| ಮಲ್ಲಿ |
ಕಾಂಗ್ರೆಸ್ಸಿನ ನೂರಾರು ಫೇಸ್‍ಬುಕ್ ಖಾತೆ, ಪುಟಗಳನ್ನು, ಬಿಜೆಪಿಯ ಕೆಲವೇ ಕೆಲವು ಖಾತೆ, ಪುಟಗಳನ್ನು ಫೇಸ್‍ಬುಕ್ ರದ್ದು ಮಾಡಿದೆ. ಫೇಕ್ ನ್ಯೂಸ್ ತಡೆಯುವುದರ ಭಾಗವಾಗಿ ಚುನಾವಣಾ ಹೊತ್ತಲ್ಲಿ ಇಂತಹ ತೋರಿಕೆಯ ಕ್ರಮ ಅದಕ್ಕೆ ಅಗತ್ಯವಾಗಿತ್ತು. ವಿಚಿತ್ರ ಎಂದರೆ ಭಾರತದಲ್ಲಿ ಅದು ಫೇಕ್‍ನ್ಯೂಸ್ ಪತ್ತೆ ಹಚ್ಚುವ ಕ್ರಮೇ ವಿರೋಧಾಭಾಸದಿಂದ ಕೂಡಿದೆ!
ಕಳ್ಳ ಚೌಕಿದಾರನ ಕೈಗೆ ಕಾಯುವ ಕೆಲಸ ಕೊಟ್ಟಂತಾಗಿದೆ. ಫೇಕು ಸುದ್ದಿಗಳನ್ನು ತಡೆಯಲೆಂದು ಫೇಸ್‍ಬುಕ್ ನೇಮಿಸಿಕೊಂಡಿರುವ ಕಂಪನಿಗಳೇ ಫೇಕು ಹರಡುವುದರಲ್ಲಿ, ಅದೂ ಬಿಜೆಪಿಗೆ ಅನುಕೂಲವಾಗುವ ಫೇಕ್ ನ್ಯೂಸ್‍ಗಳನ್ನು ಹರಡುವುದರಲ್ಲಿ ನಿರತವಾಗಿವೆ.
ಇಂಡಿಯಾಟುಡೇ, ಜಾಗರಣ್ ಮೀಡಿಯಾ ಮತ್ತು ಮೊಬೈಲ್‍ನ್ಯೂಸ್-ಈ ಮೂರು ಕಂಪನಿಗಳ ಪೋರ್ಟಲ್‍ಗಳು ಫ್ಯಾಕ್ಟ್ ಚೆಕಿಂಗ್ ಮಾಡುತ್ತಿದ್ದು ಫೇಸ್‍ಬುಕ್ ಸಹಪಾಠಿಗಳಾಗಿವೆ. ಆದರೆ ಇವೇ ಸಂಸ್ಥೆಗಳು ನಡೆಸುವ ಚಾನೆಲ್, ದಿನಪತ್ರಿಕೆ ಮತ್ತು ವೆಬ್‍ಸೈಟ್‍ಗಳು ಫೇಕು ಸುದ್ದಿಗಳನ್ನು ಪ್ರಸಾರ ಮಾಡುತ್ತವೆ. ಅಂದರೆ ಕಳ್ಳನಿಗೆ ಕಾಯುವ ಕೆಲಸವನ್ನು ಫೇಸ್‍ಬುಕ್ ನೀಡಿದೆ.
‘ಫೇಸ್‍ಬುಕ್‍ನಲ್ಲಿ ಸುಳ್ಳುಸುದ್ದಿಗಳು ಪ್ರಸಾರವಾಗದಂತೆ ತಡೆಯಲು ನಾವು ಬದ್ಧರಾಗಿದ್ದೇವೆ. 2019ರ ಚುನಾವಣೆಯ ಸಂದರ್ಭದ ಹಿನ್ನೆಲೆಯಲ್ಲಿ ನಾವು ಇನ್ನಷ್ಟು ಕ್ರಮಗಳನ್ನು ರೂಪಿಸಿದ್ದು, ಸುಳ್ಳುಸುದ್ದಿಗಳಿಗೆ, ಪ್ರಪಗಂಡಾಗಳಿಗೆ ಕಡಿವಾಣ ಹಾಕಲಿದ್ದೇವೆ….’ -ಫೇಸ್‍ಬುಕ್ ಇಂಡಿಯಾದ ಹೆಡ್ ಮನೀಷ ತಂಡೂರಿ ಕಳೆದ ತಿಂಗಳು ಹೀಗೆ ಉದ್ಘರಿಸಿದ್ದರು. ಆದರೆ ಫೇಸ್‍ಬುಕ್ ಈ ವಿಷಯದಲ್ಲಿ ಗಂಭೀರತೆಯನ್ನು ಹೊಂದಿಲ್ಲ ಎಂಬುದು ಪದೇ ಪದೇ ಸಾಬೀತಾಗಿದೆ. ಹಿಂದೆ ಅದು ಬಿಜೆಪಿ ಪಕ್ಷಕ್ಕೆ ಸಾಕಷ್ಟು ಅನುಕುಲವಾಗುವಂತೆ ವರ್ತಿಸಿದ್ದನ್ನೂ ಗಮನಿಸಿದಾಗ ಅದರ ನಡಾವಳಿಯೇ ಸಂಶಯಾತ್ಮಕ ಎನಿಸುತ್ತದೆ.
ಭಾರತದ ಫೇಸ್‍ಬುಕ್ ಅಕೌಂಟುಗಳಲ್ಲಿ ಸುಳ್ಳು ಸುದ್ದಿ ಪತ್ತೆ ಹಚ್ಚಲು, ಆ ಮೂಲಕ ಅಂತಹ ಮೂಲಗಳನ್ನು ನಿರ್ಬಂಧಿಸಲು, ಫೇಸ್‍ಬುಕ್ ಕಳೆದ ತಿಂಗಳು ಮತ್ತೆ 3 ಫ್ಯಾಕ್ಟ್-ಚೆಕಿಂಗ್ ಪೋರ್ಟಲ್‍ಗಳೊಂದಿಗೆ ಒಪ್ಪಂದ ಮಾಡಿಕೊಂಡಿತು. ಅದರಲ್ಲಿ ಮೂರು ಪೋರ್ಟಲ್ ಕಂಪನಿಗಳು ಸ್ವತ: ಸುಳ್ ಸುದ್ದಿಯ ವಕ್ತಾರರೇ ಆಗಿವೆ.
ಫೇಸ್‍ಬುಕ್ ನೇಮಿಸಿಕೊಂಡಿರುವ ಅಂತಹ ಮೂರು ಪ್ರಚಂಡ ಫೇಕುದಾರ್ (ಕಳ್ಳ ಚೌಕಿದಾರ್)ಗಳು ಪುಲ್ವಾಮಾ ಘಟನೆಯ ನಂತರ ವಿಪರೀತ ಸುಳ್ಳುಗಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹಬ್ಬಿಸಿವೆ. ಸತ್ಯ ಗೊತ್ತಾದ ಮೇಲೂ ಅವು ವಿಷಾದಿಸಿಲ್ಲ ಕೂಡ. ಅಂದರೆ, ಸುಳ್ಳು ಎಂದು ಗೊತ್ತಿದ್ದೂ ಅವು ಈ ಕೆಲಸ ಮಾಡಿವೆ.
ಫೇಸ್‍ಬುಕ್‍ನ ಕಾಟಾಚಾರದ ಕ್ರಮ
ತನ್ನ ಬ್ರ್ಯಾಂಡ್‍ನೇಮ್ ಉಳಿಸಿಕೊಳ್ಳಲು ಫ್ಯಾಕ್ಟ್ ಚೆಕಿಂಗ್ ಮಾಡುತ್ತೇವೆ ಎನ್ನುವ ಫೇಸ್‍ಬುಕ್ ನಿಜಕ್ಕೂ ಆ ವಿಷಯದಲ್ಲಿ ಪ್ರಾಮಾಣಿಕವಾಗಿಲ್ಲ. ಸುಳ್ಳೋ, ಸತ್ಯವೋ, ಅದಕ್ಕೆ ತನ್ನ ವ್ಯವಹಾರ ಕ್ಲಿಕ್ ಆಗಬೇಕಷ್ಟೇ.
ಹಿಂದೆ ಅಮೆರಿಕದಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಪೋರ್ಟಲ್ ಆಗಿದ್ದ ‘ಸ್ನೋಪ್ಸ್’ನ ಮ್ಯಾನೇಜಿಂಗ್ ಎಡಿಟರ್ ಬ್ರೂಕ್ ಬಿನ್‍ಸೋಸ್ಕಿ ಪ್ರಕಾರ, ‘ನಮ್ಮನ್ನು ಅವರು ‘ಕ್ರೈಸಿಸ್ ಪಿ.ಆರ್. ತರಹ ಬಳಸುತ್ತಾರೆ ಅಷ್ಟೇ… ತಾವು ಫೇಕ್ ನ್ಯೂಸ್ ತಡೆಯಲು ಕ್ರಮ ಕೈಗೊಂಡಿದ್ದೇವೆ ಎಂದು ನಂಬಿಸಲು ಫೇಸ್‍ಬುಕ್ ಈ ನಾಟಕ ಆಡುತ್ತದೆ. ನಿಜಕ್ಕೂ ಫೇಕ್ ತಡೆಯುವಲ್ಲಿ ಅದಕ್ಕೆ ಯಾವ ಆಸಕ್ತಿಯೂ ಇಲ್ಲ….”
(ಆಧಾರ: altnews.in )


