ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದೆ. ಪಂಜಾಬ್, ಹರಿಯಾಣ ರೈತರ ಸಂಖ್ಯೆ ಹೆಚ್ಚಿರುವ ಕಾರಣ ಆಯಾ ರಾಜ್ಯಗಳ ಜನರು ಇನ್ನು ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಈಗ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೆ ಏರಿರುವ ಹೊತ್ತಲ್ಲಿ, ಪ್ರತಿಭಟನೆಗೆ ಸಾಥ್ ನೀಡಲು ತೆರಳುವವರಿಗೆ 100 ಲೀಟರ್ ಪೆಟ್ರೋಲ್ ಉಚಿತವಾಗಿ ನೀಡಲು ಹರಿಯಾಣ ಪೆಟ್ರೋಲ್ ಪಂಪ್ ಅಸೋಷಿಯೇಷನ್ ನಿರ್ಧರಿಸಿ ರೈತರನ್ನು ಬೆಂಬಲಿಸಿದೆ.
ದೆಹಲಿಯ ಸಿಂಘು ಗಡಿಯಲ್ಲಿರುವ ಜಿಟಿ ರಸ್ತೆಯಲ್ಲಿ ಸುಮಾರು 15 ರಿಂದ 20 ಪೆಟ್ರೋಲ್ ಬಂಕ್‌ಗಳಿದ್ದು, ಇವು ರೈತರ ಪ್ರತಿಭಟನೆಗೆ ಭಾರಿ ಬೆಂಬಲ ವ್ಯಕ್ತಪಡಿಸಿವೆ. ರೈತರ ಪ್ರತಿಭಟನೆ ಮತ್ತು ಹರಿಯಾಣ ಪೆಟ್ರೋಲ್ ಪಂಪ್ ಅಸೋಷಿಯೇಷನ್ ನಿರ್ಧಾರದ ಕುರಿತು ಮಾತಾಡಿರುವ ಅಸೋಷಿಯೇಷನ್ ಮುಖ್ಯಸ್ಥ ಶಂಶಿರ್ ಸಿಂಗ್ ಗೋಗಿ ಇದು ರೈತರ ಪ್ರತಿಭಟನೆ ಅಲ್ಲ, ದೇಶದ ಜನರ ಪ್ರತಿಭಟನೆ ಎಂದಿದ್ದಾರೆ.
“ಹರಿಯಾಣ ಪೆಟ್ರೋಲಿಯಂ ಪಂಪ್ ಅಸೋಷಿಯೇಷನ್ ರೈತರ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಲಿದೆ. , ಜಿಟಿ ರಸ್ತೆಯಲ್ಲಿ ಇರುವ ಎಲ್ಲಾ 20ಕ್ಕೂ ಹೆಚ್ಚು ಬಂಕ್‌ಗಳು ರೈತರ ಪ್ರತಿಭಟನೆಗೆ ಬೆಂಬಲ ನೀಡಿವೆ. ನಮಗೆ ಎಷ್ಟು ಸಾಧ್ಯವೋ ಅಷ್ಟು ಪ್ರತಿಭಟನಾನಿರತ ರೈತರಿಗೆ ಸಹಾಯ ಮಾಡುತ್ತವೆ. ಬಂಕ್‌ಗಳಲ್ಲಿ ಇರುವ ವಿದ್ಯುತ್, ನೀರು, ಸ್ಥಳ, ನಿದ್ರಿಸಲು ಜಾಗ ಎಲ್ಲ ಮೂಲಭೂತ ಸೌಕರ್ಯಗಳ ಬಳಕೆ ರೈತರಿಗಾಗಿ ಇದೆ. ಜೊತೆಗೆ, ರೈತರಿಗೆ ಬೆಂಬಲ ನೀಡಲು ಪ್ರತಿಭಟನಾ ಸ್ಥಳಕ್ಕೆ ಹೋಗುವವರಿಗೆ ಉಳಿಯಲು ಸ್ಥಳ ನೀಡಲಾಗಿದೆ. ಅವರಿಗೆ ಬೇಕಾದ ಎಲ್ಲಾ ಸೌಲಭ್ಯವನ್ನು ವ್ಯವಸ್ಥೆ ಮಾಡಲಾಗಿದೆ” ಎಂದರು.
ಇದನ್ನೂ ಓದಿ: ಕೊರೊನಾ ಲಸಿಕೆ ಉಚಿತವೆಂದ ಕೇರಳ ಸಿಎಂ: ಚುನಾವಣಾ ಆಯೋಗದ ಮೆಟ್ಟಿಲೇರಿದ ವಿಪಕ್ಷಗಳು!
’ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗುವವರಿಗೆ ಇಲ್ಲಿನ ಪೆಟ್ರೋಲ್ ಬಂಕ್‌ಗಳಲ್ಲಿ 100 ಲೀಟರ್ ತೈಲ ಉಚಿತವಾಗಿ ನೀಡಲಾಗುತ್ತದೆ. ಅದು ಪೆಟ್ರೋಲ್, ಡಿಸೇಲ್ ಯಾವುದಾದರೂ ಆಗಿರಲಿ, ರೈತರಿಗೆ ಬೆಂಬಲ ನಿಡಲು ಹೊರಟವರಿಗೆ ಉಚಿತವಾಗಿ ಹಾಕಲಾಗುತ್ತದೆ. ಇಲ್ಲಿಯವರೆಗೆ ಎಷ್ಟು ಜನ ಪೆಟ್ರೋಲ್ ಹಾಕಿಸಿದ್ದಾರೆ ಎಂಬ ಫೀಡ್‌ಬ್ಯಾಕ್ ನಾವಿನ್ನು ತೆಗೆದುಕೊಂಡಿಲ್ಲ. ಪೆಟ್ರೋಲ್ ಬಂಕ್‌ಗಳು ಈ ರೀತಿ ರೈತರಿಗೆ ಬೆಂಬಲ ನೀಡಲು ನಿರ್ಧಾರ ಮಾಡಿವೆ’ ಎಂದರು.
ಮುಂದುವರೆದು, “ಈ ರೈತರ ಪ್ರತಿಭಟನೆ ದೇಶದ ಜನರ ಧ್ವನಿಯಾಗಿದೆ. ಈ ರೈತರ ಪ್ರತಿಭಟನೆ ಸೋತರೇ, ಅದು ದೇಶದ ಸೋಲು. ಏಕೆಂದರೆ, ಇದು ಅಂಬಾನಿ ಮತ್ತು ರೈತರ ನಡುವಿನ ಹೋರಾಟವಲ್ಲ, ಅಧಿಕಾರಶಾಹಿ ಮತ್ತು ಪ್ರಜಾಪ್ರಭುತ್ವದ ನಡುವಿನ ಹೋರಾಟ” ಎಂದು ಕಾಂಗ್ರೆಸ್ ಶಾಸಕರು ಆಗಿರುವ ಶಂಶಿರ್ ಸಿಂಗ್ ಗೋಗಿ ಹೇಳಿದ್ದಾರೆ.

“ರೈತ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು. ಇಲ್ಲದಿದ್ದರೇ ಪ್ರಧಾನಿ ಮೋದಿ ದೇಶವನ್ನು ಕಾರ್ಪೊರೇಟ್‌ಗಳಿಗೆ ಮಾರಿಬಿಡುತ್ತಾರೆ. ಈಗಾಗಲೇ ಎಲ್ಲಾ ವಲಯವನ್ನು ಮಾರಿಬಿಟ್ಟಿದ್ದಾರೆ. ಈಗ ರೈತರನ್ನು ಮಾರಲು ಹೊರಟಿದ್ದರು. ಆದರೆ ರೈತರು ತಿರುಗಿಬಿದ್ದರು. ಏಕೆಂದರೆ, ರೈತರನ್ನು ಮಾರಾಟ ಮಾಡುವುದು ಅಷ್ಟು ಸುಲಭದ ಮಾತಲ್ಲ ಎಂಬ ಸುಳಿವು ಮೋದಿಯವರಿಗೆ ಇರಲಿಲ್ಲ. ಬ್ರಿಟೀಷರೇ ರೈತರನ್ನು ಮಾರಾಟ ಮಾಡಲು ಆಗಲಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಬರಲಿದೆ ‘ಭೀಮಾ ಕೋರೆಗಾಂವ್’ ಚಿತ್ರ: ಸಾಮಾಜಿಕ ಮಾಧ್ಯಮಗಳಲ್ಲಿ ಫಸ್ಟ್‌ಲುಕ್ ವೈರಲ್!
’ದೇಶದಲ್ಲಿ ಈ ಬಿಜೆಪಿ, ಆರ್‌ಎಸ್‌ಎಸ್ ಜನರಲ್ಲಿ ಜಾತಿ ಧರ್ಮದ ಬಗೆಗೆ ದ್ವೇಷ ಹುಟ್ಟಿಹಾಕಿ ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿವೆ. ಇದರ ಬಗ್ಗೆ ಗೋಧಿ ಮೀಡಿಯಾ ಏನೂ ಮತಾಡುವುದಿಲ್ಲ. ಅದು ಮೋದಿಯವರ ಗುಲಾಮಿ ಮೀಡಿಯಾ ಆಗಿದೆ. ಅದು ಎಲ್ಲರನ್ನು ಗುಲಾಮರನ್ನಾಗಿಸಲು ಹೊರಟಿದೆ. ಆದರೆ ರೈತರು ಗುಲಾಮಗಿರಿಯನ್ನು ಮುರಿಯುವ ಸಲುವಾಗಿ ಹೋರಾಟಕ್ಕೆ ನಿಂತಿದ್ದಾರೆ” ಎಂದು ಮಾಧ್ಯಮಗಳ ಏಕಪಕ್ಷೀಯತೆಯನ್ನು ಟೀಕಿಸಿದ್ದಾರೆ.
’ಇದು ಜನಸಾಮಾನ್ಯರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಾಗಿದೆ. ಜನಸಾಮಾನ್ಯರು ಬೆಳೆ ಬೆಳೆಯುವುದಿಲ್ಲ. ಆದರೆ ಅದಾನಿ ಅಂಬಾನಿ ಅವರಿಂದ 20 ರೂಪಾಯಿಗೆ ದೊರೆಯುವ ಪದಾರ್ಥವನ್ನು 200 ರೂಪಾಯಿಗೆ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಜನಸಾಮಾನ್ಯರು ಮರೆಯಬಾರದು. ಇಂದು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಜನರ ಪ್ರತಿಭಟನೆಯಾಗಿದೆ. ಇದು ದೇಶದ ಪ್ರತಿಭಟನೆಯಾನ್ನಾಗಿಸಬೇಕು” ಎಂದು ಜನರನ್ನು ಪ್ರತಿಭಟನೆಗೆ ಒತ್ತಾಯಿಸಿದ್ದಾರೆ.
ಜೊತೆಗೆ, ’ಜನರು ದೇಶವನ್ನು ಪ್ರಜಾಪ್ರಭುತ್ವ, ಸಂವಿಧಾನಿಕವಾಗಿಯೇ ಇರಿಸಿಕೊಳ್ಳಬೇಕೋ ಅಥವಾ ಅಧಿಕಾರಶಾಯಿ ಆರ್‌ಎಸ್‌ಎಸ್, ಬಿಜೆಪಿಗೆ ಒಪ್ಪಿಸಬೇಕೋ ಎಂಬುದನ್ನು ಯೋಚಿಸಬೇಕು’ ಎಂದು ಕಾಂಗ್ರೆಸ್ ಶಾಸಕ ಮತ್ತು ಹರಿಯಾಣ ಪೆಟ್ರೋಲ್ ಪಂಪ್ ಅಸೋಷಿಯೇಷನ್ ಮುಖ್ಯಸ್ಥ ಶಂಶಿರ್ ಸಿಂಗ್ ಗೋಗಿ ಹೇಳಿದ್ದಾರೆ.


