ಹಣವನ್ನು ಕಳೆದುಕೊಂಡಿರುವ ಗೇಮರುಗಳು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ಬೆಟ್ಟಿಂಗ್ ಒಳಗೊಂಡ “ಆನ್‌ಲೈನ್ ರಮ್ಮಿ ಗೇಮಿಂಗ್” ನಿಷೇಧಿಸಿ ಸುಗ್ರೀವಾಜ್ಞೆಯನ್ನು ಪ್ರಕಟಿಸಿದೆ.
ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಕೆಲ ದಿನಗಳ ಹಿಂದೆಯೆ ಭರವಸೆ ನೀಡಿದ್ದರು. ರಾಜ್ಯ ಸರ್ಕಾರದ ಪ್ರಸ್ತಾವನೆಯ ಆಧಾರದ ಮೇಲೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸುಗ್ರೀವಾಜ್ಞೆಯನ್ನು ನಿನ್ನೆ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಸುಗ್ರಿವಾಜ್ಞೆಗಳನ್ನು ತರುವಂತೆ ರಾಜ್ಯದ ಮೇಲೆ ಒತ್ತಡವೇರಿದ್ದ ಅಮಿತ್ ಶಾ ಆಪ್ತ ಸಹಾಯಕ!
ಆಂಧ್ರಪ್ರದೇಶ ಸರ್ಕಾರ ಇತ್ತೀಚೆಗಷ್ಟೇ ಆನ್‌ಲೈನ್ ರಮ್ಮಿಯನ್ನು ನಿಷೇಧಿಸಿತ್ತು. ಬೆಟ್ಟಿಂಗ್ ಮತ್ತು ಜೂಜಾಟದ ಕಾರಣಕ್ಕಾಗಿ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದು ಗೇಮಿಂಗ್ ಅನ್ನು ನಿಷೇಧಿಸುವಂತೆ ಕೇಳಿಕೊಂಡಿದೆ.
ಸುಗ್ರೀವಾಜ್ಞೆಯು, “ಕಂಪ್ಯೂಟರ್ ಅಥವಾ ಯಾವುದೇ ಸಂವಹನ ಸಾಧನ ಅಥವಾ ಸಂಪನ್ಮೂಲವನ್ನು ಬಳಸಿಕೊಂಡು ಸೈಬರ್‌ಸ್ಪೇಸ್‌ನಲ್ಲಿ ಜೂಜಾಡುವುದನ್ನು ನಿಷೇಧಿಸಲಾಗಿದೆ” ಎಂದು ಹೇಳಿದೆ.
ಅಷ್ಟೇ ಅಲ್ಲದೆ, ಮದ್ರಾಸ್ ಹೈಕೋರ್ಟ್ ಮಧುರೈ ಪೀಠವು ಆನ್‌ಲೈನ್ ರಮ್ಮಿ ಗೇಮಿಂಗ್ ವಿರುದ್ಧದ ಪ್ರಕರಣವೊಂದನ್ನು ವಿಚಾರಣೆ ನಡೆಸುತ್ತಿದೆ. ಆನ್‌ಲೈನ್ ರಮ್ಮಿ ಆಟದಲ್ಲಿ ಭಾರಿ ಆರ್ಥಿಕ ನಷ್ಟದಿಂದಾಗಿ ಕೊಯಮತ್ತೂರಿನಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಾನೂನಿನ ಹೊರತಾಗಿಯು ಆನ್‌ಲೈನ್‌ನಲ್ಲಿ ಜೂಜಾಡಿದರೆ 5,000 ರೂ.ಗಳ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ಹಾಗೂ ಗೇಮ್‌ಗೆ ಸ್ಪೇಸ್ ನೀಡಿದವರಿಗೆ ಎರಡು ವರ್ಷಗಳ ಜೈಲು ಮತ್ತು 10,000 ರೂ.ಗಳ ದಂಡವನ್ನು ವಿಧಿಸಲಾಗುವು ಎಂದು ಸುಗ್ರೀವಾಜ್ಞೆ ಹೇಳಿದೆ.
ಇದನ್ನೂ ಓದಿ: ಸುಗ್ರೀವಾಜ್ಞೆ ಮೂಲಕ APMC ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯಗಳಿಗೆ ಪತ್ರ ಬರೆದಿದ್ದ ಕೇಂದ್ರ


