Homeಮುಖಪುಟಕಾಯ್ದೆ ವಿರೋಧಿ ಮೋದಿ ಸರ್ಕಾರದ ಕಾಯ್ದೆ ತಿದ್ದುಪಡಿಗಳು!

ಕಾಯ್ದೆ ವಿರೋಧಿ ಮೋದಿ ಸರ್ಕಾರದ ಕಾಯ್ದೆ ತಿದ್ದುಪಡಿಗಳು!

ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಇಂತಹ ಕಾನೂನುಗಳು ಅಪಥ್ಯವೆನಿಸಲು ಅವರ ಹಿತಾಸಕ್ತಿ, ಅವರು ಪ್ರತಿನಿಧಿಸುವ ಸಮುದಾಯ/ವರ್ಗಗಳ ಹಿತಾಸಕ್ತಿಯೇ ಕಾರಣವಾಗಿದ್ದವು.

- Advertisement -
- Advertisement -

ಪ್ರಧಾನಿಯಾಗಿ 4 ತಿಂಗಳ ನಂತರ ಸೆಪ್ಟೆಂಬರ್ 29, 2014ರಂದು ನರೇಂದ್ರ ಮೋದಿಯವರು ಅಮೆರಿಕದ ನ್ಯೂಯಾರ್ಕಿನ ಮ್ಯಾಡಿಸನ್ ಸ್ಕೇರ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅಂದು ಅವರು ‘ಹಿಂದಿನ ಸರ್ಕಾರವು ಹೊಸ ಹೊಸ ಕಾನೂನನ್ನು ತರುವುದರಲ್ಲಿ ಸಂತೋಷ ಕಾಣುತ್ತಿತ್ತು. ನಾನು ಪ್ರತಿದಿನವೂ ಒಂದೊಂದು ಅಪ್ರಸ್ತುತ ಕಾನೂನನ್ನು ತೆಗೆದುಹಾಕಲಿದ್ದೇನೆ’ ಎಂದು ಘೋಷಿಸಿದ್ದರು. ಅದೇ ವೇಗದಲ್ಲಿ ಹೊರಟಿದ್ದರೆ ಈ ಹೊತ್ತಿಗೆ ದೇಶದಲ್ಲಿ ಒಂದು ಕಾನೂನೂ ಇರಬಾರದಿತ್ತು. ಆದರೆ ಕಾನೂನುಗಳಿವೆ ಮಾತ್ರವಲ್ಲಾ, ಅಂತಹ ಹಲವಾರು ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ಕಾನೂನುಗಳನ್ನು ಅಪ್‍ಡೇಟ್ ಮಾಡಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳಬಹುದಾದರೂ, ಕಾನೂನುಗಳನ್ನು ತೆಗೆಯಲಾಗಿಲ್ಲ.

ಇಡೀ ಬೆಳವಣಿಗೆಯನ್ನು ಗಮನಿಸಿದರೆ ಬಿಜೆಪಿ ಪ್ರತಿಪಾದಿಸುವ ಚಿಂತನೆಯ ಮೂಲ ಅರ್ಥವಾಗುತ್ತದೆ. ರೂಲ್ ಆಫ್ ಲಾ ಎಂಬೊಂದು ಮಾತಿದೆ. ಅಂದರೆ ಯಾರು ಆಳುತ್ತಿರುವರೋ ಅವರು ಹೇಳಿದಂತೆ ದೇಶ ನಡೆಯುವುದಿಲ್ಲ, ಹಾಗೆ ಮಾಡಿದರೆ ಅದು ರಾಜಪ್ರಭುತ್ವವಾಗಿಬಿಡುತ್ತದೆ; ಬದಲಿಗೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನೀತಿಯ ಕುರಿತಾಗಿ ಹೇಳಲ್ಪಡುವ ಮಾತು ಅದು. ಆದರೆ, ಪ್ರಜಾಪ್ರಭುತ್ವವು ವಿಸ್ತರಣೆಯಾದಂತೆಲ್ಲಾ ಅಷ್ಟೇ ಕಾನೂನುಗಳೂ ಸಾಲವು ಎಂದಾಯಿತು. ಶೋಷಿತರ ಪರವಾಗಿ, ಅವರ ಹಕ್ಕುಗಳನ್ನು ಕಾಪಾಡುವ ಕೆಲವು ಕಾನೂನುಗಳ ಅಗತ್ಯ ಕಾಣಿಸಿಕೊಂಡಿತು. ದೌರ್ಜನ್ಯಗಳನ್ನು ತಡೆಯಲು ‘ಎಲ್ಲರೂ ಸಮಾನರು’ ಎಂದಷ್ಟೇ ಹೇಳಿದರೆ ಸಾಲದು; ಏಕೆಂದರೆ ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂದಾಕ್ಷಣ ದೌರ್ಜನ್ಯಕ್ಕೊಳಗಾಗುವವರು, ದುಡಿಯುವ ಕಾರ್ಮಿಕರು ಆ ಕಾನೂನಿನಡಿಯಲ್ಲಿ ಪ್ರಬಲರ ಎದುರು ಗೆಲ್ಲುವುದು ಸುಲಭವಲ್ಲ. ಹೀಗಾಗಿಯೇ ಮಹಿಳೆಯರ, ದಲಿತರ, ಕಾರ್ಮಿಕರ ಹಾಗೂ ಭೂಮಿ ನಂಬಿ ಬದುಕುತ್ತಿದ್ದ ರೈತರ ಪರವಾದ ಕೆಲವು ಕಾನೂನುಗಳು ಬಂದವು.

Photo Courtesy: BankExamToday

ಮೋದಿಯವರು ಉಲ್ಲೇಖಿಸಿದ ‘ಅವರ ಹಿಂದಿನ ಸರ್ಕಾರಗಳು’ ತಂದ ಮಾಹಿತಿ ಹಕ್ಕಿನ ಕಾಯ್ದೆ, ಅರಣ್ಯ ಕಾಯ್ದೆ, ಭೂ ಸ್ವಾಧೀನ ನಡೆದಾಗ ಪರಿಹಾರ ನೀಡುವ ಕಾಯ್ದೆಯಂತಹ ಹಲವು ಕಾಯ್ದೆಗಳು ವಾಸ್ತವದಲ್ಲಿ ಈ ರೀತಿ ಶೋಷಿತರ ಪರವಾಗಿ ಬಂದಂಥವು. ಅದೇ ರೀತಿಯಾಗಿ ಪರಿಸರ ಸಂಬಂಧಿ ಕಾನೂನುಗಳು ಸಹಾ ಕಟ್ಟುನಿಟ್ಟಾದ ರೂಪದಲ್ಲಿ ಬಂದವು. ಇವೆಲ್ಲವೂ ಸಹಾ ದಮನಿತ ಅಥವಾ ಆಸಕ್ತ ಜನಸಾಮಾನ್ಯರ ಹೋರಾಟಗಳ ಕಾರಣದಿಂದ ಸರ್ಕಾರಗಳು ಜಾರಿಗೆ ತರಲೇಬೇಕಾಗಿ ಬಂದಿತ್ತು ಎಂಬುದನ್ನೂ ಮರೆಯಲಾಗದು.

ಆದರೆ, ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಇಂತಹ ಕಾನೂನುಗಳು ಅಪಥ್ಯವೆನಿಸಲು ಅವರ ಹಿತಾಸಕ್ತಿ, ಅವರು ಪ್ರತಿನಿಧಿಸುವ ಸಮುದಾಯ/ವರ್ಗಗಳ ಹಿತಾಸಕ್ತಿಯೇ ಕಾರಣವಾಗಿದ್ದವು. ಹಾಗಾಗಿ ಅವರು ದಿನಕ್ಕೊಂದು ಕಾನೂನು ಕಿತ್ತುಹಾಕುವ ಮಾತನ್ನಾಡಿದ್ದರು. ಆ ಕಾನೂನುಗಳನ್ನು ತೆಗೆದುಬಿಡಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಮತ್ತು ಕಾನೂನು ತಜ್ಞರು ಅವರಿಗೆ ಹೇಳಿರಬೇಕು. ಹಾಗಾಗಿ ಅವನ್ನು ಮೂಲಆಶಯಗಳಿಗೆ ವಿರುದ್ಧವಾಗಿ ತಿರುಚಲು ಅವರು ಆದೇಶ ಕೊಟ್ಟಂತಿದೆ. ಕಾರ್ಮಿಕರ ಹಕ್ಕುಗಳನ್ನು ಎತ್ತಿಹಿಡಿಯುವ ಕಾನೂನುಗಳು ಮೊದಲು ಅವರ ಕಣ್ಣಿಗೆ ಬಿದ್ದಿದ್ದವು. ಅವುಗಳನ್ನು ಬದಲಿಸಲು ಶುರು ಮಾಡಿ ಮೊದಲ ಅವಧಿಯಲ್ಲಿ ಹಿಂಜರಿಯಬೇಕಾಗಿ ಬಂದಿತ್ತು. ಅದಕ್ಕಿಂತ ಮೊದಲು ಭೂಸ್ವಾಧೀನ ಮಾಡಿಕೊಂಡಾಗ ನ್ಯಾಯಯುತ ಪರಿಹಾರ ಕಲ್ಪಿಸಬೇಕೆನ್ನುವ ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತರಲು ಹೊರಟಿದ್ದರು. ಅದನ್ನು ದೇಶಾದ್ಯಂತ ನಡೆದ ಪ್ರತಿಭಟನೆಗಳು ಹಿಮ್ಮೆಟ್ಟಿಸಿದ್ದವು..

Photo Courtesy: The Indian Express

ಇದೀಗ ಎರಡನೆಯ ಬಾರಿಗೆ ಗೆದ್ದು ಬಂದ ನಂತರ, ಸರಣಿ ಕಾನೂನು ತಿದ್ದುಪಡಿಗಳಿಗೆ ಮುಂದಾಗಿದ್ದಾರೆ. ಅದಕ್ಕಾಗಿ ಅವರು ಬಳಸಿಕೊಂಡಿದ್ದು ಕೊರೊನಾ ಸಂದರ್ಭದ ನಿರ್ಬಂಧಗಳನ್ನು. ಆಗ ಯಾರೂ ದನಿಯೆತ್ತದ ಸನ್ನಿವೇಶವಿರುತ್ತದೆ; ಪ್ರತಿಭಟನೆಗಳಿಗೂ ಅವಕಾಶವಿರುವುದಿಲ್ಲ, ಹಾಗಾಗಿ ಜನರ ವಿರುದ್ಧವಾಗಿ ತಿದ್ದುಪಡಿಗಳನ್ನು ಹೊರಟರು. ಅದೇ ಸಂದರ್ಭದಲ್ಲಿ ಕೊರೊನಾ ನಿರ್ಬಂಧಗಳಿಂದ ಶಾಸನಸಭೆಗಳೂ ನಡೆಯುತ್ತಿರಲಿಲ್ಲವಾದ್ದರಿಂದ ಸುಗ್ರೀವಾಜ್ಞೆಯ ಮೂಲಕ ಅದನ್ನು ಸಾಧಿಸಿದರು. ಇದೀಗ ಮತ್ತೆ ಸಂಸತ್ತು ಮತ್ತು ವಿಧಾನಮಂಡಲಗಳು ಅಧಿವೇಶನಗೊಳ್ಳುತ್ತಿವೆಯಾದ್ದರಿಂದ ಎಲ್ಲೆಡೆ ಅವುಗಳಿಗೆ ವಿರೋಧ ಬರುವುದು ಖಚಿತವಾಗಿದೆ. ಬಿಜೆಪಿಯ ಮಿತ್ರ ಪಕ್ಷ ಅಕಾಲಿದಳದ ಸಚಿವೆ ರೈತ ವಿರೋಧಿ ತಿದ್ದುಪಡಿಗಳನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಲ್ಲದೇ ಇಡೀ ಅಕಾಲಿ ದಳವೆ ಎನ್‌ಡಿಎಯಿಂದ ಹೊರಬಂದಿದೆ. ಅಂದರೆ ಪಂಜಾಬಿನ ರೈತ ಹೋರಾಟದ ಬಿಸಿ ಅವರಿಗೆ ತಟ್ಟುತ್ತಿದೆ ಎಂದಾಯಿತು.

ಹೀಗಿದ್ದೂ ರಾಜ್ಯ ಸರ್ಕಾರವು ಒಕ್ಕೂಟ ಸರ್ಕಾರದ ಅಣತಿಯ ಮೇರೆಗೆ ಕಾನೂನುಗಳ ಬದಲಾವಣೆಗೆ ಶುರು ಹಚ್ಚಿಕೊಂಡಿದೆ. ಇದನ್ನು ವಿರೋಧಿಸಿ ರಾಜ್ಯದ ರೈತ, ದಲಿತ, ಕಾರ್ಮಿಕರ ಸಂಘಟನೆಗಳು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಪ್ರಜ್ಞಾವಂತರು ಅವರುಗಳ ಬೆನ್ನಿಗೆ ನಿಲ್ಲಬೇಕಿದೆ.


ಇದನ್ನೂ ಒದಿ: ಗೌರಿ ಕಾರ್ನರ್: ಗೌರಿ ಲಂಕೇಶರ ಮೇಲೆ ಮತ್ತೆ ನೀಚಮಟ್ಟದ ದಾಳಿ- ನಾವು ಪ್ರತಿಕ್ರಿಯೆ ನೀಡುವುದು ಸರಿಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...