ಸುಪ್ರೀಂಕೋರ್ಟ್ ಕಾರ್ಯವಿಧಾನವನ್ನು ಟೀಕಿಸಿ ಮಾಡಿರುವ ಟ್ವೀಟ್‌ಗಳನ್ನು ಡಿಲೀಟ್ ಮಾಡುವುದಿಲ್ಲ. ನ್ಯಾಯಾಂಗ ನಿಂದನೆ ಪ್ರಕರಣದ ಸಂಬಂಧ ಕ್ಷಮೆ ಯಾಚಿಸುವುದಿಲ್ಲ, ದಂಡ ಕಟ್ಟುವುದಿಲ್ಲ ಎಂದು ಸ್ಟಾಂಡಪ್ ಕಾಮಿಡಿಯನ್ ಕುನಾಲ್ ಕಮ್ರ ಸ್ಪಷ್ಟಪಡಿಸಿದ್ದಾರೆ.
ವಂಚನೆ ಮತ್ತು ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದನ್ನು ಟೀಕಿಸಿ ಕಮ್ರ ಟ್ವೀಟ್ ಮಾಡಿದ್ದರು. ಈ ಸಂದರ್ಭದಲ್ಲಿ ದೇಶದಲ್ಲಿ ನೂರಾರು ಹೋರಾಟಗಾರರು ಹಲವಾರು ವರ್ಷಗಳಿಂದ ರಾಜಕೀಯ ಖೈದಿಗಳಾಗಿ ಜೈಲಿನಲ್ಲಿದ್ದರೂ ಅವರಿಗೆ ಏಕೆ ಜಾಮೀನು ನೀಡಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಖ್ಯಾತ ಸ್ಟಾಂಡಪ್ ಕಾಮಿಡಿಯನ್ ಕುನಾಲ್ ಕಮ್ರ ಸುಪ್ರೀಂ ತೀರ್ಪನ್ನು ಟ್ರೋಲ್ ಮಾಡಿದ್ದರು.
“ನನ್ನ ಟ್ವೀಟ್‌ಗಳನ್ನು ಹಿಂತೆಗೆದುಕೊಳ್ಳುವ ಅಥವಾ ಅವರಲ್ಲಿ ಕ್ಷಮೆಯಾಚಿಸುವ ಉದ್ದೇಶ ನನಗಿಲ್ಲ. ಅವು ತಮ್ಮಷ್ಟಕ್ಕೇ ಹೇಳಬೇಕಾದುದ್ದನ್ನು ಹೇಳುತ್ತವೆ ಎಂದು ನಾನು ನಂಬುತ್ತೇನೆ” ಎಂದು ಮುಂಬೈ ಮೂಲದ ಕುನಾಲ್ ಕಮ್ರ ಟ್ವೀಟ್ ಮಾಡಿದ್ದಾರೆ. ಜೊತೆಗೆ “ವಕೀಲರು ಇಲ್ಲ, ಕ್ಷಮಾಪಣೆ ಇಲ್ಲ, ದಂಡ ಕಟ್ಟಲ್ಲ, ಸಮಯ ಹಾಳು ಮಾಡಲ್ಲ” ಎಂದು ತಮ್ಮ ಪತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕುನಾಲ್ ಕಮ್ರ ಟ್ವೀಟ್ ಇಷ್ಟವಾಗದಿದ್ದರೆ, ಓದಬೇಡಿ ಅಷ್ಟೇ: ಟ್ವಿಟ್ಟರ್‌ನಲ್ಲಿ ಮತ್ತಷ್ಟು ಟ್ರೋಲ್!
No lawyers, No apology, No fine, No waste of space ??? pic.twitter.com/B1U7dkVB1W
— Kunal Kamra (@kunalkamra88) November 13, 2020
ಕುನಾಲ್ ಕಮ್ರ ವಿರುದ್ಧ ಎಂಟು ಜನರಿಗೆ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅನುಮತಿ ನೀಡುವ ಮೂಲಕ, ಕಮ್ರ ತಮಾಷೆಯ ಗೆರೆಯನ್ನು ದಾಟಿದ್ದಾರೆ ಎಂದು ಹೇಳಿದ್ದಾರೆ.
“ಸುಪ್ರೀಂ ಕೋರ್ಟ್ ಮೇಲೆ ಅನ್ಯಾಯವಾಗಿ ಕೆಟ್ಟ ರೀತಿಯಲ್ಲಿ ದಾಳಿ ಮಾಡುವುದು ಶಿಕ್ಷೆಗೆ ಕಾರಣವಾಗುತ್ತದೆ ಎಂದು ಜನರು ಅರ್ಥಮಾಡಿಕೊಳ್ಳುವ ಸಮಯ ಇದು” ಎಂದು ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಕಮ್ರ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲು ತಮ್ಮ ಅನುಮತಿಯನ್ನು ಕೇಳಿದ ವಕೀಲರಿಗೆ ಉತ್ತರಿಸಿದ ಪತ್ರದಲ್ಲಿ ತಿಳಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ, ಮುಂಬೈಯಿಂದ ಲಕ್ನೋಗೆ ಇಂಡಿಗೋ ವಿಮಾನದಲ್ಲಿ ಅರ್ನಾಬ್ ಗೋಸ್ವಾಮಿ ಅವರನ್ನು ಪ್ರಶ್ನಿಸಿದ ನಂತರ ಕಮ್ರ ಅವರನ್ನು ಹಲವಾರು ವಿಮಾನಯಾನ ಸಂಸ್ಥೆಗಳು ನಿಷೇಧಿಸಿವೆ.
ಇತ್ತ ಹಲವು ಸಾಮಾಜಿಕ ಹೋರಾಟಗಾರರು, ನೆಟ್ಟಿಗರು “ಕುನಾಲ್ ಕಮ್ರ ಟ್ವೀಟ್ ನಿಮಗೆ ಇಷ್ಟವಾಗದಿದ್ದರೆ ಅದನ್ನು ಓದಬೇಡಿ ಅಷ್ಟೇ” ಅವರ ಮೇಲೆಕೆ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸುತ್ತೀರಿ ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸುತ್ತಿದ್ದಾರೆ.


