ಕುಂಭಮೇಳದಲ್ಲಿ ಕಟ್ಟುನಿಟ್ಟಿನ ಕೊರೊನಾ ನಿಯಂತ್ರಣ ಕ್ರಮಕ್ಕೆ ಕೇಂದ್ರದ ಸೂಚನೆ
PC: UK Academe

ಗಣೇಶ ಚತುರ್ಥಿ, ದೀಪಾವಳಿ, ಛತ್ ಹಬ್ಬಗಳಲ್ಲಿ ಜನ ಸಂದಣಿ ಹೆಚ್ಚಾಗಿ ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ ಉಂಟಾಗಿರುವುದಾಗಿ ಹಲವು ರಾಜ್ಯಗಳು ಹೇಳಿಕೊಂಡಿವೆ. ನಿನ್ನೆ ಕೂಡ ಮಹಾರಾಷ್ಟ್ರ ಸರ್ಕಾರ ಈ ಬಗ್ಗೆ ತಿಳಿಸಿ ಲಾಕ್‌ಡೌನ್ ಹೇರುವ ಬಗ್ಗೆ ನಿರ್ಧರಿಸುವುದಾಗಿ ತಿಳಿದೆ. ಆದರೆ ಕೊರೊನಾ ಸಾಂಕ್ರಾಮಿಕದಿಂದ ಉಂಟಾಗುತ್ತಿರುವ ಸಮಸ್ಯೆಗಳ ನಡುವೆಯೂ 2021 ರಲ್ಲಿ ಹರಿದ್ವಾರದಲ್ಲಿ ಕುಂಭಮೇಳವನ್ನು ತನ್ನ “ದೈವಿಕ ರೂಪದಲ್ಲಿ” ನಡೆಸಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

2021 ರ ಜನವರಿ 14 ರಂದು ಪ್ರಾರಂಭವಾಗಲಿರುವ ಕುಂಭಮೇಳದ ಸಿದ್ಧತೆಗಳ ಕುರಿತು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಭಾನುವಾರ ಅಖಿಲ್ ಭಾರತೀಯ ಅಖಾಡಾ ಪರಿಷತ್ (ABAP) ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಇದನ್ನೂ ಓದಿ: ಕೊರೊನಾ ಉಲ್ಬಣ: ಮತ್ತೆ ಲಾಕ್‌ಡೌನ್ ಘೋಷಿಸುತ್ತಾ ಮಹಾರಾಷ್ಟ್ರ ಸರ್ಕಾರ?

“ಕುಂಭಮೇಳದ ವಿಸ್ತಾರವು ಆ ಸಮಯದ ಕೊರೊನಾ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಎಬಿಎಪಿ ಹಾಗೂ ಧಾರ್ಮಿಕ ಸಂಘಟನೆಗಳ ಸಲಹೆಗಳನ್ನು ಪರಿಗಣಿಸಲಾಗುತ್ತದೆ. ಕೊರೊನಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ಭಕ್ತರಿಗೆ ಯಾವುದೇ ಅನಾನುಕೂಲತೆಯನ್ನು ಉಂಟಾಗದಂತೆ ನೋಡಿಕೊಳ್ಳುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ” ಎಂದು ಮುಖ್ಯಮಂತ್ರಿ ರಾವತ್ ತಿಳಿಸಿದ್ದಾರೆ.

’ಕುಂಭಮೇಳದ ಕಾಮಗಾರಿಗಳನ್ನು ಸತತವಾಗಿ ಮೇಲ್ವಿಚಾರಣೆ ಮಾಡಲು ಇಲಾಖೆಗಳ ಕಾರ್ಯದರ್ಶಿಗಳಿಗೆ ನಿರ್ದೇಶಿಸಲಾಗಿದೆ. 15 ದಿನಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕೆಕ ತಿಳಿಸುವಂತೆ ಮುಖ್ಯ ಕಾರ್ಯದರ್ಶಿಗೆ ತಿಳಿಸಲಾಗಿದೆ” ಎಂದು ಹೇಳಿದ್ದಾರೆ.

ಕುಂಭಮೇಳದ ಅಧಿಕಾರಿ ದೀಪಕ್‌ ರಾವತ್‌, ’ಕುಂಭಮೇಳಕ್ಕಾಗಿ ನಿರ್ಮಿಸಲಾಗುತ್ತಿರುವ ಒಂಬತ್ತು ಹೊಸ ನದಿ ತೀರಗಳು, ಎಂಟು ಸೇತುವೆಗಳು ಹಾಗೂ ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಬಹುತೇಕ ಕಾಮಗಾರಿಗಳು ಡಿಸೆಂಬರ್‌ 15ಕ್ಕೆ ಪೂರ್ಣಗೊಳ್ಳಲಿವೆ’ ಎಂದಿದ್ದಾರೆ.

ಇದನ್ನೂ ಓದಿ: ಕೊರೊನಾ: ಎಂಜಿ ಮತ್ತು ಬ್ರಿಗೇಡ್ ರೋಡ್‌‌ನಲ್ಲಿ ಹೊಸ ವರ್ಷಾಚರಣೆಗೆ ನಿಷೇಧ!

ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆಯ ಪ್ರಕಾರ, ನಗರ ಅಭಿವೃದ್ಧಿ ಸಚಿವ ಮದನ್ ಕೌಶಿಕ್ ಅವರು ಕುಂಭಮೇಳದಲ್ಲಿ ಭಕ್ತರಿಗೆ ಯಾವುದೇ ತೊಂದರೆ ಎದುರಾಗದಂತೆ ನೋಡಿಕೊಳ್ಳಲು ಯೋಜಿತ ವ್ಯವಸ್ಥೆ ಮಾಡಲಾಗುವುದು. ಯಾವುದೇ ಆತಂಕದ ಸನ್ನಿವೇಶ ಸೃಷ್ಟಿಯಾಗುವುದಿಲ್ಲ ಎಂದು ಹೇಳಿದರು.

’ಕುಂಭಮೇಳದ ಯಶಸ್ವಿಗಾಗಿ ಅಖಿಲ್ ಭಾರತೀಯ ಅಖಾಡಾ ಪರಿಷತ್ ರಾಜ್ಯ ಸರ್ಕಾರದೊಂದಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಎಬಿಎಪಿ ಮುಖ್ಯಸ್ಥ ಮಹಂತ್ ನರೇಂದ್ರ ಗಿರಿ ಭರವಸೆ ನೀಡಿದ್ದಾರೆ’ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕುಂಭಮೇಳ 2021 ರ ಸಂದರ್ಭದಲ್ಲಿ ಪ್ರತಿದಿನ 35 ರಿಂದ 50 ಲಕ್ಷ ಜನರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ ಎಂದು ನಗರಾಭಿವೃದ್ಧಿ ಸಚಿವ ಮದನ್ ಕೌಶಿಕ್ ಹೇಳಿದ್ದಾರೆ.

ಹಬ್ಬಗಳಲ್ಲಿ ಹೆಚ್ಚು ಜನ ಸೇರುವುದರಿಂದ ಕೊರೊನಾ ಹೆಚ್ಚಾಗುವ ಆತಂಕದ ಹಿನ್ನೆಲೆ ದೆಹಲಿ ಸರ್ಕಾರ ಛತ್ ಪೂಜೆಯನ್ನು ಸಾರ್ವಜನಿಕ ಸ್ಥಳಗಳು, ನದಿ ತೀರಗಳು, ಕೊಳಗಳ ಬಳಿ ಆಚರಿಸುವುದನ್ನು ನಿರ್ಬಂಧಿಸಿದ್ದ ಆದೇಶವನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬಹುದು.


ಇದನ್ನೂ ಓದಿ: ಕೊರೊನಾ: 500 ರಿಂದ 2 ಸಾವಿರಕ್ಕೆ ಮಾಸ್ಕ್ ದಂಡ ಹೆಚ್ಚಿಸಿದ ದೆಹಲಿ ಸರ್ಕಾರ

1 COMMENT

  1. ಕುಂಬಮೇಳ ನಿಷೇಧ ಮಾಡಬೇಕು ಏಕೆಂದರೆ ಅಲ್ಲಿ ಗಾಂಜಾ ಮಾಧ್ಯ ಸೇವೆನೆ ಈ ಸಂದರ್ಭದಲ್ಲಿ ಜಾಸ್ಥಿಯಾಗುತ್ತದೆ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು .

LEAVE A REPLY

Please enter your comment!
Please enter your name here