| ಸುರೇಶ್ ಕಂಜರ್ಪಣೆ |
ಡಬ್ಲ್ಯೂ.ಬಿ. ಯೇಟ್ಸ್ ತನ್ನ ಸುವಿಖ್ಯಾತ ದಿ ಸೆಕೆಂಡ್ ಕಮಿಂಗ್ ಕವನದಲ್ಲಿ ಡೇಗೆಯೊಂದು ಕೇಂದ್ರವೊಂದರ ಸುತ್ತ ವೃತ್ತಾಕಾರವಾಗಿ ವಿಸ್ತರಿಸುತ್ತಾ ಹಾರುವ ಚಿತ್ರ ಕೊಡುತ್ತಾನೆ. ಡೇಗೆ ಒಂದು ಕೇಂದ್ರದ ಸುತ್ತ ಸುತ್ತುತ್ತಾ ವಿಸ್ತರಿಸುತ್ತಾ ಹಾರುತ್ತದೆ. ಆದರೆ ಯಾವುದೋ ಒಂದು ಕ್ಷಣ ವೃತ್ತದ ಹೊರ ಅಂಚಿನ ಬಿಂದುವನ್ನೇ ಕೇಂದ್ರವೆಂದು ಬಗೆದು, ಈಗ ಹೊಸ ಕೇಂದ್ರದ ಸುತ್ತ ತಿರುಗುತ್ತದೆ. ಅರ್ಥಾತ್ ಮೂಲ ಕೇಂದ್ರದಿಂದ ಬಲು ದೂರ ಸಾಗಿರುತ್ತದೆ. ಈ ಸುತ್ತುವ ಕ್ರಿಯೆಯಲ್ಲಿ ಅದು ಆಗಾಗ್ಗೆ ಹಳೇ ವೃತ್ತದ ಭಾಗವನ್ನು ದಾಟುವ ಕಾರಣ ಒಂದು ಗೊಂದಲ ಇರುತ್ತದೆ. ಕೇಂದ್ರಕ್ಕೆ ಹಿಡಿಯುವ ಶಕ್ತಿ ಇಲ್ಲ. ಅದರ ಗುರುತ್ವಾಕರ್ಷಣೆ ಶಕ್ತಿಯಿಂದ ವಸ್ತುಗಳು ಕಳಚಿ ಚೆಲ್ಲಾಪಿಲ್ಲಿ ಉದುರುತ್ತವೆ ಎಂದು ಯೇಟ್ಸ್ ವಿಷಾದದಲ್ಲಿ ಹೇಳುತ್ತಾನೆ . ಅಚಿಬೆ ತನ್ನ ಜಗತ್ಪ್ರಸಿದ್ಧ ಕಾಂದಂಬರಿಗೆ ಇದೇ ಹೆಸರು ಕೊಡುತ್ತಾನೆ. (“ಥಿಂಗ್ಸ್ ಫಾಲ್ ಅಪಾರ್ಟ್”).
ಭಾಜಪದಲ್ಲಿ ನಿರ್ಗಮಿಸಿದ ನಾಯಕರನ್ನು ಕಂಡಾಗ ಇದು ನೆನಪಾಯಿತು. ಅನಂತಕುಮಾರ್ ಮತ್ತು ಪರಿಕರ್ ಭೌತಿಕವಾಗಿ ನಿರ್ಗಮಿಸಿದರೆ, ಅನಾದಿ ಕಾಲದ ನಾಯಕರಾದ ಅದ್ವಾನಿ ಮತ್ತು ಮುರಳಿ ಮನೋಹರ ಜೋಡಿ ಸಾಂಕೇತಿಕವಾಗಿ ನಿರ್ಗಮಿಸಿದ್ದಾರೆ.
ಹಿರಿಯಬ್ಬರು, ಮತ್ತು ಅವರ ಶಿಷ್ಯರಿಬ್ಬರು ಭಾಜಪದ ಕಳಚಿದ ಕೊಂಡಿಯ ಸಂಕೇತವಾಗಿದ್ದಾರೆ. ಸಾಂವಿಧಾನಿಕ ಭಾಷೆ, ಶಿಷ್ಟಾಚಾರ, ತಮಗೊಂದು ಸೈದ್ಧಾಂತಿಕ ಭೂಮಿಕೆ ಇದೆ ಎಂಬಂಥಾ ವಾದ- ಇವೆಲ್ಲಾ ಇವರಲ್ಲಿತ್ತು. ಮುರಳಿಮನೋಹರ ಜೋಷಿ ಭೌತಶಾಸ್ತ್ರದ ಪ್ರಾಧ್ಯಾಪಕ. ಕಲಿತ ಶಾಸ್ತ್ರದ ವೈಜ್ಞಾನಿಕತೆ ಅಂತರ್ಗತವಾಗಲಿಲ್ಲ ಎಂಬುದರ ಪುರಾವೆಯಾಗಿ ಉಳಿದರು. ಕಾಕತಾಳೀಯವಾಗಿ ಪರಿಕರ್ ಕೂಡಾ ಐಐಟಿಯಲ್ಲಿ ಓದಿಯೂ ಹಿಂದುತ್ವವನ್ನು ಅಪ್ಪಿಕೊಂಡರು. ಆಧುನಿಕ ಸಮಾಜಶಾಸ್ತ್ರೀಯ ವಿವರಗಳು ಅವರೊಳಗೆ ಇಳಿಯಲಿಲ್ಲ. ಇದು ಕಾಕತಾಳೀಯ ಅಲ್ಲ. ಆದರೆ ನಮ್ಮ ಸಂವಿಧಾನದ ಆಶಯಗಳು ಎಷ್ಟು ಘನವಾಗಿತ್ತೆಂದರೆ ಇವರಿಗೆ ಅದನ್ನು ಗೌರವಿಸದೇ ಔಪಚಾರಿಕ ಮನ್ನಣೆ ಸಾಧ್ಯವಿಲ್ಲ ಎಂಬ ಪ್ರಜ್ಞೆ ಇತ್ತು.
ಈಗ ಹೊಸ ಕೇಂದ್ರದ ಸುತ್ತ ಡೇಗೆ ಸುತ್ತತೊಡಗಿದೆ. ಕೇಂದ್ರ ಹಳೆಯದೇ ಎಂದು ಅದು ನಂಬಿಸಲು ನೋಡುತ್ತಿದೆ.ಮೋದಿ ಮತ್ತು ಶಾ ಜೋಡಿ ಭಾಜಪವನ್ನು ದೇಶದ ಸಾಂವಿಧಾನಿಕ ನೈತಿಕ ಕೇಂದ್ರದ ಸೆಳವಿಂದ ಬಲು ದೂರ ಒಯ್ಯುತ್ತಿದ್ದಾರೆ. ವಿಸ್ತಾರಗೊಳ್ಳುವ ಭ್ರಮಾತ್ಮಕ ಚಲನೆಯಲ್ಲಿ ಇದಕ್ಕೆ ಹಿಡಿದಿಟ್ಟುಕೊಳ್ಳುವ ಗುರುತ್ವ ಕೇಂದ್ರವೂ ಇಲ್ಲದೇ, ಕ್ರಮೇಣ ಇದೊಂದು ಅರಾಜಕ ಬಿಡಿಭಾಗಗಳ ಮೂಟೆಯಾಗಬಲ್ಲುದು.
ಒಂದಷ್ಟು ಜನ ಮೋದಿ Generationನ ನಾಯಕರ ಮಾತು ಕೇಳಿದರೆ ಅವರ್ಯಾರಿಗೂ ಈ ದೇಶದ ವೈವಿಧ್ಯತೆ, ಸಮಸ್ಯೆಗಳ ಸಂಕೀರ್ಣತೆ, ಸಾಮಾಜಿಕ ಅಸಮತೋಲನದ ಬಗ್ಗೆ ಅರಿವಿದ್ದಂತೆ ಕಾಣುತ್ತಿಲ್ಲ. ಬಿಡಿಬಿಡಿಯಾಗಿ ಗೆದ್ದು ಅಧಿಕಾರ ಬಲಪಡಿಸುವ ವಾಂಛೆಯಿಂದಾಚೆ ಇವರ ದೃಷ್ಟಿ ಚಾಚಿದಂತೆ ಕಾಣುತ್ತಿಲ್ಲ.
ಕಾಂಗ್ರೆಸ್ಸಿನ ಕಥೆಯೂ ಇದೇ. ಆದರೆ ಅದು ಹೆಚ್ಚು ನಿರ್ವೀರ್ಯ ಚಲನೆಯಲ್ಲಿ ಸುತ್ತುತ್ತಿದೆ. ಅದರ ಮೂಲ ಕೇಂದ್ರವಾದ ಸೆಕ್ಯುಲರ್ – ಸಮಪಾಲಿನ ಸಮಾಜದ ಸುತ್ತ ಸುತ್ತುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಆದರೆ ಅದರ ಹೊಸ ಕೇಂದ್ರ ಮೂಲ ಕೇಂದ್ರದ ಅಂಚಿನ ಕ್ಷುಲ್ಲಕ ಬಿಂದು ಅಷ್ಟೇ.
ಈ ಕೇಂದ್ರದ ಸುತ್ತ ಅದು ಈಗಾಗಲೇ ಪಡಪೋಶಿಯಾದ ನುಡಿಕಟ್ಟು, ಹೇಳಿಕೆಗಳನ್ನು ಮುಂದಿಡುತ್ತಾ ಭಾಜಪಕ್ಕೆ ಪರ್ಯಾಯ ಎಂಬಂತೆ ನಟಿಸುತ್ತಿದೆ. ಭಾಜಪವನ್ನು ತಡವಿ ನಿಲ್ಲಿಸುವ ಶಕ್ತಿಯೇ ಅದಕ್ಕಿಲ್ಲ. ಅದಕ್ಕೆ ಕಾರಣ ಭಾಜಪ ಅಲ್ಲ.
ಕ್ರಿಯೆಯ ಮೂಲಕ ಶಕ್ತಿ ತುಂಬಿದರಷ್ಟೇ ತನ್ನ ನುಡಿಕಟ್ಟಗಳು, ವಾಕ್ಕುಗಳಿಗೆ ಪ್ರಭೆ ಎಂಬುದನ್ನು ಕಾಂಗ್ರೆಸ್ ಮರೆತಿದೆ. ಸ್ಥಳೀಯವಾಗಿ ಬಡ ಜಾತಿಗಳು, ಪ್ರದೇಶಗಳು ತನ್ನಿಂದ ಯಾಕೆ ದೂರವಾಗಿವೆ ಎಂಬುದು ಅದಕ್ಕೆ ಅರ್ಥವೇ ಆಗಿಲ್ಲ. ಬದಲಾದ ಕಾಲ ಸಂದರ್ಭದ ಹೊಸ ತಲೆಮಾರಿಗೆ ಹೊಸ ಮಾಹಿತಿ ಮೂಲಗಳಿಂದ ದೊರಕುವ ವಿವರಗಳು ಏನೆಂದು ಅದಕ್ಕೆ ಅರ್ಥವಾಗಿಲ್ಲ.
ಚುನಾವಣಾ ಗೆಲುವೊಂದೇ ಕಾಂಗ್ರೆಸ್ಸನ್ನೂ ಮಬ್ಬುಗೊಳಿಸಿದೆ. ಒಂದರೆ ಕ್ಷಣ ನಿಂತು, ಹೌದಲ್ಲಾ ಭ್ರಷ್ಟಾಚಾರದ ಬಗ್ಗೆ ಜನಕ್ಕೆ ಹೇವರಿಕೆ ಇದೆ ಎಂದು ಕಾಂಗ್ರೆಸ್ಸಿಗೆ ಅನ್ನಿಸಿದ್ದರೆ ಕಾರ್ತಿಯಂಥಾ ಕ್ಯಾರೆಕ್ಟರ್‍ಗೆ ಸೀಟು ಕೊಡುತ್ತಿರಲಿಲ್ಲ. ಮೋದಿಯ ಒರಟು ಶಕ್ತಿ ಪ್ರದರ್ಶನದ ವಿರುದ್ಧ ಮೊದಲು ದನಿ ಎತ್ತಿದ ಕನ್ನಯ್ಯನನ್ನು ದೂರ ಇಡುತ್ತಿರಲಿಲ್ಲ.
ಮಾಯಾ ಬಜಾರ್ ಸಿನೆಮಾದಲ್ಲಿ ಕನ್ನಡಿ ದೃಶ್ಯವೊಂದಿದೆ. ಮಾಯಾ ಕನ್ನಡಿ ಅದು. ಇಲ್ಲಿ ಇಣುಕಿದಾಗ ಕೃಷ್ಣನಿಗೆ ಶಕುನಿ ಕಾಣಿಸುತ್ತಾನೆ. ಅರ್ಥಾತ್, ಕೃಷ್ಣ ತಾನು ಜಗದೋದ್ಧಾರಕ ಎಂದುಕೊಂಡು ಕನ್ನಡಿ ನೋಡಿದರೆ ಕಾಣಿಸುವುದು ಷಡ್ಯಂತ್ರ ನಿಪುಣ ಶಕುನಿ. ಅಂದರೆ ಲೋಕೋದ್ಧಾರದ ಮಾರಲ್ ಫೈಬರ್ ಮಾಸಿ ಯುದ್ಧ ಕಾಲಕ್ಕೆ ಷಡ್ಯಂತ್ರದ ಬುದ್ಧಿಯಷ್ಟೇ ಉಳಿದಿರುವ ಕೃಷ್ಣ.
ಮತ್ತೆ ಮೋದಿಗೆ ಮರಳುವುದಾದರೆ, ತಾನೊಬ್ಬ ದೇಶೋದ್ಧಾರಕ ಎಂದು ಭಾವಿಸಿ ಮೋದಿ ಕನ್ನಡಿ ನೋಡಿದರೆ ಅಲ್ಲಿ ಕುಯುಕ್ತಿಯ ಷಡ್ಯಂತ್ರದ ದುಷ್ಟ ಮಾತ್ರಾ ಕಾಣಿಸುತ್ತಾನೆ.
ಕಾಂಗ್ರೆಸ್ಸಿಗೆ ಈ ದುಷ್ಟತನವೂ ಇಲ್ಲ. ಅದೀಗ ಹೊಟ್ಟೆ ಹೊರೆವ ಭೀತ ಹೆಜ್ಜೆಯ ಕತ್ತೆ ಕಿರುಬನಂತಿದೆ.


