ಕೋಲಾರ ಬಳಿಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆರಂಭವಾಗಿದ್ದ ದೇಶದ ಏಕೈಕ ಐಫೋನ್ ತಯಾರಿಕ ವಿಸ್ಟ್ರಾನ್‌ನಲ್ಲಿ ಕಾರ್ಮಿಕರು – ಆಡಳಿತ ಮಂಡಳಿಯ ನಡುವಿನ ಜಗಳ ಬೀದಿಗೆ ಬಂದಿದೆ. ನಾಲ್ಕು ಸಂಬಳ ನೀಡಬೇಕೆಂದು ಹಲವು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾವಿರಾರು ಕಾರ್ಮಿಕರು ಇಂದು ತಾಳ್ಮೆ ಕಳೆದುಕೊಂಡಿದ್ದು ಕಂಪನಿಯ ಒಂದು ಭಾಗಕ್ಕೆ ಬೆಂಕಿ ಹಚ್ಚಿ, ಕಿಟಕಿ ಗಾಜುಗಳನ್ನು ಒಡೆದು, ಕಾರುಗಳನ್ನು ಜಖಂಗೊಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 15 ಸಾವಿರ ಜನರಿಗೆ ಉದ್ಯೋಗ ಕೊಡುವುದಾಗಿ ವಿಸ್ಟ್ರಾನ್ ಕಂಪನಿ ಘೋಷಿಸಿತ್ತು. ಆದರೆ ಕಂಪನಿಯ ಖಾಯಂ ಉದ್ಯೋಗಗಳನ್ನು ಬೇರೆ ರಾಜ್ಯದವರಿಗೆ ನೀಡಿ, 12 ಸಾವಿರ ನಾಲ್ಕನೇ ದರ್ಜೆಯ ಗುತ್ತಿಗೆ ಉದ್ಯೋಗಗಳನ್ನು ಮಾತ್ರ ಸ್ಥಳೀಯರಿಗೆ ನೀಡಿದೆ. ಅಲ್ಲದೆ ಕೆಲಸ ಮಾಡಿಸಿಕೊಂಡು 4 ತಿಂಗಳುಗಳಿಂದ ಸಂಬಳ ಕೊಡದೆ ಸತಾಯಿಸುತ್ತಿದ್ದರು. ಹಾಗಾಗಿ ಅಲ್ಲಿನ ಕಾರ್ಮಿಕರು ಬಂಡಾಯವೆದ್ದು ಕಂಪನಿಯ ವಸ್ತುಗಳನ್ನು ಪುಡಿ ಪುಡಿ ಮಾಡಿ ತಮ್ಮ ಸಿಟ್ಟು ಹೊರಹಾಕಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆಯೇ 5 ಗಂಟೆ ಸಮಯದಲ್ಲಿ ನೂರಾರು ಕಾರ್ಮಿಕರು ಕಂಪನಿ ವಸ್ತುಗಳನ್ನು ಒಡೆದು ಹಾಕುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಆಡಳಿತ ಮಂಡಳಿಯ ಸದಸ್ಯರ ಕಾರುಗಳನ್ನು ಜಖಂಗೊಳಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠೀ ಪ್ರಹಾರ ನಡೆಸಿ, ಹಲವು ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ, ಪೊಲೀಸ್ ಅಧೀಕ್ಷಕ ಕಾರ್ತಿಕ್ ರೆಡ್ಡಿ ಭೇಟಿ ನೀಡಿದ್ದಾರೆ.
ಇಷ್ಟು ದೊಡ್ಡ ಕಂಪನಿಯಲ್ಲಿ ದುಡಿಯುವ 12 ಸಾವಿರ ಕಾರ್ಮಿಕರಿಗೆ ಕೇವಲ 8-12 ಸಾವಿರ ರೂ ಸಂಬಳವಿದೆ. ಅದನ್ನು ಕೊಡದೆ ಸತಾಯಿಸುತ್ತಿದ್ದರು. ಹಾಗಾಗಿ ಕಾರ್ಮಿಕರು ರೊಚ್ಚಿಗೆದ್ದಿದ್ದಾರೆ. ಘಟನೆ ಬೆಳಿಗ್ಗೆ 5 ಗಂಟೆಗೆ ಆರಂಭವಾದರೂ ಪೊಲೀಸರು ಸ್ಥಳಕ್ಕೆ ಬರುವಲ್ಲಿ 7 ಗಂಟೆ ಆಗಿದೆ. ಅಷ್ಟರಲ್ಲಿ ಕಾರ್ಮಿಕರು ಅಲ್ಲಿಂದ ಚೆಲ್ಲಾಪಿಲ್ಲಿಯಾಗಿದ್ದಾರೆ. ನಂತರ ರಸ್ತೆಯಲ್ಲಿ ಸಿಕ್ಕ ಸಿಕ್ಕ ಬೇರೆ ಕಂಪನಿಯ ಕಾರ್ಮಿಕರನ್ನು, ಸಾಮಾನ್ಯ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಪ್ರಕ್ಷುಬ್ದ ವಾತವಾರಣ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ: ಟೊಯೊಟಾ ಕಿರ್ಲೋಸ್ಕರ್ ದರ್ಪ ಮುಂದುವರಿಕೆ: ’ಛತ್ರಿ ಚಳುವಳಿ’ ಆರಂಭಿಸಿದ ಕಾರ್ಮಿಕರು!


