Homeಮುಖಪುಟಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ರಂಗಭೂಮಿ ಹಿಂದಿನಿಂದಲೂ ಪ್ರಭುತ್ವವನ್ನು ಪ್ರಶ್ನಿಸುವ, ಎಚ್ಚರಿಸುವ, ತಪ್ಪುಗಳನ್ನು ವಿರೋಧಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಸಿನಿಮಾ ತರದ ಮಾಧ್ಯಮಗಳಿಗೆ ಹೋಲಿಸಿದರೆ ಸೆನ್ಸಾರ್‌ನ ಹೇರಿಕೆ ರಂಗಭೂಮಿಗೆ ಕಡಿಮೆ. ತನಗೆ ಅನಿಸಿದ್ದನ್ನು ಹೇಳುವ, ಚರ್ಚಿಸುವ, ತೋರಿಸುವ ಅವಕಾಶವನ್ನು, ಧೈರ್ಯವನ್ನು ರಂಗಭೂಮಿ ಉಳಿಸಿಕೊಂಡು ಬಂದಿದೆ. ಅದಕ್ಕಾಗಿ ಕೆಲವು ಬಾರಿ ಬಲಿಗಳನ್ನು ಕೊಡಬೇಕಾಗಿ ಬಂದಿದೆ.

- Advertisement -
- Advertisement -

ರಂಗಭೂಮಿ ಮಾಧ್ಯಮದ ದೊಡ್ಡ ಶಕ್ತಿಯಿರುವುದು ಅದು ಜನರನ್ನು ನೇರಾನೇರ, ಜೀವಂತವಾಗಿ ಎದುರುಗೊಳ್ಳುವ ಬಗೆಯಲ್ಲಿ. ಇಂತಹ ಜೀವಂತ ಒಡನಾಟದಲ್ಲಿ ಉಂಟಾಗಬಹುದಾದ ಹಲವು ಬಗೆಯ ಕೊಳು-ಕೊಡುಗೆಗಳು, ಕಟ್ಟಿಕೊಳ್ಳುವ ದೇಶ-ಕಾಲಗಳನ್ನು ರೂಪಾಂತರಗೊಳಿಸುವ ಆಟಗಳು, ಬೇರೆ ಯಾವ ಕಲಾ ಮಾಧ್ಯಮಕ್ಕಿಂತಲೂ ರಂಗಭೂಮಿ ಮಾಧ್ಯಮಕ್ಕೆ ಅನಿವಾರ್ಯ. ಅದನ್ನು ಬಿಟ್ಟು ಆನ್ಲೈನ್ ಥಿಯೇಟರ್, ಡಿಜಿಟಲ್ ಥಿಯೇಟರ್ ರೀತಿಯ ಏನೇ ಕಸರತ್ತು ಮಾಡಿದರೂ ಅದು ’ರಂಗಭೂಮಿ’ ಅನಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹವುಗಳು ನಾವು ಈ ಕ್ಷಣ ಸುಮ್ಮನಿರಲಾದ ಜಿದ್ದಿಗೆ ರೂಪಿಸಿಕೊಂಡ ಕಳಪೆ ಮಾದರಿಗಳು. ನಾನಿಲ್ಲಿ ರಂಗಭೂಮಿ ಮಾಧ್ಯಮದ ಶುದ್ಧತೆಯ ಬಗೆಗೆ ಮಾತಾಡುತ್ತಿಲ್ಲ. (ರಂಗಭೂಮಿ ಯಾವತ್ತಿಗೂ ಶುದ್ಧತೆಯ ವಿರೋಧಿ). ಬದಲಿಗೆ ಬೇರೆ ಯಾವುದೇ ಕಲಾ ಮಾಧ್ಯಮಕ್ಕೂ ಸಾಧ್ಯವಿಲ್ಲದ ರಂಗಭೂಮಿ ಮಾಧ್ಯಮದ ನಿಜ ’ಎಸ್ಸೆನ್ಸ್’ ಕುರಿತು ಮಾತಾಡುತ್ತಿದ್ದೇನೆ.

ಮೊದಲಿನಿಂದಲೂ ರಂಗಭೂಮಿಯ ಈ ಎಸ್ಸೆನ್ಸ್‌ನ ಹುಡುಕಾಟದ ಕುರಿತು ಹಲವು ಪ್ರಯೋಗಗಳು, ಚರ್ಚೆಗಳು, ತಕರಾರುಗಳು ಇದ್ದೇ ಇವೆ. ಡಿಜಿಟಲ್ ಇಡಿಚಿದ ಆರಂಭದ ಕಾಲದಿಂದಲೂ ರಂಗಭೂಮಿ, ತಂತ್ರಜ್ಞಾನವನ್ನು ತನ್ನ ಇರುವಿಕೆಯ ಭಾಗವಾಗಿಸಿಕೊಂಡು ಬೆಳೆಯಲು ಪ್ರಯತ್ನಿಸಿದೆ. ಆದರೆ ಹೆಚ್ಚಿನ ಬಾರಿ ಈ ಪ್ರಯತ್ನಗಳಲ್ಲಿ ಸೋತಿದೆ. ಕೆಲವು ಬಾರಿ ಗಿಮಿಕ್ ಎನ್ನಿಸುವಂತಹ ರೀತಿಯಲ್ಲಿ ತಂತ್ರಜ್ಞಾನವು ಬಳಕೆಯಾಗಿ ತನ್ನ ಪ್ರಯೋಗದಲ್ಲಿ ಗೆದ್ದಿರುವ ಉದಾಹರಣೆಗಳೂ ಇವೆ. ಇಂತಹ ಪ್ರಯೋಗಗಳು ’ನಟ ಮತ್ತು ಪ್ರೇಕ್ಷಕ’ ಜೀವಂತವಾಗಿ ಎದುರುಗೊಳ್ಳುವ ಪ್ರಕ್ರಿಯೆಯನ್ನು ಮತ್ತು ಅವರು ಕೂಡಿ ಕಟ್ಟುವ ಆಟವನ್ನು re-create ಮಾಡಲು ತಿಣುಕಾಡಿ ಹೋಗಿವೆ. ಸಾಮಾನ್ಯವಾಗಿ ರಂಗಭೂಮಿಯಲ್ಲಿ ನಟ ಮತ್ತು ಪ್ರೇಕ್ಷಕರು ಒಬ್ಬರನ್ನೊಬ್ಬರು ಎದುರುಗೊಂಡು ಹಲವು ಬಗೆಯ ರೂಪಾಂತರಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ ಮತ್ತು ಈ ರೂಪಾಂತರವು ಆ ಕ್ಷಣದ ಜೀವಂತ ಒಡನಾಟವನ್ನು ಅವಲಂಬಿಸಿರುತ್ತದೆ. ಬೇರೆಲ್ಲ ಕಲಾಮಾಧ್ಯಮಗಳಿಗೆ ಹೋಲಿಸಿದರೆ ಇಲ್ಲಿ ಪ್ರೇಕ್ಷಕನ ಕ್ರಿಯಾಶೀಲ ಕೊಡುಗೆಯ ಅಗತ್ಯತೆ ಹೆಚ್ಚು. ರಂಗಭೂಮಿ ಬೇರೆ ಕಲಾಮಾಧ್ಯಮಗಳಿಗಿಂತಲೂ ಹೆಚ್ಚಾಗಿ ತನ್ನ ನೋಡುಗನನ್ನು ಸಹ ಸೃಷ್ಟಿಕಾರ ಎಂದು ನಂಬುತ್ತದೆ, ಮತ್ತದು ಸತ್ಯವೂ ಕೂಡ. ನಾಟಕದಲ್ಲಿನ ಪ್ರತಿಯೊಬ್ಬ ನಟನು ಏಕಕಾಲಕ್ಕೆ ತನ್ನ ಕಲ್ಪನಾ ಜಗತ್ತು ಮತ್ತು ಪ್ರೇಕ್ಷಕನ ಕಲ್ಪನಾ ಜಗತ್ತನ್ನು ನಂಬಿ ತನ್ನ ಸೃಜನಶೀಲ ಅಭಿವ್ಯಕ್ತಿಯನ್ನು ಸೃಜಿಸಬೇಕಾಗುತ್ತದೆ, ಕಾಣಿಸಬೇಕಾಗುತ್ತದೆ. ಈ ಕಾರಣದಿಂದಲೇ ರಂಗಭೂಮಿಯ ಮೂಲ ಅಗತ್ಯ ನಟ ಮತ್ತು ಪ್ರೇಕ್ಷಕನ ಜೀವಂತ ಒಡನಾಟದ ಹೊರತಾಗಿ ಬೇರಾವುದು ಅಲ್ಲ. ಮೂಲ ಅಗತ್ಯ ಇಷ್ಟು ಸರಳವಾದ್ದು ಮತ್ತು ಚೆಲುವಾದ್ದು. ಆದ್ದರಿಂದಲೇ ರಂಗಭೂಮಿಯು ಹರಡಿಕೊಂಡಿರುವ ವ್ಯಾಪ್ತಿ ಹೆಚ್ಚು.

ದುರಂತವೊಂದು ಅನಿರೀಕ್ಷಿತವಾಗಿ ಒದಗಿಬಂದಾಗ ಅದಕ್ಕೆ ಪ್ರತಿಕ್ರಿಯಿಸುವ ರೀತಿ ಗೊತ್ತಿಲ್ಲದೇ ಯಾವುದೇ ಜೀವಿಯಾದರೂ ಭಯ ಮತ್ತು ಆತುರದಲ್ಲಿ ಪ್ರತಿಕ್ರಿಯಿಸುವುದು ಸಹಜವಾದ್ದೇ. ಬರ, ಭೂಕಂಪ, ಸುನಾಮಿ, ಪ್ರವಾಹಗಳು ಆದಾಗ ಹೇಗೆ ಪ್ರತಿಕ್ರಿಯಿಸಬೇಕು ಹೇಗೆ ಜೀವ ಉಳಿಸಿಕೊಳ್ಳಬೇಕೆಂದು ಜನಗಳಿಗೆ ತಿಳಿದಿರುವುದಿಲ್ಲ. ಅಳಿವುಉಳಿವಿನ ಸ್ಥಿತಿ ಉಂಟಾದಾಗ ಆತುರದ ಮತ್ತು ಚಡಪಡಿಕೆ ಪ್ರತಿಕ್ರಿಯೆಗಳೆ ಹೆಚ್ಚು. ಆಗ ಇಡೀ ಸಮೂಹ ಒಂದು ರೀತಿಯ social anxiety ಗೆ ಒಳಗಾಗುತ್ತದೆ.

ರಂಗಭೂಮಿ ಸಮುದಾಯದ್ದು ಇದೇ ಬಗೆಯ ವರ್ತನೆ. ತನ್ನನ್ನು ಹೇಗಾದರೂ ಉಳಿಸಿಕೊಳ್ಳುವ ಮತ್ತು ಸುಮ್ಮನೆ ಇರಲಾರದ ಚಡಪಡಿಕೆ. ಆನ್ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ರಂಗಭೂಮಿಯ ಹೆಸರಿನಲ್ಲಿ ರಾಶಿ ರಾಶಿ ಡಿಜಿಟಲ್ ಮೆಟೀರಿಯಲ್ ಇಂತಹ ಸಮಯದಲ್ಲಿ, ಈ ಬಿಕ್ಕಟ್ಟಿನಲ್ಲಿ ಸೃಷ್ಟಿಯಾಯಿತು. ಇದು ರಂಗಭೂಮಿ ತನ್ನ ಮೂಲ ಎಸೆನ್ಸ್ ಇಂದ ದೂರ ನಡೆದು ತನ್ನನ್ನು ತಾನು ದುರ್ಬಲಗೊಳಿಸಿಕೊಂಡ ನಡೆ ಮತ್ತು ಜಗತ್ತಿನಾದ್ಯಂತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ತನ್ನ ರಕ್ಷಕನ ರೀತಿಯಲ್ಲಿ ಕಂಡು ಅವುಗಳೇ ತಮ್ಮ ಉಳಿವಿನ ದಾರಿ ಎಂಬಂತೆ ವರ್ತಿಸಿದ್ದು ಈ ಸಾಮಾಜಿಕ ಆತಂಕದ ಭಾಗವಾಗಿಯೇ.

ಈಗ ಕೊರೊನಾ ನಿಯಮಗಳು ಸಾಕಷ್ಟು ಸಡಿಲಗೊಂಡಿದ್ದರೂ, ಪ್ರೇಕ್ಷಕರ ಜೀವಂತ ಒಡನಾಟದಲ್ಲಿ ನಾಟಕಗಳನ್ನು ಮಾಡಲು ಸಾಧ್ಯವಿದ್ದರು ಅದರ ಕಡೆ ಗಮನ ಕೊಡದೇ ಆನ್ಲೈನ್ ಪ್ಲಾಟ್‌ಫಾರ್ಮ್, zoom ಥಿಯೇಟರ್ ತರದ ವೇದಿಕೆಗಳಲ್ಲಿ ಮುಂದುವರಿದಿರುವುದು ರಂಗಭೂಮಿಯಂತಹ ಮಾಧ್ಯಮಕ್ಕೆ ಮಾಡಬಹುದಾದ ದೊಡ್ಡ ಡ್ಯಾಮೇಜ್. ಮೊದಲೆ ಹೇಳಿದಂತೆ ರಂಗಭೂಮಿ ಮೂಲಭೂತ ಅಗತ್ಯತೇ ಬಹಳ ಸರಳ: ನಟ ಮತ್ತು ಪ್ರೇಕ್ಷಕ. ಆದ್ದರಿಂದರೇ ಅದರ ವ್ಯಾಪ್ತಿ ಹೆಚ್ಚು.

ನಾಟಕವೊಂದು ನಡೆಯಲು ಇಂತಹದ್ದೊಂದು ಜಾಗವೇ ಆಗಬೇಕೆಂದೇನಿಲ್ಲ. ಮನೆ, ಶಾಲೆ, ಬೀದಿ, ಹಳ್ಳಿಯ ಮೈದಾನ, ರಂಗಮಂದಿರಗಳು ಎಲ್ಲಿಯಾದರೂ ಸರಿ. ಪ್ರೇಕ್ಷಕ-ನಟನಿದ್ದರೆ ನಿಂತ ನೆಲವೇ ರಂಗಭೂಮಿಯಾಗುತ್ತದೆ. ಆದ್ದರಿಂದಲೇ ಮೂಲದಲ್ಲಿ ಇದೊಂದು ಸರಳ ಕಲೆ. ಎಲ್ಲರ ಕೈಗೂ ಸಿಗಬಹುದಾದ ಎಲ್ಲರನ್ನೂ ಒಳಗೊಳ್ಳಬಯಸುವ ಸಮುದಾಯದ ಕಲೆ. ಎಲ್ಲಿಯಾದರೂ ಯಾವ ಗಳಿಗೆಯಲ್ಲಾದರೂ ರಂಗಭೂಮಿಯ ಮ್ಯಾಜಿಕ್ ಘಟಿಸಬಹುದು. ಆದರೆ social anxietyಯ ಭಾಗವಾಗಿ ಹುಟ್ಟಿಕೊಂಡ ಡಿಜಿಟಲ್ ವೇದಿಕೆಗಳು ಇಂತಹ ದೈತ್ಯ ಸಾಧ್ಯತೆಯನ್ನು ಕಸಿದುಕೊಳ್ಳುವ ಅಪಾಯವಿದೆ.

ನಾವುಗಳು ಈಗ ಆನ್ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಾಟಕದ ಷೋಗಳನ್ನು ನಡೆಸಿದ ಮತ್ತು ನಡೆಸುತ್ತಿರುವ ಸಂಸ್ಥೆಗಳನ್ನು ಗಮನಿಸಿದರೆ ಅವೆಲ್ಲವೂ ಸರ್ಕಾರಿ ಅಥವಾ ಕಾರ್ಪೊರೆಟ್ ಅನುದಾನ ಪಡೆದ elite ಹಿನ್ನೆಲೆಯ, ರಂಗಭೂಮಿಯ inclusive ಗುಣವನ್ನು ಗಣನೆಗೆ ತೆಗೆದುಕೊಳ್ಳದ ಸಂಸ್ಥೆಗಳು. ಇಂತಹ ಸಂಸ್ಥೆಗಳು ಮತ್ತು ಅವುಗಳು ಮಾಡುವ ಎಲೀಟ್ ರಂಗಭೂಮಿ ಯಾವುದೇ ಅಡಚಣೆಯಿಲ್ಲದೆ ಮುಂದುವರಿಯುತ್ತದೆ. ಆದರೆ ದೊಡ್ಡ ಹೊಡೆತ ಬಿದ್ದಿರುವುದು ಸಾವಿರಾರು ಅಸಂಘಟಿತ ಕಲಾವಿದರುಗಳು ತಮ್ಮ ತಮ್ಮ ಊರು-ಕೇರಿಗಳಲ್ಲಿ ಹತ್ತಾರು ಜನಗಳು ಕೂಡಿ ಕಟ್ಟಿಕೊಂಡು ಆಡುತ್ತಿದ್ದ ಸಮುದಾಯ ರಂಗಭೂಮಿಗೆ. ಇದು ಹೀಗೆ ಮುಂದುವರಿದರೆ ರಂಗಭೂಮಿ ಸಮುದಾಯದ ಕಲೆ ಅನ್ನುವುದಕ್ಕೆ ಅರ್ಥವೇ ಇರುವುದಿಲ್ಲ.

ರಂಗಭೂಮಿ ಹಿಂದಿನಿಂದಲೂ ಪ್ರಭುತ್ವವನ್ನು ಪ್ರಶ್ನಿಸುವ, ಎಚ್ಚರಿಸುವ, ತಪ್ಪುಗಳನ್ನು ವಿರೋಧಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಸಿನಿಮಾ ತರದ ಮಾಧ್ಯಮಗಳಿಗೆ ಹೊಲೀಸಿದರೆ ಸೆನ್ಸಾರ್‌ನ ಹೇರಿಕೆ ರಂಗಭೂಮಿಗೆ ಕಡಿಮೆ. ತನಗೆ ಅನಿಸಿದ್ದನ್ನು ಹೇಳುವ, ಚರ್ಚಿಸುವ, ತೋರಿಸುವ ಅವಕಾಶವನ್ನು, ಧೈರ್ಯವನ್ನು ರಂಗಭೂಮಿ ಉಳಿಸಿಕೊಂಡು ಬಂದಿದೆ. ಅದಕ್ಕಾಗಿ ಕೆಲವು ಬಾರಿ ಬಲಿಗಳನ್ನು ಕೊಡಬೇಕಾಗಿ ಬಂದಿದೆ. (ಕೆಲವು ಸಮಯದಲ್ಲಿ ಕೆಲವು ನಾಟಕಗಳ ಮೇಲೆ ’ಸಂಸ್ಕೃತಿ’ ಉಳಿಸುವವರ ಪ್ರಾಯೋಜಿತ ದಾಳಿಗಳು ನಡೆದಿವೆ).

ಈಗ ಹೆಚ್ಚು ಹೆಚ್ಚು ಆನ್ಲೈನ್ ವೇದಿಕೆಗಳಲ್ಲಿ ರಂಗಭೂಮಿ ಚಟುವಟಿಕೆಗಳನ್ನು ನಡೆಸುವುದು ಅಲ್ಲಿ ತೋರಿಸಬಹುದಾದ, ಹೇಳಬಹುದಾದ ವಸ್ತು ವಿಷಯಗಳ ಮೇಲೆ ಅಘೋಷಿತ ಸೆನ್ಸಾರ್ ಹೇರಿಕೊಂಡಂತೆಯೇ. ಬಿಗ್‌ಬಾಸ್‌ಗಳಿಗೆ ಇವೆಲ್ಲವನ್ನು ತಮ್ಮ ಕಣ್ಗಾವಲಿನಲ್ಲಿ ಇರಿಸಿಕೊಂಡು ವಾಚ್ ಮಾಡುವುದು ಮತ್ತು ಮಾನಿಟರ್ ಮಾಡುವುದು ಸುಲಭ. ಪ್ರಭುತ್ವ ಜನಗಳ imaginationಅನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಯಾವಾಗಲೂ ಜಾಲ ಹೂಡುತ್ತದೆ. ಎಲ್ಲವು ಡಿಜಿಟಲ್ ವೇದಿಕೆಗಳಲ್ಲಿ ಸಿಕ್ಕಕೂಡಲೇ ಅದನ್ನು ಸಾಧಿಸಿಕೊಳ್ಳುವುದು ಬಹಳ ಸುಲಭ. ರಂಗಭೂಮಿಯದು ಇದರ ವಿರುದ್ಧ ದಿಕ್ಕು. ತನ್ನ ಪ್ರೇಕ್ಷಕರ imaginationಅನ್ನು ವಿಸ್ತರಿಸುವ ಮತ್ತು ಆ ಮೂಲಕ ಅವರ ಯೋಚನೆ ಮತ್ತು ಅರಿವನ್ನು ವಿಸ್ತರಿಸುವುದು ರಂಗಭೂಮಿಯ ಮೂಲತತ್ವ. ಡಿಜಿಟಲ್ ಥಿಯೇಟರ್ ಪ್ರೇಕ್ಷಕರ imaginationಅನ್ನು ಮಿತಿಗೊಳಿಸುತ್ತದೆ.

ಹೆಚ್ಚಿನ ಜನರುಗಳನ್ನು ರೀಚ್ ಅಗುತ್ತದೆ ಅನ್ನುವ ಏಕೈಕ ಕಾರಣಕ್ಕೆ ಡಿಜಿಟಲ್ ಥಿಯೇಟರ್ ಪ್ಲಾಟ್‌ಫಾರ್ಮ್‌ಳನ್ನು ಈ ಕಾಲದ ಹೊಸ ಅನ್ವೇಷಣೆ ಅನ್ನುವ ರೀತಿಯಲ್ಲು ನೋಡಲಾಗುತ್ತಿದೆ. ಆದರೆ ರಂಗಭೂಮಿ ತನ್ನ ಮೂಲ ಸತುವನ್ನು ಕಳೆದುಕೊಂಡು ರೀಚ್ ಆಗುವ ಸಂಖ್ಯೆಯಲ್ಲಿ ತನ್ನ ಬೆಳವಣಿಗೆಯನ್ನು ಕಾಣುವುದಾದರೆ ಅದರಷ್ಟು ಮರುಭೂಮಿತನ ಮತ್ತೊಂದು ಇರಲಾರದು. ಇಡೀ ರಂಗಭೂಮಿ ಸಮುದಾಯ ಈಗಲಾದರೂ ವ್ಯವಧಾನದಿಂದ ಯೋಚಿಸಿ ಡಿಜಿಟಲ್ ವೇದಿಕೆಗಳಿಂದ ಬದಿಗೆ ಸರಿದು ಕಡಿಮೆ ಸಂಖ್ಯೆಯ ಪ್ರೇಕ್ಷಕರಾದರು ಅವರ ನೇರ ಭಾಗವಹಿಸುವಿಕೆಯಲ್ಲಿ ನಾಟಕಗಳನ್ನು ಆಡದೇ ಹೋದರೆ ಉಳ್ಳವರ ಹೊರತಾಗಿ ಇರುವ ಬೇರೊಂದು ದೊಡ್ಡ ಸಮೂಹವನ್ನು ಮುಟ್ಟುವುದರಿಂದ ವಂಚಿತರಾಗುತ್ತೇವೆ. ಇದು ಹೀಗೆ ಮುಂದುವರಿದರೆ ರಂಗಭೂಮಿ ಸಮುದಾಯದ ಕಲೆ ಅನ್ನುವುದಕ್ಕೆ ಅರ್ಥವೇ ಇರುವುದಿಲ್ಲ.

ಜಗತ್ತ್ತಿನಾದ್ಯಂತ ಕೊರೊನಾ ಕಾರಣದಿಂದಾಗಿ ಎಲ್ಲ ಕ್ಷೇತ್ರಗಳೂ ತಾವು ಕೆಲಸ ಮಾಡುವ ರೀತಿಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿಕೊಂಡಿವೆ ಮತ್ತು ಮಾಡಿಕೊಳ್ಳುತ್ತಿವೆ. ಅಂತಾರಾಷ್ಟ್ರೀಯ ಮಟ್ಟದ ಕಡೆಗೆ ಮುಖ ಮಾಡಲು ಹವಣಿಸುತ್ತಿದ್ದ ಎಲ್ಲ ಕ್ಷೇತ್ರಗಳ ದೃಷ್ಟಿ ಈಗ ಸ್ಥಳೀಯತೆ ಕಡೆಗೆ ಹೊರಳಿವೆ. ಈ ಬಗೆಯ ನೋಟವು ರಂಗಭೂಮಿಗೂ ಹೊಸ ಚಲನೆಯನ್ನು ನೀಡುವ ನೋಟವಾಗಬಹುದೇನೋ! ಸದಾ ಜಿಲ್ಲಾ ಮತ್ತು ನಗರ ಕೇಂದ್ರಿತವಾದ ಕನ್ನಡ ರಂಗಭೂಮಿ ವಲಯ ಈ ಕಾಲವನ್ನು ಒಂದು ಅವಕಾಶದಂತೆ ಬಳಸಿಕೊಂಡು ಹಳ್ಳಿ ಹಳ್ಳಗಳ ರೀತಿ ರಂಗಭೂಮಿ ಹರಿಯುವಂತೆ ರೂಪಿಸಲು ಸಾಧ್ಯವಾದರೆ ಅದು ಸಣ್ಣ ಮತ್ತು ಆಪ್ತವಾದ ರಂಗಪ್ರಯೋಗಗಳಿಗೆ ದಾರಿ ಮಾಡಿಕೊಡುತ್ತದೆ.

ಇಡಿಯ ಮನುಷ್ಯಕುಲಕ್ಕೆ ಆಪ್ತತೆಯ ಸಂವಾದಗಳು ಎಷ್ಟು ಮುಖ್ಯ ಎನ್ನುವುದನ್ನು ಕೊರೊನಾ ಕಾಲವು ಅಂಕಿ ಅಂಶಗಳ ಮೂಲಕ ನಮಗೆ ಸ್ಪಷ್ಟಪಡಿಸಿದೆ. ರಂಗಭೂಮಿ ಮಾಧ್ಯಮವು ಇದನ್ನು ಗಮನದಲ್ಲಿಟ್ಟುಕೊಂಡು ಮೆಗಾ ಪ್ರಾಜೆಕ್ಟ್‌ಗಳ ಖೆಡ್ಡಾಕ್ಕೆ ಬೀಳದೆ ಸ್ಥಳೀಯ, ಸಣ್ಣ, ಆಪ್ತ ಪ್ರಯೋಗಗಳನ್ನು ಕಟ್ಟಲು ಸಾಧ್ಯವಾದರೆ ಅದು ಈ ಕಾಲದ ಹಲವು ಒಳ ಹೊರಗಿನ ಕಾಯಿಲೆಗಳಿಗೆ ಗುಣಮುಖತೆಯ ದಾರಿ ತೋರಿಸಬಹುದು ಅನಿಸುತ್ತದೆ.

ಈ ರೀತಿಯ ಪ್ರಯೋಗಗಳು ನ್ಯೂಜಿಲ್ಯಾಂಡ್‌ನಂತಹ ದೇಶಗಳಲ್ಲಿ ಆರಂಭವಾಗಿವೆ. ಇದು ರಂಗಭೂಮಿ ಸಮುದಾಯ, ಪ್ರಜ್ಞಾವಂತ ಪ್ರೇಕ್ಷಕ ಸಮುದಾಯ ಮತ್ತು ಸಂವೇದನೆ ಇರಬಹುದಾದ ಸರಕಾರಗಳು ಒಟ್ಟೊಟ್ಟಿಗೆ ಸೇರಿ ಮಾಡಬೇಕಾದ ಕೆಲಸ. ಕೊರೊನಾದಿಂದಾಗಿ ಕಲಾವಿದರ ಬದುಕಿನಲ್ಲಿ ಉಂಟಾಗಿರುವ ಅನಿಶ್ಚಿತತೆಗೆ ಈ ಕ್ಷಣಕ್ಕೆ ಪರಿಹಾರವಂತೂ ಇಲ್ಲ. ಆದರೆ ಈಗ ನಾವು ಇಡಲಿರುವ ಹೊಸ ಬಗೆಯ ಹೆಜ್ಜೆಗಳು ನಮ್ಮೆಲ್ಲರ ಸಾಂಸ್ಕೃತಿಕ ಬದುಕನ್ನು ಮತ್ತು ಕಲಾವಿದರ ಬದುಕನ್ನು ಸಹ್ಯವಾಗಿಸುವಂತೆ ನೋಡಿಕೊಳ್ಳಬೇಕು ಇಲ್ಲದೆ ಹೋದರೆ ಮತ್ತದೇ ಹಳೆಯ ತಪ್ಪುಗಳನ್ನು ಹೊಸತಾಗಿ ಮಾಡಿದಂತಾಗುತ್ತದೆ ಅಷ್ಟೆ.

ಲಕ್ಷ್ಮಣ ಕೆ.ಪಿ

ಲಕ್ಷ್ಮಣ ಕೆ.ಪಿ
ರಂಗಕರ್ಮಿ, ನಟ. ಭಾರತ, ಸಿಂಗಾಪುರ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ನಾಟಕ ಪ್ರದರ್ಶನ ನೀಡಿರುವ ಇವರು, ಅರುಂಧತಿ ರಾಯ್ ಅವರ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಕೃತಿ ಆಧರಿತ ನಾಟಕದಲ್ಲೂ ಅಭಿನಯಿಸಿದ್ದಾರೆ.


ಇದನ್ನೂ ಓದಿ: ದೆಹಲಿ ಪೂರ್ವಭಾಗದಲ್ಲಿ ಭುಗಿಲೆದ್ದ ಮತ್ತೊಂದು ’ರೈತ ಪ್ರತಿಭಟನೆ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....