Homeಮುಖಪುಟ‘ಸಾಮಾಜಿಕ ನ್ಯಾಯದ ಸಾಧನ ಇಂಗ್ಲಿಷ್ ಕಲಿಕೆ': ವಿ.ಎಲ್.ನರಸಿಂಹಮೂರ್ತಿ

‘ಸಾಮಾಜಿಕ ನ್ಯಾಯದ ಸಾಧನ ಇಂಗ್ಲಿಷ್ ಕಲಿಕೆ’: ವಿ.ಎಲ್.ನರಸಿಂಹಮೂರ್ತಿ

ಎಲ್ಲಿಯವರೆಗೂ ಸಮಾನ ಶಿಕ್ಷಣ ಜಾರಿಯಾಗುವುದಿಲ್ಲವೋ ಅಲ್ಲಿವರೆಗೆ ಎಲ್ಲ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯನ್ನು ಜಾರಿಗೊಳಿಸಲಿ.

- Advertisement -
- Advertisement -

ಯಾವುದೇ ಭಾಷೆಯು ಆ ಭಾಷೆಯನ್ನಾಡುವ ಸಮುದಾಯದ ಅಭಿವೃದ್ಧಿಯ ಸಾಧನವಾಗಬೇಕೇ ಹೊರತು ಕೇವಲ ಸಮುದಾಯದ ಭಾವನಾತ್ಮಕವಾದ ಅಂಗವಾಗಿ ಉಳಿಯಬಾರದು. ನಮ್ಮ ರಾಜ್ಯದಲ್ಲಿ ಕನ್ನಡದ ಬಗೆಗಿನ ಭಾವನಾತ್ಮಕ ಒಲವಿನಿಂದಾಗಿ ಶಾಲಾ ಶಿಕ್ಷಣದಲ್ಲಿ ಇಂಗ್ಲಿಷ್ ಕಲಿಸುವುದರ ಕುರಿತು ಇವತ್ತಿಗೂ ಅಪಾರ ಗೊಂದಲವಿದೆ. ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ಮತ್ತು ಒಂದು ಸಾವಿರ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಪ್ರಾರಂಭಿಸುವ ನಿರ್ಧಾರಗಳನ್ನು ಸರ್ಕಾರಗಳು ಕೈಗೊಂಡ ತಕ್ಷಣ ಕನ್ನಡಪರ ಸಂಘಟನೆಗಳು ಮತ್ತು ಕನ್ನಡದ ಸಾಹಿತಿಗಳು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದನ್ನು ಶುರುಮಾಡಿದರೆ ಕನ್ನಡವು ಒಂದು ಭಾಷೆಯಾಗಿ ಅಳಿಯುತ್ತದೆ ಎನ್ನುವುದು ಇವರ ವಾದ. ನಮ್ಮ ರಾಜ್ಯದಲ್ಲಿ ಗಣನೀಯ ಮಕ್ಕಳು ವ್ಯಾಸಂಗ ಮಾಡುತ್ತಿರುವ ಖಾಸಗಿ ಶಾಲೆಗಳು ಅಧಿಕೃತವಾಗಿ, ಕೆಲವು ಕಡೆ ಅನಧಿಕೃತವಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವುದನ್ನು ಇವರು ಗಂಭೀರವಾಗಿ ತೆಗೆದುಕೊಂಡ ಹಾಗೆ ಕಾಣುವುದಿಲ್ಲ.

ಸರ್ಕಾರಿ ಶಾಲೆಗಳನ್ನ ಕಬಳಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕುವುದಕ್ಕಾಗಲೀ, ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎನ್ನುವ ಕಾರಣ ನೀಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ, ವಿಲೀನಗೊಳಿಸುವ ಪ್ರಕ್ರಿಯೆಯನ್ನು ತಡೆಗಟ್ಟುವುದಕ್ಕಾಗಲೀ, ಅಷ್ಟೇ ಏಕೆ ಇರುವ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ, ಗುಣಮಟ್ಟ ಸುಧಾರಣೆಯ ಬಗ್ಗೆಯಾಗಲೀ ಯಾವತ್ತೂ ಧ್ವನಿ ಎತ್ತದವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದಕ್ಕೆ ಮಾತ್ರ ವಿರೋಧ ವ್ಯಕ್ತಪಡಿಸುತ್ತಾರೆ.

ಬಾಲ್ಯದಲ್ಲಿ ಮಕ್ಕಳಲ್ಲಿ ಸಹಜವಾಗಿರುವ ‘ಲಿಂಗ್ವಿಸ್ಟಿಕ್ ಪ್ಲಾಸಿಸಿಟಿ'(ಭಾಷಾ ಕಲಿಕೆಯ ಸಾಮರ್ಥ್ಯ)ದಿಂದಾಗಿ ಮಕ್ಕಳು ನಾಲ್ಕು ಭಾಷೆಗಳನ್ನು ಸುಲಭವಾಗಿ ಕಲಿಯುತ್ತವೆ ಎನ್ನುವ ಅಂಶ ಸಂಶೋಧನೆಗಳಿಂದ ತಿಳಿದುಬಂದಿದ್ದರೂ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯನ್ನು ಇವರು ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ.

ಇವತ್ತು ಇಂಗ್ಲಿಷ್ ಕಲಿಕೆಯನ್ನು ಕೇವಲ ನಮ್ಮ ಭಾಷೆಯ ಅಳಿವು ಉಳಿವಿನ ಪ್ರಶ್ನೆಯಾಗಿ ಮಾತ್ರ ನೋಡದೆ ಅದಕ್ಕಿರುವ ಸಾಮಾಜಿಕ ಮುಖವನ್ನು ಗಮನಿಸಿದರೆ ಇಂಗ್ಲಿಷ್ ಕಲಿಕೆಯನ್ನು ವಿರೋಧಿಸುವವರ ಹಿಫೊಕ್ರಸಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಏಕೆಂದರೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಬಹುತೇಕ ಮಕ್ಕಳು ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಮತ್ತು ಆದಿವಾಸಿ ಸಮುದಾಯಗಳ ಬಡ ಮಕ್ಕಳು. ಬಹುತೇಕ ಬಡತನ ರೇಖೆಗಿಂತ ಕೆಳಗಿರುವ ಈ ಜನ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವಷ್ಟು ಆರ್ಥಿಕವಾಗಿ ಶಕ್ತರಾಗಿರುವುದಿಲ್ಲ ಮತ್ತು ಮುಕ್ಕಾಲು ಭಾಗ ಖಾಸಗಿ ಶಾಲೆಗಳು ಕಳಪೆಯಾಗಿರುವುದರಿಂದ ಅಂತಹ ಶಾಲೆಗಳಗೆ ಅಪಾರ ಶುಲ್ಕ ತೆತ್ತು ಓದುವುದು ಕೂಡ ನಿರರ್ಥಕ. ಹಾಗಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲೆ ಇಂಗ್ಲಿಷ್ ಕಲಿಸುವುದು ಸೂಕ್ತ. ರಾಜ್ಯದ ಖಾಸಗಿ ಶಾಲೆಗಳಲ್ಲಿ ಓದುವ ಉಳ್ಳವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ನಾಶವಾಗದ ಕನ್ನಡ ಈ ಬಡವರ ಮಕ್ಕಳು ಇಂಗ್ಲಿಷ್ ಓದಿದರೆ ಅದು ಹೇಗೆ ನಾಶವಾಗುತ್ತದೆ ಎನ್ನುವುದನ್ನ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸಿ ತಾವು ಕನ್ನಡ ಶಾಲೆಗಳ ಉಳಿವಿಗೆ ಹೋರಾಡುವ ಹೋರಾಟಗಾರರು, ಸಾಹಿತಿಗಳನ್ನು ಕೇಳಬೇಕು! ಅಥವಾ ನಾಡು, ನುಡಿಯನ್ನು ಉಳಿಸುವ ಜವಾಬ್ದಾರಿಯನ್ನು ಸಮಾಜದ ದುರ್ಬಲ ವರ್ಗಗಳು ಮಾತ್ರ ಹೊರಬೇಕು ಎನ್ನುವುದು ಇವರ ವಾದವಿರಬಹುದೇ?

ಇನ್ನು ನಮ್ಮ ಇತಿಹಾಸವನ್ನು ನೋಡಿದರೆ ಶತಮಾನಗಳ ಕಾಲ ಈ ದೇಶದ ತಳ ಸಮುದಾಯಗಳು ಅಕ್ಷರ ಕಲಿಯುವಿಕೆಯಿಂದಲೇ ವಂಚಿತವಾಗಿದ್ದವು. ಇತಿಹಾಸದುದ್ದಕ್ಕೂ ತಾವು ಮಾತ್ರ ಅಕ್ಷರ ಕಲಿತು ದಲಿತರು, ಹಿಂದುಳಿದವರು, ಆದಿವಾಸಿಗಳನ್ನು ಶಿಕ್ಷಣ ವ್ಯವಸ್ಥೆಯಿಂದ ಸಂಪೂರ್ಣವಾಗಿ ದೂರ ಇಟ್ಟವರ ವ್ಯವಸ್ಥಿತವಾದ ಸಂಚಿಗೆ ಇವತ್ತು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ ಪ್ರಕ್ರಿಯೆ ಬಲಿಯಾಗುತ್ತಿದೆ. ಆಯಾ ಕಾಲಕ್ಕೆ ತಕ್ಕಂತೆ ಆಯಾ ಕಾಲದ ‘ಅಧಿಕಾರದ ಭಾಷೆ’ಯನ್ನು ವಶಪಡಿಸಿಕೊಳ್ಳುವ ವಿದ್ಯೆಯನ್ನು ಕರಗತಮಾಡಿಕೊಂಡಿರುವ ಈ ದೇಶದ ಮೇಲ್ವರ್ಗ ಮೊದಲು ಸಂಸ್ಕೃತ, ಆಮೇಲೆ ಪರ್ಷಿಯನ್, ಈಗ ಇಂಗ್ಲಿಷನ್ನು ತನ್ನ ಸ್ವತ್ತಾಗಿಸಿಕೊಂಡಿದೆ. ದಲಿತ, ಹಿಂದುಳಿದ ಮತ್ತು ಆದಿವಾಸಿ ಸಮುದಾಯಗಳ ಮಕ್ಕಳು ಇಂಗ್ಲಿಷ್ ಶಿಕ್ಷಣ ಪಡೆದರೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿರುವ ತಮ್ಮ ಪ್ರಾಬಲ್ಯವನ್ನು ಕಳೆದುಕೊಳ್ಳುವ ಭಯದಿಂದ ಈ ಮೇಲ್ವರ್ಗ ಸರ್ಕಾರಿ ಶಾಲೆಗಳು ಹಿಂದುಳಿದಿರುವಂತೆ ನೋಡಿಕೊಂಡು ಖಾಸಗಿ ಶಾಲೆಗಳನ್ನ ಬಲಪಡಿಸುತ್ತಿದೆ. ಆ ಮೂಲಕ ಸಮಾಜದ ಬಹುಸಂಖ್ಯಾತರಾಗಿರುವ ದಲಿತ, ಹಿಂದುಳಿದ, ಆದಿವಾಸಿ ಸಮುದಾಯಗಳು ಸೇರಿದಂತೆ ಎಲ್ಲ ಬಡವರನ್ನು ಅಭಿವೃದ್ಧಿಯಿಂದ ವಂಚಿತರನ್ನಾಗಿಸಲಾಗುತ್ತಿದೆ.

ಇವತ್ತು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು, ವೃತ್ತಿಪರ ಶಿಕ್ಷಣ ಪಡೆಯಲು ಇಂಗ್ಲಿಷ್ ಅನಿವಾರ್ಯವಾಗಿದೆ. ಖಾಸಗೀ ಶಾಲೆಗಳಲ್ಲಿ ಓದಿಸುವ ಶಕ್ತಿಯಿಲ್ಲದ ಬಡವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದಿ ಖಾಸಗೀ ಶಾಲೆಗಳಲ್ಲಿ ಓದಿದ ಮಕ್ಕಳ ಜೊತೆ ಸ್ಪರ್ಧಿಸಲಾರದೆ ಎಷ್ಟೋ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ಮಾತಾಡಲು ಬಾರದ ಎಷ್ಟೋ ಬುದ್ಧಿವಂತ ವಿದ್ಯಾರ್ಥಿಗಳು ಕೀಳರಿಮೆ ಅನುಭವಿಸುತ್ತಿದ್ದಾರೆ, ಖಿನ್ನತೆಗೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿನ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕೋರ್ಸ್‍ಗಳನ್ನು ಓದುತ್ತಿರುವ ದಲಿತ, ಹಿಂದುಳಿದ, ಆದಿವಾಸಿ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ ಮತ್ತು ಇಂತಹ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ತಳ ಸಮುದಾಯದ ಪ್ರತಿಭಾವಂತರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶವನ್ನು ಸೃಷ್ಟಿಸಲಾಗುತ್ತಿದೆ. ಇವತ್ತಿಗೂ ಮೇಲುಜಾತಿಗಳ ಹಿಡಿತದಲ್ಲಿರುವ ಸರ್ಕಾರದ ಉನ್ನತ ಹುದ್ದೆಗಳು, ಖಾಸಗಿ ವಲಯದ ಉದ್ಯೋಗಗಳನ್ನು ಪಡೆಯಬೇಕಾದರೆ ತಳ ಸಮುದಾಯಗಳಿಗೆ ಇಂಗ್ಲಿಷ್ ಶಿಕ್ಷಣದ ಅಗತ್ಯವಿದೆ. ಬರೀ ಉದ್ಯೋಗದ ದೃಷ್ಟಿಯಿಂದ ಮಾತ್ರವಲ್ಲದೆ ಜಗತ್ತಿನ ಜ್ಞಾನ ಪಡೆಯುವುದಕ್ಕೆ ಕೂಡ ಈ ಸಮುದಾಯಗಳ ಮಕ್ಕಳು ಇಂಗ್ಲಿಷ್ ಶಿಕ್ಷಣ ಪಡೆಯುವಂತಾಗಬೇಕಿದೆ. ಇಂಗ್ಲಿಷ್ ಕಲಿಯುವುದರ ಮೂಲಕ ಆತ್ಮವಿಶ್ವಾಸ ಬೆಳಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ಸೂಕ್ತ ತರಬೇತಿ ಪಡೆದ ಶಿಕ್ಷಕರು ಸಮರ್ಪಕವಾಗಿ ಇಂಗ್ಲಿಷ್ ಕಲಿಸುವುದನ್ನ ಬೆಂಬಲಿಸಬೇಕಿದೆ.

ಒಂದು ಭಾಷೆಯನ್ನು ಉಳಿಸಿಕೊಳ್ಳುವುದು ಎಷ್ಟು ಮುಖ್ಯವೋ ಆ ಭಾಷೆಯನ್ನಾಡುವ ಜನರು ಉಳಿಯುವುದು ಕೂಡ ಅಷ್ಟೇ ಮುಖ್ಯ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದರಿಂದ ಕನ್ನಡ ಅಳಿಯುವುದಾದರೆ ಖಾಸಗಿ ಶಾಲೆಗಳು ಸೇರಿದಂತೆ ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಏಕರೂಪವಾದ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿ. ಅದಾಗದಿದ್ದರೇ ಎಲ್ಲಿಯವರೆಗೂ ಸಮಾನ ಶಿಕ್ಷಣ ಜಾರಿಯಾಗುವುದಿಲ್ಲವೋ ಅಲ್ಲಿವರೆಗೆ ಎಲ್ಲ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯನ್ನು ಜಾರಿಗೊಳಿಸಲಿ. ಈ ದೇಶದಲ್ಲಿ ಇಂಗ್ಲಿಷ್ ಕೇವಲ ಒಂದು ಜ್ಞಾನದ ಭಾಷೆಯಾಗಿ ಅಷ್ಟೇ ಅಲ್ಲದೆ ಸಾಮಾಜಿಕ ಅಸಮಾನತೆಯ ವಿಮೋಚನೆಯ ಅಸ್ತ್ರವಾಗಿ ಕೂಡ ದಲಿತ, ಹಿಂದುಳಿದ, ಆದಿವಾಸಿಗಳಿಗೆ ನೆರವಾಗಬಲ್ಲದು ಎನ್ನುವುದನ್ನ ಮಾತೃಭಾಷಾ ರಕ್ಷಕರು ಅರ್ಥಮಾಡಿಕೊಳ್ಳಲಿ.

  • ವಿ.ಎಲ್.ನರಸಿಂಹಮೂರ್ತಿ

(ಹೊಸ ತಲೆಮಾರಿನ ಚಿಂತಕ, ಖಾಸಗಿ ಪದವಿ ಪೂರ್ವ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕರು)


ಇದನ್ನೂ ಓದಿ: ಮಗು ಕನಸು ಕಾಣುವ-ಚಿಂತಿಸುವ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಹೋರಾಟದ ಸುತ್ತ..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತಾಯಿನುಡಿಯ/ ಮಾತೃಭಾಷೆಯ ಮಹತ್ವವನ್ನು ಅರಿತಿರುವ ರಾಜಕಾರಣಿಗಳು ಮತ್ತು ರಾಜಕಾರಣಿಗಳು ಹಾಗೂ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಣ ಸಂಸ್ಥೆಗಳ ಮಾಲೀಕರು ದುಡ್ಡು ಮಾಡುವ ದಂದೆಗಾಗಿ ಪರಭಾಷಾ ಇಂಗ್ಲೀಷ್ಗೆ ಆಡಳಿತ ಭಾಷೆ ಹಿಂದಿಗೆ ಶರಣಾಗಿದ್ದಾರೆ.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...