ಪ್ರತಿಭಟನಾ ನಿತರ ರೈತರು ಮತ್ತು ಸರ್ಕಾರದ ನಡುವಿನ ಐದನೇ ಸುತ್ತಿನ ಮಾತುಕತೆ ಶನಿವಾರ ವಿಫಲವಾಗಿದ್ದರಿಂದ, ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಲು ಡಿಸೆಂಬರ್ 8 ರ ಮಂಗಳವಾರ ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ.
ಕೃಷಿ ಮಸೂದೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಕೇಂದ್ರ ಸರ್ಕಾರ ಪದೇ ಪದೇ ಆಶ್ವಾಸನೆ ನೀಡಿದೆ. ಆದರೆ ಸಭೆಗಳು ವಿಫಲವಾಗುತ್ತಿರುವುದರಿಂದ, ಡಿಸೆಂಬರ್ 8 ಕ್ಕೆ ಘೋಷಿಸಲಾದ ಭಾರತ್ ಬಂದ್ ಯೋಜಿಸಿದಂತೆ ನಡೆಯಲಿದೆ ಎಂದು ಕೃಷಿ ಒಕ್ಕೂಟದ ಮುಖಂಡರು ಹೇಳಿದ್ದಾರೆ. ರೈತರ ಪ್ರತಿಭಟನೆಗೆ ಬಿಜೆಪಿಯೇತರ ಸರ್ಕಾರಗಳು, ಎಡ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ರ ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ- 2020 ಇವುಗಳನ್ನು ವಿರೋಧಿಸಿ ರೈತರು ಕಳೆದ 11 ದಿನಗಳಿಂದಲೂ ಪ್ರತಿಭಟಿಸುತ್ತಿದ್ದಾರೆ.
“ಸರ್ಕಾರವು ಕೃಷಿ ಕಾನೂನುಗಳ ಸಂಬಂಧ ಕರಡನ್ನು ಸಿದ್ಧಪಡಿಸಿ ನಮಗೆ ನೀಡುತ್ತದೆ. ಈ ಕುರಿತು ಕೇಂದ್ರ ಸರ್ಕಾರ ರಾಜ್ಯಗಳನ್ನೂ ಸಂಪರ್ಕಿಸುತ್ತಾರೆ ಎಂದು ತಿಳಿಸಿದ್ದಾರೆ. ಎಂಎಸ್‌ಪಿ ಬಗ್ಗೆಯೂ ಚರ್ಚೆಗಳು ನಡೆದವು. ಆದರೆ, ನಾವು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕುರಿತು ಮಾತನಾಡಬೇಕು ಎಂದು ಹೇಳಿದ್ದೇವೆ. ಈ ಮೊದಲು ಘೋಷಿಸಿದಂತೆ ಭಾರತ್ ಬಂದ್ ನಡೆಯಲಿದೆ” ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಹೇಳಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 8 ರ ಮಂಗಳವಾರ ಭಾರತ್ ಬಂದ್‌ಗೆ ಕರೆ ನೀಡಿದ ಹೋರಾಟನಿರತ ರೈತರು
ಸರ್ಕಾರದ ಜೊತೆ ಮಾತುಕತೆಯಿಂದ ಪ್ರಯೋಜನವಿಲ್ಲ. ಅವರು ಕಾಯ್ದೆಗಳನ್ನು ವಾಪಸ್ ಪಡೆಯಲು ಮುಂದಾಗುತ್ತಿಲ್ಲ. ಹಾಗಾಗಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯ. ಹಾಗಾಗಿ ಮಂಗಳವಾರ ಭಾರತ್ ಬಂದ್ ನಡೆಸಲಿದ್ದೇವೆ. ದೆಹಲಿಯ ಪ್ರತಿ ರಸ್ತೆಗಳನ್ನು, ಪ್ರತಿ ಟೋಲ್‌ಗಳನ್ನು ಬಂದ್ ಮಾಡುತ್ತೇವೆ ಎಂದು ರೈತರು ಘೋಷಿಸಿದ್ದರು.
ರೈತರ ಭಾರತ್ ಬಂದ್‌ಗೆ, ಕಾಂಗ್ರೆಸ್, ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) 10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಗಳು ದೇಶಾದ್ಯಂತ ಮುಷ್ಕರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿವೆ.
Telangana CM & TRS chief K Chandrashekhar Rao (in file photo) has extended TRS’ total support to Bharat bandh called on December 8 by farmers. He said that the TRS rank & file would participate actively in the proposed bandh: Chief Minister's Office pic.twitter.com/ICXIAy4gbZ
— ANI (@ANI) December 6, 2020
ಇದನ್ನೂ ಓದಿ: ದೆಹಲಿ ಚಲೋ: ರೈತ ಹೋರಾಟಕ್ಕೆ ಇಂಗ್ಲೇಂಡ್‌ನ 36 ಸಂಸದರ ಬೆಂಬಲ
ಭಾರತ್ ಬಂದ್ ಕರೆಯ ಭಾಗವಾಗಿ, ರೈತರು ದೆಹಲಿಗೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಲು ಸಿದ್ಧರಾಗಿದ್ದಾರೆ. ಟೋಲ್ ಪ್ಲಾಜಾಗಳನ್ನು ಸಹ ಆಕ್ರಮಿಸಲಾಗುವುದು ಮತ್ತು ಕೇಂದ್ರ ಸರ್ಕಾರ ಮತ್ತು ಕಾರ್ಪೊರೇಟ್ ಸಂಸ್ಥೆಗಳ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳಲಿದೆ.
ಎಡ ಪಕ್ಷಗಳು ಭಾರತ್ ಬಂದ್‌ಗಾಗಿ ರೈತರ ಕರೆಗೆ ತಮ್ಮ ಬೆಂಬಲವನ್ನು ಸೂಚಿಸಿದ್ದು, ರೈತರಿಗೆ ಸಹಕಾರ ನೀಡಿ ಪ್ರತಿಭಟನೆಗೆ ಬೆಂಬಲ ತೋರಿಸುವಂತೆ ಇತರ ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದೆ. ಸಿಪಿಐ, ಸಿಪಿಐ (ಎಂ) ಮತ್ತು ಸಿಪಿಎಂ (ಎಂಎಲ್), ಕ್ರಾಂತಿಕಾರಿ ಸಮಾಜವಾದಿ ಪಕ್ಷ ಮತ್ತು ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC), ಹಿಂದ್ ಮಜ್ದೂರ್ ಸಭಾ (HMS), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU), ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಮತ್ತು ಟ್ರೇಡ್ ಯೂನಿಯನ್ ಕೋ- ಆರ್ಡಿನೇಷನ್ ಸೆಂಟರ್ (TUCC) ಕಾರ್ಮಿಕ ಸಂಘಟನೆಗಳು ಸಹ ರೈತರ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಿವೆ.
ಇದನ್ನೂ ಓದಿ: ಹೋರಾಟ ಹತ್ತಿಕ್ಕಲು ಸುಪ್ರೀಂಕೋರ್ಟ್ ಬಳಕೆ: ರೈತ ಸಂಘಟನೆಗಳ ಒಕ್ಕೂಟ ಖಂಡನೆ

ಬಿಹಾರದ ಗಾಂಧಿ ಮೈದಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ್ದಕ್ಕಾಗಿ ಪಾಟ್ನಾ ಪೊಲೀಸರು ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್ ಮತ್ತು ಇತರ 18 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ದೆಹಲಿ ಚಲೋ ಆಂದೋಲನಕ್ಕೆ ಒಗ್ಗಟ್ಟಾಗಿ ಪ್ರತಿಭಟನೆ ನಡೆಸಬೇಕೆಂದು ಬಿಹಾರ ವಿಧಾನಸಭೆ ಪ್ರತಿಪಕ್ಷದ ನಾಯಕ ತೇಜಶ್ವಿ ಯಾದವ್ ಕರೆ ನೀಡಿದ್ದರು.
ಆರ್‌ಜೆಡಿ, ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಹಿರಿಯ ಮುಖಂಡರು ಶನಿವಾರ ಧರಣಿ ನಡೆಸಿದ್ದರು. ಧರಣಿ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದೆ ಎಂದು ಎಫ್‌ಐಆರ್ ದಾಖಲಿಸಲಾಗಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ರೈತರ ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆಗಳು ನಡೆಯಲಿವೆ. ಪ್ರತಿಭನಟನಾ ನಿರತ ರೈತ ಸಂಘಟನೆಗಳು, ಉತ್ತರ ಪ್ರದೇಶ ಮತ್ತು ಹರಿಯಾಣ ಗಡಿಯ ರೈತರಿಗೆ ತಮ್ಮೊಂದಿಗೆ ಸೇರಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕಳೆದ 10 ದಿನಗಳಿಂದ, ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನು (ಎನ್‌ಸಿಆರ್) ಸಂಪರ್ಕಿಸುವ ರಸ್ತೆಗಳು, ದೆಹಲಿ ಗಡಿ ಭಾಗಗಳು ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳ ಸಾವಿರಾರು ರೈತರ ಪ್ರತಿಭಟನೆಗೆ ಸಾಕ್ಷಿಯಾಗಿದೆ.


