Homeಗೌರಿ ಲಂಕೇಶ್ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ

ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ

ಮೋದಿಯನ್ನು ವಿರೋಧಿಸಲಿಕ್ಕೆ ನೂರಾರು ವಿಷಯಗಳಿವೆ. ಆದರೆ ಇಂಗ್ಲಿಷ್ ಬಾರದ ವಿಚಾರಕ್ಕೆ ಅವರನ್ನು ಟ್ರೋಲ್ ಮಾಡುವುದು ಸರಿಯಲ್ಲ ಎಂದು ಗೌರಿ ಮೇಡಂ ನಮಗೆ ತಿಳಿಹೇಳಿದ್ದರು.

- Advertisement -
- Advertisement -

2007ರಲ್ಲಿ ನನಗೆ ಗೌರಿ ಲಂಕೇಶ್ ಪತ್ರಿಕೆ ಎಂದರೆ ಶಿವಸುಂದರ್ ಬರೆಯುತ್ತಿದ್ದ ಚಾರ್ವಾಕ ಅಂಕಣ ಎಂದಷ್ಟೇ ಗೊತ್ತಿತ್ತು. 2009ರ ಮಾರ್ಚ್ 08ರಂದು ಬೆಂಗಳೂರಿನಲ್ಲಿ ಪಿ.ಲಂಕೇಶ್‍ರವರ ಜನ್ಮದಿನ ಕಾರ್ಯಕ್ರಮದಲ್ಲಿ ಗೌರಿ ಮೇಡಂರವರನ್ನು ಮೊದಲ ಸಾರಿ ನೋಡಿದ್ದೆ. ಅಳುತ್ತಲೇ ಲಂಕೇಶ್‍ರವರನ್ನು ಕುರಿತು ಅವರು ಮಾತನಾಡಿದ್ದರು. ಅಲ್ಲಿಂದ ನಿಧಾನವಾಗಿ ಇಡೀ ಪತ್ರಿಕೆ ಇಷ್ಟವಾಗತೊಡಗಿತ್ತು. ಆದರೆ 2013ರ ಒಂದು ಸಂಚಿಕೆಯಲ್ಲಿ ‘ಪತ್ನಿ ಪೀಡಿತರ ಕಥೆ ವ್ಯಥೆ’ ಎಂಬ ಅಂಕಣ ಆರಂಭವಾಯ್ತು. ಮುಂದಿನ ವಾರಕ್ಕೆ ‘ಆ ಅಂಕಣ ಆರಂಭಿಸಿರುವುದರಿಂದ ದೊಡ್ಡ ಆಘಾತವಾಯಿತು’ ಎಂದು ಪತ್ರ ಬರೆದೆ. ಅದನ್ನು ಗೌರಿ ಮೇಡಂ ಪೂರ್ತಿಯಾಗಿ ಪ್ರಕಟಿಸಿದರು. ಏನಪ್ಪ ಮರಿ ಆಘಾತವಾಯ್ತ ಎಂದು ನಗುತ್ತಲೇ ಪ್ರಶ್ನಿಸಿದ ಅವರು ಆನಂತರ ಆ ಅಂಕಣ ನಿಲ್ಲಿಸಿದ್ದು ಸಮಾಧಾನ ತಂದಿತ್ತು.

ಗೌರಿ ಮೇಡಂ ಮತ್ತು ಪತ್ರಿಕೆ ಎಂದರೆ, ಅದು ನಮ್ಮದು ಎಂಬ ಸಲಿಗೆ ನನಗಿತ್ತು. ನಾನು ವಿದ್ಯಾರ್ಥಿ ಕಾರ್ಯಕರ್ತನಾಗಿದ್ದಾಗ ಎಷ್ಟೋ ಬಾರಿ ನಮ್ಮ ಹೋರಾಟಗಳಿಗೆ ಗೌರಿ ಮೇಡಂ ದೇಣಿಗೆ ನೀಡಿದ್ದಾರೆ. ಅವರು ಕಷ್ಟದಲ್ಲಿದ್ದರೂ ಸಹ ನಮಗೆಂದು ಹಣ ಇಲ್ಲ ಎಂದು ಹೇಳಿದ ನೆನಪಿಲ್ಲ.

2013-14 ರಲ್ಲಿ ಮೋದಿ ಹವಾ ಜೋರಾಗುತ್ತಿತ್ತು. ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಮೋದಿ ಘೋಷಣೆಯಾದ ನಂತರವಂತೂ ಸಾಮಾಜಿಕ ಜಾಲತಾಣದಲ್ಲಿ ಮೋದಿ ಮತ್ತು ಅವರು ಪ್ರತಿನಿಧಿಸುತ್ತಿದ್ದ ಸಿದ್ಧಾಂತದ ವಿರೋಧಿಗಳಾದ ನಮ್ಮನ್ನು ಟ್ರೋಲ್ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ನಾವು ಕೂಡ ಮೋದಿಯವರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬ ವಿಷಯವಾಗಿ ವಿಡಿಯೋವೊಂದನ್ನು ಷೇರ್ ಮಾಡಿ ಟ್ರೋಲ್ ಮಾಡಲು ಮುಂದಾದಾಗ ಗೌರಿ ಮೇಡಂ ಅದನ್ನು ತಡೆದಿದ್ದರು. ಮೋದಿಯನ್ನು ವಿರೋಧಿಸಲಿಕ್ಕೆ ನೂರಾರು ವಿಷಯಗಳಿವೆ. ಆದರೆ ಇಂಗ್ಲಿಷ್ ಬಾರದ ವಿಚಾರಕ್ಕೆ ಅವರನ್ನು ಟ್ರೋಲ್ ಮಾಡುವುದು ಸರಿಯಲ್ಲ ಎಂದು ಗೌರಿ ಮೇಡಂ ನಮಗೆ ತಿಳಿಹೇಳಿದ್ದರು. ಆಗ ಅವರ ಮೇಲಿನ ನಮ್ಮ ಗೌರವ ಇಮ್ಮಡಿಯಾಗಿತ್ತು.

2016ರ ಜನವರಿ 16 ಈ ದೇಶದ ಯುವ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರವರು ಸಾಂಸ್ಥಿಕ ಹತ್ಯೆಯಾದ ದಿನ. ಆಗ ಗೌರಿ ಮೇಡಂ ತುಂಬಾ ನೊಂದುಕೊಂಡಿದ್ದರು. ಆನಂತರ ಅವರು ಯುವ ಹೋರಾಟಗಾರ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಜಿಗ್ನೇಶ್ ಮೇವಾನಿಯವರನ್ನು ತನ್ನ ಮಕ್ಕಳೆಂದು ಭಾವಿಸಿದರು. ಆಗ ಗೌರಿ ಮೇಡಂ ಜೊತೆಗಿನ ನನ್ನ ಒಡನಾಟ ಕೂಡ ಹೆಚ್ಚಾಯಿತು. ಹೀಗೆ ಒಮ್ಮೆ ಗೌರಿ ಮೇಡಂ ಆಫೀಸ್‍ಗೆ ಹೋಗಿದ್ದಾಗ ಅವರು ಬಾ ಮರಿ ಇಲ್ಲಿ ಎಂದು ಕರೆದು, ರೋಹಿತ್ ವೇಮುಲಾನ ಸ್ನೇಹಿತ ವಿ.ಸುಂಕಣ್ಣ ಪ್ರತಿರೋಧದ ಸಂಕೇತವಾಗಿ ಹೈದರಾಬಾದ್ ಕೇಂದ್ರೀಯ ವಿವಿಯ ಕುಲಪತಿ ಅಪ್ಪರಾವ್‍ರಿಂದ ತನ್ನ ಪಿಎಚ್‍ಡಿ ಪ್ರಮಾಣ ಪತ್ರ ಪಡೆಯಲು ನಿರಾಕರಿಸಿದ್ದ ವಿಡಿಯೋವನ್ನು ನಾಲ್ಕೈದು ಬಾರಿ ತೋರಿಸಿ ಸಮಾಧಾನಪಟ್ಟಿದ್ದರು.

ನಕ್ಸಲ್ ಚಳವಳಿಯಿಂದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್‍ರವರು ಮುಖ್ಯವಾಹಿನಿಗೆ ಬರುವುದರಲ್ಲಿ, ಭೂಮಿ ಮತ್ತು ವಸತಿ ಹೋರಾಟವನ್ನು ಸರ್ಕಾರದ ಗಮನಕ್ಕೆ ತರುವುದರಲ್ಲಿ ಗೌರಿ ಮೇಡಂ ಶ್ರಮವಿತ್ತು. ನಂತರ ನಡೆದ ಉಡುಪಿ ಚಲೋ, ತುಮಕೂರು ಚಲೋ ಹೋರಾಟಗಳಲ್ಲಿ ಕೂಡ ಅವರು ಸಕ್ರಿಯವಾಗಿ ತೊಡಗಿಸಿಕೊಂಡು ನಮಗೆ ಸ್ಫೂರ್ತಿ ನೀಡಿದರು.

ನಂತರ ನಾನು ಗಂಗಾವತಿಯಲ್ಲಿದ್ದುಕೊಂಡು ವಿದ್ಯಾರ್ಥಿ ಚಳವಳಿಯಲ್ಲಿ ತೊಡಗಿಕೊಳ್ಳುತ್ತಲೇ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಕುರಿತು ‘ಗೌರಿ ಲಂಕೇಶ್’ ಪತ್ರಿಕೆಗೆ ವರದಿ ಮಾಡುತ್ತಿದ್ದೆ. ಆಗ ಒಂದು ತಿಂಗಳು ಪೂರ್ತಿ ಬಳ್ಳಾರಿಯ ಶಾಸಕ ಅನಿಲ್ ಲಾಡ್‍ರವರ ಅಕ್ರಮ ಗಣಿಗಾರಿಕೆ, ಜಿಂದಾಲ್ ಕಂಪನಿಯ ಪರಿಸರ ನಾಶದ ವಿರುದ್ಧ ವರದಿ ಮಾಡಿದ್ದೆ. ಆಗೊಮ್ಮೆ ಬೆಂಗಳೂರಿನಲ್ಲಿ ಸಿಕ್ಕಿದ ಮೇಡಂ, ಅನಿಲ್ ಲಾಡ್ ನನ್ ಫ್ರೆಂಡು ಕಣಪ್ಪ ಅನ್ನುತ್ತಿರುವಾಗಲೇ ಮಧ್ಯೆ ಬಾಯಿ ಹಾಕಿದ ನಾನು ‘ನಿಮ್ ಫ್ರೆಂಡ್ ಆದರೆ ಬಿಟ್ಟುಬಿಡಬೇಕಾ?’ ಎಂದು ಪ್ರಶ್ನಿಸಿದೆ. ಆಗ ಅವರು ಇಲ್ಲ, ಇಲ್ಲ ಬರಿ ಸುಮ್ನೆ ಹೇಳಿದೆ ಅಷ್ಟೇ ಎಂದರು.

2017ರ ಆಗಸ್ಟ್ 5-6 ರಂದು ಬೆಂಗಳೂರಿನಲ್ಲಿ “ಹೋರಾಟನಿರತ ವಿದ್ಯಾರ್ಥಿ ಸಂಘಟನೆಗಳ ರಾಷ್ಟ್ರೀಯ ಸಮಾವೇಶ” ಹಮ್ಮಿಕೊಂಡಿದ್ದವು. ವಿವಿಧ ರಾಜ್ಯಗಳ ನೂರಾರು ವಿದ್ಯಾರ್ಥಿ ಮುಖಂಡರು ಬೆಂಗಳೂರಿಗೆ ಆಗಮಿಸಿದ್ದರು. ಆಗ ಗೌರಿ ಮೇಡಂ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವಿದ್ಯಾರ್ಥಿಗಳೇ ದೇಶದ ಭವಿಷ್ಯ ಎಂದು ಗೌರಿ ಮೇಡಂ ನಂಬಿದ್ದರು.

ಈಗ ನಾನ್ಯಾಕೆ ಅವರ ಮೇಲೆ ಅಷ್ಟು ಜೋರು ಮಾಡುತ್ತಿದ್ದೆ ಅನಿಸುತ್ತದೆ. ಅವರ ಜೊತೆ ಸಾಕಷ್ಟು ಜಗಳವಾಡುವ ಅವಕಾಶ ನಮಗಿತ್ತು. ಅವರು ಪತ್ರಿಕೆ ನಡೆಸುವುದನ್ನೇ ಸಾಮಾಜಿಕ ಹೋರಾಟ ಅಂದುಕೊಂಡಿದ್ದಾರೆ, ಬೀದಿಗೆ ಬರಲಿ ಅವರಿಗೆ ಗೊತ್ತಾಗುತ್ತದೆ ಎಂದು ನಾನು ಕೆಲವೊಮ್ಮೆ ಗೊಣಗಿದುಂಟು. ಈಗ ಅವರಿಲ್ಲದಾಗ, ಮುಖ್ಯವಾಹಿನಿ ಮಾಧ್ಯಮಗಳು ಮಾರಿಕೊಂಡಿರುವಾಗಿ, ಒಂದು ಸ್ವತಂತ್ರ ಪತ್ರಿಕೆ ನಡೆಸುವುದು ಎಷ್ಟು ಕಷ್ಟ ಎಂದು ಅರಿವಿಗೆ ಬರುತ್ತಿದೆ.

  • ಮುತ್ತುರಾಜು

ಇದನ್ನೂ ಓದಿ: ಗೌರಿ ಕಾರ್ನರ್: ಗೌರಿ ಲಂಕೇಶರ ಮೇಲೆ ಮತ್ತೆ ನೀಚಮಟ್ಟದ ದಾಳಿ- ನಾವು ಪ್ರತಿಕ್ರಿಯೆ ನೀಡುವುದು ಸರಿಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...