ಜೈಲಿನಲ್ಲಿರುವ ಖೈದಿಗಳ ಮಕ್ಕಳ ಶಿಕ್ಷಣಕ್ಕಾಗಿ ಕೇರಳ ಸರ್ಕಾರ 20 ಲಕ್ಷಗಳ ಆರ್ಥಿಕ ನೆರವು ಘೋಷಿಸಿದ್ದು, ಪ್ರಾಥಮಿಕ ಶಿಕ್ಷಣದ ಸಹಾಯಕ್ಕಾಗಿ ಒಟ್ಟು 15 ಲಕ್ಷ ಮತ್ತು ವೃತ್ತಿಪರ ಶಿಕ್ಷಣಕ್ಕಾಗಿ 5 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವೆ ಕೆ ಕೆ ಶೈಲಜಾ ಇಂದು ತಿಳಿಸಿದ್ದಾರೆ.
ಎಲ್ಲ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಮೂಲಕ ಪರೀಕ್ಷಾರ್ಥವಾಗಿ, ಖೈದಿಗಳ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಕುಟುಂಬದ ಮುಖ್ಯಸ್ಥರು ಅಥವಾ ಕುಟುಂಬಕ್ಕೆ ಆಧಾರವಾಗಿರುವವರು ಜೈಲಿನಲ್ಲಿದ್ದಾಗ, ಮುಗ್ಧ ಮಕ್ಕಳ ಶಿಕ್ಷಣವನ್ನು ಹಠಾತ್ತನೆ ನಿಲ್ಲಿಸಲಾಗುತ್ತದೆ. ಹಾಗಾಗಿ ಅವರ ಅಧ್ಯಯನಕ್ಕೆ ತೊಂದರೆಯಾಗದಂತೆ ಸರ್ಕಾರವು ಯೋಜನೆಯನ್ನು ಜಾರಿಗೊಳಿಸುತ್ತಿದೆ” ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ತರಕಾರಿಗಳಿಗೆ ಬೆಂಬಲ ಬೆಲೆ ಘೋಷಿಸಿದ ದೇಶದ ಮೊದಲ ರಾಜ್ಯ ಕೇರಳ!
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 1 ರಿಂದ 5 ನೇ ತರಗತಿಯಲ್ಲಿ ಕಲಿಯುವವರಿಗೆ ತಿಂಗಳಿಗೆ 300 ರೂ., 6 ರಿಂದ 10 ನೇ ತರಗತಿಯಲ್ಲಿ 500 ರೂ., ಮಾಧ್ಯಮಿಕ ಹಂತದ ಮಕ್ಕಳಿಗೆ 750 ರೂ. ಮತ್ತು ಪದವಿ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್‌ಗಳನ್ನು ಕಲಿಯುವ ಮಕ್ಕಳು ಈ ಸೌಲಭ್ಯವನ್ನು ಪಡೆಯುತ್ತಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ವಿವಿಧ ಕೋರ್ಸ್‌ಗಳಿಗೆ ಶುಲ್ಕ ರಚನೆ ವಿಭಿನ್ನವಾಗಿರುವುದರಿಂದ, ಪ್ರತಿ ವಿದ್ಯಾರ್ಥಿಗೆ ಗರಿಷ್ಠ ಒಂದು ಲಕ್ಷ ರೂ.ಗಳವರೆಗೆ ನೆರವು ನೀಡಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು (ಬಿಪಿಎಲ್) ಈ ಯೋಜನೆಗೆ ಅರ್ಹರಾಗಿರುತ್ತಾರೆ. ಆದಾಗ್ಯೂ, ಪೋಷಕರಿಬ್ಬರೂ ಜೈಲಿನಲ್ಲಿದ್ದರೆ, ಅವರ ಮಕ್ಕಳನ್ನು ರಕ್ಷಿಸುವ ಸಂಬಂಧಿಕರು ಎಪಿಎಲ್ ವರ್ಗಕ್ಕೆ ಸೇರಿದರೂ ಮಕ್ಕಳಿಗೆ ಆರ್ಥಿಕ ನೆರವು ನೀಡಬಹುದು ಎಂದು ಅವರು ಹೇಳಿದರು.
ಜೈಲು ಅಧೀಕ್ಷಕರ ಮೂಲಕ ಸಹಾಯವನ್ನು ವಿತರಿಸಲಾಗುತ್ತದೆ. ಇದನ್ನು ಇಲಾಖೆಯ ನಿರ್ದೇಶಕರು ಅನುಮೋದಿಸಿದರೆ ಈ ಮೊತ್ತವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂದು ಹೇಳಿದರು.
ದಕ್ಷಿಣ ರಾಜ್ಯದ 3 ಕೇಂದ್ರ ಕಾರಾಗೃಹಗಳು ಸೇರಿದಂತೆ ಒಟ್ಟು 54 ಜೈಲುಗಳಲ್ಲಿ 6,000 ಕ್ಕೂ ಹೆಚ್ಚು ಖೈದಿಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ಕೇರಳ: ಸಾಕ್ಷರತಾ ಮಿಷನ್ ಅಡಿಯಲ್ಲಿ 18 ಮಂಗಳಮುಖಿಯರು ಉನ್ನತ ವ್ಯಾಸಾಂಗಕ್ಕೆ ಆಯ್ಕೆ!


