ಹೊಸ ರೂಪಾಂತರಿ ಕೊರೊನಾ ಹಿನ್ನಲೆಯಲ್ಲಿ ಗುರುವಾರ ರಾತ್ರಿಯಿಂದ ಜನವರಿ 2 ರ ಬೆಳಿಗ್ಗೆವರೆಗೆ ಇರುತ್ತದೆ ಎನ್ನಲಾಗಿದ್ದ ರಾತ್ರಿ ಕರ್ಫೂವನ್ನು ರಾಜ್ಯ ಸರ್ಕಾರ ಇಂದು ವಾಪಾಸ್ ಪಡೆದಿದೆ. ಸರ್ಕಾರದ ಈ ತೀರ್ಮಾನದ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧಗಳು ವ್ಯಕ್ತವಾಗಿದ್ದವು. ಹೀಗಾಗಿ, ಸಂಪುಟ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾತ್ರಿ ಕರ್ಫ್ಯೂ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ಆದರೆ ಸಾರ್ವಜನಿಕರು ಸ್ವಯಂ ನಿರ್ಭಂಧ ವಿಧಿಸಿಕೊಳ್ಳಬೇಕು. ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಈ ವೈರಾಣುವಿನ ಹರಡುವಿಕೆ ತಡೆಯಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.
ಬುಧವಾರ ಮಧ್ಯಾಹ್ನ ಪತ್ರಕರ್ತರೊಂಗಿಗೆ ಮಾತನಾಡಿದ್ದ ಮುಖ್ಯಮಂತ್ರಿ, “ರಾಜ್ಯದಲ್ಲಿ ಬುಧವಾರದಿಂದ ಜನವರಿ 2 ರವರೆಗೆ ’ರಾತ್ರಿ ಕರ್ಫ್ಯೂ’ ಜಾರಿಗೊಳಿಸಲಾಗಿದೆ. ಈ ಆದೇಶವು ಇಡೀ ರಾಜ್ಯಕ್ಕೆ ಅನ್ವಯವಾಗಲಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬುಧವಾರ ರಾತ್ರಿಯಿಂದಲೇ ಈ ಕ್ರಮ ಜಾರಿಗೆ ಬರಲಿದೆ” ಎಂದು ತಿಳಿಸಿದ್ದರು.
ಆದರೆ ಮತ್ತೇ ಸಂಜೆ ಮತ್ತೇ ಟ್ವಿಟ್ಟರ್‌ನಲ್ಲಿ, “ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ಬದಲಾಗಿ ನಾಳೆ, ಅಂದರೆ ದಿನಾಂಕ 24.12.2020 ರಿಂದ ಜನವರಿ 01, 2021 ರವರೆಗೆ, ರಾತ್ರಿ 11:00 ಗಂಟೆಯಿಂದ ಬೆಳಗ್ಗೆ 5:00 ಗಂಟೆಯವರೆಗೆ (ದಿನಾಂಕ 02.01.2021ರ ಬೆಳಗ್ಗೆ 5:00 ಗಂಟೆ) ಜಾರಿಯಲ್ಲಿರುತ್ತದೆ” ಎಂದು ಹೇಳಿದ್ದರು. ಆದರೆ ಇದೀಗ ಕರ್ಫ್ಯೂ ವನ್ನು ವಾಪಾಸ್ ಪಡೆದಿದ್ದಾರೆ.


