Homeಮುಖಪುಟಮಾನವ ಹಕ್ಕು ಚಳುವಳಿಯ ಮುಂಚೂಣಿ ನಾಯಕ ಎಸ್. ಶೇಷಯ್ಯ

ಮಾನವ ಹಕ್ಕು ಚಳುವಳಿಯ ಮುಂಚೂಣಿ ನಾಯಕ ಎಸ್. ಶೇಷಯ್ಯ

ಬೆಂಗಳೂರಿನಲ್ಲಿ 1993ರಲ್ಲಿ ಸ್ಥಾಪನೆಗೊಂಡ ಪ್ರಜಾತಾಂತ್ರಿಕ ಜನರ ವೇದಿಕೆ(ಪಿಡಿಎಫ್)ಗೆ ತುಂಬ ಹತ್ತಿರವಾಗಿದ್ದ ಶೇಷಯ್ಯನವರು ನಮ್ಮ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

- Advertisement -
- Advertisement -

ಅಕ್ಟೋಬರ್ 10, 2020 ರಂದು ನಿಧನರಾದ ಶೇಷಯ್ಯನವರ ಬಗ್ಗೆ ಮಾತನಾಡುವುದೆಂದರೆ ಭಾರತದ ಮುಖ್ಯವಾಗಿ ಆಂಧ್ರ ಪ್ರದೇಶದ ಮಾನವಹಕ್ಕು ಚಳುವಳಿಯ ಚರಿತ್ರೆಯ ಕೆಲವು ಮುಖ್ಯ ಅಧ್ಯಾಯಗಳನ್ನು ನೆನಪಿಸಿಕೊಂಡತೆಯೇ. ಇಲ್ಲಿನ ಸಾಮಾಜಿಕ ಸಂರಚನೆಯ ಭಾಗವಾದ ಶ್ರೇಣಿಕರಣದಿಂದಾಗಿ ಹಿಂದಿನಿಂದಲೂ ಮಾನವ ಹಕ್ಕು ಪರಿಕಲ್ಪನೆಯೇ ಭಾರತೀಯ ಲೋಕದೃಷ್ಟಿಯ ಭಾಗವಾಗಿರಲು ಸಾಧ್ಯವಿರಲಿಲ್ಲ. ‘ವಸುಧೈವ ಕುಟುಂಬಕಂ’ನಂಥ ಮಾತುಗಳು ಆಗಾಗ ಕೇಳಿ ಬರುತ್ತಿದ್ದರೂ ಅಂಥ ಹೇಳಿಕೆಗಳು ಕೇವಲ ಶಬ್ದಗಳಾಗಿ ಉಳಿದಿವೆಯೇ ಹೊರತು ಸಾಮಾಜಿಕ ನೀತಿ, ಆಚರಣೆಗಳಲ್ಲಿ ಸ್ಪಷ್ಟ ರೂಪ ತಳೆಯಲಿಲ್ಲ. ಜಗತ್ತಿನಾದ್ಯಂತ, ಸ್ಪಷ್ಟವಾಗಿ ಪಾಶ್ಚಾತ್ಯ ದೇಶಗಳಲ್ಲಿ ಪ್ರಜಾತಾಂತ್ರಿಕ ಚಳವಳಿಗಳು ಮೈಕೊಡವಿಕೊಂಡು ಜನರ ನಡುವೆ ಎದ್ದು ನಿಂತಿದ್ದರಿಂದ ಮತ್ತು 1948ರ ಡಿಸೆಂಬರ್ 10ರಂದು ವಿಶ್ವಸಂಸ್ಥೆ ಪ್ರಕಟಿಸಿದ ಜಾಗತಿಕ ಮಾನವನ ಹಕ್ಕುಗಳ ಘೋಷಣೆ (ಡಿಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್)ಯಿಂದಾಗಿ ಎಲ್ಲೆಡೆಯೂ ಜನತಾಂತ್ರಿಕ ಆಶೋತ್ತರಗಳು ಮೊಳಗಿದವು. ಅದೇ ಸ್ಫೂರ್ತಿಯಿಂದ ಭಾರತದ ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ಅಭಿವ್ಯಕ್ತಿಗೊಂಡವು. ಭಾರತೀಯ ಸಮಾಜದ ಜಾತಿ ಶ್ರೇಣಿಕರಣದ ವಿರುದ್ಧ ಸಾಂವಿಧಾನಿಕ ಸಮರವನ್ನು ಸಾರಿದ ಡಾ.ಬಿ.ಆರ್. ಅಂಬೇಡ್ಕರರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಸಂವಿಧಾನವು ಮಾನವ ಹಕ್ಕುಗಳಿಗೆ ವೈಯಕ್ತಿಕ ನೀತಿಯಲ್ಲಿ ಮಾತ್ರವಲ್ಲದೆ ಸಾಮುದಾಯಿಕವಾಗಿಯೂ ಬೇಕಾದ ಹೊಸ ವ್ಯಾಖ್ಯಾನವನ್ನು ಒದಗಿಸಿತು.

ಈ ಪ್ರಜಾತಾಂತ್ರಿಕ ಚಿಂತನೆಯನ್ನೇ ಮೂಲದಲ್ಲಿ ಹೊಂದಿದ್ದ ಹಲವು ಸಂಘಟನೆಗಳು ರೂಪುತಳೆದು ಎಲ್ಲ ರೀತಿಯ ಅಸಮಾನತೆಗಳನ್ನು, ದೌರ್ಜನ್ಯಗಳನ್ನು ವಿಮರ್ಶೆಗೆ ಒಳಪಡಿಸಿ ಸಮಾಜದಲ್ಲಿ ಹೊಸ ಅಶಯವನ್ನು ಮೂಡಿಸಲು ಯತ್ನಿಸಿದವು. ಮುಖ್ಯವಾಗಿ ಮಾನವಹಕ್ಕುಗಳ ರಕ್ಷಣೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಮಾನವಹಕ್ಕು ಸಂಸ್ಥೆಗಳಲ್ಲಿ ಆಂಧ್ರಪ್ರದೇಶ್ ಸಿವಿಲ್ ಲಿಬರ್ಟೀಸ್ ಕಮಿಟಿ ಅತ್ಯಂತ ಪ್ರಮುಖವಾದ ಸಂಘಟನೆ. ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಜನರ ಪರವಾಗಿ ಮಾತ್ರವಲ್ಲದೆ, ಆಡಳಿತ ಯಂತ್ರಾಂಗದ ದಾಳಿಗಳಿಗೆ ಗುರಿಯಾದ ಹೋರಾಟಗಾರರು ಅನುಭವಿಸುತ್ತಿದ್ದ ಹಕ್ಕುಗಳ ಉಲ್ಲಂಘನೆಗಳ ಕುರಿತೂ ಸಹ ಈ ಸಂಸ್ಥೆ ತನ್ನ ಸತ್ಯಶೋಧಕ ಸಮಿತಿಗಳ ಮೂಲಕ ದನಿ ಎತ್ತಿತ್ತು. 1974ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ಹಲವಾರು ನಾಯಕರು 1975ರಲ್ಲಿ ಹೇರಲಾದ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಸೆರೆಮನೆವಾಸವನ್ನು ಎದುರಿಸಬೇಕಾಯಿತು ಕೂಡ.

ಪ್ರೊ. ಎಸ್. ಶೇಷಯ್ಯನವರು ವಿಧ್ಯಾರ್ಥಿಯಾಗಿದ್ದಾಗಲೇ ಕ್ರಾಂತಿಕಾರಿ ಚಿಂತನೆ ಮತ್ತು ಚಳುವಳಿಗಳ ಕಡೆಗೆ ಆಕರ್ಷಿತರಾದವರು. ಕಾಲೇಜಿನ ದಿನಗಳಲ್ಲಿ ಅಂದಿನ ಪ್ರಮುಖ ವಿದ್ಯಾರ್ಥಿ ಸಂಘಟನೆಯಾದ ಕ್ರಾಂತಿಕಾರಿ ವಿದ್ಯಾರ್ಥಿ ಸಂಘ (ರೆವಲ್ಯೂಷನರಿ ಸ್ಟುಡೆಂಟ್ಸ್ ಯೂನಿಯನ್-ಆರ್‌ಎಸ್‍ಯು)ದ ನಾಯಕರಾಗಿ ಬೆಳೆದರು. ಅದೇ ಸಮಯದಲ್ಲಿ ತಮ್ಮ ವಿದ್ಯಾಭ್ಯಾಸವನ್ನೂ ಯಶಸ್ವಿಯಾಗಿ ಮುಂದುವರೆಸಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಹಲವು ದಶಕಗಳ ಕಾಲ ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿ ಕಾರ್ಯನಿರ್ವಹಿಸಿದರು.

ಒಂದು ವಿಶ್ವವಿದ್ಯಾಲಯದಲ್ಲಿನ ಅಧ್ಯಾಪಕ ವೃತ್ತಿ ಒದಗಿಸಬಹುದಾದ ಎಲ್ಲ ಸುಖ, ಸವಲತ್ತುಗಳಿಂದ ಕೂಡಿದ ಜೀವನಕ್ಕೆ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳದೆ ಶೇಷಯ್ಯನವರು ಅಂದಿಗೆ ಆ ರಾಜ್ಯದಲ್ಲಿ ಪ್ರಸಿದ್ಧವಾಗಿದ್ದ ಆಂಧ್ರಪ್ರದೇಶ್ ಸಿವಿಲ್ ಲಿಬರ್ಟೀಸ್ ಕಮಿಟಿಯ ಸಕ್ರಿಯ ಕಾರ್ಯಕರ್ತರಾದರು. ತಮ್ಮ ಸಂಘಟನೆಯ ಪರವಾಗಿ, ದೇಶದೆಲ್ಲೆಡೆಗಿಂತ ಹೆಚ್ಚಾಗಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ಮಾನವಹಕ್ಕು ಉಲ್ಲಂಘನೆಯ ಪ್ರಕರಣಗಳನ್ನು ಬಯಲಿಗೆಳೆಯುತ್ತಿದ್ದರು. ಆ ಹೊತ್ತಿಗಾಗಲೇ ಡಾ. ಕೆ. ಬಾಲಗೋಪಾಲ್‍ರಂಥ ನಾಯಕರು ಹಾಕಿಕೊಟ್ಟಿದ್ದ ದಾರಿಯಲ್ಲೇ ಮುನ್ನಡೆದರು.

ಆಂಧ್ರಪ್ರದೇಶದ ಈ ಮಾನವಹಕ್ಕು ಸಂಘಟನೆ ಅಲ್ಲಿನ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ತನ್ನ ವಿರೋಧಿಗಳನ್ನು ‘ಎನ್‍ಕೌಂಟರ್’ಗಳ ಮೂಲಕ ಇಲ್ಲವಾಗಿಸುವುದೇ ಅಲ್ಲದೆ, ಈ ಸಂಘಟನೆಯ ನಾಯಕರ ಮೇಲೆ ಸಹ ದಾಳಿಗಳು ನಡೆದವು. ಗ್ರೀನ್‍ಟೈಗರ್ಸ್, ಕೋಬ್ರಾದಂಥ ಹೆಸರುಗಳನ್ನು ಹೊಂದಿದ್ದ ಪೊಲೀಸ್ ಗುಂಪುಗಳು ಅಥವಾ ಇಲಾಖೆಯ ಬೆಂಬಲವನ್ನು ಪಡೆದಿದ್ದ ಹಂತಕ ಗುಂಪುಗಳು ಮಾನವಹಕ್ಕು ಸಂಘಟನೆಯ ನಾಯಕರನ್ನು ಕೊಲೆ ಮಾಡುವಲ್ಲಿ ನಿರತರಾಗಿದ್ದವು. ಹೈದರಾಬಾದ್ ಕೆ. ಪುರುಷೋತ್ತಂ ಮತ್ತು ನಲ್ಗೊಂಡದಲ್ಲಿ ಆಜಂ ಆಲಿಯಂಥ ನಾಯಕರು (ಅದಕ್ಕೂ ಮೊದಲು ಹತರಾಗಿದ್ದ ನಾಯಕರ ರೀತಿಯಲ್ಲಿ) ಕೊಲೆಗೀಡಾದ ಸಂದರ್ಭದಲ್ಲಿ 1998ರಲ್ಲಿ ಶೇಷಯ್ಯನವರು ಎಪಿಸಿಎಲ್‍ಸಿಯ ಕಾರ್ಯದರ್ಶಿಯಾದರು.

ನಂತರದ ದಿನಗಳಲ್ಲಿ ಆಂಧ್ರಪ್ರದೇಶ ಎರಡು ರಾಜ್ಯಗಳಾಗಿ ವಿಭಜನೆಗೊಂಡು ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಸಿಎಲ್‍ಸಿ (ಸಿವಿಲ್ ಲಿಬರ್ಟೀಸ್ ಕಮಿಟಿ) ಹೆಸರಿನಲ್ಲಿ ಮುಂದುವರೆದ ಸಂಘಟನೆಗಳ ಸಂಯೋಜಕರಾಗಿ ಎರಡೂ ತೆಲುಗು ರಾಜ್ಯಗಳಲ್ಲಿ ಮಾನವಹಕ್ಕು ಚಳವಳಿಯ ನೆಲೆಯನ್ನು ಇನ್ನೂ ಭದ್ರಗೊಳಿಸಿದರು. ಅಲ್ಲದೆ ದೇಶಾದ್ಯಂತ ಸರ್ಕಾರಗಳನ್ನು ವಿರೋಧಿಸಿ ಜೈಲುಸೇರಿದ್ದ ರಾಜಕೀಯ ಬಂದಿಗಳ ಬಿಡುಗಡೆಗಾಗಿ ನಡೆಯುತ್ತಿದ್ದ ಪ್ರಯತ್ನಗಳ ಭಾಗವೂ ಆಗಿದ್ದರು.

ಎಪಿಸಿಎಲ್‍ಸಿಯ ಹಿಂದಿನ ನಾಯಕರ ವಿಷಯದಲ್ಲಿ ನಡೆದಂತೆ ಶೇಷಯ್ಯನವರ ಮೇಲೆ ಸಹ ದಾಳಿ ನಡೆಯಿತು. ರಾಯಲಸೀಮ ಟೈಗರ್ಸ್ ಹೆಸರಿನಲ್ಲಿನ ಒಂದು ಗುಂಪು ಅನಂತಪುರದಲ್ಲಿ ಅವರ ಮನೆಯ ಮೇಲೆ ದಾಳಿ ನಡೆಸಿ ಹೊರಗೆ ನಿಲ್ಲಿಸಿದ್ದ ಕಾರನ್ನು ಧ್ವಂಸಗೊಳಿಸಿತು. ಆದರೆ ಶೇಷಯ್ಯನವರು ಈ ಘಟನೆಯಿಂದಾಗಿ ಧೃತಿಗೆಡದೆ ತಮ್ಮ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂದುವರೆದರು.

ಬೆಂಗಳೂರಿನಲ್ಲಿ 1993ರಲ್ಲಿ ಸ್ಥಾಪನೆಗೊಂಡ ಪ್ರಜಾತಾಂತ್ರಿಕ ಜನರ ವೇದಿಕೆ(ಪಿಡಿಎಫ್)ಗೆ ತುಂಬ ಹತ್ತಿರವಾಗಿದ್ದ ಶೇಷಯ್ಯನವರು ಇದರ ಸದಸ್ಯರಿಗೆ ಆತ್ಮೀಯ ಸ್ನೇಹಿತರಾಗಿದ್ದರು. ನಮ್ಮ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಮತ್ತು ಬೆಂಗಳೂರಿಗೂ ಭೇಟಿ ನೀಡಿದ್ದರು. ಈ ಮೂಲಕ ಅವರು ಕರ್ನಾಟಕದ ಮಾನವಹಕ್ಕು ಚಳವಳಿಗೂ ಸೇರಿದವರಾದರು.

ಪ್ರೊ. ಶೇಷಯ್ಯನವರು ಕೋವಿಡ್‍ಗೆ ಬಲಿಯಾದಾಗ ಅವರಿಗೆ 64 ವರ್ಷ ವಯಸ್ಸು. ಅನಂತಪುರದ ಆಸ್ಪತ್ರೆಯಲ್ಲಿ ಮೊದಲು ದಾಖಲಾಗಿ ನಂತರ ಹೈದರಾಬಾದಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ ಶೇಷಯ್ಯನವರು ಜೀವಂತವಾಗಿ ಅನಂತಪುರಕ್ಕೆ ಮರಳಲಿಲ್ಲ. ಅವರ ಮರಣ ನಿಜವಾದ ಅರ್ಥದಲ್ಲಿ ದೇಶದ ಮಾನವಹಕ್ಕು ಚಳವಳಿಗೆ ತುಂಬಲಾರದ ನಷ್ಟ! ಪಿಡಿಎಫ್‍ನ ಸದಸ್ಯರಾದ ನಮಗೆ ಒಬ್ಬ ಆತ್ಮೀಯ ಗೆಳೆಯನನ್ನು ಕಳೆದುಕೊಂಡ ನೋವು ಕಾಡುತ್ತಿದೆ.

ಶೇಷಯ್ಯನವರಿಗೆ ಗೌರವಪೂರ್ವಕ ನಮನಗಳು.


ಇದನ್ನೂ ಓದಿ: ಶ್ರಧ್ಧಾಂಜಲಿ: ಜನಪರ ಚಳವಳಿಯ ಮಾರ್ಗದರ್ಶಕ – ಧೀರ ಹೋರಾಟಗಾರ ಮಾರುತಿ ಮಾನ್ಪಡೆ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...