ಬೆಂಗಳೂರಿನ ಮಾರತ್ತಹಳ್ಳಿ, ಬೆಳ್ಳಂದೂರು ಬಳಿಯ ಕರಿಯಮ್ಮನ ಅಗ್ರಹಾರ ಎಂಬ ಸ್ಲಂ ಒಂದರಲ್ಲಿ ತಮ್ಮ ಪಾಡಿಗೆ ತಾವು ದುಡಿದು ಬದುಕುತ್ತಿದ್ದ 200ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳ ಗುಡಿಸಲುಗಳನ್ನು ಜನವರಿ 19, 2020ರಂದು ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಬಲದೊಂದಿಗೆ ಧ್ವಂಸಗೊಳಿಸಿದ್ದರು. ಅದಕ್ಕೆ ಸರ್ಕಾರ ಕೊಟ್ಟಿದ್ದ ಕಾರಣ ಅಲ್ಲಿ ಬಾಂಗ್ಲದೇಶಿಯರು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು. ಅದಕ್ಕೆ ಆಧಾರವಾಗಿದ್ದು ಎರಡು ದಿನಗಳ ಹಿಂದೆ ತಾನೇ ಸುವರ್ಣ ನ್ಯೂಸ್ ಮಾಡಿದ್ದು ಕಪೋಲಕಲ್ಪಿತ ಸುದ್ದಿ. ಆದರೆ ಸರ್ಕಾರದ ಈ ಕಾರ್ಯಾಚರಣೆಯಿಂದ ಬೀದಿಗೆ ಬಿದ್ದವರು ಮಾತ್ರ ಉತ್ತರ ಕರ್ನಾಟಕದಿಂದ ವಲಸೆ ಬಂದು ಬದುಕು ಕಟ್ಟಿಕೊಂಡಿದ್ದ ಅಮಾಯಕ ಕುಟುಂಬಗಳು. ಪಿಯುಸಿಎಲ್ ಸಂಘಟನೆಯು ಈ ವಿಚಾರದಲ್ಲಿ ಬಾಧಿತರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೇ ಗುಡಿಸಲು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ತಾಕೀತು ಮಾಡಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಜಸ್ಟೀಸ್ ಶ್ರೀನಿವಾಸ ಶೆಟ್ಟಿಯವರನ್ನೊಳಗೊಂಡ ಪೀಠವು ಗುಡಿಸಲು ಧ್ವಂಸದಿಂದ ಬಾಧಿತರಾದ 131 ಕುಟುಂಬಗಳಿಗೆ ತಲಾ 14,100/- ರೂ ಪರಿಹಾರ ಹಣ ಮತ್ತು ಹೊಸದಾಗಿ ಗುಡಿಸಲು ನಿರ್ಮಾಣ ಮಾಡಲು ತಲಾ 29,000/- ಸೇರಿ ಕುಟುಂಬವೊಂದಕ್ಕೆ 43,100/- ರೂ ಬಿಡುಗಡೆ ಮಾಡುವಂತೆ ನವೆಂಬರ್ 19 ರಂದು ಆದೇಶಿಸಿತ್ತು. ಇದಕ್ಕೆ ಕರ್ನಾಟಕ ಸರ್ಕಾರ ಒಪ್ಪಿಕೊಂಡಿದ್ದು, ಇದೀಗ 11 ತಿಂಗಳುಗಳ ನಂತರ ಪರಿಹಾರ ಹಣ ಬಿಡುಗಡೆ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಎನ್‌ಆರ್‌ಸಿ ಗುಮ್ಮ: ಬೆಂಗಳೂರಿನಲ್ಲಿ ಭಾರತೀಯರು ಬೀದಿಗೆ – ಎನ್‌ಆರ್‌ಸಿ, ಸಿಎಎ ಅಪಾಯವನ್ನು ಸಾಬೀತುಪಡಿಸಿದ ಬೆಂಗಳೂರು ಪೊಲೀಸ್
ಈ ವರ್ಷದ ಜನವರಿಯಲ್ಲಿ ನಡೆದ ಸರ್ಕಾರದ ಅನಾಗರಿಕ ಈ ಧ್ವಂಸ ಕಾರ್ಯಾಚರಣೆಯಿಂದಾಗಿ ನೂರಾರು ವಲಸೆ ಕುಟುಂಬಗಳು ಸಮರ್ಪಕ ನೆಲೆಯಿಲ್ಲದೆ ಇಂದಿಗೂ ಪರಿತಪಿಸುತ್ತಿವೆ. ಅಲ್ಲಿ ಅಕ್ರಮವಾಗಿ ಬಾಂಗ್ಲಾದೇಶಿಯರು ನೆಲೆಸಿದ್ದಾರೆ ಎಂಬ ಸುಳ್ಳು ವರದಿ ನಂಬಿದ ಬಿಬಿಎಂಪಿ ಕನಿಷ್ಠ ಪರಿಶೀಲಿಸದೇ ನಡೆಸಿದ ದಾಳಿಯಿಂದಾಗಿ ಸಾವಿರಾರು ಜನ ನಿರಾಶ್ರಿತರಾಗಿದ್ದರು. ಆಗ ನಾನುಗೌರಿ ಪತ್ರಿಕೆ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಆದರೆ ಅಲ್ಲಿದ್ದವರು ಕರ್ನಾಟಕದ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರುಗಳಿಂದ ವಲಸೆ ಬಂದಿದ್ದ ಕಾರ್ಮಿಕರಾಗಿದ್ದರು. ಅವರ ಬಳಿ ವೋಟರ್ ಐಟಿ, ಆಧಾರ್ ಕಾರ್ಡ್, ವಿದ್ಯುತ್ ಬಿಲ್ ಎಲ್ಲ ಇದ್ದರೂ ಸಹ ಲೆಕ್ಕಿಸದೇ ಅವರ ಗುಡಿಸಲುಗಳನ್ನು ಧ್ವಂಸ ಮಾಡಲಾಗಿತ್ತು. ಆದರೆ ಒಬ್ಬೇ ಒಬ್ಬ ಅಕ್ರಮ ಬಾಂಗ್ಲಾದೇಶಿಯನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ.
ಅಂದು ಆ ಜನರ ಆಕ್ರೋಶ ಯಾವ ರೀತಿ ಇತ್ತು ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು.
ಮಾರತ್‌ಹಳ್ಳಿ, ವೈಟ್‌ಫೀಲ್ಡ್, ಮಹದೇವಪುರ, ಕಾಡುಗೋಡಿ, ಕೆ.ಆರ್.ಪುರ ಸೇರಿದಂತೆ ಬೆಂಗಳೂರು ನಗರದ ಹೊರವಲಯದಲ್ಲಿ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕದಿಂದ ವಲಸೆ ಬಂದ ಸಾವಿರಾರು ಜನ ಕೂಲಿ ಕಾರ್ಮಿಕರು ಹಲವು ಸ್ಲಂಗಳಲ್ಲಿ ಬದುಕುತ್ತಿದ್ದಾರೆ. ಈ ‘ಸ್ಲಂ’ಗಳನ್ನು ನೆಲಬಾಡಿಗೆ ಸ್ಲಂಗಳೆಂದು ಕರೆಯುತ್ತಾರೆ. ಏಕೆಂದರೆ ಈ ಬಡವರು ಭೂಮಿಯ ಮಾಲೀಕರಿಗೆ ನೆಲಬಾಡಿಗೆ ಕೊಡುತ್ತಾ, ಅಲ್ಲಿ ಷೆಡ್ ನಿರ್ಮಿಸಿಕೊಂಡು ವಾಸಿಸುತ್ತಾರೆ.
ತುತ್ತು ಅನ್ನ ನೀಡುತ್ತಿರುವ ಬೆಂಗಳೂರು ಅವರಿಗೆ ಎಷ್ಟು ಅನಿವಾರ್ಯವೋ, ಬೆಂಗಳೂರಿಗೂ ಅವರು ಅಷ್ಟೇ ಅನಿವಾರ್ಯ ಎನ್ನುವುದು ಕಟು ಸತ್ಯ. ಏಕೆಂದರೆ ಮೇಲೆ ಹೆಸರಿಸಿದ ಏರಿಯಾಗಳಲ್ಲಿನ ಪೌರಕಾರ್ಮಿಕ ಕೆಲಸ, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಅಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗ ಮತ್ತು ಮೇಲ್ವರ್ಗದ ಮನೆ ಚಾಕರಿ, ಕಸವಿಂಗಡಣೆ, ಚಿಂದಿ ಆಯುವುದರಿಂದ ಹಿಡಿದು ಶಾಲಾ ವಾಹನಗಳ ಡ್ರೈವರ್‌ಗಳು, ಸೆಕ್ಯುರಿಟಿ ಗಾರ್ಡ್ ಕೆಲಸ, ಹೀಗೆ ವಿವಿಧ ರೀತಿಯ ಜೀವನೋಪಾಯ ಚಟುವಟಿಕೆಗಳಲ್ಲಿ ಕಡಿಮೆ ಕೂಲಿಗೆ ಈ ಜನ ದುಡಿಯುತ್ತಿದ್ದಾರೆ. ಇಂತಹ ಜನ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನೆಲೆಯೂ ಇಲ್ಲದೆ, ಕೆಲಸವೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದರು.
ಇದೀಗ ಈ ವಿಷಯದಲ್ಲಿ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ ಅದು ಎಚ್ಚೆತ್ತುಕೊಂಡಿದೆ. ಆದರೆ ಕರಿಯಮ್ಮನ ಅಗ್ರಹಾರದಿಂದ 35 ಕಿ.ಮೀ ದೂರದ ಆನೇಕಲ್ ಬಳಿ ಪುನರ್ವಸತಿ ನಿರ್ಮಿಸಿಕೊಡುವುದಾಗಿ ಹೇಳುತ್ತಿದೆ. ಆದರೆ ಇಲ್ಲೆ ತಮ್ಮ ಕೆಲಸಗಳನ್ನು ಕಂಡುಕೊಂಡಿರುವ ಕಾರ್ಮಿಕರು ಅಲ್ಲಿಗೆ ತೆರಳಲು ನಿರಾಕರಿಸಿದ್ದಾರೆ. ಸದ್ಯಕ್ಕೆ 48 ಕುಟುಂಬಗಳಿಗೆ ತಲಾ 14,100/ ರೂ ಪರಿಹಾರ ಹಣ ನೀಡಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಗುಡಿಸಲು ಧ್ವಂಸದ ನೋವಿನ ದಿನಗಳು
ಈ ಅಮಾನುಷ ದಾಳಿ ನಡೆದ ಸಂದರ್ಭದಲ್ಲಿ ದೇಶಾದ್ಯಂತ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ತೀವ್ರ ಹೋರಾಟ ಆರಂಭವಾಗಿತ್ತು. ನೀವು ಭಾರತೀಯರೆಸಿಕೊಳ್ಳಲು ಸರ್ಕಾರ ಕೇಳುವ ದಾಖಲೆ ತೋರಿಸಬೇಕಾಗ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೇ ಸಂದರ್ಭದಲ್ಲಿ ಜನವರಿ 12ರಂದು ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯವರು ಟ್ವೀಟ್ ಮಾಡಿ ನನ್ನ ಕ್ಷೇತ್ರದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ಹಾಕಿಕೊಳ್ಳಲಾಗಿದೆ. ಅಲ್ಲಿ ಕಾನೂನುಬಾಹಿರ ಕೃತ್ಯಗಳು ನಡೆಯುತ್ತಿವೆ. ಇದರಿಂದ ಅಲ್ಲಿನ ನೈರ್ಮಲ್ಯ ಹಾಳಾಗಿದೆ. ಶಂಕಿತ ಬಾಂಗ್ಲಾದೇಶಿಯರಿದ್ದಾರೆ, ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಹೇಳಿದ್ದರು.

ಅಂದು ಬಿಜೆಪಿ ಸಂಸದರೊಬ್ಬರ ಮಾಲೀಕತ್ವದಲ್ಲಿದ್ದು ಮುಸ್ಲಿಂ ವಿರೋಧಿ ಸುದ್ದಿ ಬಿತ್ತರಿಸುವ ಚಾನೆಲ್, ಬಿಜೆಪಿಯ ಸ್ಥಳೀಯ ಶಾಸಕ ಮತ್ತು ಬಿಜೆಪಿ ಆಡಳಿತದಡಿಯ ಪೊಲೀಸ್ ಕಮೀಷನರ್ ಮೂವರೂ ಸೇರಿ ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ಸುಮಾರು 200 ಗುಡಿಸಲುಗಳನ್ನು ಧ್ವಂಸವಾಗಲು ಕಾರಣರಾಗಿದ್ದಾರೆ.
ಇದೇ ಉತ್ತರ ಕರ್ನಾಟಕದಿಂದ ಬಂದ ಅರವಿಂದ ಲಿಂಬಾವಳಿಯವರಿಗೆ ಆಗ ಸಚಿವಗಿರಿ ಪಡೆಯುವುದೇ ಮುಖ್ಯವಾಗಿತ್ತು. ಅವರು ಗೆಲ್ಲುತ್ತಾ ಬಂದಿರುವುದು ಬೆಂಗಳೂರಿನ ಮಹದೇವಪುರ ಮೀಸಲು ಕ್ಷೇತ್ರದಿಂದ. ಮೊದಲ ಬಾರಿ ಅವರು ಗೆದ್ದಾಗ ‘ಬಾಂಗ್ಲಾದೇಶೀಯರು ವಾಸವಿದ್ದ ಈ ಜೋಪಡಿಗಳಿಂದಲೂ ಮತ ಪಡೆದಿದ್ದರು. ಇಲ್ಲಿ ಹಲವಾರು ಬಿಜೆಪಿ ಏಜೆಂಟರಿದ್ದು ಅವರೇ ಇವರಿಗೆ ವೋಟರ್‌ಐಡಿಯನ್ನೂ ಕೊಡಿಸಿದ್ದರು. ನಂತರ ಅವರಿಗೆ ಇಲ್ಲಿಂದ ಮತವೂ ಬೀಳಲಿಲ್ಲ. ಬಾಂಗ್ಲಾದೇಶೀಯರ ಕಥೆಯೂ ಶುರುವಾಯಿತು’ ಎಂದಿದ್ದರು ಸ್ಥಳೀಯ ಕಾರ್ಯಕರ್ತರು.
ಸದ್ಯಕ್ಕಾದರೂ ಬಾಧಿತ ಜನರಿಗೆ ಚೂರುಪಾರು ಪರಿಹಾರ ಸಿಗುತ್ತಿದೆ. ಶೆಡ್ಡುಗಳು ದೊರಕುತ್ತಿವೆ ಎನ್ನುವುದು ಸಮಾಧಾನದ ಸಂಗತಿಯಾಗಿದೆ.
ಇದನ್ನೂ ಓದಿ; ಎನ್‌ಆರ್‌ಸಿ ಗುಮ್ಮ: ಬೆಂಗಳೂರಿನಲ್ಲಿ ಭಾರತೀಯರು ಬೀದಿಗೆ – ಎನ್‌ಆರ್‌ಸಿ, ಸಿಎಎ ಅಪಾಯವನ್ನು ಸಾಬೀತುಪಡಿಸಿದ ಬೆಂಗಳೂರು ಪೊಲೀಸ್


