ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟಿರುವ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ನಿನ್ನೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರಚೂಡ್, “ನಾನು ಅವರ ಚಾನೆಲ್ ಅನ್ನು ನೋಡುವುದೇ ಇಲ್ಲ” ಎಂದಿದ್ದಾರೆ.
2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯಾ ಪತ್ರದಲ್ಲಿ ಅರ್ನಾಬ್ ಹೆಸರು ಉಲ್ಲೇಖಿಸಲಾಗಿತ್ತು. ಆದರೆ ಈ ಪ್ರಕರಣ ವರ್ಷಕ್ಕೂ ಮೊದಲೇ ಮುಚ್ಚಿಹೋಗಿತ್ತು. ಈಗ ಮತ್ತೆ ಅದಕ್ಕೆ ಮರುಜೀವ ನೀಡಿದ ಮುಂಬೈ ಪೊಲೀಸ್ ಅರ್ನಾಬ್ ಅವರನ್ನು ಬಂಧಿಸಿತ್ತು. ಇದನ್ನು ಪ್ರಶ್ನಿಸಿ ಜಾಮೀನು ಪಡೆಯುವ ಸಲುವಾಗಿ ಅವರು ಬಾಂಬೆ ಹೈಕೋರ್ಟ್‌ಗೆ ಹೋಗಿದ್ದರು. ಆದರೆ ಅದು ಜಾಮೀನು ನಿರಾಕರಿಸಿತ್ತು. ಹಾಗಾಗಿ ಅರ್ನಾಬ್ ಸುಪ್ರೀಂ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಕಾಶ್ಮೀರಿಗಳ 600 ಹೇಬಿಯಸ್ ಕಾರ್ಪಸ್ ವರ್ಷದಿಂದ ಬಾಕಿ, ಅರ್ನಬ್ ಅರ್ಜಿ ಒಂದೇ ದಿನದಲ್ಲಿ ವಿಚಾರಣೆ; ಅನ್ಯಾಯ!
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಇಂದಿರಾ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠ ಅವರಿಗೆ ಜಾಮೀನು ಮಂಜೂರು ಮಾಡಿದೆ.
“ಅವರ ಸಿದ್ಧಾಂತ ಏನೇ ಇರಲಿ. ಆದರೆ ಸುಪ್ರೀಂಕೋರ್ಟ್ ಇಂತಹ ವಿಷಯದಲ್ಲಿ ಮಧ್ಯೆ ಪ್ರವೇಶಿಸದಿದ್ದರೆ ನಾವು ವಿನಾಶದ ಹಾದಿ ಹಿಡಿಯುತ್ತೇವೆ. ನಾನು ಆತನ ಚಾನೆಲ್ ನೋಡುವುದೇ ಇಲ್ಲ. ಆದರೆ ಹೈಕೋರ್ಟ್‌ಗಳು ವೈಯಕ್ತಿಕ ಸ್ವಾತಂತ್ರ್ಯದ ವಿಷಯದಲ್ಲಿ ಎಡವುತ್ತಿವೆ. ಈ ಬಗ್ಗೆ ಇಲ್ಲಿಂದ ಸಂದೇಶ ರವಾನೆಯಾಗಬೇಕು. ಹೈಕೋರ್ಟ್‌ಗಳು ತಮ್ಮ ಅಧಿಕಾರ ಬಳಸಿ ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕು” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದರು.
ಇದನ್ನೂ ಓದಿ: ಬಿಜೆಪಿ ನಾಯಕರ ದ್ವಿನೀತಿ: ಬಂಧನದಲ್ಲಿರುವ ಕೇರಳ ಮೂಲದ ಪತ್ರಕರ್ತನ ಪತ್ನಿ ಆಕ್ರೋಶ
“ನವೆಂಬರ್ 7 ರಂದು ಅರ್ನಾಬ್ ಮಧ್ಯಂತರ ಜಾಮೀನು ನಿರಾಕರಿಸುವಲ್ಲಿ ಬಾಂಬೆ ಹೈಕೋರ್ಟ್ ತಪ್ಪೆಸಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಇತರ ಇಬ್ಬರು ಸಹ-ಆರೋಪಿಗಳನ್ನು 50,000 ರೂಪಾಯಿಗಳ ಬಾಂಡ್ ಮೇಲೆ ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ. ಜೊತೆಗೆ ಆದೇಶವನ್ನು ತಕ್ಷಣವೇ ಪಾಲಿಸುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಲಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.
ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಪರಿಗಣಿಸಿದ ನಂತರ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಅಪರಾಧವನ್ನು ವಾಣಿಜ್ಯ ವಿವಾದದಲ್ಲಿ ಹೇಗೆ ಮಾಡಬಹುದು ಎಂದು ನೋಡುವುದು ಕಷ್ಟ ನ್ಯಾಯಪೀಠ ಹೇಳಿತು.
ಇದನ್ನೂ ಓದಿ: ನಾನೊಬ್ಬ ಪತ್ರಕರ್ತೆ, ಹಾಗಾಗಿ ಅರ್ನಾಬ್ ಪರ ನಿಲ್ಲುವುದಿಲ್ಲ!- ಅರ್ಫಾ ಖಾನಮ್ ಶೇರ್ವಾನಿ
ಇನ್ನು, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆ ಮಾಡುತ್ತಿರುವ ಕುರಿತು ಹಿರಿಯ ವಕೀಲ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ (ಎಸ್‌ಸಿಬಿಎ) ಅಧ್ಯಕ್ಷ ದುಶ್ಯಂತ್ ದಾವೆ ಅವರು ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
“ಉನ್ನತ ನ್ಯಾಯಾಲಯದ ಮುಂದೆ ಗೋಸ್ವಾಮಿ ಅವರ ಅರ್ಜಿಗಳನ್ನು ತುರ್ತಾಗಿ ಪಟ್ಟಿ ಮಾಡಲಾಗುತ್ತಿದೆ. ಇದೇ ರೀತಿ ಇತರರ ಅರ್ಜಿಗಳು ಏಕೆ ತುರ್ತಾಗಿ ಸುಪ್ರೀಂಕೋರ್ಟ್ ಪರಿಗಣಿಸುವುದಿಲ್ಲ. ಅವುಗಳು ಏಕೆ ಹಾಗೆ ಉಳಿದುಕೊಂಡಿವೆ?” ಎಂದು ಪ್ರಶ್ನಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಕಟುವಾಗಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ರಿಪಬ್ಲಿಕ್ ಟಿವಿ ಅರ್ನಾಬ್ ಬಂಧನ ಸಂತೋಷ ತಂದಿದೆ: ಅನ್ವಯ್ ನಾಯಕ್ ಕುಟುಂಬ!


