ತನ್ನ ಶತಮಾನೋತ್ಸವ ಆಚರಿಸುತ್ತಿರುವ ಪಶ್ಚಿಮ ಬಂಗಾಳದ ವಿಶ್ವ-ಭಾರತಿ ವಿಶ್ವವಿದ್ಯಾಲಯವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ವಿದ್ಯಾಲಯದ ಸಂಸ್ಥಾಪಕ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟಾಗೋರ್ ಅವರ ದೃಷ್ಟಿಕೋನ “ಆತ್ಮನಿರ್ಭರ ಭಾರತ” ಆಗಿತ್ತು ಎಂಬ ಹೇಳಿಕೆಗೆ, ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದ್ದು, “ವಲಸೆ ರಾಜಕಾರಣಿಗಳು ಟಾಗೋರ್ ಮತ್ತು ಅವರ ತತ್ವಗಳ ಬಗ್ಗೆ ಮಾತನಾಡುವ ಮೊದಲು ಅವರ ತತ್ತ್ವಶಾಸ್ತ್ರದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರಬೇಕು” ಎಂದು ಹೇಳಿದೆ.
ವಿಶ್ವವಿದ್ಯಾನಿಲಯದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ವಿಶ್ವ-ಭಾರತಿ ಹೇಗೆ ಪ್ರಮುಖ ಪಾತ್ರ ವಹಿಸಿತು ಎಂಬುದರ ಕುರಿತು ಹೇಳಿದ್ದರು. “ವಿಶ್ವ ಭಾರತಿಗೆ ಟಾಗೋರ್ ಅವರ ದೃಷ್ಟಿಕೋನವು ಆತ್ಮನಿರ್ಭರ ಭಾರತವಾಗಿದೆ. ಆತ್ಮನಿರ್ಭರ ಭಾರತ ಕೇವಲ ಭಾರತ ಅಭಿವೃದ್ದಿ ಮಾತ್ರವಲ್ಲ ವಿಶ್ವದ ಅಭಿವೃದ್ಧಿಗೆ ಭಾರತದ ಹಾದಿಯಾಗಿದೆ” ಎಂದ ಮೋದಿ ನವದೆಹಲಿಯಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆಗೆ ತಿಳಿಸಿದ್ದರು.
ಇದನ್ನೂ ಓದಿ: ಪ.ಬಂಗಾಳದಲ್ಲಿ BJP ಎರಡಂಕಿ ದಾಟುವುದಿಲ್ಲ: ಒಂದು ವೇಳೆ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ- ಪ್ರಶಾಂತ್ ಕಿಶೋರ್
ಪ್ರಧಾನಿ ಮೋದಿ ಭಾಷಣ ಮಾಡಿದ ಸ್ವಲ್ಪ ಸಮಯದಲ್ಲೇ ಪ್ರತಿಕ್ರಿಯೆ ನೀಡಿದ ತೃಣಮೂಲ ಕಾಂಗ್ರೆಸ್, “ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಗಾಗಿ ದೇಶದ ಎಲ್ಲಾ ವಿಶ್ವವಿದ್ಯಾಲಯಗಳನ್ನು ಪ್ರಧಾನಿ ಪ್ರಸ್ತಾಪಿಸಿದ್ದಾರೆ, ಆದರೆ 1857 ರಲ್ಲಿ ಸ್ಥಾಪಿಸಲಾದ ದೇಶದ ಮೊದಲ ವಿಶ್ವವಿದ್ಯಾಲಯವಾದ ಕಲ್ಕತ್ತಾ ವಿಶ್ವವಿದ್ಯಾಲಯವನ್ನು ತೊರೆದರು” ಎಂದು ಹೇಳಿದೆ.
“ಟಾಗೋರ್ ಬಗ್ಗೆ ಮಾತನಾಡುವಾಗ ಪದೇ ಪದೇ ಗುಜರಾತ್ ಉಲ್ಲೇಖಗಳು ಯಾಕೆ ಬಂದವು ಎಂದು ಅರ್ಥವಾಗಲಿಲ್ಲ, ಜೊತೆಗೆ ಮೋದಿ ಹೇಳಿದ ಕೆಲವು ವಿಷಯಗಳು ವಾಸ್ತವಿಕವಾಗಿ ತಪ್ಪಾಗಿವೆ. ಅಲ್ಲದೆ ಮೋದಿ ಮತ್ತು ಬಿಜೆಪಿಯು ಪಶ್ಚಿಮ ಬಂಗಾಳ ಮತ್ತು ಬಂಗಾಳಿಗಳನ್ನು ಕೆಳಮಟ್ಟದಲ್ಲಿ ತೋರಿಸುತ್ತಿದ್ದಾರೆ” ಎಂದಿರುವ ಟಿಎಂಸಿ, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿದೆ.
ವಿಶ್ವ-ಭಾರತಿಯನ್ನು 1951 ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ಕೇಂದ್ರ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಿಸಲಾಯಿತು. ರವೀಂದ್ರನಾಥ ಟಾಗೋರ್ ಇದನ್ನು 1921 ರಲ್ಲಿ ಸ್ಥಾಪಿಸಿದ್ದರು.
ಇದನ್ನೂ ಓದಿ: ಪ.ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಬೆಂಬಲ: ಗೂರ್ಖಾ ಜನಮುಕ್ತಿ ಮೋರ್ಚಾ