ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನಿನ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 40 ನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೂ 6 ಸುತ್ತಿನ ಮಾತುಕತೆ ನಡೆದರೂ ಎಲ್ಲವೂ ವಿಫಲಾಗಿದೆ. ರೈತರ ಪ್ರಧಾನ ಬೇಡಿಕೆಯಾದ ಕೃಷಿ ಕಾನೂನುಗಳ ರದ್ದತಿ ಮತ್ತು ಕನಿಷ್ಠ ಬೆಂಬಲ ಬೆಲೆ ಕಾನೂನಿನ ಬಗ್ಗೆ ಸರ್ಕಾರ ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಆದರೆ ರೈತರು ತಮ್ಮ ಹೋರಾಟದ ನಿರ್ಧಾರವನ್ನು ಇನ್ನೂ ಗಟ್ಟಿಗೊಳಿಸಿದ್ದು ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆಗಳು ಮುಂದುವರೆಯುತ್ತದೆ ಎಂದು ಘೋಷಿಸಿದ್ದಾರೆ. ಈ ನಡುವೆ ಸೋಮವಾರ(ಇಂದು) ಏಳನೇ ಸುತ್ತಿನ ಮಾತುಕತೆಗೆ ರೈತರನ್ನು ಸರ್ಕಾರ ಆಹ್ವಾನಿಸಿದೆ.
ದೆಹಲಿಯಿಂದ ಘಾಜಿಯಾಬಾದ್ ಹಾಗೂ ನೋಯ್ಡಾ ಮೂಲಕ ಘಾಜಿಯಾಪುರ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಿರುವುದಾಗಿ ದೆಹಲಿ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಈಗಾಗಲೇ ದೆಹಲಿಯ ಸಿಂಘು, ಟಿಕ್ರಿ, ಧಂನ್ಸಾ ಗಡಿಭಾಗಗಳನ್ನು ಬಂದ್ ಮಾಡಲಾಗಿದೆ. ಪ್ರಯಾಣಿಕರು ದೆಹಲಿ ತಲುಪಲು ಆನಂದ್ ವಿಹಾರ್, ಡಿಎನ್‌ಡಿ, ಭೋಪ್ರಾ ಮತ್ತು ಲೋನಿ ಗಡಿಭಾಗದ ಮಾರ್ಗಗಳನ್ನು ಬಳಸುವಂತೆ ಸೂಚಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ-6 ನೇ ಸುತ್ತಿನ ಮಾತುಕತೆಯು ವಿಫಲ; ಹೋರಾಟ ಮುಂದುವರೆಯಲಿದೆ
ಆರನೇ ಸುತ್ತಿನ ಮಾತುಕತೆಯಲ್ಲಿ ಒಕ್ಕೂಟ ಸರ್ಕಾರವು ವಿದ್ಯುತ್ ತಿದ್ದುಪಡಿ ಕಾಯ್ದೆ ಮತ್ತು ವಾಯುಮಾಲಿನ್ಯ ಕಾಯ್ದೆಯನ್ನು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿತ್ತು. ಇಂದು ನಡೆಯುವ ಮಾತುಕತೆಯಲ್ಲಿ ಮುಖ್ಯವಾಗಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಮತ್ತು ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನುಗಳನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತದೆ. ದೆಹಲಿಯ ಕೊರೆಯುವ ಚಳಿ ಹಾಗೂ ಪ್ರತಿಭಟನೆ ನಡೆಸುತ್ತಿರುವ ರೈತರು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್‍ಯಾಲಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಒಕ್ಕೂಟ ಸರ್ಕಾರವು ಆರನೇ ಸುತ್ತಿನ ಸಭೆಯಲ್ಲಿ, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ ಹಾಗೂ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸುವ ಕಾನೂನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ಈ ಬಗ್ಗೆ ಪರಿಶೀಲಿಸಲು ಸಮಿತಿಯನ್ನು ರಚಿಸಬಹುದು ಎಂದು ಅದು ಹೇಳಿದೆ.
ಇಂದಿನ ಸಭೆಯಲ್ಲಿ ತಮ್ಮ ಬೇಡಿಕೆಗಳು ಈಡೇರದಿದ್ದರೆ ಜನವರಿ 6 ರಂದು ಜಿಟಿ-ಕರ್ನಲ್ ರಸ್ತೆಯಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸುವುದಾಗಿ ರೈತರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ “ನಮ್ಮ ಬೇಡಿಕೆಗಳಿಗೆ ಸರ್ಕಾರ ಒಪ್ಪದಿದ್ದರೆ, ನಾವು ಮುಂದಿನ ವಾರ ಶಹಜಹಾನ್‌ಪುರ ಗಡಿಯಿಂದ ದೆಹಲಿ ಕಡೆಗೆ ಮೆರವಣಿಗೆ ಪ್ರಾರಂಭಿಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ


