಾರದಿರಲಿ ಎಂದು ಮುಂಬೈ ರಸ್ತೆ ಹೊಂಡಗಳನ್ನು ಮುಚ್ಚುವುದನ್ನು ತನ್ನ ಬದುಕಿನ ಗುರಿಯಾಗಿಸಿಕೊಂಡಿದ್ದಾರೆ. ಅವರ ವಿಡಿಯೋ ನೋಡಿ.
ಇದನ್ನೂ ಓದಿ: ಅಮೆರಿಕ ಚುನಾವಣೆ: ಅಭ್ಯರ್ಥಿಗಳ ಚರ್ಚೆಯಲ್ಲಿ ಇರಲಿದೆ ಮ್ಯೂಟ್ ಬಟನ್!
ಅಂದಿನಿಂದ ಭಿಲ್ಲೋರೆ ಮುಂಬೈಯಲ್ಲಿ ಎಲ್ಲೇ ರಸ್ತೆ ಹೊಂಡ ಕಾಣಿಸಿದರೂ, ಪೇವರ್ ಬ್ಲಾಕ್ ತುಂಡು, ಮರಳು, ಜೆಲ್ಲಿ ಇತ್ಯಾದಿ ತಂದು ಸುರಿದು ಅದನ್ನು ಆದಷ್ಟು ಸಮತಟ್ಟುಗೊಳಿಸುತ್ತಾರೆ.
2015 ರಿಂದ ಈವರೆಗೆ ದಾದಾ ಭಿಲ್ಲೋರೆ ಕನಿಷ್ಟ 650ಕ್ಕೂ ಹೆಚ್ಚು ರಸ್ತೆ ಹೊಂಡಗಳನ್ನು ಹೀಗೇ ಮುಚ್ಚಿದ್ದು, ಎಷ್ಟೋ ಸಂಭಾವ್ಯ ಪ್ರಾಣ ಹಾನಿಗಳನ್ನು ತಪ್ಪಿಸಿದ್ದಾರೆ. ಅಷ್ಟೇ ಅಲ್ಲದೇ, ಹೀಗೆ ಹೊಂಡಗಳು ಬೀಳುವ ರಸ್ತೆಯ ಕಾಂಟ್ರಾಕ್ಟರ್, ಮುನಿಸಿಪಾಲಿಟಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ರಸ್ತೆ ಹೊಂಡಗಳನ್ನು ಮುಚ್ಚುವ ಮೂಲಕವೇ ರಸ್ತೆ ಹೊಂಡಕ್ಕೆ ಬಲಿಯಾದ ತನ್ನ ಮಗನ ನೆನಪನ್ನು ಜೀವಂತವಾಗಿರಿಸಿಕೊಂಡಿರುವ ಈ ವಾತ್ಸಲ್ಯಮಯೀ ತಂದೆಗೆ ಇತರ ತಂದೆತಾಯಿಗಳು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪನವರ ಕುರ್ಚಿ ಉಳಿಯುವುದಿಲ್ಲ! ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ



ಈ ಬಗೆಯ ಕೆಲಸಗಳನ್ನು ಎಲ್ಲೆಡೆ ಮಾಡಲು ಮಂದಿ ಮುಂದಾಗಬೇಕು