ಶಿರಾ ಉಪಚುನಾವಣೆಯ ಹಿನ್ನೆಲೆಯಲ್ಲಿ ದಿಢೀರ್ ಸ್ಥಾಪನೆಯಾದ ಕಾಡುಗೊಲ್ಲ ಅಭಿವೃದ್ಧಿ ನಿಗಮ ಇನ್ನೂ ಪೂರ್ಣವಾಗಿ ಅಸ್ತಿತ್ವಕ್ಕೆ ಬಂದಿಲ್ಲ. ಸಂಪುಟ ಸಭೆ ಒಪ್ಪಿಗೆಯನ್ನೂ ಪಡೆದುಕೊಂಡಿಲ್ಲ. ಅನುದಾನವನ್ನೂ ನಿಗದಿ ಮಾಡಿಲ್ಲ. ಆದರೆ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಲು ಹಲವರ ನಡುವೆ ತೆರೆಮರೆಯಲ್ಲೇ ಪೈಪೋಟಿ ಎದ್ದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಬಿಜೆಪಿ ಬೆಂಬಲಿಗರನ್ನು ಹೊರತುಪಡಿಸಿ ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡುವುದು ಸಾಧ್ಯವಿಲ್ಲದ ಮಾತು. ಹಾಗಾಗಿ ಬಿಜೆಪಿ ಮುಖಂಡರನ್ನು ಮುಂದಿಟ್ಟುಕೊಂಡು ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಲು ಪೈಪೋಟಿ ನಡೆಯುತ್ತಿದೆ.
ನಿವೃತ್ತ ಐಎಫ್ಎಸ್ ಅಧಿಕಾರಿ ಚಿಕ್ಕಪ್ಪಯ್ಯ, ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ತಹಶೀಲ್ದಾರ್ ಜಿ.ಎಂ. ಸಣ್ಣಮುದ್ದಯ್ಯ, ಬಿಬಿಎಂಪಿ ಮಾಜಿ ಸದಸ್ಯ ರಾಜಣ್ಣ, ಚಂದ್ರಶೇಖರಗೌಡ, ಚಿಕ್ಕಣ್ಣಸ್ವಾಮಿ, ದೇವಾಲಯದ ಪೂಜಾರಿ ಪಾಪಣ್ಣ, ಶ್ರೀರಂಗ ಯಾದವ್ ಮೊದಲಾದವರು ಆಕಾಂಕ್ಷಿಗಳಾಗಿದ್ದಾರೆ. ಸಣ್ಣಮುದ್ದಯ್ಯ ವಿರುದ್ದ ಸಾಕಷ್ಟು ದೂರುಗಳನ್ನು ನೀಡಲಾಗಿದೆ. ಯಾವುದೇ ಕಾರಣಕ್ಕೂ ಸಣ್ಣಮುದ್ದಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬಾರದು ಎಂಬ ದೂರುಗಳು ಬಿಜೆಪಿ ಮುಖಂಡರಿಗೆ ರವಾನೆಯಾಗಿವೆ.
ಇನ್ನೊಂದೆಡೆ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರು ಬದಲಾವಣೆಗೆ ಒತ್ತಾಯ ವ್ಯಕ್ತವಾಗುತ್ತಿದೆ. ಇದಕ್ಕೆ ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ನೇತೃತ್ವ ವಹಿಸಿದ್ದಾರೆ. ಹೆಸರು ಬದಲಾದರೆ ತಾನೇ ಅಧ್ಯಕ್ಷ ಎಂದು ಹೇಳಿಕೊಂಡು ಒಡಾಡುತ್ತಿದ್ದಾರೆ. ಹೀಗಾಗಿ ಯಾದವ VS/ ಕಾಡುಗೊಲ್ಲರ ನಡುವೆ ಕಿತ್ತಾಟ ಮುಂದುವರಿದಿದೆ. ಬಿಜೆಪಿಗೂ ಇದೇ ಬೇಕಾಗಿದೆ. ನಿಮ್ಮಲ್ಲೇ ಜಗಳವಿದೆ, ಸರಿಪಡಿಸಿಕೊಂಡು ಬನ್ನಿ ಎಂದು ಹೇಳಲು ಸರ್ಕಾರಕ್ಕೆ ಕಾರಣ ಸಿಕ್ಕಿದೆ. ಹಾಗಾಗಿ ಬಿಜೆಪಿ ದಾಳ ಉರುಳಿಸುತ್ತಲೇ ಇದೆ. ಇದನ್ನು ಅರ್ಥ ಮಾಡಿಕೊಳ್ಳದ ಕಾಡುಗೊಲ್ಲ ಸಮುದಾಯ ವ್ಯರ್ಥ ಕಸರತ್ತು ನಡೆಸುತ್ತಿದೆ ಎಂಬ ವಿಶ್ಲೇಷಣೆ ನಡಯುತ್ತಿದೆ.
ಯಾದವರು ಒಂದು ಕಡೆ ಸಭೆ ನಡೆಸಿದರೆ, ಕಾಡುಗೊಲ್ಲರು ಮತ್ತೊಂದು ಕಡೆ ಸಭೆ ನಡೆಸಿ ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಯಾದವ (ಗೊಲ್ಲ) ಸಂಘದ ರಾಜ್ಯಧ್ಯಕ್ಷ, ಮಾಜಿ ಸಚಿವ ಎ.ಕೃಷ್ಣಪ್ಪ ಅಳಿಯ ಮತ್ತು ಶಾಸಕಿ ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಡಿಸೆಂಬರ್ 6ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದು, ಕಾಡುಗೊಲ್ಲ ಎಂಬುದನ್ನು ಗೊಲ್ಲ ಅಭಿವೃದ್ಧಿ ನಿಗಮವಾಗಿ ಬದಲಾಯಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಲು ತಯಾರಿ ನಡೆಸುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದೇ ಕಾರಣವನ್ನು ಮುಂದಿಟ್ಟುಕೊಂಡು ನವೆಂಬರ್ 29 ರಂದು ತುಮಕೂರಿನಲ್ಲಿ ರಾಜ್ಯಮಟ್ಟದ ಕಾಡುಗೊಲ್ಲ ಸಮುದಾಯದ ಮುಖಂಡರ ಸಭೆ ನಡೆದಿದೆ. ಸಭೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು. ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು. ಕಾಡುಗೊಲ್ಲ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ನೀಡಬೇಕು. ಅಭಿವೃದ್ಧಿ ನಿಗಮಕ್ಕೆ ಕಾಡುಗೊಲ್ಲ ಸಮುದಾಯದ ಪ್ರಮುಖರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರೊಬ್ಬರು ನಾನುಗೌರಿ.ಕಾಂಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಬಿಜೆಪಿ ಬೆಂಬಲಿಗರೇ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಿಬಿಎಂಪಿ ಮಾಜಿ ಸದಸ್ಯ ರಾಜಣ್ಣ, ಚೆಂಗಾವರ ಕರಿಯಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಸಭೆಯಲ್ಲಿ ಪಾಲ್ಗೊಂಡು ಹೋರಾಟದ ಮುಂದಿನ ರೂಪುರೇಷೆಗಳ ಕುರಿತು ಸಲಹೆ ನೀಡಿದರು. ಸಭೆಯಲ್ಲಿ ಬಿಜೆಪಿ ಬೆಂಬಲಿಗರೇ ಹೆಚ್ಚು ಸಂಖ್ಯೆಯಲ್ಲಿದ್ದು ಸಂಘವನ್ನು ಬಿಜೆಪಿಗೆ ಒತ್ತೆ ಇಟ್ಟರೆ ಹೇಗೆ? ಜನಾಂಗದ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ ಎಂಬ ಪ್ರಶ್ನೆಯೂ ವ್ಯಕ್ತವಾಯಿತು. ಇದಕ್ಕೆ ಮುಖಂಡರು ಪಕ್ಷವೇ ಬೇರೆ, ಸಂಘವೇ ಬೇರೆ ಎಂಬ ಉತ್ತರ ನೀಡಿದರು ಎಂದು ಹೇಳಲಾಗಿದೆ.
ಕಾಡುಗೊಲ್ಲ ಅಭಿವೃದ್ಧಿ ನಿಗಮವೇ ಅಯೋಮಯವಾಗಿದೆ. ಅದು ಕಾನೂನುಬದ್ದವಾಗಿಲ್ಲ. ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿಲ್ಲ. ನಿಗಮ ಊರ್ಜಿತವಾಗುತ್ತದೆಯೇ ಎಂಬ ಪ್ರಶ್ನೆ ಸಮುದಾಯದ ಕೆಲ ಮುಖಂಡರನ್ನು ಕಾಡತೊಡಗಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಡುಗೊಲ್ಲರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರು ಬದಲಿಸಿದ್ದೇಕೆ?; ಸಿಎಂ ಮೇಲೆ ಒತ್ತಡ ತಂದವರು ಯಾರು?


