ಮುಂದಿನ ವಾರದಿಂದ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ತನ್ನ ಪ್ರಣಾಳಿಕೆಯಲ್ಲಿ 19 ಲಕ್ಷ ಉದ್ಯೋಗಗಳು ಸೇರಿದಂತೆ ಎಲ್ಲರಿಗೂ ಉಚಿತ ಕೊರೊನಾ ವೈರಸ್ ಲಸಿಕೆ ನೀಡುವ ಭರವಸೆ ನೀಡಿದೆ. ಜೊತೆಗೆ ಮುಂದಿನ ಐದು ವರ್ಷಗಳ ಕಾಲ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷ ಒತ್ತಿ ಹೇಳಿದೆ.
ಪ್ರತಿಪಕ್ಷ ನಾಯಕ ತೇಜಶ್ವಿ ಯಾದವ್ ತಮ್ಮ ”ಮಹಾಘಟಬಂಧನ್” ಮೈತ್ರಿಯೂ ಗೆದ್ದರೆ “10 ಲಕ್ಷ ಸರ್ಕಾರಿ ಉದ್ಯೋಗಗಳು” ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ಇದನ್ನು ಅಪಹಾಸ್ಯ ಮಾಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್, “ತೇಜಸ್ವಿ ಯಾದವ್ ಮುಗ್ದನಾಗಿದ್ದು ಆಡಳಿತದಲ್ಲಿ ಅನುಭವಿಲ್ಲ, 10 ಲಕ್ಷ ಉದ್ಯೋಗಗಳಿಗೆ ಹೇಗೆ ಹಣ ಸಂಗ್ರಹಿಸುತ್ತಾರೆ” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ನಿಯಮಗಳ ಉಲ್ಲಂಘನೆ, ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ
ಆದರೆ ಇದೀಗ ಪ್ರತಿಪಕ್ಷಗಳನ್ನು ಮೀರಿಸಿರುವ ಬಿಜೆಪಿ 19 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತೇವೆ ಎಂದಿದೆ. ಅಷ್ಟು ಮಾತ್ರವಲ್ಲದೆ ಇನ್ನೂ ಆವಿಷ್ಕಾರ ಮಾಡದ ಕೊರೊನಾ ಲಸಿಕೆಯನ್ನು ಉಚಿತ ನೀಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಬಿಹಾರ ಚುನಾವಣಾ ಕಣದಲ್ಲಿ ’ಉದ್ಯೋಗ’ ಕೇಂದ್ರ ಬಿಂದು ಆಗಿದ್ದು, ವಿರೋಧ ಪಕ್ಷದ ನಾಯಕ ತೇಜಶ್ವಿ ಯಾದವ್ ತಮ್ಮ ಪಕ್ಷವಾದ ರಾಷ್ಟ್ರೀಯ ಜನತಾದಳ(ಆರ್‌ಜೆಡಿ)ದ ರ್‍ಯಾಲಿಗಳಲ್ಲಿ ಉದ್ಯೋಗದ ವಿಚಾರಗಳನ್ನಿಟ್ಟು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರವನ್ನು ತರಾಟೆಗೆ ಪಡೆಯುತ್ತಿದ್ದಾರೆ.
ಪ್ರಣಾಳಿಕೆಯಲ್ಲಿ ಪಟ್ಟಿ ಮಾಡಲಾದ 19 ಲಕ್ಷ ಉದ್ಯೋಗಗಳ ಬಗ್ಗೆ ಮಾತನಾಡಿದ ಬಿಹಾರದ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್, “3 ಲಕ್ಷ ಶಿಕ್ಷಕರು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಒಂದು ಲಕ್ಷ ಸೇರಿದಂತೆ ಒಟ್ಟು ನಾಲ್ಕು ಲಕ್ಷ ಉದ್ಯೋಗ ಮಾತ್ರ ಸರ್ಕಾರಿ ವಲಯದಲ್ಲಿ. ಉಳಿದ ಉದ್ಯೋಗಗಳು ಬಿಹಾರದಲ್ಲಿ ಸ್ಥಾಪಿಸುವ ಐಟಿ ಕೇಂದ್ರದಲ್ಲಿ ಹಾಗೂ ಕೃಷಿ ಕೇಂದ್ರಗಳಲ್ಲಿ ಸೃಷ್ಟಿಸುತ್ತೇವೆ” ಎಂದು ಹೇಳಿದ್ದಾರೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಚುನಾವಣೆಯ ಫಲಿತಾಂಶ ನವೆಂಬರ್ 10 ರಂದು ಪ್ರಕಟವಾಗುತ್ತದೆ.
ಇದನ್ನೂ ಓದಿ: ಬಿಹಾರ ಅಭಿವೃದ್ಧಿ; ಮುಖ್ಯಮಂತ್ರಿ ಅಭ್ಯರ್ಥಿಗಳ ನೇರ ಚರ್ಚೆ: ನಿತೀಶ್‌ಗೆ ತೇಜಸ್ವಿ ಯಾದವ್ ಸವಾಲು!


