- Advertisement -

ಎಲಿ ವೆಸೆಲ್, ಹಿಟ್ಲರನ ಗ್ಯಾಸ್ ಛೇಂಬರ್‍ಲ್ಲಿ ವರ್ಷಗಟ್ಟಲೆ ನರಳಿ, ಫ್ಯಾಸಿಸ್ಟ್ ಪ್ರಭುತ್ವದ ವಿರಾಟ್ ಕ್ರೌರ್ಯವನ್ನು ಸ್ವತಃ ಅನುಭವಿಸಿ ಬದುಕಿ ಬಂದ ಅಮೆರಿಕ ನಿವಾಸಿ ಯಹೂದಿ ಲೇಖಕ. ಈತ ತನ್ನ `ನೈಟ್’ ಕಾದಂಬರಿಯಲ್ಲಿ ಸಾರ್ವಜನಿಕ ಬದುಕಿನ ಜಾಣ ಮೌನದ ಕುರಿತು ಹೀಗೆ ಬರೆಯುತ್ತಾನೆ. `ತಟಸ್ಥವಾಗಿರುತ್ತೇವೆ ಎಂಬುದು ಒಂದು ನಿಲುವಲ್ಲ. ನಮ್ಮ ಮೌನ ಶೋಷಕರಿಗೆ, ದಮನಿಸುವವರಿಗೆ ಯಾವತ್ತು ಪೂರಕವಾಗಿರುತ್ತದೆಯೇ ಹೊರತು, ಶೋಷಿತರಿಗೆ ನಮ್ಮ ಮೌನದಿಂದ ಯಾವ ಪ್ರಯೋಜನವಾಗದು’ ಮಧ್ಯಮ ಮಾರ್ಗಿಗಳು, ಮಾರ್ಜಾಲ ಮೌನಿಗಳು, ತಟಸ್ಥವಾಗಿರುತ್ತೇವೆ ಎಂಬ ಅನುಕೂಲಸಿಂಧುಗಳ ಕುರಿತು ವೆಸೆಲ್ ಸದಾ ಕಿಡಿಕಾರುತ್ತಲೇ ಬಂದಿದ್ದಾರೆ. ಮೌನ, ಅದರಲ್ಲೂ `ಮಾರ್ಜಾಲ ಮೌನ’ ಎಷ್ಟು ಅಪಾಯಕಾರಿ ಎಂಬುದು ಜಗತ್ತು ಎದುರಿಸುತ್ತಾ ಬಂದಿರುವ ಆತಂಕಕಾರಿ ಸಂದರ್ಭಗಳಲ್ಲೆಲ್ಲ ಸಾಬೀತಾಗುತ್ತಲೇ ಬಂದಿದೆ. ಈಗ ಅದೇ ತರಹದ `ಮಾರ್ಜಾಲ ಮೌನ’ ಇಂಡಿಯಾದ ರಾಜಕಾರಣದ ದಿಕ್ಕುದೆಸೆಗಳನ್ನು ನಮ್ಮೆದುರು ಅನಾವರಣ ಮಾಡುತ್ತಿದೆ. ಈ ಕುರಿತು ಒಂದೆರಡು ಉದಾಹರಣೆಗಳನ್ನು ನೋಡೋಣ.
ಸುಡುವ ವರ್ತಮಾನ
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಾಲ್ಕು ದಿನಗಳ ಪ್ರವಾಸಕ್ಕಾಗಿ ಲಂಡನ್‍ಗೆ ತೆರಳಿದ್ದರು. ಈ ಪ್ರವಾಸ ಎಂದಿನಂತೆ ಮೋದಿಯವರೆಗೆ ಸುಖವಾಗಿರಲಿಲ್ಲ. ಥೇರೆಸಾ ಮೇ ಜೊತೆ ದ್ವಿಪಕ್ಷೀಯ ಮಾತುಕತೆಗಳಲ್ಲಿ ತೊಡಗಿದ್ದ ಸಂದರ್ಭದಲ್ಲಿಯೇ ಲಂಡನ್‍ನ ಪಾರ್ಲಿಮೆಂಟ್ ಸ್ವ್ಕೇರ್‍ನಲ್ಲಿ ಸಾವಿರಾರು ಜನ ಸೇರಿ ‘ಗೋ ಬ್ಯಾಕ್ ಮೋದಿ’ ‘ಮೋದಿ ಗೋ ಹೋಮ್’ ಎಂಬ ಘೋಷಣೆ ಕೂಗುತ್ತ ಬೀದಿಗಿಳಿದಿದ್ದರು. ಅಲ್ಲಿ ಸೇರಿದ್ದ ಜನ ಕೇವಲ ಮೋದಿ ವಿರೋಧಿಗಳಾಗಿರಲಿಲ್ಲ. ‘ಕ್ಯಾಸ್ಟ್ ವಾಚ್ ಯುಕೆ’ ಮತ್ತು ‘ಸೌತ್ ಏಶಿಯನ್ ಸಾಲಿಡಾರಿಟಿ ಗ್ರೂಪ್’ ಎಂಬ ಎರಡು ಪ್ರಮುಖ ಸಂಘಟನೆಗಳಿಗೆ ಸೇರಿದ ಸದಸ್ಯರವರು. ಗೌರಿ ಲಂಕೇಶ್, ದಾಬೋಲ್ಕರ್, ಪನ್ಸಾರೆ ಮತ್ತು ಎಂ ಎಂ ಕಲಬುರ್ಗಿಯವರ ಹತ್ಯೆ, ಕಥುವಾ ಮತ್ತು ಉನ್ನಾವೊಗಳಲ್ಲಿ ನಡೆದ ಘೋರ ಅತ್ಯಾಚಾರ ಮತ್ತು ಕೊಲೆಗಳನ್ನು ಖಂಡಿಸುವುದಕ್ಕಾಗಿ ಈ ಸಂಘಟನೆಗಳು ಮುಂದಾಗಿದ್ದವು. ‘We stand with Modi’s hate and greed’ ಮತ್ತು ‘Modi you have blood in your hand’ ಎಂಬ ಪ್ಲೆಕಾರ್ಡಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು. ನವೀಂದ್ರ ಸಿಂಗ್ ಎಂಬ ಉತ್ಸಾಹಿ ಯುವ ವಕೀಲ ಈ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ. ಈ ಪ್ರತಿಭಟನೆ ಭಾರತದ ಯಾವ ಮೀಡಿಯಾಗಳಲ್ಲೂ ಪ್ರಮುಖ ಸುದ್ದಿಯಾಗುವುದಿರಲಿ, ಕೊನೆ ಪಕ್ಷ ಪ್ರಸಾರವಾಗಲಿಲ್ಲ. ಆದರೆ, ಬೆರಳೆಣಿಕೆಯಷ್ಟಿದ್ದ ಮೋದಿ ಬೆಂಬಲಿಗರು ಮೋದಿಯನ್ನು ಸ್ವಾಗತಿಸುವುದಕ್ಕೆ ಬೀದಿಗಿಳಿದದ್ದನ್ನು ಭಾರತದ ಸುದ್ದಿ ವಾಹಿನಿಗಳು ದಿನಗಟ್ಟಲೆ ಬಿತ್ತರಿಸಿದವು.
ಅಂದು ಸಂಜೆ ಪ್ರಧಾನಿ ಮೋದಿ ವೆಸ್ಟ್‍ಮಿನಿಸ್ಟರ್ ಸೆಂಟ್ರಲ್ ಹಾಲ್‍ನಲ್ಲಿ ‘ಭಾರತ್‍ಕಿ ಬಾತ್ ಸಬ್‍ಕೆ ಸಾತ್’ ಎಂಬ ಚರ್ಚೆಯಲ್ಲಿ ಪಾಲ್ಗೊಂಡರು. ಈ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿದ್ದ National Indian Students and Alumni Union (NISAU) ಸದಸ್ಯರಿಗೆ ಅಧಿಕೃತ ಆಹ್ವಾನವಿದ್ದರೂ, ಆ ವಿದ್ಯಾರ್ಥಿ ಸಂಘಟನೆಯವರು ಮೋದಿಗೆ ಇರಿಸುಮುರಿಸು ಮಾಡಬಹುದೆಂದು, ಕೊನೇ ಗಳಿಗೆಯಲ್ಲಿ ಅವರಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ಲಂಡನ್ನಿನ ಪತ್ರಕರ್ತರು ಭಾರತದ ರಾಜಕಾರಣದಲ್ಲಿ ಆಗುತ್ತಿರುವ ತೀವ್ರ ಬೆಳವಣಿಗೆಯ ಕುರಿತು ಪ್ರಶ್ನೆ ಮಾಡಿದರು. ಆದರೆ ಮೋದಿ ‘ಇಂಡಿಯಾದಲ್ಲಿ ಮಿಲಿಯನ್ ಸಮಸ್ಯೆಗಳಿವೆ, ನಮ್ಮಲ್ಲಿ ಬಿಲಿಯನ್ ಪರಿಹಾರಗಳೂ ಇವೆ’, ‘ನನ್ನ ಕುರಿತ ಟೀಕೆಗಳಿಗೆ ನಾನು ಉತ್ತರಿಸಲು ಹೋಗುವುದಿಲ್ಲ. ಅವುಗಳ ಆಳಕ್ಕೆ ಇಳಿದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂಬಂತಹ ಲೋಕಾಭಿರಾಮದ ಉತ್ತರಗಳನ್ನು ನೀಡಿದರು. ಕಥುವಾ ಮತ್ತು ಉನ್ನಾವದಲ್ಲಿ ಘಟನೆ ಮತ್ತು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ಸ್ಥಳೀಯ ಮುಖಂಡರು ಪ್ರತಿಕ್ರಿಯಿಸಿದ ರೀತಿ, ಇಂಡಿಯಾದಲ್ಲಿ ಮೊಳೆಯುತ್ತಿರುವ ಫ್ಯಾಸಿಸಮ್ ಕುರಿತ ಪ್ರಶ್ನೆಗಳಿಗೆ ಮೋದಿ ಉತ್ತರಿಸಲೇ ಇಲ್ಲ. ತಮ್ಮ ದೇಶಾವರಿ ನಗೆಯ ಮೂಲಕ ಆ ಪ್ರಶ್ನೆಗಳನ್ನು ನಿವಾರಿಸಿಕೊಂಡರು.

ಮೋದಿ ಈ ಹಿಂದೆ ಡೇವಿಡ್ ಕ್ಯಾಮರೂನ್ ಪ್ರಧಾನಿಯಾಗಿದ್ದಾಗ ಲಂಡನ್‍ಗೆ ಭೇಟಿ ನೀಡಿದ್ದಾಗಲೂ ಇದೇ ಬಗೆಯ ಪ್ರತಿಭಟನೆಯನ್ನು ಎದುರಿಸಿದ್ದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿ ಸಮುದಾಯದ ಜೊತೆ ಮೋದಿ ನಡೆಸಬೇಕಿದ್ದ ಸಂವಾದ ಕಾರ್ಯಕ್ರಮವನ್ನು ಕೊನೇ ಗಳಿಗೆಯಲ್ಲಿ ರದ್ದುಪಡಿಸಲಾಯಿತು. ಮೋದಿಯವರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಭೇಟಿಯನ್ನು ವಿರೋಧಿಸಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕುಲಪತಿ ಲೆಸೆಜೆಕ್ ಅವರಿಗೆ ಪತ್ರ ಬರೆದು `ಮೋದಿಯವರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಭಾರತದಲ್ಲಿ ಹೆಚ್ಚಿದ ಅಸಹಿಷ್ಣುತೆ, ಸಾರ್ವಜನಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅಲ್ಲಿನ ಬುದ್ಧಿಜೀವಿಗಳ ಹತ್ಯೆಯನ್ನು ಖಂಡಿಸಿ ಭಾರತದ ಪ್ರತಿಭಾವಂತ ಲೇಖಕರು ಸರ್ಕಾರ ತಮಗೆ ಕೊಟ್ಟಿರುವ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮೋದಿಯವರು ನಮ್ಮ ವಿಶ್ವವಿದ್ಯಾಲಯಕ್ಕೆ ನೀಡುವ ಭೇಟಿಯಿಂದ ವಿಶ್ವವಿದ್ಯಾಲಯದ ಘನತೆಗೆ ಕುಂದುಂಟಾಗುತ್ತದೆ. ಈ ಕಾರಣಕ್ಕಾಗಿ ಮೋದಿಯವರ ವಿಶ್ವವಿದ್ಯಾಲಯದ ಭೇಟಿಯನ್ನು ರದ್ದುಪಡಿಸಿ’ ಎಂದು ಒತ್ತಾಯಿಸಿದ್ದರು. ಪ್ರಾಧ್ಯಾಪಕರ ಈ ಪ್ರತಿಭಟನೆಯಿಂದ ಮೋದಿಯವರ ಕಾರ್ಯಕ್ರಮ ರದ್ದಾಗುತ್ತದೆ. ಆದರೆ ಭಾರತದ ವಿದೇಶಾಂಗ ಇಲಾಖೆಯು, `ಮೋದಿಯವರಿಗೆ ಬಿಡುವಿಲ್ಲದ ಕಾರ್ಯಕ್ರಮಗಳಿದ್ದ ಕಾರಣಕ್ಕಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಭೆಯನ್ನು ರದ್ದುಪಡಿಸಲಾಯಿತು’ ಎಂದು ಸ್ಪಷ್ಟನೆ ನೀಡಿತು. ಈ ಕುರಿತು ಭಾರತದ ವಿದೇಶಾಂಗ ಸಚಿವಾಲಯ ನೀಡಿದ ಸ್ಪಷ್ಟೀಕರಣ ಹಸಿ ಸುಳ್ಳು ಎಂಬುದನ್ನು ಗಾರ್ಡಿಯನ್ ಪತ್ರಿಕೆ ನಂತರ ಸಾಬೀತುಮಾಡಿತು.
ಕಥುವಾ ಮತ್ತು ಉನ್ನಾವದ ಘಟನೆಗಳನ್ನು ಬ್ರಿಟನ್ ಸಂಸತ್‍ನ ಮೇಲ್ಮನೆ, ಹೌಸ್ ಆಫ್ ಲಾರ್ಡಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿ ಗುಟರೆಸ್ ಈ ಅತ್ಯಾಚಾರ ಮತ್ತು ಕೊಲೆಗಳ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಜಗತ್ತಿನ ಬಹುದೊಡ್ಡ ಚಿಂತಕ ನೋಮ್ ಚೋಮ್ಸ್ಕಿ ಜೊತೆ ದೇಶದ ಮತ್ತು ವಿದೇಶದ 600ಕ್ಕೂ ಹೆಚ್ಚು ವಿದ್ವಾಂಸರು ಶ್ರೀಮಾನ್ ಮೋದಿಯವರಿಗೆ ‘ಕಥುವಾ ಮತ್ತು ಉನ್ನಾವೋದಲ್ಲಿ ನಡೆದಿರುವ ಅತ್ಯಾಚಾರ ಮತ್ತು ಕೊಲೆಗಳು ಸಾಮಾನ್ಯ ಅಪರಾಧಿ ಕೃತ್ಯಗಳಲ್ಲ. ಇವು ಸಂಘಟಿತ ಜನಾಂಗೀಯ ಹತ್ಯೆಗಳು. ಈ ಸಂಘಟಿತ ಹಿಂಸೆಯಲ್ಲಿ ನಿಶ್ಚಿತ ಜನಾಂಗೀಯ ದ್ವೇಷ ಅಂತಸ್ಥವಾಗಿದೆ.’ ಎಂದು ಪತ್ರ ಬರೆದಿದ್ದಾರೆ. ಪ್ರಾಯಶಃ ಭಾರತದ ರಾಜಕೀಯ ಇತಿಹಾಸದಲ್ಲಿ ಯಾವ ಪ್ರಧಾನಿಯೂ ಹೀಗೆ ಅಂತಾರಾಷ್ಟ್ರೀಯ ಸಮುದಾಯಗಳಿಗೆ ದಮನಕನಂತೆ ಕಂಡ ಉದಾಹರಣೆಗಳಿಲ್ಲ.

ಕಪಟ ಮೌನದ ಹಿಂದೆ
ಕಥುವಾ ಮತ್ತು ಉನ್ನಾವೊದಂತಹ ಘಟನೆಗಳಿಗೆ ನಮ್ಮ ಪ್ರಧಾನಿಗಳ ಪ್ರಚ್ಛನ್ನ ಮೌನವೇ ಉತ್ತರ. ದಾದ್ರಿ, ಊನಾ ಇತ್ಯಾದಿ ಘಟನೆಗಳ ಕುರಿತು ಅವರು ಇಂದಿಗೂ ಮಾತನಾಡಿಲ್ಲ. ದಿನಬೆಳಗಾಗುವಷ್ಟರಲ್ಲಿ ಎಪ್ಪತ್ತು ಕಂದಮ್ಮಗಳು ಉತ್ತರ ಪ್ರದೇಶದ ಗೋರಖ್‍ಪುರದ ಆಸ್ಪತ್ರೆಯೊಂದರಲ್ಲಿ ಸತ್ತುಹೋದವು. ಆ ಮಕ್ಕಳನ್ನು ಬದುಕಿಸಲು ಪ್ರಯತ್ನಿಸಿದ ಕಫೀಲ್ ಖಾನ್ ಎಂಬ ವೈದ್ಯನ ಮೇಲೆ ಕೊಲೆ ಯತ್ನದ ಕೇಸ್ ಹಾಕಿ ಜೈಲಿಗೆ ಕಳಿಸಲಾಯಿತು. ಸಕಾಲಕ್ಕೆ ಆಕ್ಸಿಜನ್ ಸಿಲಿಂಡರ್ ಒದಗಿಸದ ಸರ್ಕಾರದ ಬಗ್ಗೆ ಮಿ. ಮೋದಿ ಇಂದಿನವರೆಗೂ ಮಾತನಾಡಿಲ್ಲ. ಅರ್ನಾಬ್ ಗೋಸ್ವಾಮಿ ಎಂಬ ಕೂಗುಮಾರಿಯ ಎದುರು ಕೂತು ಕೆಲವು ಮಾತುಗಳನ್ನು ಆಡಿದ್ದರ ಹೊರತಾಗಿ ಇಂದಿಗೂ ಒಂದು ಪತ್ರಿಕಾಗೋಷ್ಠಿಗೂ ಇವರು ಮನಸ್ಸು ಮಾಡಿಲ್ಲ. ‘ಮನ್‍ಕಿ ಬಾತ್’ ಎಂಬ ಕಾರ್ಯಕ್ರಮದಲ್ಲಿ ತಾನು ಒಬ್ಬ ಪ್ರವಾದಿ ಎಂಬ ರೀತಿಯಲ್ಲಿ ಮಾತಾಡುವುದನ್ನು ಬಿಟ್ಟರೆ, ಮೋದಿ ದೇಶದ ಗಂಭೀರ ವಿಷಯಗಳ ಕುರಿತು ಮಾತನಾಡೇ ಇಲ್ಲ. ಸಾಮಾನ್ಯ ಜ್ಞಾನ ಇರುವ ಯಾರೇ ಆಗಲಿ ಈ ‘ಮನ್‍ಕಿ ಬಾತ್’ ಎಂಬ ಮೋದಿಯ ಮಾತುಗಳಲ್ಲಿರುವ ಪೊಳ್ಳು ಆತ್ಮಪ್ರತ್ಯಯವನ್ನು ಗುರುತಿಸಬಲ್ಲರು. ಮೋದಿಯ ಮೌನ ಕೆಲವು ನಿಶ್ಚಿತ ವಿಷಯಗಳಿಗೆ ಮಾತ್ರ ಸೀಮಿತ.
ಕರ್ನಾಟಕದ ಒಂದೆರಡು ಉದಾಹರಣೆಗಳನ್ನು ನೋಡೋಣ. ಉತ್ತರ ಕನ್ನಡದ ಒಬ್ಬ ಅರಿವುಗೇಡಿ ಕೇಂದ್ರ ಮಂತ್ರಿ ‘ಸಂವಿಧಾನವನ್ನು ಬದಲಿಸಲೆಂದೇ ನಾವು ಅಧಿಕಾರಕ್ಕೆ ಬಂದಿರುವುದು’ ಎನ್ನುತ್ತಾನೆ. ಊನಾದಲ್ಲಿ ಹತ್ಯೆಗೀಡಾದ ದಲಿತರನ್ನು ಅಪಘಾತಗಳಲ್ಲಿ ಚಕ್ರಗಳಿಗೆ ಸಿಕ್ಕು ಸಾಯುವ ನಾಯಿಗಳಿಗೆ ಹೋಲಿಸಲಾಗುತ್ತದೆ. ದೇಶದ ಸಾಮಾಜಿಕ ರಾಜಕೀಯ ಆರೋಗ್ಯಕ್ಕಾಗಿ ಬೀದಿಗಿಳಿದು ಪ್ರತಿಭಟಿಸುವ ಪ್ರಜ್ಞಾವಂತರನ್ನು ಬೀದಿ ನಾಯಿಗಳಿಗೆ ಹೋಲಿಕೆ ಮಾಡುತ್ತಾನೆ. ಕೊಡಗಿನ ಕಾಫಿತೋಟದಲ್ಲಿ ಗುಮ್ಮನಂತಿರುವ ಇನ್ನೊಬ್ಬ ಸಂಸದ ಹೆಣ್ಣುಮಕ್ಕಳ ಕುರಿತು ಕೇವಲವಾಗಿ ಮಾತಾಡುತ್ತಾನೆ. ಯಾವದೋ ಕಾರಣಕ್ಕೆ ರಾಜ್ಯದ ಯಾವುದೇ ಮೂಲೆಯಲ್ಲಿ ಒಂದು ಹೆಣ ಬಿದ್ದರೆ ಮುಗಿಯಿತು, ಆ ಹೆಣವನ್ನು ಮುಂದಿಟ್ಟುಕೊಂಡು ಕರಾವಳಿಯ ಕಡೆಯ ಇನ್ನೊಂದು ಕೂಗುಮಾರಿ ಸಂಸದೆ ‘ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತದೆ’ ಎಂದು ಚೀರಾಡಲಾರಂಭಿಸುತ್ತದೆ. ಆಕೆಗೆ ಕೊಲೆಯಾದವನು ಮನುಷ್ಯನಾಗಿ ಕಾಣದೆ, ಆತ ಪಕ್ಷದ ಕಾರ್ಯಕರ್ತನಾಗಿ ಮಾತ್ರ ಕಾಣುತ್ತಾನೆ.

ಕಥುವಾ ಮತ್ತು ಉನ್ನಾವ ಘಟನೆಯ ನಂತರ ದೇಶ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳಲ್ಲಿ ಭುಗಿಲೆದ್ದ ಆಕ್ರೋಶದ ಫಲವಾಗಿ, ಅತ್ಯಾಚಾರಿಗಳಿಗೆ ನೇಣು ಹಾಕುವ ಸುಗ್ರೀವಾಜ್ಞೆಯನ್ನು ತರಲಾಗಿದೆ. ಇಂತಹ ಕಾಯ್ದೆಗಳು ಈಗಾಗಲೆ ಭಾರತದ ಅನೇಕ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿವೆ. ಸಮಸ್ಯೆ ಇರುವುದು ಅವುಗಳ ಅನುಷ್ಠಾನದ ವಿಷಯದಲ್ಲಿ. ಕಥುವಾದಲ್ಲಿ ಶಾಸನಗಳನ್ನು ರೂಪಿಸುವ ಬಿಜೆಪಿಯ ಮಂತ್ರಿಗಳೇ ಅತ್ಯಾಚಾರಿಗಳ ಪರವಾಗಿ ಬೀದಿಗಿಳಿಯುತ್ತಾರೆ ಎಂದರೆ ಏನು ಹೇಳುವುದು?
2012 ರಿಂದ 2016ರವರೆಗೆ ಮಾಡಲಾದ ಸಮೀಕ್ಷೆಯೊಂದರ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ 40,000 ಅತ್ಯಾಚಾರ ಮತ್ತು ಹತ್ಯೆಗಳು ದಾಖಲಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆ ಅತ್ಯಾಚಾರಗಳು ಶೇ 60 ಹೆಚ್ಚಾಗಿವೆ. ಇದರಲ್ಲಿ ಶೇ 40 ರಷ್ಟು ಅತ್ಯಾಚಾರಗಳು ನಡೆದಿರುವುದು ಅಪ್ರಾಪ್ತ ಕಂದಮ್ಮಗಳ ಮೇಲೆ. ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿರುವುದು ‘ಹೆಣ್ಣನ್ನು ದೇವತೆ’ ಎಂದು ಭಾವಿಸುವ/ಪೂಜಿಸುವ ಬಿಜೆಪಿ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ. ಈ ರಾಜ್ಯಗಳಲ್ಲಿ ಯೋಗಿ ಎಂದುಕೊಂಡಿರುವ ಆದಿತ್ಯನಾಥನ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.
‘ಭಾರತದಂತಹ ದೊಡ್ಡ ದೇಶದಲ್ಲಿ ಒಂದೆರಡು ಅತ್ಯಾಚಾರಗಳು ಸಾಮಾನ್ಯ ಅವುಗಳನ್ನು ತಡೆಯಲು ಸಾಧ್ಯವಿಲ್ಲ’ ಎಂದು ತನ್ನದೇ ಪಕ್ಷದ ಸಂಸದನೊಬ್ಬ ಹೇಳಿಕೆ ನೀಡುತ್ತಾನೆ. ಆಗ ಮಿ. ಮೋದಿ, ‘ಇಂತಹ ಹೇಳಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತದೆ. ನೀವೆಲ್ಲ ಮಾಧ್ಯಮಗಳ ಲೇವಡಿಗೆ ಒಳಗಾಗುತ್ತೀರಿ, ಮಾಧ್ಯಮಗಳಿಗೆ ಮಸಾಲೆ ಕೊಡಬೇಡಿ’ ಎಂದು ಪ್ರತಿಕ್ರಿಯಿಸುತ್ತಾರೆ. ದೇಶ, ದೇಶದ ಜನ ಹಾಳಾದರೂ ಚಿಂತೆಯಿಲ್ಲ. ಮೋದಿಗೆ ತನ್ನ ಪಕ್ಷದ ವರ್ಚಸ್ಸು ಮುಖ್ಯ ಎಂದಂತಾಯಿತು. ಮಿ. ಮೋದಿ ತನ್ನ ಸುತ್ತಲ ಫೈರ್‍ಬ್ರಾಂಡ್ ಕೂಗುಮಾರಿಗಳಿಗೆ ಬುದ್ಧಿ ಹೇಳುವುದಿಲ್ಲ. ಯಾವ ರಾಜಕೀಯ ಸೌಜನ್ಯವೂ ಇರದೆ ಸಾರ್ವಜನಿಕ ಸಭೆಗಳಲ್ಲಿ ದ್ವೇಷ ಕಾರುವ ತನ್ನ ಹಿಂಬಾಲಕರ ಕುರಿತು ಮೋದಿ ಮೌನ ಮುರಿಯುವುದಿಲ್ಲ. ಮಿ. ಮೋದಿಯದು ಹಾಲಿನ ಮಡಿಕೆಗೆ ಹೊಂಚುಹಾಕಿ ಕುಳಿತ ಮಾರ್ಜಾಲ ಮೌನ.
– ಅಲ್ಲಮ


