Homeರಾಜಕೀಯಎಂಇಪಿ - ನಾಯಕಿಯ ಬೋಗಸ್ ವೃತ್ತಾಂತ

ಎಂಇಪಿ – ನಾಯಕಿಯ ಬೋಗಸ್ ವೃತ್ತಾಂತ

- Advertisement -
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ವಿಶೇಷ ರಾಜಕೀಯ ಶಕ್ತಿಯೊಂದರ ಪ್ರವೇಶವಾಗಿದೆ. ಅಖಿಲ ಭಾರತ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ (ಎಐಎಂಇಪಿ) ಎಲ್ಲ 224 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಈಗಾಗಲೇ 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಕೂಡ ಬಿಡುಗಡೆ ಮಾಡಿದೆ.  ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ಮೂಲೆಮೂಲೆಗಳಲ್ಲಿ ಎಂಇಪಿ ಪೋಸ್ಟರ್‍ಗಳು ರಾರಾಜಿಸುತ್ತಿವೆ. ಎಂಇಪಿ ನಾಯಕಿಯಾದ ಬುರ್ಖಾಧಾರಿಣಿ ಡಾ. ನೌಹೀರಾ ಶೇಖ್ ಈ ಪೋಸ್ಟರ್‍ಗಳಲ್ಲಿ ಮಿಂಚುತ್ತಿದ್ದಾರೆ. ಪತ್ರಿಕೆಗಳಲ್ಲಿ ಪೂರ್ಣಪುಟದ ಜಾಹಿರಾತು ಕಣ್ಣುಕುಕ್ಕುತ್ತವೆ. ನಾನಾ ಟಿವಿ ಚಾನೆಲ್‍ಗಳಲ್ಲಿ ಈ ಉದ್ಭವ ನಾಯಕಮಣಿಯ ಸಂದರ್ಶನಗಳು ಪ್ರಚಾರಗೊಳ್ಳುತ್ತಿವೆ.
ಇದ್ದಕ್ಕಿದ್ದಂತೆ ದುತ್ತೆಂದು ಉದ್ಭವವಾಗಿರುವ ಈ ಬುರ್ಖಾ ಲೇಡಿ ಯಾರು? ಈ ಪಾರ್ಟಿಯ ಹಿನ್ನೆಲೆಯೇನು ಎಂಬುದು ಬಹುತೇಕ ಮತದಾರರಿಗೆ ಕಾಡುತ್ತಿರುವ ಪ್ರಶ್ನೆ. ಹೀಗೆ ಕುತೂಹಲದಿಂದ ಈ ಬುರ್ಖಾ ಲೇಡಿಯ ಹಿನ್ನೆಲೆ ಕೆದಕಿದರೆ ಅದೊಂದು ಪಾತಕ ಲೋಕ, ಹಾಗೆಯೆ ಆಕೆಯ ದಿಡೀರ್ ರಾಜಕೀಯ ವೇಷದ ಒಳಮರ್ಮ ನೋಡಿದರೆ ಅದೊಂದು ಇತಿಹಾಸ ಕಂಡರಿಯದ ಭಾರೀ ರಾಜಕೀಯ ಷಡ್ಯಂತ್ರ.
ನಾಯಕಿಯ ಸ್ಟೇಜ್ ಮ್ಯಾನೇಜ್‍ಮೆಂಟ್
ಊರೆಲ್ಲಾ ಪೋಸ್ಟರ್ ಹಾಕಿಸಿ, ಸುಸಜ್ಜಿತ ವೇದಿಕೆ ಏರ್ಪಾಟು ಮಾಡಿ, ಬಸ್ ವ್ಯಾನ್‍ಗಳಲ್ಲಿ ಜನರನ್ನು ತಂದು ಜಮಾಯಿಸಿದ ನಂತರ ಬ್ಲಾಕ್ ಕ್ಯಾಟ್‍ಗಳಂತೆ ಡ್ರೆಸ್ ಮಾಡಿಕೊಂಡ ಒಂದಷ್ಟು ಆಗಂತುಕರು ವೇದಿಕೆಯ ಬಳಿ ಪ್ರತ್ಯಕ್ಷರಾಗುತ್ತಾರೆ. ಹಿಂದುಗಡೆಯೇ ಐಷಾರಾಮಿ ಕಾರಿನ ಆಗಮನ. ‘ಬ್ಲಾಕ್ ಕ್ಯಾಟ್’ಗಳು ದೌಡಾಯಿಸಿ ಕಾರನ್ನು ಸುತ್ತುವರೆದು ರಕ್ಷಣಾ ಕೋಟೆ ರಚಿಸಿದ ನಂತರ ಕಪ್ಪು ಬುರ್ಖಾ ಧರಿಸಿದ ಮಹಿಳಾ ನಾಯಕಿ ಕಾರಿನಿಂದ ಇಳಿದು ಸಿನಿಮೀಯ ಶೈಲಿಯಲ್ಲಿ ಜನರತ್ತ ಕೈ ಬೀಸುತ್ತಾ ವೇದಿಕೆಯೇರುತ್ತಾರೆ. ತೆಲುಗು ಸಿನಿಮಾ ಮಾದರಿಯಲ್ಲಿ ಇಡೀ ದೃಶ್ಯ ಸೆಟ್‍ಅಪ್ ಆಗಿರುತ್ತೆ. ಇಂಥಾ ಸೆಟ್‍ಅಪ್ ವೇದಿಕೆಯಲ್ಲಿ ‘ನಾನು ಎಲ್ಲಾ ರಾಜಕಾರಣಿಗಳಂತೆ ಅಲ್ಲ, ರಾಜಕೀಯದಲ್ಲಿರುವ ಅನ್ಯಾಯ, ಅನೀತಿಗಳನ್ನು ನೋಡಿ ನೋಡಿ ರೋಸಿ ಹೋಗಿ, ಇದನ್ನು ಶುದ್ಧ ಮಾಡಲಿಕ್ಕಾಗಿಯೇ ನಾನು ರಾಜಕೀಯ ಪಕ್ಷ ಕಟ್ಟಿದ್ದೇನೆ. ಅಲ್ಲಾನ ಆಶೀರ್ವಾದ ನನ್ನ ಮೇಲಿದೆ. ಇನ್ಶಾ ಅಲ್ಲಾ…’
 ‘ಜಸ್ಟೀಸ್ ಫಾರ್ ಹ್ಯುಮಾನಿಟಿ ಹಮಾರಾ ಸ್ಲೋಗನ್ ಹೈ, ಇನ್ಸಾನೋಂಕೋ ಇನ್ಸಾಫ್ ಲಾನಾ ಹೈ’
ಎಂದು ನಾಯಕಿ ಘೋಷಿಸುತ್ತಿದ್ದರೆ, ಅವರ ಬೆಂಬಲಿಗರು ‘ ನಮ್ಮ ನಾಯಕಿ ಸಾವಿರಾರು ಕೋಟಿಗಳ ಒಡತಿ’ ತಮ್ಮ ಸ್ವಂತ ಹಣದಿಂದಲೇ ದೇಶೋದ್ಧಾರ ಮಾಡಿಬಿಡುತ್ತಾರೆ, ಕಾವೇರಿ ವಿವಾದ ಇರಲಿ, ಮಹಾದಾಯಿ ವಿವಾದ ಇರಲಿ ಎಲ್ಲವನ್ನೂ ಒಂದೇ ಬಾರಿಗೆ ಪರಿಹಾರ ಮಾಡಿಬಿಡ್ತಾರೆ…’ ಎಂದು ಅಂಗೈಯಲ್ಲೇ ಆಕಾಶ ತೋರಿಸುವ ಪ್ರಚಾರ ಶುರುವಿಟ್ಟುಕೊಳ್ಳುತ್ತಾರೆ.
ಇವರ ಸೋಷಿಯಲ್ ಮೀಡಿಯಾ ಪ್ರಚಾರವೂ ಜೋರು. ಎಲ್ಲಾ ಸೇರಿ ಮುಗ್ದ ಮುಸ್ಲಿಂ ಮಹಿಳೆಯರ ನಡುವೆ ಈ ನಾಯಕಿ ‘ಬುರ್ಖಾವಾಲಿ ಆಪಾ’ ಆಗಿ ಜನಪ್ರಿಯತೆ ಗಳಿಸಿದ್ದಾಳೆ. ‘ಮಹಿಳೆಯರ ಉದ್ಧಾರಕ್ಕಾಗಿಯೇ ನಾನು 54 ದೇಶಗಳಲ್ಲಿ ಬ್ಯುಸಿನೆಸ್ ಮಾಡುತ್ತಿದ್ದೇನೆ. ಮಹಿಳೆಯರು ಇನ್ನು ಮುಂದೆ ಕಣ್ಣೀರು ಹಾಕುವ ಅಗತ್ಯವಿಲ್ಲ. ಹೆಣ್ಣುಮಕ್ಕಳಿಗೆ ನರ್ಸರಿಯಿಂದ ಡಿಗ್ರೀವರೆಗೆ ನಾನೇ ಉಚಿತ ಶಿಕ್ಷಣ ಕೊಡಿಸುತ್ತೇನೆ. ಎಷ್ಟೇ ಮಂದಿ ಅನಾಥರಿದ್ದರೂ ಸರಿ ಅವರಿಗೆಲ್ಲ ಅನಾಥಾಶ್ರಮ ಕಟ್ಟುತ್ತೇನೆ. ‘ಪ್ರತಿಯೊಂದು ಏರಿಯಾದಲ್ಲೂ ಫ್ಯಾಕ್ಟರಿ ಓಪನ್ ಮಾಡುತ್ತೇನೆ. ಪ್ರತಿಯೊಬ್ಬ ವಿದ್ಯಾವಂತನಿಗೂ ಉದ್ಯೋಗ ಕೊಡುವ ವ್ಯವಸ್ಥೆ ಮಾಡುತ್ತೇನೆ’. ಸ್ವರ್ಗವನ್ನೇ ಭೂಮಿಗಿಳಿಸಿ ಬಿಡುತ್ತೇವೆಂದು ಹೇಳಿಲ್ಲವೆಂಬುದೇ ನಮ್ಮ ಪುಣ್ಯ.
ನೌವೇರಾ – ಅಸಲಿ ಪುರಾಣ
2015ರ ಆಗಸ್ಟ್‍ನಲ್ಲಿ ಹೈದರಾಬಾದ್ ನಗರದ ಗೊಲ್ಕೊಂಡ ಪೊಲೀಸ್ ಠಾಣೆಯಲ್ಲಿ ಕುತೂಹಲಕಾರಿ ಕೇಸೊಂದು ದಾಖಲಾಯ್ತು. ‘ಸಲ್ಮಾನ್ ಎಂಬುವವನು ನನ್ನಿಂದ 10 ಕೆಜಿ ಚಿನ್ನ ಕದ್ದಿದ್ದಾನೆ, ಅಲ್ಲದೆ ನನ್ನ ಮಗುವನ್ನು ಕಿಡ್ನಾಪ್ ಮಾಡಿದ್ದಾನೆ, ಮತ್ತೆ ಕೋಟಿಗಟ್ಟಲೆ ಹಣಕ್ಕಾಗಿ ಪೀಡಿಸುತ್ತಿದ್ದಾನೆ, ಕೊಡದಿದ್ದರೆ ಮಗುವನ್ನು ಕೊಲ್ಲುವುದಾಗಿ ಬೆದರಿಸುತ್ತಿದ್ದಾನೆ’ ಎಂದು ಮಹಿಳೆಯೊಬ್ಬರು ಕಂಪ್ಲೈಂಟ್ ಕೊಟ್ಟಿದ್ದರು.
ಈ ವಿಶೇಷ ಕೇಸಿನ ಬೆನ್ನುಹತ್ತಿದ ಪೊಲೀಸರು ಸಲ್ಮಾನ್ ಕುಟುಂಬವನ್ನು ಪತ್ತೆಹಚ್ಚಿ ಆತನ ಇಬ್ಬರು ತಮ್ಮಂದಿರ ಸಮೇತ ಬಂಧಿಸಿ ಎಳೆತಂದರು. ತನಿಖೆಯಲ್ಲಿ ಹೊರಬಂದ ಸ್ಫೋಟಕ ವಿಷಯವೇನೆಂದರೆ ಆರೋಪಿ ಸಲ್ಮಾನ್ ದೂರುದಾರ ಮಹಿಳೆಯ ಮೂರನೇ ಗಂಡನೆಂದೂ, ಆ 10 ಕೆಜಿ ಚಿನ್ನ ಕದ್ದಿದ್ದಲ್ಲವೆಂತಲೂ ಬದಲಾಗಿ ಅದು ದುಬೈನಿಂದ ಸ್ಮಗ್ಲಿಂಗ್ ಮಾಡಿ ತಂದ 200 ಕೆಜಿ ಚಿನ್ನದ ಶೇ.5 ರಂತೆ ಬರಬೇಕಿದ್ದ ಕಮಿಷನ್ ಎಂಬ ವಿಚಾರ ಹೊರಬಿತ್ತು. ಕಮಿಷನ್ ಹಣವನ್ನು ಲಪಟಾಯಿಸಲಿಕ್ಕಾಗಿಯೇ ಈಕೆ ನಮ್ಮ ಮೇಲೆ ಸುಳ್ಳು ಕಂಪ್ಲೈಂಟ್ ಕೊಟ್ಟಿದ್ದಾಳೆಂದು ಸಲ್ಮಾನ್‍ನ ತಂದೆ ಅಲ್ಲಾನ ಮೇಲೆ ಆಣೆ ಮಾಡಿ ಹೇಳಿದರು.
ಈ ಕಂಪ್ಲೈಂಟ್ ಕೊಟ್ಟಿದ್ದ ಮಹಿಳೆ ಬೇರೆ ಯಾರೂ ಅಲ್ಲ; ‘ದೇಶೋದ್ಧಾರಕ್ಕಾಗಿ ಎಂಇಪಿ ಕಟ್ಟಿರುವ’ ಇದೇ ನೌಹೀರಾ ಶೇಖ್!! ಇದೇನಿದು ಬಹಳ ವಿಚಿತ್ರವಾಗಿದೆಯಲ್ಲಾ ಅಂತೀರಾ? ಇನ್ನೂ ಮುಂದೆ ಓದಿ, ನಾನಾ ಅಕ್ರಮಗಳಲ್ಲಿ ತೇಲಿ ಮುಳುಗುತ್ತಿರುವ ಈಕೆಗೆ ಈ ಕೇಸು ಲೆಕ್ಕಕ್ಕೇ ಇಲ್ಲ.
ನೌವೇರಾ ಶೇಖ್ ಒಡೆತನದಲ್ಲಿ ಹೀರಾ ಗ್ರೂಪ್ ಆಫ್ ಕಂಪನೀಸ್ ಎಂಬ ಕಂಪನಿ ಕೂಟವೊಂದಿದೆ. ಕಂಪನಿ ವೆಬ್‍ಸೈಟ್‍ನಲ್ಲಿರುವ ಬ್ಯುಸಿನೆಸ್ ಲಿಸ್ಟ್ ನೋಡಿದರೇನೇ ತಲೆ ತಿರುಗಬೇಕು. ಗೋಲ್ಡ್ ಬ್ಯುಸಿನೆಸ್, ರಿಯಲ್ ಎಸ್ಟೇಟ್, ಗ್ರಾನೈಟ್ ಎಕ್ಸ್‍ಪೋಟ್ರ್ಸ್, ಟೆಕ್ಸ್‍ಟೈಲ್ಸ್, ಟೂರ್ಸ್ ಅಂಡ್ ಟ್ರಾವೆಲ್ಸ್, ಹೀರಾ ಇನ್ವೆಸ್ಟ್‍ಮೆಂಟ್ಸ್, ಹೀರಾ ಫೈನಾನ್ಸ್ … ಹೀಗೆ ಟಾಟಾ ಬಿರ್ಲಾಗಳನ್ನೇ ಸರಿಗಟ್ಟುವಂಥಾ ಲಿಸ್ಟ್ ಅದು. ಕಂಪನಿಯ ಯೂಟ್ಯೂಬ್ ಚಾನೆಲ್‍ನಲ್ಲಿ ಕಂಪನಿ ವಿಡಿಯೋಗಳ ರಾಶಿಯೇ ಇದೆ.
ಇಂಥಾ ಪ್ರಚಾರ ವೈಖರಿಗೆ ಮರುಳಾಗಿ ಕಂಪನಿಯಲ್ಲಿ ಹಣ ತೊಡಗಿಸಿದ ಷೇರುದಾರರು 2012ರಲ್ಲೇ ಕೇಸು ದಾಖಲಿಸಿದರು. ಪೊಲೀಸರು ಐಪಿಸಿ 420, 406 ರಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದರು. ಕೇಸಿನ ಸಾರಾಂಶ ಕಂಪನಿಯ ಎಂಡಿ ನೌವೇರಾ ಶೇಖ್ ನೂರಾರು ಹೂಡಿಕೆದಾರರಿಗೆ ಸುಳ್ಳು ಭರವಸೆ ಕೊಟ್ಟು ಕೋಟ್ಯಾಂತರ ಬಂಡವಾಳ ಪಡೆದುಕೊಂಡು, ಅದನ್ನು ಹಿಂದಿರುಗಿಸದೆ ಪಂಗನಾಮ ತಿಕ್ಕಿದ್ದಾರೆ. ಕೇಸು ಇನ್ನೂ ಬಗೆಹರಿದಿಲ್ಲ.
2014ರ ಮೇ ತಿಂಗಳಲ್ಲಿ ಹೈದರಾಬಾದ್‍ನ ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸರು ಖಚಿತ ಮಾಹಿತಿ ಮೇರೆಗೆ ಅಂತರರಾಷ್ಟ್ರೀಯ ಹವಾಲಾ ಗ್ಯಾಂಗ್‍ನ ನಾಲ್ಕು ಮಂದಿಯನ್ನು ರೆಡ್‍ಹ್ಯಾಂಡಾಗಿ ಅರೆಸ್ಟ್ ಮಾಡಿ 84.75 ಲಕ್ಷ ನಗದನ್ನು ವಶಪಡಿಸಿಕೊಂಡರು. ಹವಾಲಾ ಧಂದೆಗೆ ಸಂಬಂಧಿಸಿದ್ದಾಗಿತ್ತೆಂದು ಪೊಲೀಸ್ ಅಧಿಕಾರಿಗಳು ಕೇಸು ಜಡಿದರು. ಬಂಧಿತ ನಾಲ್ವರಲ್ಲಿ ಇಬ್ಬರು ಹೀರಾ ಕಂಪನಿಯ ಸಿಬ್ಬಂದಿಯಾಗಿದ್ದರು. ಇನ್ನಿಬ್ಬರು ಮುಂಬೈ ಮೂಲದವರು. ಪ್ರಮುಖ ಆರೋಪಿ ನೌವೇರಾ ಶೇಖ್ ನಾಪತ್ತೆಯಾಗಿದ್ದು, ದುಬೈನಿಂದ ಈ ಹವಾಲಾ ಧಂಧೆಯನ್ನು ಆಪರೇಟ್ ಮಾಡುತ್ತಿದ್ದಾಳೆಂಬುದು ಕೇಸಿನ ಸಾರಾಂಶ. ಅದೇನು ಡೀಲ್ ಮಹಿಮೆಯೋ ಏನೋ? ಈಗ ಮತ್ತೆ ಭಾರತಕ್ಕೆ ವಕ್ಕರಿಸಿದ್ದಾಳೆ.
ಮಾತೆತ್ತಿದರೆ ‘ಇನ್‍ಷಾ ಅಲ್ಲಾ, ಇನ್‍ಷಾ ಅಲ್ಲಾ’ ಎನ್ನುವ ಈಕೆಯ ಮಾತಿಗೆ ಮರುಳಾದವರನ್ನು ಅಲ್ಲಾನೇ ಕಾಪಾಡಬೇಕು. ಹೀರಾ ಗೋಲ್ಡ್ ಕಂಪನಿಯ ಶೋರೂಂ ಮತ್ತು ಕಂಪನಿಯ ಕಚೇರಿಗಾಗಿ ಹೈದರಾಬಾದ್‍ನ ಆಯಕಟ್ಟಿನ ಜಾಗದಲ್ಲಿರುವ ಅಫಿಯಾ ಪ್ಲಾಜಾÉಂಬ ಕಮರ್ಷಿಯಲ್ ಕಾಂಪ್ಲೆಕ್ಸ್ ಅನ್ನು ಬಾಡಿಗೆಗೆ ಪಡೆದುಕೊಂಡಳು. ಅಲ್ಲಿಗೆ ಆ ಕಾಂಪ್ಲೆಕ್ಸ್‍ನ ಮಾಲಿಕ ಆರಿಫುದ್ದೀನ್‍ರಿಗೆ ಶನಿ ಹೆಗಲಿಗೇರಿದಂತಾಗಿತ್ತು. ಕಟ್ಟಡವನ್ನು ಖರೀದಿ ಮಾಡಿರುವುದಾಗಿ ಫೋರ್ಜರಿ ಡಾಕ್ಯುಮೆಂಟ್ ಸೃಷ್ಟಿಸಿ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದೂ ಅಲ್ಲದೆ, ಕೋಟಿಗಟ್ಟಳೆ ಬ್ಯಾಂಕ್ ಲೋನ್ ಕೂಡ ಎತ್ತಿಬಿಟ್ಟಿದ್ದಳು. ಇಂಡಿಯನ್ ಓವರ್‍ಸೀಸ್ ಬ್ಯಾಂಕ್‍ನವರು ಕಟ್ಟಡ ಹರಾಜು ಹಾಕಲು ಬಂದಾಗಲೇ ಆ ಬಡಪಾಯಿಗೆ ತಾನು ಎಂಥಾ ಖೆಡ್ಡಾಕ್ಕೆ ಬಿದ್ದಿದ್ದೇನೆ ಎಂಬುದು ಅರಿವಾಗಿದ್ದು. ಕಟ್ಟಡವನ್ನು ಬ್ಯಾಂಕ್‍ನಿಂದ ಬಿಡಿಸಿಕೊಳ್ಳಲು ಆರಿಫುದ್ದೀನ್ ಕೋರ್ಟ್ ಕಚೇರಿ ಅಲೆಯುತ್ತಿದ್ದಾರೆ.
ಮತ್ತೊಂದು ಉದಾಹರಣೆ ನೋಡಿ. ಹೀರಾ ಟೂರ್ಸ್ ಅಂಡ್ ಟ್ರಾವೆಲ್ಸ್ ಎಂಬ ಕಂಪನಿ ಇರುವುದಾಗಿ ವೆಬ್‍ಸೈಟ್ ಹೇಳುತ್ತದೆ. ಆದರೆ ಇಲ್ಲಿ ಬಸ್ಸೂ ಇಲ್ಲ, ಕಾರೂ ಇಲ್ಲ; ಬರೀ ರೈಲು ಬಿಟ್ಟಿರೋದು ಅಷ್ಟೇ. ಅಂದರೆ ವಾಸ್ತವದಲ್ಲಿ ಇಂಥಾ ಕಂಪನಿಯೇ ಅಸ್ತಿತ್ವದಲ್ಲಿಲ್ಲ.
ಹೀರಾ ಗ್ರಾನೈಟ್ಸ್ ಎಕ್ಸ್‍ಪೋಟ್ರ್ಸ್ ಎಂಬ ಮತ್ತೊಂದು ಕಂಪನಿ ಲಿಸ್ಟ್‍ನಲ್ಲಿದೆ. ಹತ್ತಾರು ದೇಶಗಳಿಗೆ ತಮ್ಮ ಗ್ರಾನೈಟ್ಸ್ ಎಕ್ಸ್‍ಪೋರ್ಟ್ ಆಗುತ್ತಿದೆ ಎಂದೂ, ಅಂತರರಾಷ್ಟ್ರೀಯ ಗುಣಮಟ್ಟದ ಗ್ರಾನೈಟ್‍ಗಳನ್ನು ತಮ್ಮ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆಯೆಂಬಂತೆ ಬಿತ್ತರಿಸುವ ಆಕರ್ಷಕ ವಿಡಿಯೋ ಒಂದು ಯೂಟ್ಯೂಬ್‍ನಲ್ಲಿದೆ. ಗ್ರಾನೈಟ್ ಫ್ಯಾಕ್ಟರಿ ಹಾಳಾಗಲಿ, ಈ ವಿಡಿಯೋ ಕೂಡ ಪಿಆರ್‍ಪಿ ಗ್ರಾನೈಟ್ಸ್ ಕಂಪನಿಯಿಂದ ಕದ್ದು, ಎಡಿಟ್ ಮಾಡಿ ಹೀರಾ ಗ್ರಾನೈಟ್ಸ್ ಎಂಬುದನ್ನು ಸೇರಿಸಿ ಪ್ರಚಾರ ಮಾಡಿದ್ದು. ಅಂದರೆ ಈಕೆ ಯಾವ ಲೆವೆಲ್‍ನ 420 ಇರಬಹುದು?
ಇತ್ತೀಚೆಗೆ ಈಕೆ ತನ್ನ ಹೆಸರಿನ ಜೊತೆಗೆ ಬಿರುದು ಅಂಟಿಸಿಕೊಂಡು ಡಾಕ್ಟರ್ ನೌಹೀರಾ ಶೇಖ್ ಆಗಿಬಿಟ್ಟಿದ್ದಾರೆ. ಕೊಲಂಬಿಯಾ ಯೂನಿವರ್ಸಿಟಿಯವರು ಈಕೆಗೆ ಡಾಕ್ಟರೇಟ್ ಪದವಿಕೊಟ್ಟು ಗೌರವಿಸಿದ್ದಾರಂತೆ. ಈಕೆ ಹೈಸ್ಕೂಲ್ ಓದಿದ್ದು ಎಲ್ಲಿ? ಕಾಲೇಜು ಓದಿದ್ದು ಎಲ್ಲಿ? ಪದವಿ ಪಡೆದ ಕಾಲೇಜು ಯಾವುದು? ಎಲ್ಲವೂ ನಿಗೂಡ! ಈ ಡಾಕ್ಟರೇಟ್ ಸರ್ಟಿಫಿಕೆಟ್ ಕೂಡ ಫೋರ್ಜರಿ ಮಾಡಿದ್ದೇ? ಈ ಡಾಕ್ಟರ್ ಮಾತ್ರ ಈ ಬಗ್ಗೆ ಎಲ್ಲಿಯೂ ಬಾಯಿಬಿಚ್ಚಿಲ್ಲ.
ಪ್ರಧಾನಿ ಮೋದಿ, ಕೇಂದ್ರ ಸಚಿವೆ ಸ್ಮøತಿ ಇರಾನಿಯಂಥವರ ಡಿಗ್ರಿಗಳು ಅಸಲಿಯೋ ನಕಲಿಯೋ ಎಂಬ ವಿಚಾರ ಸಾರ್ವಜನಿಕ ಚರ್ಚೆಯಲ್ಲಿರುವಾಗ ಇನ್ನು ನೌಹೀರಾ ಶೇಖ್ ಅವರ ಡಿಗ್ರಿ ಸರ್ಟಿಫಿಕೇಟ್ ಬಗ್ಗೆ ಯಾರು ತಲೆಕೆಡಿಸಿಕೊಂಡಾರು ಹೇಳಿ?
ಈಕೆಯ ಸಮಾಜ ಸೇವೆಗೆ ಮೆಚ್ಚಿ ದೇಶವಿದೇಶಗಳಲ್ಲಿ ಹಲವಾರು ಅವಾರ್ಡ್‍ಗಳು ಬಂದಿರುವುದಾಗಿ ವಿಡಿಯೋಗಳನ್ನು ಸೃಷ್ಟಿಸಿದ್ದಾರೆ. ಆ ಅವಾರ್ಡ್‍ಗಳ ಬಗ್ಗೆ ವಿವರಿಸುವ ಅಗತ್ಯವಿಲ್ಲ. ಹತ್ತಾರು ದೇಶಗಳಲ್ಲಿ ವಹಿವಾಟು ನಡೆಸುತ್ತಿರುವುದಾಗಿ ತನ್ನ ವೆಬ್‍ಸೈಟ್‍ನಲ್ಲಿ ಹಾಕಿಕೊಂಡಿರುವ ಬಹುತೇಕ ಕಂಪನಿಗಳು ಅಸಲಿಗೆ ಸೆಬಿ ಸಂಸ್ಥೆಯಲ್ಲಿ ನೋಂದಣಿಯಾದರೂ ಮಾಡಿಸಿದ್ದಾರಾ ಎಂಬುದೇ ಅನುಮಾನ. ಹೀಗೆ ಒಂದಲ್ಲಾ, ಎರಡಲ್ಲ. ಈಕೆಯ ಅವ್ಯವಹಾರಗಳ ಕತೆ ಮುಗಿಯದ ರಾಮಾಯಣ.
ರಾಜಕಾರಣಿಯ ವೇಷದಲ್ಲಿ … 
ಹೀಗೆ ಅಕ್ರಮಗಳ ಕೊಳಚೆಯಲ್ಲೇ ಮುಳುಗಿ ತೇಲುತ್ತಿರುವ ನೌಹೀರಾ ಶೇಖ್‍ರನ್ನು ಜಾರಿ ನಿರ್ದೇಶನಾಲಯ, ಸಿಬಿಐ, ಐಟಿ ಇಲಾಖೆಗಳು ಬೇಟೆಯಾಡಲು ಶುರು ಮಾಡಿದವು. ಈ ನಡುವೆ 2017ರ ಸೆಪ್ಟೆಂಬರ್ 20ರಂದು ಹಲವು ದಿನಪತ್ರಿಕೆಗಳಲ್ಲಿ ಪ್ರಧಾನಿ ಮೋದಿ ಹಾಗೂ ತನ್ನ ಫೊಟೋ ಇರುವ ಜಾಹಿರಾತನ್ನು ಹಾಕಿಸಿಬಿಟ್ಟಳು. ಮೋದಿ ಬುಲೆಟ್ ಟ್ರೈನ್ ಯೋಜನೆ ಘೋಷಿಸಿದ್ದಕ್ಕೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಆ ಜಾಹಿರಾತು ಹಾಕಲಾಗಿತ್ತು. ಈ ಜಾಹಿರಾತು ಐಟಿ ರೈಡು, ಇಡಿ ಕೇಸುಗಳಿಂದ ಬಚಾವಾಗುವ ಪ್ರಯತ್ನವಾಗಿತ್ತು ಎಂಬುದು ಹಲವರ ಗುಮಾನಿ. ಆದರೆ ಇದು ಇಷ್ಟಕ್ಕೇ ನಿಲ್ಲಲಿಲ್ಲ.
2017ರ ನವೆಂಬರ್ 12ರಂದು ನೌಹೀರಾ ಶೇಖ್ ‘ಅಖಿಲ ಭಾರತ ಮಹಿಳಾ ಎಂಪರ್‍ಮೆಂಟ್ ಪಾರ್ಟಿ’ ಎಂಬ ಹೆಸರಿನ ರಾಷ್ಟ್ರೀಯ ಪಕ್ಷವೊಂದನ್ನು ನವದೆಹಲಿಯ ಲಲಿತ್ ಹೋಟೆಲ್‍ನಲ್ಲಿ ಉದ್ಘಾಟಿಸಿದ್ದಾರೆ. ಆ ಕಾರ್ಯಕ್ರಮದ ಅತಿಥಿಗಳಾಗಿ ಸೆಲೆಬ್ರಿಟಿಗಳ ದಂಡೇ ನೆರೆದಿತ್ತು. ಕ್ರಿಕೆಟ್ ತಾರೆ ಅಜರುದ್ದೀನ್, ಟೆನಿಸ್ ತಾರೆ ಸಾನಿಯಾ ಮಿರ್ಜಾ, ಸಿನಿಮಾ ತಾರೆಯರಾದ ಸುನಿಲ್ ಶೆಟ್ಟಿ, ಬಾಬಿ ಡಿಯೊಲ್, ಜೀನತ್ ಅಮಾನ್, ಪೂನಮ್ ದಿಲ್ಲಾನ್, ಫರಾ ಖಾನ್ ಮುಂತಾದವರು ವೇದಿಕೆ ಹಂಚಿಕೊಂಡಿದ್ದರು. ಅಷ್ಟು ಮಾತ್ರವಲ್ಲ, ಬಿಜೆಪಿ ಮುಸ್ಲಿಂ ಮೋರ್ಚಾದ ಹಲವು ನಾಯಕರು ಭಾಗವಹಿಸಿದ್ದರೆಂದು ಮಾದ್ಯಮಗಳು ವರದಿ ಮಾಡಿವೆ. ವಿಶೇಷವಾಗಿ ಗಮನಿಸಬೇಕಾದ ಸಂಗತಿ.
ಹೀಗೆ ದುತ್ತೆಂದು ಉದ್ಭವವಾದ 420 ಕೇಸಿನ ನಾಯಕಿಯ ಪಕ್ಷಕ್ಕೆ ಚುನಾವಣಾ ಆಯೋಗ ಡೈಮಂಡ್ ಚಿಹ್ನೆ ಮಂಜೂರು ಮಾಡಿ ಪುಣ್ಯಕಟ್ಟಿಕೊಂಡಿದೆ. ಆದರೆ ಫಾರ್ವಾರ್ಡ್ ಡೆಮಾಕ್ರಟಿಕ್ ಲೇಬರ್ ಪಾರ್ಟಿ ಎಂಬ ಹೆಸರಿನ ಪಕ್ಷ ಈ ಡೈಮಂಡ್ ಚಿಹ್ನೆ ತಮಗೆ ಸೇರಿದ್ದೆಂದು ಚುನಾವಣಾ ಆಯೋಗಕ್ಕೆ ಈಗಾಗಲೇ ತಕರಾರು ಸಲ್ಲಿಸಿದೆ. ಹೀಗೆ ಪ್ರತಿಯೊಂದು ಹಂತದಲ್ಲೂ ಈ ಎಂಇಪಿ ಮತ್ತು ಅದರ ನಾಯಕಿಯ ಸುತ್ತ ವಿವಾದಗಳದೇ ಭರಾಟೆ.
ದೆಹಲಿಯಲ್ಲಿ ಸ್ಟಾರ್ ಎಫೆಕ್ಟ್ ಉದ್ಘಾಟನೆಯ ನಂತರ ಈ 420 ಕೇಸಿನ ಲೇಡಿ ಸೀದಾ ಕರ್ನಾಟಕಕ್ಕೆ ವಕ್ಕರಿಸಿದೆ. ಇಲ್ಲಿಗೆ ಬಂದಿದ್ದೇ ತಡ, ಬಿಜೆಪಿಯ ಮುಸ್ಲಿಂ ಮಂಚ್‍ನ ಅಧ್ಯಕ್ಷನಾಗಿದ್ದ ಸಯ್ಯದ್ ಅಝರ್ ಅಲಿ ಮತ್ತು ಆತನ ಪಟಾಲಂ ನೌಹೀರಾ ಶೇಖ್‍ಗೆ ಜೊತೆಯಾಗಿಬಿಟ್ಟರು. ಬಿಜೆಪಿ ನಾಯಕರಾದ ಅಶೋಕ್, ಯಡ್ಯೂರಪ್ಪ ಜೊತೆ ವೇದಿಕೆ ಹಂಚಿಕೊಂಡಿದ್ದ ಫರೀದ್ ಬಾನು ಎಂಬ ಹೆಂಗಸು ಈಗ ಎಂಇಪಿ ಪಕ್ಷದ ಮುಸ್ಲಿಂ ಮಹಿಳಾ ಘಟಕದ ಅಧ್ಯಕ್ಷೆ. ಡಿಎಸ್‍ಎಸ್‍ನ ಕೆಲವು ಸ್ಥಳೀಯ ಕಾರ್ಯಕರ್ತರನ್ನು, ಮತ್ತೆ ಕೆಲವು ಪುಡಿ ಪುಕ್ಕ ಪುಡಾರಿಗಳನ್ನೂ ಗುಡ್ಡೆ ಹಾಕಿ ಅವರನ್ನು ವಿವಿಧ ಜಿಲ್ಲೆಯ ಪದಾಧಿಕಾರಿಗಳೆಂದು ಘೋಷಿಸಲಾಯ್ತು. ನಂತರದಲ್ಲಿ ರೇಣುಕಾಚಾರ್ಯ ಜೊತೆ ಭಾರೀ ವಿವಾದಕ್ಕೆ ಕಾರಣವಾಗಿದ್ದ ನರ್ಸ್ ಜಯಲಕ್ಷ್ಮಿ ಕೂಡ ಸೇರ್ಪಡೆಯಾಗಿದ್ದಾರೆ. ಭಾರೀ ಪ್ರಚಾರದೊಂದಿಗೆ ರಾಜ್ಯದಾದ್ಯಂತ ಬಹಿರಂಗ ಸಭೆಗಳನ್ನು ಆಯೋಜಿಸಲಾಗಿದೆ, ಬೆಂಗಳೂರಿನ ಟೌನ್ ಹಾಲ್ ಮತ್ತು ಅರಮನೆ ಮೈದಾನಗಳಲ್ಲೂ ಸಭೆಗಳು ನಡೆದಿವೆ.
ಈ ಒಟ್ಟಾರೆ ವಿದ್ಯಮಾನದ ಹಿನ್ನೆಲೆಯಲ್ಲಿ ಒಂದು ಅಸಲಿ ಪ್ರಶ್ನೆ ಮೂಡುತ್ತದೆ. ಹತ್ತಾರು ವರ್ಷಗಳಿಂದ ಕಣದಲ್ಲಿರುವ, ಬಲಿಷ್ಠ ಸಂಘಟನಾ ಜಾಲ ಹೊಂದಿರುವ ಘಟಾನುಘಟಿ ಪಕ್ಷಗಳೇ ಸಭೆ, ರ್ಯಾಲಿ ನಡೆಸಲು ತಿಣುಕಾಡುತ್ತಿರುವಾಗ ದಿಕ್ಕು ದೆಸೆಯಿಲ್ಲದ ಪಕ್ಷವೊಂದು ಹೀಗೆ ದಿಡೀರ್ ರಾರಾಜಿಸುವುದು ಹೇಗೆ ಸಾಧ್ಯ? ಈ ಎಂಇಪಿಯ ತೆರೆಮರೆಯಲ್ಲಿ ಸಂಘಟಿತ ಶಕ್ತಿಯೊಂದು ಕೆಲಸ ಮಾಡದೇ ಇದ್ದಲ್ಲಿ ಇದೆಲ್ಲಾ ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟ. ಹಾಗಾದರೆ ಯಾವ ಶಕ್ತಿಗೆ ಎಂಇಪಿ ಪ್ರವೇಶದಿಂದ ಲಾಭವಿದೆ?
ವಿಷಯ ಹಗಲಿನಷ್ಟು ಸ್ಪಷ್ಟ. ಈ ಬುರ್ಖಾಧಾರಿಣಿ ತನ್ನ ಮಾತಿನ ಚಮಾತ್ಕಾರದಿಂದ ಒಂದಷ್ಟು ಮುಸ್ಲಿಮರ, ನಿರ್ದಿಷ್ಟವಾಗಿ ಮುಸ್ಲಿಂ ಮಹಿಳೆಯರ ಮತಗಳನ್ನು ಸೆಳೆಯಬಹುದು. ಕಾಂಗ್ರೆಸ್ ಪಕ್ಷಕ್ಕೆ ಇಡುಗಂಟಿನಂತಿರುವ ಈ ಮತಗಳು ಒಡೆದುಹೋದರೆ ಅದರ ಲಾಭ ನೇರ ಬಿಜೆಪಿಗೆ ಮಾತ್ರ. ‘ನಾನಾ ಅಕ್ರಮಗಳಲ್ಲಿ ಸಿಲುಕಿದ್ದ ನೌಹೀರಾ ಶೇಖ್‍ಳನ್ನು ತನಿಖಾ ಸಂಸ್ಥೆಗಳ ಮೂಲಕ ಮಣಿಸಿ, ತಮ್ಮ ಕೈಗೊಂಬೆಯಾಗಿ ಮಾಡಿಕೊಳ್ಳಲಾಗಿದೆ. ಜಾತ್ಯಾತೀತ ಮತಗಳನ್ನು ಒಡೆಯಲಿಕ್ಕಾಗಿಯೇ ಈ ಎಂಇಪಿ ಪಕ್ಷವನ್ನು ಸೃಷ್ಟಿಸಲಾಗಿದೆ.’ ಎಂಬುದು ರಾಜಕೀಯ ವಲಯದಲ್ಲಿ ಜನಜನಿತ ಸುದ್ದಿ.
ಎದುರಾಳಿಗಳ ಮತ ಬ್ಯಾಂಕನ್ನು ಛಿದ್ರಗೊಳಿಸಲು ತಾವೇ ಪ್ರಾಕ್ಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರ ಈ ದೇಶಕ್ಕೆ ತುಂಬಾ ಹಳೆಯದು. ಆದರೆ ಈ ಉದ್ದೇಶಕ್ಕಾಗಿ ಒಂದು ಪಕ್ಷವನ್ನೇ ಸೃಷ್ಟಿಸಿ, ಕಣಕ್ಕಿಳಿಸಬಹುದೆ? ಇಂಥಾ ನಕಾರಾತ್ಮಕ ಪ್ರಯೋಗ ಕರ್ನಾಟಕದಿಂದ ಶುರುವಾಗಿರೋದು ನಮ್ಮ ದೌರ್ಭಾಗ್ಯ.
ಬಿಜೆಪಿ + ಎಂಇಪಿ = ಒಂದೇ ಪ್ಯಾಕೇಜು 
ನಿಪ್ಪಾಣಿ ಕ್ಷೇತ್ರದ ಸಲಗಾದ ಚುನಾವಣಾ ಚೆಕ್‍ಪೋಸ್ಟ್‍ನಲ್ಲಿ ತಪಾಸಣೆ ನಡೆಸುತ್ತಿದ್ದ ಸಿಬ್ಬಂದಿ ಎಂದಿನಂತೆ ಬಸ್ಸೊಂದನ್ನು ತಡೆದರು. ತಪಾಸಣೆ ನಡೆಸಿದ ಸಿಬ್ಬಂದಿಗೆ ಆಶ್ಚರ್ಯ ಕಾದಿತ್ತು. 3,500 ಬಿಜೆಪಿ ಶಾಲುಗಳನ್ನು, 40,000 ಎಂ.ಇ.ಪಿ ಟೋಪಿಗಳನ್ನು ಒಂದೇ ಬಂಡಲ್‍ನಲ್ಲಿ ಪ್ಯಾಕ್ ಮಾಡಲಾಗಿತ್ತು. ಈ ಪ್ರಚಾರ ಸಾಮಗ್ರಿಗಳು ತಯಾರಾಗಿದ್ದೆಲ್ಲಿ? ಪಾರ್ಸಲ್ ಕಳಸಿದವರು ಯಾರು? ಯಾವ ಕ್ಷೇತ್ರಕ್ಕೆ ರವಾನೆಯಾಗಲಿತ್ತು ಎಂಬುದೆಲ್ಲಾ ಸದ್ಯಕ್ಕೆ ನಿಗೂಡ!
ಒಬ್ಬ ಪ್ಯಾಸೆಂಜರ್ ಒಬ್ಬರು ಈ ಪಾರ್ಸಲ್‍ಅನ್ನು ಹಾಕಿದ್ದಾರೆಂದು, ಬಟ್ಟೆಯ ಪಾರ್ಸಲ್ ಎಂದು ತಿಳಿಸಿದ್ದರೆಂಬುದು ಡ್ರೈವರ್‍ನ ಹೇಳಿಕೆ. ಈ ಎರಡೂ ಮೆಟೀರಿಯಲ್‍ಗಳನ್ನು ಒಂದೇ ಕಡೆ ತಯಾರಿಸಿ, ಒಟ್ಟಿಗೆ ಪ್ಯಾಕ್ ಮಾಡಿರುವಂತಿದೆ ಎಂಬುದು ವಶಪಡಿಸಿಕೊಂಡ ಚುನಾವಣಾಧಿಕಾರಿಯ ಅಭಿಪ್ರಾಯ.
ಬಸ್ ಮತ್ತು ಡ್ರೈವರನನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ ಬಿಡಿ. ಅದೆಲ್ಲಾ ಏನೇ ಇರಲಿ, ಎಂಇಪಿ ಎಂಬುದು ಬಿಜೆಪಿಯ ಪೊಲಿಟಿಕಲ್ ಗೇಮ್‍ನ ಒಂದು ದಾಳ ಎಂಬ ಆರೋಪಕ್ಕೆ ಇದೊಂದು ಸಾಂದರ್ಭಿಕ ಸಾಕ್ಷಿಯಷ್ಟೆ.
– ದೊಡ್ಡಿಪಾಳ್ಯ ನರಸಿಂಹಮೂರ್ತಿ
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...