ಗೌರಿ ಅವರಿಗೆ ಲಂಕೇಶ್ ಬರೆದಿದ್ದ ನಾಲ್ಕು ಪತ್ರಗಳು
1) 19-10-1993
ಪ್ರೀತಿಯ ಗೌರು,
ನಿನ್ನ ಪತ್ರ. Sorry. ಕಳೆದ ಮೂರು ದಿನಗಳಿಂದ ಉತ್ತರ ಬರೆಯಲು ಸಮಯ ಸಿಕ್ಕಿರಲಿಲ್ಲ.
ಆ ಯುರೋಪ್‍ನ ದೇಶಗಳು ಎಷ್ಟು ಸಜ್ಜಾಗಿ ವ್ಯವಸ್ಥಿತವಾಗಿವೆ ಎಂಬುದು ನನಗೆ ಗೊತ್ತು. ಆದರೆ ನಮ್ಮಂಥವರಿಗೆ ಅವರ ಪಿತ್ರಾರ್ಜಿತ ಕಲಾವಸ್ತುಗಳು ಉಸಿರುಗಟ್ಟಿಸುವಂತೆ ಇರುತ್ತವೆ. ಹಾಗೆಯೇ ಅವುಗಳಲ್ಲಿ ಅವರಿಗಿರುವ ಉತ್ಸಾಹ ಹಾಸ್ಯಾಸ್ಪದವಾಗಿ ಕಾಣುತ್ತದೆ,
ಆದರೆ ಪ್ಯಾರಿಸ್‍ನಂತಹ ನಗರ (ಈಗ ಅಲ್ಲಿಂದ ಜಗತ್‍ಪ್ರಖ್ಯಾತ ಮೇಧಾವಿಗಳು ಸಂಪೂರ್ಣವಾಗಿ ಮಾಯವಾಗಿದ್ದಾರೆ ಎಂದೆನಿಸುತ್ತದೆ) ನಿನಗೆ “Moveable Feast” (ಇದು ಏರ್ನೆಸ್ಟ್ ಹೆಮಿಂಗ್ವೆನ ಪುಸ್ತಕದ ಟೈಟಲ್ – ಗೌರಿ ಲಂಕೇಶ್) ಆಗುವುದು ಯಾವಾಗ ಅಂದರೆ, ನೀನು ಅದರ ಲಯವನ್ನು ಗ್ರಹಿಸಿದಾಗ; ಗೆಳೆಯರೊಂದಿಗೆ ಆ ನಗರವನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ; ಇವೆಲ್ಲ ಅನೇಕ ದಿನ ನೀನು ಅಲ್ಲಿ ತಂಗಿದಾಗ ಮಾತ್ರ ಸಾಧ್ಯವಾಗುತ್ತದೆ.
ನೀನು ನಿನ್ನ ಕೋರ್ಸ್‍ನ್ನು ಇಷ್ಟಪಡುತ್ತಿರುವೆ ಎಂದು ನಂಬಿದ್ದೇನೆ. ಸಮಯವಾದಾಗ ಪ್ಯಾರಿಸ್‍ನಿಂದ ಹೊರಗೆ ಹೋಗಿ ಆ ದೇಶದ ಗ್ರಾಮ ಪ್ರದೇಶಗಳನ್ನು ನೋಡು.
ಈ ದೇಶ ಇದ್ದಹಾಗೇ ಇದೆ; ಹಲವು ದುರಂತಗಳನ್ನು ಹೊರತುಪಡಿಸಿದರೆ. ಭೂಕಂಪ, ಕಾಂಗ್ರೆಸ್ ಪಕ್ಷದ ದುರಾಡಳಿತ… ಎಲ್ಲವೂ ಅಸಹ್ಯಕರವಾಗಿವೆ.
ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಸೌಖ್ಯ,
ನಿನ್ನ ಪ್ರೀತಿಯ
ಅಪ್ಪ

2) 2-11-1993
ಪ್ರೀತಿಯ ಗೌರು,
ಹತ್ತು ದಿನಗಳ ಹಿಂದೆ ನಾನು ಬರೆದ ಪತ್ರ ತಲುಪಿದೆ ಎಂದು ನಂಬಿರುವೆ. ಇಲ್ಲಿಂದ ಯಾರೂ ಪತ್ರ ಬರೆದಿಲ್ಲ ಎಂದು ನಿನಗೆ ಬೇಸರವಾಗಿದೆ ಎಂದು ಕೇಳಿದೆ. ಒಂದನ್ನು ನನಪಿನಲಿಟ್ಟುಕೋ. ಜನರು ಮೂಲಭೂತವಾಗಿ ಸ್ವಾರ್ಥಿಗಳಾಗಿರುತ್ತಾರೆ, ಯಾರಿಂದಲೂ ಯಾವುದನ್ನೂ ನಿರೀಕ್ಷಿಸುವುದು ತಪ್ಪು. ನೀನು ಇದನ್ನು ಅರಿತರೆ ಜೀವನದಲ್ಲಿ ಹೊರೆ ಕಡಿಮೆಯಾದಂತಾಗುತ್ತದೆ. ಸಾಕು ಈ ಉಪದೇಶಗಳು!
ಹೇಗಿದ್ದೀ? ಇಷ್ಟೋತ್ತಿಗಾಗಲೇ ನಿನಗೆ ಪ್ಯಾರಿಸ್ ಇಷ್ಟವಾಗಿರಬೇಕು. ಇಲ್ಲಿ ಮೊನ್ನೆಯವರೆಗೂ ಮಳೆ ಬರುತ್ತಿತ್ತು. ಆದರೆ ಈ ದಿನ ಸುಂದರವಾಗಿದೆ, bright, cool & thrilling! ಸದ್ಯದಲ್ಲೇ ಚಳಿಗಾಲ ಬರಲಿದೆ. ಈ ಬಾರಿಯ ದಸರಾ ಮತ್ತು ಗಣೇಶ ಹಬ್ಬಗಳು ತುಂಬಾ ಗದ್ದಲಮಯವಾಗಿದ್ದವು. ಈ ಗದ್ದಲಗಳ ನಡುವೆಯೇ 1970ರಲ್ಲಿ ಪ್ರಥಮವಾಗಿ ಪ್ರಕಟವಾಗಿದ್ದ ನನ್ನ “ಅಕ್ಷರ ಹೊಸಕಾವ್ಯ”ದ ಮರುಮುದ್ರಿಕೆಯನ್ನು ಹೊರತಂದೆವು.
ನಿನ್ನ ಪ್ರೀತಿಯ
ಅಪ್ಪ
3) 7-4-1994
ಪ್ರೀತಿಯ ಗೌರು,
ಇದೇ ಕೊನೆಯ ಕಾಗದ – ನೀನು ಪ್ಯಾರಿಸ್‍ನಿಂದ ಭಾರತಕ್ಕೆ ಹಿಂದಿರುಗುವ ಮುನ್ನ ಅನ್ನಿಸುತ್ತದೆ. ನೀನು ಟರ್ಕಿ ದೇಶದ ಜನರ ಬಗ್ಗೆ ಬರೆದದ್ದು ಕುತೂಹಲಕಾರಿಯಾಗಿತ್ತು. ಅವರು ಯುರೋಪಿಯನ್ ದೇಶದವರಿಗಿಂತ Courteous ಎಂದು ಬರೆದಿದ್ದೀ. ಆದರೆ ನ್ಯೂಸ್‍ವೀಕ್‍ನಲ್ಲಿ ಇತ್ತೀಚಿಗೆ ಮುಸ್ಲಿಂ ಮೂಲಭೂತವಾದಿಗಳು ಅಲ್ಜೀರಿಯ ಮತ್ತು ಈಜಿಪ್ಟ್ ದೇಶಗಳಲ್ಲಿಯಂತೆ ಟರ್ಕಿಯಲ್ಲಿಯೂ ತಮ್ಮ ಕಿತಾಪತಿ ಶುರು ಮಾಡಿದ್ದಾರೆ ಎಂದು ವರದಿಯಾಗಿತ್ತು. ಅದೊಂದು ದೊಡ್ಡ ದುರಂತ. ಯಾಕೆಂದರೆ, ಕಮಲ್ ಅತಾರುಕ್‍ನ ದೊಡ್ಡ ಸಾಧನೆ ಏನೆಂದರೆ, ಆತ ಟರ್ಕಿ ದೇಶವನ್ನು ಜಾತ್ಯತೀತ ರಾಜ್ಯವನ್ನಾಗಿಸಿದ್ದ. ಆದ್ದರಿಂದಲೇ ಟರ್ಕಿ ಯುರೋಪಿಗೆ ಹತ್ತಿರವಾಗಿತ್ತು.
ಈಗ ಫ್ರಾನ್ಸ್‌ನಲ್ಲಿ ವಸಂತ ಋತುಗಾಲ… ಪಶ್ಚಿಮ ಯುರೋಪ್ ದೇಶಗಳು ಈ ಸುಂದರವಾದ ಋತುಗಾಲಕ್ಕಾಗಿಯೇ ಹೇಳಿ ಮಾಡಿಸಿದಂತಿರಬೇಕು! ಅದರಲ್ಲಿಯೂ ಮೇ ತಿಂಗಳಂತೂ ಅತ್ಯಂತ ಆನಂದದಾಯಕವಾಗಿರುತ್ತದೆ ಎಂದು ಕೇಳಿದ್ದೇನೆ.
ನೀನು ಹಿಂದಿರುಗುವಾಗ ಮರೆಯದೇ ಒಂದೆರಡು ಸ್ಕಾಚ್ ಬಾಟಲ್‍ಗಳನ್ನು ತೆಗೆದುಕೊಂಡು ಬಾ. ತುಂಬಾ ದುಬಾರಿಯಾದದ್ದೇನೂ ಬೇಡ.
ನಿಜ, ನನಗೆ ಸಣ್ಣ ಸ್ಟ್ರೋಕ್ ಆಗಿತ್ತು. ಆದರೆ ಈಗ ಪರವಾಗಿಲ್ಲ.. ಡಾಲರ್‌ನಷ್ಟೇ ಸ್ಥಿರವಾಗಿದ್ದೇನೆ. (ಆದರೆ ಡಾಲರ್ ಮಾತ್ರ ಕುಸಿಯುತ್ತಿದೆಯಂತೆ!)
ಪುಸ್ತಕಗಳ ಬಗ್ಗೆ ಕೇಳಿದ್ದೀ. ಆದಷ್ಟು ಪುಸ್ತಕಗಳನ್ನು ತಗೊಂಡು ಬಾ. ಐಯೊನೆಸ್ಕೊ ತೀರಿಹೋದದ್ದು ಕೇಳಿ ಬೇಸರವಾಯಿತು. ಅವನು lovely fellow. ಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ. (ಅದರ ಹೆಸರು ಸದ್ಯಕ್ಕೆ ನನಗೆ ಬರುತ್ತಿಲ್ಲ).
ನಿನ್ನ ಪ್ರೀತಿಯ
ಅಪ್ಪ
4) 29-4-1994
ಪ್ರೀತಿಯ ಗೌರು,
ಇಂಗ್ಲೆಂಡ್‍ಗೆ ಮತ್ತೆ ಹೋದಾಗ ಒಂದು ಒಳ್ಳೆಯ ಅಂಗಡಿಗೆ ಹೋಗಿ ಜಾರ್ಜ್||| ಬಗ್ಗೆ ಪ್ರಕಟವಾಗಿರುವ ನಾಟಕದ ಪುಸ್ತಕವನ್ನು ಮರೆಯದೇ ತಗೊಂಡು ಬಾ. ಜಾರ್ಜ್||| ಎಂಬ ರಾಜನಿಗೆ ಅಮೆರಿಕಾದ ಸ್ವಾತಂತ್ರ್ಯ ಯುದ್ಧ ನಡೆಯುತ್ತಿರುವಾಗ ಹುಚ್ಚು ಹಿಡಿದಿತ್ತು. ಅವನು ಒಳ್ಳೆಯವನಾಗಿದ್ದರೂ ಅವನ ಸುತ್ತಲೂ ಇದ್ದ ಜನ ಅವನಿಗೆ ಹುಚ್ಚು ಹಿಡಿಸಿದ್ದರು! ಅವನ ಕಥೆ ಒಂದು ಒಳ್ಳೆಯ ನಾಟಕವಾಗಿ ಮೂಡಿಬಂದಿದೆಯಂತೆ. (ಆ ನಾಟಕದ ಪ್ರದರ್ಶನ ಈಗ ಇಂಗ್ಲೆಂಡ್‍ನಲ್ಲಿ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಬಹುಶಃ ನಾನು ಅಮೆರಿಕಾದಲ್ಲಿನ ಪ್ರದರ್ಶನದ ಬಗ್ಗೆ ವಿಮರ್ಶೆ ಓದಿರಬೇಕು) ಆ ನಾಟಕದ ಪುಸ್ತಕ ಸಿಕ್ಕರೆ ಮರೆಯದೇ ತಗೊಂಡು ಬಾ.
ನಾನೀಗ ಆರಾಮವಾಗಿದ್ದೇನೆ. rest, meditation ಮತ್ತು will powerಗಳಿಂದಾಗಿ!
ನೀ ಹೇಗಿದ್ದೀ? ಫ್ರಾನ್ಸ್ ಹೇಗಿದೆ? ನೀನು ನಿನ್ನ ಗೆಳೆಯರೊಂದಿಗೆ ಇರುವ ಹಲವು ಫೋಟೋಗಳನ್ನು ನೋಡಿದೆ. ನೀನು ಚೆನ್ನಾಗಿ ಕಾಣಿಸುತ್ತೀ..
ಚಿದು ಕಾಗದ ಬರೆದಿದ್ದ ಬೇರೆ ದೇಶಗಳಿಗೆ ಒಮ್ಮೆ ಪ್ರಯಾಣ ಮಾಡಿ ಎಂದು ಸೂಚಿಸಿದ್ದ. ಆದರೆ ನನಗೆ ಪ್ರಯಾಣ ಮಾಡುವಷ್ಟು ಆರೋಗ್ಯ ಇಲ್ಲ. ಹಾಗೆಯೇ ಈ ಟೂರಿಸ್ಟ್ ಜಾಗಗಳನ್ನು ಕಂಡರೆ ನನಗೆ ಆಸಹ್ಯ!
ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಮಳೆಯಾಗಿಲ್ಲ. ಬಹಳ ಸೆಖೆ. ಸಾಮಾನ್ಯವಾಗಿ ಏಪ್ರಿಲ್ ಕೊನೆಯ ಭಾಗದಲ್ಲಿ ಬೆಂಗಳೂರಿನಲ್ಲಿ ಮಳೆಯಾಗುತ್ತದೆ, ಅದಾದ ನಂತರ ಬೆಂಗಳೂರು ಟರ್ಫ್ ಕ್ಲಬ್‍ನವರು ರೇಸ್‍ಗಳಿಗೆ ತಮ್ಮ ಟ್ರ್ಯಾಕ್‍ಗಳನ್ನು ಸಿದ್ಧಪಡಿಸುತ್ತಾರೆ. ಈ ಬಾರಿ ಅದು doubtful.
ನಿನ್ನ ಪ್ರೀತಿಯ
ಅಪ್ಪ


