Homeಮುಖಪುಟಬೊಲಿವಿಯಾ ಸೇನೆಯ ರಾಜಕೀಯ ದಂಗೆಗೆ ಚುನಾವಣೆ ಗೆದ್ದು ಉತ್ತರ ನೀಡಿದ ಸಮಾಜವಾದಿ ಎಂಎಎಸ್

ಬೊಲಿವಿಯಾ ಸೇನೆಯ ರಾಜಕೀಯ ದಂಗೆಗೆ ಚುನಾವಣೆ ಗೆದ್ದು ಉತ್ತರ ನೀಡಿದ ಸಮಾಜವಾದಿ ಎಂಎಎಸ್

ರಾಜಿಯಾಗದ ಧೈರ್ಯದಿಂದಲೇ ಎಂಎಎಸ್ ತನ್ನನ್ನು ಬಲಪಡಿಸಿಕೊಂಡು ಅಕ್ಟೋಬರ್ 18, 2020ರ ಚುನಾವಣೆಯಲ್ಲಿ ಭಾರಿ ಜಯ ಸಾಧಿಸಲು ಕಾರಣವಾಯಿತು

- Advertisement -
- Advertisement -

ಹೆಚ್ಚುಕಡಿಮೆ ಒಂದು ವರ್ಷದ ಹಿಂದೆ ಅಂದರೆ, ನವೆಂಬರ್ 10, 2019ರಂದು ಬೊಲಿವಿಯಾದ ಜನತೆಯ ಮೇಲೆ ಮಿಲಿಟರಿ ದಂಗೆಯೊಂದನ್ನು ಹೇರಲಾಯಿತು. ಬೊಲಿವಿಯಾದ ಅಂದಿನ ಅಧ್ಯಕ್ಷ ಈವೋ ಮೊರಾಲೆಸ್ ಅಯ್ಮಾ ರಾಜೀನಾಮೆ ನೀಡಬೇಕೆಂದು ಸೇನಾ ನಾಯಕ ಜನರಲ್ ವಿಲಿಯಮ್ಸ್ ಕಲಿಮನ್ ‘ಸೂಚನೆ’ ನೀಡಿದರು. (ಈ ‘ಸೂಚನೆ’ ವಾಸ್ತವದಲ್ಲಿ ಗಂಭೀರವಾದ ಬೆದರಿಕೆಯಾಗಿತ್ತು.) ತನ್ನ, ತನ್ನ ಕುಟುಂಬ ಮತ್ತು ಪಕ್ಷದ ಸದಸ್ಯರ ಮೇಲೆ ದೈಹಿಕವಾದ ಹಿಂಸಾಚಾರದ ಕೃತ್ಯಗಳು ಮತ್ತು ಬೆದರಿಕೆಗಳ ಹಿನ್ನೆಲೆಯಲ್ಲಿ ಮೊರಾಲೆಸ್ ಅವರು ಅಧ್ಯಕ್ಷತೆಯನ್ನು ತ್ಯಜಿಸಿ, ಮೆಕ್ಸಿಕೊಗೆ ಹೋದರು. ನಂತರದಲ್ಲಿ ಅರ್ಜೆಂಟೀನಾದಲ್ಲಿ ಗಡಿಪಾರು ಜೀವನ ನಡೆಸುತ್ತಿದ್ದಾರೆ.

ಮೊರಾಲೆಸ್ ಅವರು ನಾಲ್ಕನೆಯ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಆಗಬಹುದಾಗಿದ್ದ ಚುನಾವಣೆಯ ಬಳಿಕ ಈ ಸೇನಾ ದಂಗೆ ನಡೆದದ್ದು. ಈ ಚುನಾವಣೆಯ ಫಲಿತಾಂಶವನ್ನು ಆರ್ಗನೈಸೇಷನ್ ಆಫ್ ಅಮೆರಿಕನ್ ಸ್ಟೇಟ್ಸ್ (ಓಎಎಸ್) ಎಂಬ ಸಂಘಟನೆಯ (60 ಶೇಕಡಾ ಹಣಕಾಸು ಯುಎಸ್‍ಎ ಸರಕಾರದಿಂದ ಬರುತ್ತಿದೆ) ಪ್ರಶ್ನಿಸಿತ್ತು. ಮೊರಾಲೆಸ್ ಅವರ ಮೂರನೇ ಅವಧಿಯ ಅಧ್ಯಕ್ಷತೆ ಇನ್ನೂ ಕೆಲವು ತಿಂಗಳುಗಳ ಕಾಲ ಉಳಿದಿತ್ತು ಎಂಬುದು ಕೂಡಾ ಜಗತ್ತಿನಾದ್ಯಂತದ ಉದಾರವಾದಿಗಳಿಗೆ ದೊಡ್ಡ ವಿಷಯವಾಗಿ ಕಾಣಲಿಲ್ಲ. ಅಕ್ಟೋಬರ್ 2019ರ ಚುನಾವಣೆಗಳಲ್ಲಿ ಮೋಸ ನಡೆದಿದೆ ಎಂಬ ವಾಷಿಂಗ್ಟನ್ ಪ್ರೇರಿತ ಓಎಎಸ್ ಅಭಿಪ್ರಾಯವನ್ನೇ ಅವರು ಬೆಂಬಲಿಸಿದರು. ನಂತರ ಈ ಚುನಾವಣೆಗಳಲ್ಲಿ ಯಾವುದೇ ಅಕ್ರಮ ನಡೆದಿರಲಿಲ್ಲ ಎಂದು ಯುಎಸ್‍ಎಯ ರಾಜಕೀಯ ವಿಜ್ಞಾನಿಗಳೇ ತೋರಿಸಿಕೊಟ್ಟರು. ಆದರೂ, ಮೊರಾಲೆಸ್ ಅವರನ್ನು ಹಳೆಯ ಮಾದರಿಯ ಸೇನಾ ಕ್ರಾಂತಿಯ ಮೂಲಕ ಹೊರದಬ್ಬಲಾಯಿತು. ಈಗ ಲ್ಯಾಟಿನ್ ಅಮೆರಿಕದ ಪ್ರಗತಿಪರ ಸರಕಾರಗಳು ಓಎಎಸ್‍ನ ಅಧ್ಯಕ್ಷ ಲೂಯಿಸ್ ಅಲ್ಮಾಗ್ರೋ ರಾಜೀನಾಮೆಗೆ ಒತ್ತಾಯಿಸುತ್ತಿವೆ.

PC : Gossip Gist, (ಈವೋ ಮೊರಾಲೆಸ್ ಅಯ್ಮಾ)

ದೇಶಕ್ಕೆ ‘ಪ್ರಜಾಪ್ರಭುತ್ವ’ ಬಂದಿದೆ ಎಂದು ಹೇಳಿ, ಬೊಲಿವಿಯಾದ ಜನರ ಮೇಲೆ ಭಾರೀ ಪ್ರಮಾಣದ ದಬ್ಬಾಳಿಕೆಯನ್ನು ಹೇರಲಾಗಿದೆ. ಆದರೆ, ಈ ‘ಪ್ರಜಾಪ್ರಭುತ್ವ’ವು ಸ್ಪ್ಯಾನಿಷ್ ಆಕ್ರಮಣಕಾರರ ವಂಶಸ್ಥರ ವಿರುದ್ಧ ವರ್ಗಸಮರವನ್ನು ಎದುರಿಸುತ್ತಿರುವ ಬಹುಸಂಖ್ಯಾತ ಮೂಲನಿವಾಸಿಗಳ ಮೇಲೆ ನಡೆಸಿದ ದಾಳಿಯಾಗಿದೆ. ಕೇಂದ್ರ ಬೊಲಿವಿಯಾದ ವಿಂಟೊ ನಗರದ ಮೇಯರ್ ಹಾಗೂ ಮೊರಾಲೆಸ್ ಅವರ ಪಕ್ಷವಾದ ಮೂವ್‍ಮೆಂಟ್ ಫಾರ್ ಸೋಷಿಯಲಿಸಂ (ಎಂಎಎಸ್) ನಾಯಕಿ ಪ್ಯಾಟ್ರೀಷಿಯಾ ಅರ್ಸ್ ಗುಜ್‌ಮನ್ ಅವರನ್ನು ಗೂಂಡಾಗಳು ಅವರ ಕಚೇರಿಯಿಂದ ಹೊರಗೆಳೆದು ಅವರ ಮೇಲೆ ಕೆಂಪು ಬಣ್ಣವನ್ನು ಎರಚಿ, ನಂತರ ಅವರ ಮೇಲೆ ಪೆಟ್ರೋಲ್ ಸುರಿದು ಅವರ ತಲೆಚಿಪ್ಪಿನ ಒಂದು ಭಾಗ ಕಿತ್ತುಬರುವಂತೆ ಕೂದಲನ್ನು ಕೊಚ್ಚಿಹಾಕಿದರು. ಇವೆಲ್ಲವೂ ಕ್ಯಾಮರಾಗಳ ಮುಂದೆಯೇ ನಡೆಯಿತು. ಆಗಲೂ, “ನಾನು ಹೆದರುವುದಿಲ್ಲ. ನಾನು ಸ್ವತಂತ್ರ ದೇಶದಲ್ಲಿ ವಾಸಿಸುತ್ತಿದ್ದೇನೆ” ಎಂದು ಗುಜ್‌ಮನ್ ದಿಟ್ಟವಾಗಿ ಹೇಳುತ್ತಿದ್ದರು. ಧೈರ್ಯಶಾಲಿಯಾದ ಅವರು ರಾಜೀನಾಮೆ ನೀಡಲು ನಿರಾಕರಿಸಿದರು. ಅವರು ಸ್ವಲ್ಪ ಸಮಯ ಅಡಗಿಕೊಳ್ಳಬೇಕಾಯಿತು. ಆದರೆ, ಎರಡೇ ವಾರಗಳಲ್ಲಿ ಅವರು ತಮ್ಮ ಕಚೇರಿಗೆ ಮರಳಿ ಮೇಯರ್ ಆಗಿ ಅಧಿಕಾರ ವಹಿಸಿಕೊಂಡರು. ಈ ಸೇನಾ ದಂಗೆಯಿಂದ ತಮ್ಮ ಆತ್ಮವಿಶ್ವಾಸವನ್ನು ಕಸಿಯಲು ಅವಕಾಶ ನೀಡದ ಬೊಲಿವಿಯನ್ ಜನರ ಅತೀವವಾದ ಧೈರ್ಯಕ್ಕೆ ಪ್ಯಾಟ್ರೀಷಿಯಾ ಗುಜ್‌ಮನ್ ಪ್ರತಿನಿಧಿಯಾಗಿದ್ದಾರೆ.

ಇದನ್ನೂ ಓದಿ: ಗುಡ್ ನ್ಯೂಸ್: ಬೊಲಿವಿಯಾದಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು!

ಈ ರಾಜಿಯಾಗದ ಧೈರ್ಯದಿಂದಲೇ ಎಂಎಎಸ್ ತನ್ನನ್ನು ಬಲಪಡಿಸಿಕೊಂಡು ಅಕ್ಟೋಬರ್ 18, 2020ರ ಚುನಾವಣೆಯಲ್ಲಿ ಭಾರಿ ಜಯ ಸಾಧಿಸಲು ಕಾರಣವಾಯಿತು. 87% ಅರ್ಹ ಮತದಾರರು ಮತ ಚಲಾಯಿಸಿದ ಈ ಚುನಾವಣೆಯಲ್ಲಿ ಎಂಎಎಸ್‍ನ ಅಧ್ಯಕ್ಷೀಯ ಅಭ್ಯರ್ಥಿ ಲೂಯಿಸ್ ಅರ್ಸ್ ಮತ್ತು ಉಪಾಧ್ಯಕ್ಷೀಯ ಅಭ್ಯರ್ಥಿ ಡೇವಿಡ್ ಚೊಕೆಹುವಾನ್ಸ ಅವರಿಗೆ 55.1% ಮತಗಳು ಬಂದವು. ಇದು ಎರಡನೇ ಸ್ಥಾನದಲ್ಲಿರುವ ತೀವ್ರ ಬಲಪಂಥೀಯ ಅಭ್ಯರ್ಥಿ ಕಾರ್ಲೋಸ್ ಮೆಸ ಪಡೆದ 28.8% ಮತಗಳಿಗಿಂತ ಬಹಳ ಮುಂದಿದೆ. ಇದಕ್ಕಿಂತಲೂ ಹೆಚ್ಚು ಗಮನಾರ್ಹವೆಂದರೆ, ಎಂಎಎಸ್ ಸಂಸತ್ತಿನ ಕೆಳಮನೆಯ 130 ಸ್ಥಾನಗಳಲ್ಲಿ 73ನ್ನು ಮತ್ತು ಸೆನೆಟ್‍ನ 36 ಸ್ಥಾನಗಳಲ್ಲಿ 21 ಸ್ಥಾನಗಳನ್ನು ಗೆದ್ದದ್ದು. 20 ಮಹಿಳಾ ಸೆನೆಟರ್‌ಗಳಲ್ಲಿ ಭಾರೀ ಅಂತರದಿಂದ ಗೆದ್ದವರಲ್ಲಿ ಪ್ಯಾಟ್ರೀಷಿಯಾ ಗುಜ್‌ಮನ್ ಒಬ್ಬರು. “ಕೆಲಸ, ನಮ್ರತೆ ಮತ್ತು ಬೊಲಿವಿಯಾದ ಜನತೆಯ ಬೆಂಬಲದಿಂದ ನಾವು ಏಕತೆ ಮತ್ತು ಧೈರ್ಯದಿಂದ ಬೊಲಿವಿಯಾವನ್ನು ಮರಳಿ ಕಟ್ಟುತ್ತೇವೆ” ಎಂದು ಅವರು ಟ್ವಿಟ್ಟರ್‍ನಲ್ಲಿ ಬರೆದಿದ್ದಾರೆ. ‘ಸೇನಾ ದಂಗೆಯ ಬಳಿಕ ಬೊಲಿವಿಯಾ ಮತ್ತೆ ಚೇತರಿಸುವುದಕ್ಕೆ ನೆರವಾದುದಕ್ಕಾಗಿ’ ಅವರು ಜನತೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

2019ರ ಸೇನಾ ದಂಗೆಯಲ್ಲಿ ನಾಯಕತ್ವದ ಪಾತ್ರ ವಹಿಸಿದ್ದ ಯುಎಸ್‍ಎಯು ಈಗ ಹೊಸ ಸರಕಾರವನ್ನು ಚುಟುಕಾದ ಹೇಳಿಕೆಯ ಮೂಲಕ ಅಭಿನಂದಿಸಿದೆ. ಪರಸ್ಪರ ಹಿತಾಸಕ್ತಿಯ ವಿಷಯಗಳಲ್ಲಿ ಹೊಸ ಸರಕಾರದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿ ಅತಿ ಸಾಮಾನ್ಯ ಹೇಳಿಕೆಯೊಂದನ್ನು ನೀಡಿದೆ.

ಲೂಯಿಸ್ ಅರ್ಸ್ ಮತ್ತು ಚೊಕೆಹುವಾನ್ಸ ಅವರಿಗೆ ಕೈತುಂಬಾ ಕಾರ್ಯಕ್ರಮಗಳಿವೆ. ಇವರ ಹಿಂದಿನ ದಂಗೆ ಕಾಲದ ಸರಕಾರವು ಕೋವಿಡ್-19 ಸೋಂಕಿನ ಸರಪಳಿಯನ್ನು ಮುರಿಯುವ ಅಥವಾ ಅದು ಉಂಟುಮಾಡಿದ ಆರ್ಥಿಕ ಏರುಪೇರಿನಿಂದ ಜನರಿಗೆ ಉಪಶಮನ ನೀಡುವ ಯಾವುದೇ ಪರಿಣಾಮಕಾರಿ ಕ್ರಮಕ್ಕೆ ತಡೆಯೊಡ್ಡಿತ್ತು. ಅರ್ಥಶಾಸ್ತ್ರಜ್ಞರಾದ ಲೂಯಿಸ್ ಆರ್ಸ್ ಅವರು ಈವೋ ಮೊರಾಲೆಸ್ ಕಾಲದಲ್ಲಿ ಆರಂಭವಾದ ಬೊಲಿವಿಯಾದ ಸಮಾಜವಾದಿ ಕಾರ್ಯಕ್ರಮದ ಅನುಷ್ಠಾನಕ್ಕೆ ಕೆಲವು ಮಹತ್ವದ ನೀತಿಗಳನ್ನು ಮುಂದಿಟ್ಟಿದ್ದಾರೆ. ಈ ಧೋರಣೆಗಳಲ್ಲಿ ಐದು ಪ್ರಮುಖ ಅಂಶಗಳಿವೆ.

1. ಹಸಿವಿನ ನಿವಾರಣೆ: ಸೆಪ್ಟೆಂಬರ್‌ನಲ್ಲಿ ಎಂಎಎಸ್ ನಿಯಂತ್ರಿತ ಸೆನೆಟ್ ಸೇನಾ ದಂಗೆಯ ಸರಕಾರದ ಅವ್ಯವಸ್ಥೆ ಮತ್ತು ಕೊರೊನಾ ಪಿಡುಗಿನಿಂದ ಬಾಧಿತರಾದ ಜನತೆಗೆ ಪರಿಹಾರ ನೀಡುವ ಹಲವಾರು ಮಸೂದೆಗಳನ್ನು ಅಂಗೀಕರಿಸಿತ್ತು. ಆರೋಗ್ಯ ಸೇವೆ (Bono Salúd) ಒದಗಿಸುವುದು, ಹಿರಿಯರು ಮತ್ತು ಅಶಕ್ತರಿಗೆ ಸಹಾಯ ಒದಗಿಸುವುದು, ಪ್ರತಿ ಬೊಲಿವಿಯನ್ ವ್ಯಕ್ತಿಗೆ ನಿರ್ದಿಷ್ಟ ಮೊತ್ತವನ್ನು ಖಾತರಿಪಡಿಸುವ ಹಸಿವಿನ ಬಾಂಡ್ (Bono contra el Hambre) ಮೊದಲಾದವುಗಳಿಗೆ ಸಂಬಂಧಿಸಿದ ಮಸೂದೆಗಳು ಇವುಗಳಲ್ಲಿ ಸೇರಿವೆ. ದಂಗೆ ಸರಕಾರವು ಜನತೆಗೆ ತಕ್ಷಣದ ಪರಿಹಾರ ನೀಡಬಹುದಾದ ಈ ಮಸೂದೆಗಳಿಗೆ ಸಹಿಹಾಕಲು ನಿರಾಕರಿಸಿತ್ತು. ತನ್ನ ಸರಕಾರದ ಮೊದಲ ಕೆಲಸವೆಂದರೆ ಈ ಪರಿಹಾರ ಕ್ರಮಗಳನ್ನು ಕಾರ್ಯರೂಪಕ್ಕೆ ಇಳಿಸುವುದು ಎಂದು ಲೂಯಿಸ್ ಅರ್ಸ್ ಹೇಳಿದ್ದಾರೆ.

PC : Twitter (ವಿಲಿಯಮ್ಸ್ ಕಲಿಮನ್)

2. ಕೈಗಾರಿಕೀಕರಣ: ತನ್ನ ಹೆಚ್ಚುಕಡಿಮೆ 14 ವರ್ಷಗಳ ಆಡಳಿತದಲ್ಲಿ (2006-2019) ಮೊರಾಲೆಸ್ ಅವರು ಬೊಲಿವಿಯನ್ ಜನತೆಯ ಜೀವನದ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬಡತನದ ಪ್ರಮಾಣವನ್ನು 38.2%ದಿಂದ 15.2%ಕ್ಕೆ ಇಳಿಸಿದ್ದರು. ಅವರು ಅಧಿಕಾರದಿಂದ ಕೆಳಗಿಳಿಯುವ ತನಕ ನಿರೀಕ್ಷಿತ ಸರಾಸರಿ ಜೀವನಾವಧಿಯು ಒಂಭತ್ತು ವರ್ಷಗಳಷ್ಟು ಏರಿತ್ತು. ಅವರು ಸಾರ್ವತ್ರಿಕ ಆರೋಗ್ಯ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿದ್ದರು. ಬೊಲಿವಿಯನ್ ಸರಕಾರಕ್ಕೆ ಇದು ಸಾಧ್ಯವಾದದ್ದು ಹೆಚ್ಚಾಗಿ ಬಹುರಾಷ್ಟ್ರೀಯ ಗಣಿಗಾರಿಕಾ ಸಂಸ್ಥೆಗಳ ಜೊತೆಗೆ ತಮ್ಮ ದೇಶದ ಹಿತ ಕಾಯುವ ಉತ್ತಮವಾದ ವ್ಯಾವಹಾರಿಕ ಚೌಕಾಸಿಯ ಮೂಲಕ. ಇದೊಂದು ರೀತಿಯ ‘ಸಂಪನ್ಮೂಲ ಸಮಾಜವಾದ’ವಾಗಿತ್ತು.

ಎಂಎಎಸ್ ಕಾರ್ಯಕ್ರಮದ ಮುಂದಿನ ಹಂತವೆಂದರೆ ಆಮದಿಗೆ ಬದಲಾಗಿ ಕೈಗಾರಿಕೀಕರಣ ನಡೆಸುವುದು ಎಂದು ಅರ್ಸ್ ಹೇಳುತ್ತಾರೆ. ಮೂಲಭೂತ ಗ್ರಾಹಕ ಸರಕುಗಳ ಉತ್ಪಾದನೆ ಮೊದಲ ಆದ್ಯತೆಯಾಗಿರುವುದು. ಏಕೆಂದರೆ, ಸುಲಭವಾಗಿ ಉತ್ಪಾದನೆ ಮಾಡಬಹುದಾದ ಇಂತಹ ಸರಕುಗಳ ಆಮದಿನಿಂದ ಬೊಲಿವಿಯಾದ ವಿದೇಶಿ ವಿನಿಮಯ ಮೀಸಲನ್ನು ಕರಗುತ್ತದೆ. ಸೇನಾ ದಂಗೆಗೆ ಮೊದಲು ಮೊರಾಲೆಸ್ ಅವರು ಕ್ವಾಂಟಮ್ ಮೋಟಾರ್ಸ್ ಉತ್ಪಾದಿಸಿದ್ದ ವಿದ್ಯುತ್ ಚಾಲಿತ ಕಾರು ಮತ್ತು ಯಸಿಮೈಂಟೊಸ್ ಡಿ ಲಿಟಿಯೊ ಬೊಲಿವಿಯಾನೋಸ್ ಎಂಬ ಸರಕಾರಿ ಸ್ವಾಮ್ಯದ ಲಿಥಿಯಮ್ ಕಾರ್ಖಾನೆಯನ್ನು ಉದ್ಘಾಟಿಸಿದ್ದರು. ಆದಕ್ಕೆ ಮುನ್ನ ಲಿಥಿಯಂ ಬ್ಯಾಟರಿಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈ ಕಾರ್ಖಾನೆಗಳು ಸ್ವಂತವಾಗಿ ಲಿಥಿಯಂ ಸಂಸ್ಕರಣೆ ಮಾಡಿ ಇ2 ಮತ್ತು ಇ3 ಕಾರುಗಳಿಗೆ ಬ್ಯಾಟರಿಗಳನ್ನು ಉತ್ಪಾದಿಸುವ ಯೋಜನೆ ಹಾಕಿಕೊಂಡವು. ಬಹುಶಃ ಚೀನಾದ ಬೆಂಬಲದೊಂದಿಗೆ, ಮೊದಲಿಗೆ ದೇಶೀಯ ಮಾರುಕಟ್ಟೆಗೆ ಮತ್ತು ನಂತರ ರಫ್ತಿಗಾಗಿ ಈ ಕಾರುಗಳ ಅಭಿವೃದ್ಧಿಗಾಗಿ ಶ್ರಮವಹಿಸುವುದಾಗಿ ಅರ್ಸ್ ಹೇಳಿದ್ದಾರೆ.

3. ಆಹಾರ ಉತ್ಪಾದನೆ: ಆಹಾರ ಪೂರೈಕೆ ಸರಪಳಿ ಕಡಿದುಹೋಗಿರುವುದರಿಂದ ಬೊಲಿವಿಯಾದ ಸಣ್ಣ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯಲು ಒದ್ದಾಡುತ್ತಿದ್ದು, ದೊಡ್ಡ ಪ್ರಮಾಣದ ಕೃಷಿ ಉದ್ಯಮ ಸಂಸ್ಥೆಗಳು ಮಾರುಕಟ್ಟೆಯನ್ನು ಆಕ್ರಮಿಸಿವೆ. ಅವು ಮೂಲಭೂತ ಅಗತ್ಯ ಉತ್ಪನ್ನಗಳಿಗೂ ಹೆಚ್ಚಿನ ದರ ವಿಧಿಸುತ್ತಿವೆ. ಕೊರೊನಾ ಪಿಡುಗು ಆರಂಭವಾಗುವುದಕ್ಕೆ ಮುನ್ನವೇ ಬೊಲಿವಿಯಾ ಹೆಚ್ಚಾಗಿ ವಿದೇಶಿ ಮಾಲೀಕತ್ವದ ಸಂಸ್ಥೆಗಳ ಮೂಲಕ ಬಹುತೇಕ ಅರೆ ಸಂಸ್ಕರಿತ ಸೋಯಾಬೀನ್ (ಹಿಂಡಿ, ಹಿಟ್ಟು ಇತ್ಯಾದಿ) ರಫ್ತು ಮಾಡುತ್ತಿತ್ತು. ಸಣ್ಣ ರೈತರಿಗೆ ತಾಂತ್ರಿಕ ಆವಿಷ್ಕಾರಗಳು ಸಿಗುವಂತೆ ಮಾಡುವುದರ ಮೂಲಕ ಅರ್ಸ್ ಅವರು ಬೊಲಿವಿಯಾದ ಆಹಾರ ಸಾರ್ವಭೌಮತ್ವವನ್ನು ಹೆಚ್ಚಿಸಲು ಬಯಸಿದ್ದಾರೆ.

4. ಸಾಲ ರದ್ದತಿ: ನೆರೆಯ ಅರ್ಜೆಂಟೀನಾವು ಭಾರೀ ಪ್ರಮಾಣದ ಬಾಹ್ಯ ಸಾಲ ಮತ್ತು ಮಾಜಿ ಅಧ್ಯಕ್ಷ ಮೌರಿಸಿಯೋ ಮಾರ್ಸಿ ಅವರ ಅವಧಿಯಲ್ಲಿ (2015-2019) ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) ತೆಗೆದುಕೊಂಡ ಸಾಲ ಮರುಪಾವತಿ ಒತ್ತಡದಲ್ಲಿ ಇರುವುದರಿಂದ ಬೊಲಿವಿಯಾವು ಮುಂದೆ ಇನ್ನಷ್ಟು ಸಾಲಗಳನ್ನು ಪಡೆಯುವುದಿಲ್ಲ ಎಂದು ಅರ್ಸ್ ಶಪಥ ಮಾಡಿದ್ದಾರೆ. ಸಾಲ ಪಡೆಯುವುದರಿಂದ ಬಾಂಡ್‍ಗಳನ್ನು ಹೊಂದುವ ಶ್ರೀಮಂತರ ಮೇಲೆ ದೇಶದ ಅವಲಂಬನೆ ಇನ್ನೂ ಆಳವಾಗುತ್ತದೆ ಎಂಬುದು ಅವರ ಚಿಂತನೆ. ಅದಕ್ಕೆ ಬದಲಾಗಿ ಬೊಲಿವಿಯಾವು ತನ್ನ 11 ಬಿಲಿಯನ್ ಮೊತ್ತದ ಬಾಹ್ಯ ಸಾಲದ ಮರುಸಂಧಾನಕ್ಕೆ ಪ್ರಯತ್ನಿಸಲಿದೆ. ಎರಡು ವರ್ಷಗಳ ಕಾಲ ಸಾಲ ಮರುಪಾವತಿಯನ್ನು ಸ್ಥಗಿತಗೊಳಿಸುವುದರಿಂದ ಹಸಿವು ನಿವಾರಣೆ, ಕೈಗಾರಿಕೀಕರಣ ಮತ್ತು ಆಹಾರ ಉತ್ಪಾದನಾ ಯೋಜನೆಗಳಿಗೆ 1.6 ಬಿಲಿಯನ್ ಡಾಲರುಗಳ ಹಣ ಒದಗುತ್ತದೆ ಎಂದು ಅಂದಾಜು ಮಾಡಲಾಗಿದೆ.

5. ತೆರಿಗೆಗಳು: ಭಾರೀ ಪ್ರಮಾಣದ ಸಂಪತ್ತು ಹೊಂದಿರುವ ಬೊಲಿವಿಯನ್ ಸಮಾಜದ 0.001 ಶೇಕಡಾ ಜನರ ಮೇಲೆ, ಅಂದರೆ 11.5 ಕೋಟಿ ಜನಸಂಖ್ಯೆಯಲ್ಲಿ ಕೇವಲ 113 ವ್ಯಕ್ತಿಗಳ ಮೇಲೆ ತೆರಿಗೆ ವಿಧಿಸುವುದಾಗಿ ಲೂಯಿಸ್ ಅರ್ಸ್ ಹೇಳಿದ್ದಾರೆ. ಇದರಿಂದ ಬೊಕ್ಕಸಕ್ಕೆ ವಾರ್ಷಿಕ 40 ಕೋಟಿ ಡಾಲರ್ ಹರಿದುಬರುವ ನಿರೀಕ್ಷೆಯಿದೆ.

ಎಂಎಎಸ್ ಅಧಿಕಾರಕ್ಕೆ ಬಂದಿರುವುದು ಅರ್ಸ್ ಮತ್ತು ಚೊಕೆಹುವಾನ್ಸ ಜೋಡಿಯ ಕಾರಣದಿಂದ ಮಾತ್ರವೇ ಅಲ್ಲ; ಮೊರಾಲೆಸ್ ಆಡಳಿತವು 14 ವರ್ಷಗಳಲ್ಲಿ ಮಾಡಿದ ಸಾಧನೆಗಳಿಂದಲೂ ಹೌದು. ಮೊರಾಲೆಸ್ ಅಧಿಕಾರಾವಧಿಯಲ್ಲಿ ಜಿಡಿಪಿಯು 46 ಶೇಕಡಾ ವೃದ್ಧಿಯಾಗಿದೆ, ತಲಾವಾರು ಜಿಡಿಪಿಯ ವಾರ್ಷಿಕ 3.2% ಸರಾಸರಿ ಬೆಳವಣಿಗೆಯ ದರದಲ್ಲಿ ಏರಿದೆ. (ಸ್ಥಿರ ಹೂಡಿಕೆಯ ಶೇಕಡಾವಾರನ್ನು ಪರಿಗಣಿಸಿದಲ್ಲಿ ಮೊರಾಲೆಸ್ ಅವಧಿಯಲ್ಲಿ ಬೊಲಿವಿಯಾದ ಜಿಡಿಪಿಯಲ್ಲಿ 14.3 ಶೇಕಡಾದಿಂದ 20.8% ಕ್ಕೆ ಏರಿದೆ.) ಅತಿ ಮುಖ್ಯವಾಗಿ, ಜನರ ಪೌಷ್ಟಿಕತೆ, ಆರೋಗ್ಯ, ಸಾಕ್ಷರತೆ ಮುಂತಾದ ಸಾಮಾಜಿಕ ಮಾನದಂಡಗಳು ಹೆಚ್ಚಿನ ದರದಲ್ಲಿ ಏರಿಕೆಯಾಗಿವೆ.

ಎಂಎಎಸ್ ಈ ಯೋಜನೆಯನ್ನು ಮುಂದುವರಿಸಲಿದೆ ಎಂದು ಅರ್ಸ್ ಹೇಳಿದ್ದಾರೆ. ಆದರೆ, ಸರಕಾರವು ಗಮನಾರ್ಹವಾದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದಾಗಿ ಅಂತರರಾಷ್ಟ್ರೀಯ ಸಾಲ ಉದ್ಯಮವು ಕ್ರಮಬದ್ಧವಾದ ಸಾಲ ಮನ್ನಾ/ವಿನಾಯಿತಿಗೆ ನಿರಾಕರಿಸಿದೆ. ಎರಡನೆಯದಾಗಿ ಎಂಎಎಸ್‍ನ ಯೋಜನೆಯು ಮುಂದುವರಿಯದಂತೆ ತಡೆಯಲು ಯುಎಸ್‍ಎ ಸರಕಾರವು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಬಳಸಲಿದೆ. ಅರ್ಸ್ ಅವರನ್ನು ‘ಮಧ್ಯಗಾಮಿ’ ಎಂದು ಚಿತ್ರಿಸಲು ಮತ್ತು ಅವರ ಹಾಗೂ ಮೊರಾಲೆಸ್ ಅವರ ನಡುವೆ ಗೆರೆ ಎಳೆಯುವುದು ಅಸಾಧ್ಯ ಎಂಬುದು ವಾಷಿಂಗ್ಟನ್‍ನಲ್ಲಿ ವ್ಯಾಪಕವಾಗಿ ಮಾನ್ಯವಾಗಿದೆ. ಅರ್ಸ್ ಅವರು ಬೊಲಿವಿಯಾದ ವಿದೇಶಾಂಗ ಧೋರಣೆಯನ್ನು ಲಿಮಾ ಗುಂಪು ಮತ್ತಿತರ ಬಲಪಂಥೀಯ ಗುಂಪುಗಳಿಂದ ಹೊರತಂದು ವೆನೆಜ್ಯುವೆಲಾ ಮತ್ತು ಕ್ಯೂಬಾದ ಮಾದರಿಗೆ ಮರಳಿ ತರುವುದು ಖಂಡಿತ. ಸರಕಾರಿ ಬಾಂಡ್‍ಗಳನ್ನು ಹೊಂದಿರುವ ಶ್ರೀಮಂತರು ಮತ್ತು ಯುಎಸ್‍ಎ ಸರಕಾರ ಜೊತೆಸೇರಿ ಅರ್ಸ್ ಅವರ ವಿವೇಕಯುತ ಎಡಪಂಥೀಯ ಕಾರ್ಯಕ್ರಮದ ಅನುಷ್ಠಾನವನ್ನು ಕಠಿಣಗೊಳಿಸಲಿದ್ದಾರೆ.

ಇಲ್ಲಿ ಚೀನಾ ಪ್ರವೇಶ ಮಾಡಲಿದೆ. ಚೀನಾ ಮತ್ತು ಬೊಲಿವಿಯಾ ಈಗಾಗಲೇ ಸ್ಥಿರವಾದ ವಾಣಿಜ್ಯ ಪಾಲುದಾರಿಕೆ ಹೊಂದಿವೆ. ಅವುಗಳಲ್ಲಿ ಲಿಥಿಯಂ ಅಭಿವೃದ್ಧಿ, ಜಲವಿದ್ಯುತ್ ವಿಸ್ತರಣೆ (Rositas project), ಹೆದ್ದಾರಿ ನಿರ್ಮಾಣ (El Espino highway project) ಮತ್ತು 2013ರಲ್ಲಿ ಉಡ್ಡಯನ ಮಾಡಲಾದ ಟುಪಾಕ್ ಕಟಾರಿ ದೂರ ಸಂಪರ್ಕ ಉಪಗ್ರಹ ಇತ್ಯಾದಿ ಸೇರಿವೆ. ಈ ಯೋಜನೆಗಳಿಗೆ ಚೀನಾದ ಬ್ಯಾಂಕ್‍ಗಳ ಸಾಲ ಮತ್ತು ಬೊಲಿವಿಯಾದ ಸ್ವಂತ ಉಳಿತಾಯದಿಂದ ಹಣ ಒದಗಿಸಿಕೊಳ್ಳಲಾಗಿದೆ.

ಆದರೆ ಈಗ ಕೇವಲ ವಾಣಿಜ್ಯ ಪಾಲುದಾರಿಕೆಗಿಂತ ಹೆಚ್ಚಾಗಿ ಆಳವಾದ ಅಭಿವೃದ್ಧಿಯ ಅಗತ್ಯವಿದೆ. ಅದರಲ್ಲಿ ಬೊಲಿವಿಯಾದ ಲಿಥಿಯಂ ಸಂಪನ್ಮೂಲದಿಂದ ಅದರ ಕೈಗಾರಿಕೀಕರಣಕ್ಕೆ ಆರ್ಥಿಕ ನೆರವು, ಬೊಲಿವಿಯಾದ ಆಹಾರ ಸಾರ್ವಭೌಮತೆಯ ವಿಸ್ತರಣೆ ಕೂಡ ಸೇರಿರಬೇಕು. ಚೀನಾದ ವಾಣಿಜ್ಯ ಸಚಿವಾಲಯ ಮತ್ತು ಚೈನೀಸ್ ಎಕ್ಸ್‌ಪೋರ್ಟ್ ಅಂಡ್ ಕ್ರೆಡಿಟ್ ಇನ್ಶೂರೆನ್ಸ್ ಕಾರ್ಪೋರೇಷನ್ (ಸಿನೋಶೂರ್) ಈಗಾಗಲೇ ಅತ್ಯಂತ ಸಾಲ ಹೊಂದಿರುವ ದೇಶಗಳಿಗೆ ಇನ್ನೂರಕ್ಕೂ ಹೆಚ್ಚು ಬಾರಿ ಶೂನ್ಯ ಬಡ್ಡಿಯ ಸಾಲ (ಮೂರು ಬಿಲಿಯನ್ ಡಾಲರ್ ಮೊತ್ತದ) ನೀಡಿದೆ. ಇದು ಚೀನಾ ಸಾಲ ನೀಡಿದ ಮೊತ್ತದ ಐದು ಶೇಕಡಾ ಮಾತ್ರ. ಇದರಲ್ಲಿ 85% ನಷ್ಟನ್ನು ರದ್ದು ಮಾಡಲಾಗಿದೆ, ಅಂದರೆ ಈ ಮೊತ್ತ ಬಹುಪಾಲು ಅನುದಾನ ಎಂದಾಗುತ್ತದೆ. ಅರ್ಸ್ ಅವರ ಕಾರ್ಯಕ್ರಮಕ್ಕೆ ಬೊಲಿವಿಯಾವನ್ನು ಸಾಲದ ಅವಲಂಬನೆಗೆ ತಳ್ಳಿದೆ ಅಂದರೆ, ವಾಣಿಜ್ಯ ವಲಯ ಅಥವಾ ವಿಶ್ವ ಬ್ಯಾಂಕ್ ಹೊರತಾದ ಹೆಚ್ಚುವರಿ ಹಣಕಾಸಿನ ಅಗತ್ಯವಿದೆ.

ಮೊರಾಲೆಸ್ ಅವರ ಜೊತೆ ಕೆಲಸ ಮಾಡಿದ್ದ ಜುಆನ್ ಕಾರ್ಲೋಸ್ ಪಿಂಟೋ ಕ್ವಿಂಟಾನಿಲ್ಲ ಅವರು ‘ಪೀಪಲ್ಸ್ ಡಿಸ್‍ಪ್ಯಾಚ್’ಗೆ ಹೇಳಿದಂತೆ, ಎಂಎಎಸ್ ಯೋಜನೆಯು ‘ರಾಜಕೀಯ ಕ್ಷಿತಿಜದ ಗ್ರಹಿಕೆ’ಯನ್ನು ಆಳಗೊಳಿಸಬೇಕು, ಕಾರ್ಯಕ್ರಮದಲ್ಲಿ ಜನತೆಯ ಪಾಲುಗೊಳ್ಳುವಿಕೆಯನ್ನು ಹೆಚ್ಚಿಸಬೇಕು, ಯೋಜನೆಯ ಸಮಗ್ರತೆಯ ಕುರಿತು ಜಾಗೃತಿ ಮೂಡಿಸಬೇಕು ಎಂದಿದ್ದಾರೆ. ಇಂತಹ ವಿಕೇಂದ್ರೀಕೃತ ಗ್ರಹಿಕೆ ಸಾಧ್ಯವಾದರೆ, ಹೊಸ ಪೀಳಿಗೆಯ ಬೊಲಿವಿಯನ್ನರು ನಿಜವಾಗಿಯೂ ತಮ್ಮದೇ ಆದ ಈ ಕಾರ್ಯಕ್ರಮವನ್ನು ರಕ್ಷಿಸುವುದನ್ನು ಖಾತರಿಪಡಿಸುತ್ತದೆ.

ಬೊಲಿವಿಯಾದ ಚುನಾವಣಾ ಫಲಿತಾಂಶ ಬಿಡುಗಡೆ ಆಗುತ್ತಿದ್ದಂತೆ ಸ್ವಿಸ್ ಬ್ಯಾಂಕ್ (ಯುಬಿಎಸ್) ತನ್ನ ಹೊಸ ಬಿಲಿಯಾಧಿಪತಿಗಳ ವರದಿಯನ್ನು ಬಿಡುಗಡೆ ಮಾಡಿತು. ಅದರಂತೆ 2020ರ ಏಪ್ರಿಲ್ ಮತ್ತು ಜುಲೈ ನಡುವೆ ಬಿಲಿಯಾಧಿಪತಿ ವರ್ಗದ ಸಂಪತ್ತು 27.5% ಏರಿಕೆಯಾಯಿತು. ಕೇವಲ 2,189 ಬಿಲಿಯಾಧಿಪತಿಗಳ ನಡುವೆಯೇ 10.2 ಟ್ರಿಲಿಯನ್ ಡಾಲರ್ ಮೊತ್ತದ ದಾಖಲೆ ಪ್ರಮಾಣದ ಹಣ ವಿತರಣೆಯಾಗಿದೆ. ಇದೇ ವೇಳೆಗೆ 1988ರ ನಂತರ ಮೊದಲ ಬಾರಿಗೆ ಬಡತನದ ದರ ಹೆಚ್ಚಾಗಲಿದೆ ಎಂದು ವಿಶ್ವ ಬ್ಯಾಂಕ್ ಘೋಷಿಸಿದೆ. ಅಮೆಜಾನ್‍ನ ಜೆಫ್ ಬೆಝೋಸ್ 203 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವಾಗ ಪ್ರಪಂಚದ ಅರ್ಧಕ್ಕಿಂತಲೂ ಹೆಚ್ಚು ಜನರು ಪ್ರತಿರಾತ್ರಿ ಹಸಿದ ಹೊಟ್ಟೆಯಲ್ಲಿ ಮಲಗುವುದೇ ವರ್ಗ ಸಂಘರ್ಷದ ಹೂರಣವಾಗಿದೆ. ಬೊಲಿವಿಯಾದ ಹೊಸ ಸರಕಾರವು ಮಾನವ ಜೀವದ ಮೌಲ್ಯದ ಕುರಿತು ಸೂಕ್ಷ್ಮತೆ ಹೊಂದಿರುವ ಎಲ್ಲಾ ಚಳವಳಿಗಳು ಮತ್ತು ರಾಜಕೀಯ ಪಕ್ಷಗಳಂತೆ ಆ ದೇಶದ ಎಲ್ಲರಿಗೆ ಆಹಾರ ಒದಗಿಸಲು ಸಂಘರ್ಷ ನಡೆಸಬೇಕಾಗಿದೆ.

ವಿಜಯ್ ಪ್ರಶಾದ್
  • ವಿಜಯ್ ಪ್ರಶಾದ್ (ಟ್ರೈಕಾಂಟಿನೆಂಟಲ್ ಸಂಶೋಧನಾ ತಂಡದ ಸದಸ್ಯರು)

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಅಮೆರಿಕಾ ಚುನಾವಾಣೆ: ಭಾರತ ಮೂಲದ ರಾಜ ಕೃಷ್ಣಮೂರ್ತಿ ಪ್ರತಿನಿಧಿಗಳ ಸದನಕ್ಕೆ ಮರು ಆಯ್ಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...