ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಡಿಸ್ಟ್ರಿಕ್ಟ್ ಡೆವಲಪ್‌ಮೆಂಟ್ ಕೌನ್ಸಿಲ್(ಡಿಡಿಸಿ) ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ’ಗುಪ್ಕರ್’ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಇದರಲ್ಲಿ ಕಾಶ್ಮೀರ ಪ್ರಾಂತ್ಯದ 10 ಡಿಡಿಸಿಗಳಲ್ಲಿ 9 ’ಗುಪ್ಕರ್’ ಮೈತ್ರಿಕೂಟದ ಪಾಲಾಗಿದೆ.
’ಗುಪ್ಕರ್’ ಏಳು ಪಕ್ಷಗಳ ಮೈತ್ರಿಕೂಟವಾಗಿದ್ದು, ಇದು ಜಮ್ಮು ಕಾಶ್ಮೀರಕ್ಕೆ ಭಾರತ ಸಂವಿಧಾನ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯಲು ಬೇಕಾಗಿ ಹೋರಾಟ ಮಾಡುತ್ತದೆ. ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರದ ಬಿಜೆಪಿ ಸರ್ಕಾರವು ಕಳೆದ ವರ್ಷದಲ್ಲಿ ರದ್ದು ಮಾಡಿ, ರಾಜ್ಯವನ್ನು ಒಡೆದು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು.
ಇದನ್ನೂ ಓದಿ: ಕಾಶ್ಮೀರ- NIA ಬಂಧಿಸಿದ್ದ ಪಿಡಿಪಿಯ ವಹೀದ್ ಪರ್ರಾಗೆ ಜಯ
ಪ್ರತಿ ಜಿಲ್ಲೆಯಲ್ಲಿ 14 ಸ್ಥಾನಗಳಂತೆ ಎಲ್ಲಾ 20 ಜಿಲ್ಲೆಗಳೂ ಸೇರಿ ಜಮ್ಮು-ಕಾಶ್ಮೀರದ ಒಟ್ಟು 280 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಗುಪ್ಕರ್ ಮೈತ್ರಿಕೂಟ 110 ಸ್ಥಾನಗಳನ್ನು ಪಡೆದಿದ್ದು, ಬಿಜೆಪಿ 74 ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್ 27 ಸ್ಥಾನಗಳನ್ನು ಗೆದ್ದಿದ್ದು, 49 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಕಾಶ್ಮೀರದಲ್ಲಿ ಗುಪ್ಕರ್‌ಗೆ ಬಹುಮತ ಬಂದಿದ್ದರೂ, ಜಮ್ಮು ಪ್ರಾಂತ್ಯದಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಆದರೂ ಪ್ರಾಂತ್ಯದ 10 ಜಿಲ್ಲಾ ಮಂಡಳಿಗಳ 4 ಮಂಡಳಿಗಳಲ್ಲಿ ಅಧಿಕಾರದ ಹಿಡಿಯಲು ಬಿಜೆಪಿಗೆ ಸ್ಥಾನಗಳ ಕೊರತೆ ಉಂಟಾಗಲಿದೆ.
“ಕಳೆದ ವರ್ಷ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರವನ್ನು ಜಮ್ಮು ಕಾಶ್ಮೀರದ ಜನರು ತಿರಸ್ಕರಿಸಿದ್ದಾರೆ ಎಂಬುದು ಈ ಚುನಾವಣಾ ಫಲಿತಾಂಶಗಳು ಸ್ಪಷ್ಟಪಡಿಸಿವೆ” ಎಂದು ಗುಪ್ಕರ್ ಮೈತ್ರಿಕೂಟದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಇದನ್ನೂ ಓದಿ: ಡಿಡಿಸಿ ಚುನಾವಣೆ: ಗುಪ್ಕರ್ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು – ಪಕ್ಷೇತರರು ಕಿಂಗ್ ಮೇಕರ್?


