ಸ್ನೇಹಿತನ ಹುಟ್ಟುಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಹದಿ ಹರೆಯದ ಯುವಕ ಮತ್ತು ಬಾಲಕಿಯ ಮೇಲೆ ದೌರ್ಜನ್ಯ ನಡೆಸಿ, ಯುವಕನನ್ನು ಹೊಸ ವಿವಾದಾತ್ಮಕ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ.
16 ವರ್ಷದ ಹಿಂದೂ ಬಾಲಕಿಯನ್ನು ಬಲವಂತವಾಗಿ ಮತಾಂತರಗೊಳಿಸಲು ಯತ್ನಿಸಿದ ಆರೋಪದ ಮೇಲೆ ಮುಸ್ಲಿಂ ಸಮುದಾಯದ ಯುವಕನೊರ್ವ ಒಂದು ವಾರದಿಂದ ಜೈಲಿನಲ್ಲಿದ್ದಾನೆ. ಆದರೆ ಬಾಲಕಿಯನ್ನು ಮತಾಂತರ ಮಾಡಲು ಯತ್ನಿಸಿರುವ ಆರೋಪವನ್ನು ಬಾಲಕಿ ಮತ್ತು ಆಕೆಯ ತಾಯಿ ಇಬ್ಬರೂ ನಿರಾಕರಿಸಿದ್ದಾರೆ.
ಬಾಲಕಿಯ ತಂದೆ ನೀಡಿರುವ ಸುಳ್ಳು ದೂರಿನ ಆಧಾರದಲ್ಲಿ ಯುವಕನನ್ನು ಡಿಸೆಂಬರ್ 15 ರಂದು ಪೊಲೀಸರು ಬಂಧಿಸಿದ್ದಾರೆ. ಯುವಕನಿಗೆ ಕಿರುಕುಳ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ಈ ಕಾನೂನು ಜಾರಿಗೆ ಬಂದಾಗಿನಿಂದ ಹಲವು ಅಮಾಯಕರನ್ನು ಜೈಲಿಗೆ ತಳ್ಳಲಾಗುತ್ತಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಮತಾಂತರ ನಿಷೇಧ ಕಾಯ್ದೆಯಡಿ ಮತ್ತೊಬ್ಬರ ಬಂಧನ
ಘಟನೆ ಕುರಿತು ಸತ್ಯಾಸತ್ಯತೆ ತಿಳಿಯಲು ಬಾಲಕಿಯ ಹಳ್ಳಿಗೆ ಹೋದ ಪತ್ರಕರ್ತರಿಗೆ ಬಾಲಕಿ ಮತ್ತು ಬಾಲಕಿಯ ತಾಯಿ ಇದು ಲವ್ ಜಿಹಾದ್ ಪ್ರಕರಣ ಅಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ನಮ್ಮ ಮಗಳನ್ನು ಮನೆಗೆ ಬಿಡಲು ಆ ಯುವಕ ಜೊತೆಯಲ್ಲಿ ಬರುತ್ತಿದ್ದ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.
“ರಾತ್ರಿ 11.30 ರ ಸುಮಾರಿಗೆ ದಾರಿಯಲ್ಲಿ ಕೆಲವರು ನಮ್ಮನ್ನು ಹಿಡಿದು ಥಳಿಸಿದರು. ಅವರು ಹಿಡಿದುಕೊಂಡು ಹೋಗಿರುವ ಆ ಹುಡುಗ ಯಾರು ಎಂಬುದೂ ನನಗೆ ತಿಳಿದಿರಲಿಲ್ಲ. ಅವರು ನನ್ನನ್ನು ಮತಾಂತರಗೊಳಿಸಲು ಯತ್ನಿಸಿದ್ದು ಸುಳ್ಳು” ಎಂದು ಬಾಲಕಿ ಎನ್‌ಡಿಟಿವಿಗೆ ನೀಡಿದ ಸಂಕ್ಷಿಪ್ತ ಸಂದರ್ಶನದಲ್ಲಿ ಹೇಳಿದ್ದಾರೆ.
ಇತ್ತ ಬಾಲಕಿಯ ತಾಯಿ ಕೂಡ ಈ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, “ಆಕೆ ಹುಟ್ಟುಹಬ್ಬದ ಕಾರ್ಯಕ್ರಮದಿಂದ ಹಿಂತಿರುಗುತಿದ್ದಳು. ಆ ಹುಡುಗ ಅವಳನ್ನು ಮನೆಗೆ ಬಿಡುವುದಾಗಿ ಹೇಳಿ, ಕರೆದುಕೊಂಡು ಬರುತ್ತಿದ್ದನು. ಆ ಸಂದರ್ಭದಲ್ಲಿ ಗ್ರಾಮದ ಯುವಕರ ಗುಂಪು ಅವರನ್ನು ಹಿಡಿದಿದ್ದಾರೆ. ಆಕೆ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗಿದ್ದೆ ಎಂದು ಹೇಳಿದರೂ ಯಾರು ಆಕೆಯ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ದೆಹಲಿ V/s ಉತ್ತರ ಪ್ರದೇಶ: ಮಾದರಿ ಶಾಲೆ ಚರ್ಚೆಗೆ ಬಾರದ ಉತ್ತರ ಪ್ರದೇಶ ಸಚಿವ!
ಬಾಲಕಿಯ ಗ್ರಾಮಸ್ಥರು ಕೂಡ ಬಾಲಕಿ ಮತ್ತು ಆಕೆಯ ತಾಯಿಯ ಮಾತನ್ನೇ ಬೆಂಬಲಿಸಿದ್ದಾರೆ. “ಪೊಲೀಸರು ಪ್ರಕರಣವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡಿರಬೇಕು. ಇಲ್ಲಿ ಯಾವುದೇ ಲವ್ ಜಿಹಾದ್ ಪ್ರಕರಣ ನಡೆದಿಲ್ಲ. ಬಾಲಕಿ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದಳು ಎಂದು ಗ್ರಾಮದ ಮುಖಂಡ ವಿನೋದ್ ಸೈನಿ ಹೇಳಿದ್ದಾರೆ.
ಯುವಕನ ತಾಯಿ ಕೂಡ ’ನನ್ನ ಮಗ ಹುಟ್ಟು ಹಬ್ಬಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದ, ಮರುದಿನ ಬೆಳಗ್ಗೆ ಆತ ಪೊಲೀಸ್ ಠಾಣೆಯಲ್ಲಿದ್ದ. ಆತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.
ಆದರೆ ಪೊಲೀಸರು ಮಾತ್ರ ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ. “ಕೆಲವು ದಿನಗಳಿಂದ ಬಾಲಕಿ ಕಾಣೆಯಾಗಿದ್ದರು. ಆ ಹುಡುಗನು ಸೋನು ಎಂಬ ಹಿಂದೂ ಹೆಸರಿನಿಂದ ಆಕೆಯನ್ನು ಪರಿಚಯ ಮಾಡಿಕೊಂಡು, ಮತಾಂತರಗೊಳಿಸುವ ಉದ್ದೇಶದಿಂದ ಓಡಿಹೋಗುವಂತೆ ಆಕೆಯನ್ನು ಒತ್ತಾಯಿಸಿದ್ದನು. ಆದರೆ, ಆಕೆ ತಪ್ಪಿಸಿಕೊಂಡು ಬಂದಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದೆ” ಎಂದು ಬಿಜ್ನೋರ್‌ನ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದ IFFCO ಸ್ಥಾವರದಲ್ಲಿ ಅನಿಲ ಸೋರಿಕೆ; ಇಬ್ಬರು ಸಾವು, 15 ಮಂದಿ ಅಸ್ವಸ್ಥ


