ಇತ್ತೀಚೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಜಟಾಪಟಿ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಜೆಡಿಎಸ್ ಕೇವಲ ದೇವೇಗೌಡ-ಕುಮಾರಸ್ವಾಮಿಯವರ ಪಕ್ಷವಲ್ಲ. ಇನ್ನು ಅನೇಕ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ.
ಇಂದು ಬೆಂಗಳೂರಿನ ಜೆ.ಪಿ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ರಾಜಕಾರಣದಲ್ಲಿ ಸೋಲು ಗೆಲುವು ಮಾಲೂಲಿ. ಹಾಗೆಂದು ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಯಾರು ಏನೇ ಮಾಡಿದರೂ ಸಹ ತೆನೆ ಹೊತ್ತ ಮಹಿಳೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ದೇವೇಗೌಡ ಕುಮಾರಸ್ವಾಮಿಯ ಹೊರತಾಗಿಯೂ ಪಕ್ಷದಲ್ಲಿ ಸಾಕಷ್ಟು ನಾಯಕರಿದ್ದಾರೆ. ಪಕ್ಷ ಯಾರೊಬ್ಬರನ್ನೂ ನೆಚ್ಚಿಕೊಂಡಿಲ್ಲ” ಎಂದು ಕಿಡಿಕಾರಿದ್ದಾರೆ.
ಜೆಡಿಎಸ್ಗೆ ಯಾರಿಂದ ಏನೂ ಮಾಡೋಕೆ ಆಗಲ್ಲ. ಜೆಡಿಎಸ್ ನಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಮಾತ್ರ ಅಲ್ಲ. ಪಕ್ಷ ಮುನ್ನಡೆಸಲು ಇನ್ನು ಅನೇಕ ನಾಯಕರು ಇದ್ದಾರೆ. ಹಾಲು, ಅಕ್ಕಿ ಭಾಗ್ಯದ ಮೇಲೆ ಭಾಗ್ಯ ಕೊಟ್ರಿ ಏನಾಯ್ತು? ಹಾಗಾದ್ರೆ 130 ಸೀಟು ಇದ್ದದ್ದೂ 78ಕ್ಕೆ ಏಕೆ ಬಂತು? ಹಾಸನದಲ್ಲಿ ಈಗ ಕಾಂಗ್ರೆಸ್ ಏನಾಗಿದೆ? ಒಂದು ನಗರಸಭೆ ಚುನಾವಣೆ ಗೆಲ್ಲೋಕೆ ಆಗಲಿಲ್ಲ, ಇದು ಆನಂದವಾ ನಿಮಗೆ? ಎಂದು ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಬಿ ಟೀಂ ಎಂದು ನಮ್ಮ ವಿರುದ್ಧ ಟೀಕೆ ಮಾಡುವ ಯಾರು ಯಾರು ನಮ್ಮ ಮನೆ ಬಾಗಿಲಿಗೆ ಬಂದ್ರು ಅಂತಾ ಗೊತ್ತಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್ ಮುನಿಯಪ್ಪ, ಗುಲಾಂ ನಬಿ ಜಾದ್ ಎಲ್ಲಾರು ಬಂದಿದ್ರು. ಈಗ ಮಾತನಾಡುವಾಗ ಕಿಂಚಿತ್ತಾದ್ರೂ ವಾಸ್ತವ ಘಟನೆ ಬಗ್ಗೆ ಮಾತಾಡಬೇಕು ಎಂದು ದೇವೇಗೌಡರು ತಿಳಿಸಿದ್ದಾರೆ.
ನಮ್ಮ ಪಕ್ಷವನ್ನು ಬೇರೆ ಯಾವುದೇ ಪಕ್ಷದೊಂದಿಗೆ ವಿಲೀನ ಮಾಡುವುದಾಗಲಿ, ಬೇರೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಲಿ ಯಾವುದೇ ತೀರ್ಮಾನವಾಗಿಲ್ಲ. ನಮ್ಮ ಜೆಡಿಎಸ್ ಪಕ್ಷವನ್ನು ಉಳಿಸುತ್ತೇವೆ, ಬೆಳೆಸುತ್ತೇವೆ. ಪ್ರಾದೇಶಿಕ ಪಕ್ಷ ಕೇವಲ ಕರ್ನಾಟಕಕ್ಕಲ್ಲ, ಇಡೀ ದೇಶಕ್ಕೆ ಅನಿವಾರ್ಯವಾಗಿದೆ ಎಂದರು.
ಇದನ್ನೂ ಓದಿ: ಕೊರೆಯುವ ಚಳಿಯಲ್ಲಿ ತಿಂಗಳು ಪೂರೈಸಿದ ರೈತರ ಹೋರಾಟ: ಕರಗದ ಮೋದಿ


