ಭಾರತ ಮತ್ತೆ ಕೆನಡಾ ಉಭಯ ದೇಶಗಳ ಉನ್ನತ ರಾಜತಾಂತ್ರಿಕರ ನಡುವಿನ ವಿದೇಶಾಂಗ ಕಚೇರಿ ಸಮಾಲೋಚನೆಗಳನ್ನು ಮುಂದೂಡುವಂತೆ ಭಾರತ ಸರ್ಕಾರ ಕೆನಡಾವನ್ನು ಕೋರಿದೆ. ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಟೀಕೆಗಳ ನಂತರ ಎರಡು ದೇಶಗಳ ನಡುವಿನ ರಾಜಕೀಯ ಸಂಬಂಧದಲ್ಲಿ ಬಿರುಕು ಮೂಡಿರುವ ಮುನ್ಸೂಚನೆ ಇದಾಗಿದೆ.
ಇಂದು (ಡಿ.15) ನಡೆಯಲಿದೆ ಎಂದು ನಿರೀಕ್ಷಿಸಲಾಗಿದ್ದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪೂರ್ವ), ರಿವಾ ಗಂಗೂಲಿ ದಾಸ್ ಮತ್ತು ಅವರ ಕೆನಡಾದ ಅಧಿಕಾರಿಯೊಂದಿಗೆ ವಿದೇಶಾಂಗ ಕಚೇರಿ ಸಮಾಲೋಚನೆಗಳನ್ನು ಮುಂದೂಡಲಾಗಿದೆ. ಸಮಾಲೋಚನೆ ನಡೆಸಲು ದಿನಾಂಕ ಅನಾನುಕೂಲವಾಗಿದೆ ಎಂದು ನವದೆಹಲಿ ಒಟ್ಟಾವಾಕ್ಕೆ ತಿಳಿಸಿದೆ.
ದಿನಾಂಕ ಅನಾನುಕೂಲವಾಗಿದೆ ಎಂಬ ಕಾರಣವಿಟ್ಟುಕೊಂಡು ಕೆನಡಾದ ವಿದೇಶಾಂಗ ಸಚಿವ ಫ್ರಾಂಕೋಯಿಸ್-ಫಿಲಿಪ್ ಷಾಂಪೇನ್ ಆಯೋಜಿಸಿದ್ದ ಕೋವಿಡ್ -19 ಮಂತ್ರಿ ಸಮನ್ವಯ ಗುಂಪಿನ ಸಭೆಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಗೈರಾಗಿದ್ದರು. ಇದರ ಹಿಂದಿನ ಮಂತ್ರಿ ಸಮನ್ವಯ ಗುಂಪಿನ ಸಭೆಯಲ್ಲಿ ಭಾಗವಹಿಸಿದ್ದ ಭಾರತ, ಡಿಸೆಂಬರ್ 7 ರ ಸಭೆಯಿಂದ ದೂರವಿರಲು ವೇಳಾಪಟ್ಟಿ ಸಮಸ್ಯೆಗಳನ್ನು ಉಲ್ಲೇಖಿಸಿತ್ತು.
ಇದನ್ನೂ ಓದಿ: ಭಾರತ ಸರ್ಕಾರದ ಆಕ್ಷೇಪ ಲೆಕ್ಕಿಸದೆ ಮತ್ತೆ ರೈತರ ಪರ ದನಿಯೆತ್ತಿದ್ದ ಕೆನಡಾ ಪ್ರಧಾನಿ!
ಗುರುನಾನಕ್ ಅವರ 551 ನೇ ಜನ್ಮ ದಿನಾಚರಣೆಯಂದು ವಿಡಿಯೋ ಸಂವಾದದಲ್ಲಿ ಮಾತನಾಡಿದ್ದ ಪ್ರಧಾನಿ ಜಸ್ಟಿನ್ ಟ್ರೂಡೊ, “ರೈತರ ಪ್ರತಿಭಟನೆಯ ಕುರಿತು ಭಾರತದಿಂದ ಬರುತ್ತಿರುವ ಸುದ್ದಿಗಳನ್ನು ನಮ್ಮನ್ನು ಆತಂಕಕ್ಕೀಡುಮಾಡಿವೆ. ಅಲ್ಲಿನ ಪರಿಸ್ಥಿತಿಯಿಂದ ನಾವೆಲ್ಲರೂ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದೇವೆ. ನಿಮ್ಮಲ್ಲಿ ಅನೇಕರಿಗೆ ಇದು ನಿಜವೆಂದು ತಿಳಿದಿದೆ. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಕೆನಡಾ ಯಾವಾಗಲೂ ಬೆಂಬಲಿಸುತ್ತದೆ ಎಂದು ಹೇಳಲು ಇಚ್ಛಿಸುತ್ತೇನೆ. ಸಂವಾದದಲ್ಲಿ ನಂಬಿಕೆಯುಳ್ಳವರು ನಾವು. ರೈತರ ಬಗೆಗಿನ ನಮ್ಮ ಕಾಳಜಿಯನ್ನು ನೇರವಾಗಿ ಎಲ್ಲಾ ಮಾರ್ಗಗಳಲ್ಲಿ ಭಾರತದ ಸರ್ಕಾರದ ಗಮನಕ್ಕೆ ತರುತ್ತೇವೆ. ಇದು ನಾವೆಲ್ಲರೂ ರೈತರೊಂದಿಗೆ ನಿಲ್ಲುವ ಸಮಯ” ಎಂದು ಹೇಳಿದ್ದರು.
ಇದಕ್ಕೆ ದೇಶದಲ್ಲಿ ಅನೇಕ ಪ್ರತಿರೋಧಗಳು ವ್ಯಕ್ತವಾಗಿದ್ದವು. ದೆಹಲಿಯಲ್ಲಿರುವ ಕೆನಡಾ ರಾಯಭಾರಿಯನ್ನ ಕರೆಸಿ ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿತ್ತು. ಕೆನಡಾ ಪ್ರಧಾನಿ ನೀಡಿದಂಥ ಹೇಳಿಕೆಯಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧಕ್ಕೆ ಧಕ್ಕೆಯಾಗುತ್ತದೆ. ಇನ್ನುಮುಂದೆ ಇಂಥದಕ್ಕೆ ಆಸ್ಪದ ಕೊಡಬೇಡಿ ಎಂದು ಕೆನಡಾ ರಾಯಭಾರಿಗೆ ಸರ್ಕಾರ ಸೂಚಿಸಿತ್ತು.
ಆದರೂ ಕೂಡ ಕೆನಡಾ ಪ್ರಧಾನಿ ರೈತರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿರಲಿಲ್ಲ. ವಿದೇಶಾಂಗ ಇಲಾಖೆ ಎಚ್ಚರಿಕೆಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಜಸ್ಟಿನ್ ಟ್ರೂಡೊ, “ಪ್ರಪಂಚದ ಎಲ್ಲಾ ಶಾಂತಿಯುತ ಪ್ರತಿಭಟನೆಗಳನ್ನು ಕೆನಡಾ ಎಂದಿಗೂ ಬೆಂಬಲಿಸುತ್ತದೆ. ಭಾರತದಲ್ಲಿ ಹೋರಾಟನಿರತ ರೈತರೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿರುವುದು ಒಳ್ಳೆಯ ನಡೆ” ಎಂದಿದ್ದಾರೆ. ಭಾರತವು ನಿಮ್ಮ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂಬ ಪ್ರಶ್ನೆಗೆ ಅವರು ಪ್ರಪಂಚದ ಎಲ್ಲಾ ಶಾಂತಿಯುತ ಪ್ರತಿಭಟನೆಗಳನ್ನು ಕೆನಡಾ ಎಂದಿಗೂ ಬೆಂಬಲಿಸುತ್ತದೆ ಎಂದು ಪುನರುಚ್ಚರಿಸಿದ್ದರು. ಈ ಎಲ್ಲಾ ಬೆಳವಣಿಗೆಗಳು ಉಭಯ ದೇಶಗಳ ರಾಜಕೀಯ ಸಂಬಂಧದಲ್ಲಿ ಬಿರುಕು ಮೂಡಿಸುವ ಮುನ್ಸೂಚನೆ ನೀಡುತ್ತಿವೆ.
ಇದನ್ನೂ ಓದಿ: ಭಾರತ ಸರ್ಕಾರದ ಆಕ್ಷೇಪ ಲೆಕ್ಕಿಸದೆ ಮತ್ತೆ ರೈತರ ಪರ ದನಿಯೆತ್ತಿದ್ದ ಕೆನಡಾ ಪ್ರಧಾನಿ!


