ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನದಿಂದ ನಿವೃತ್ತರಾಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ವದಂತಿಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟನೆ ನೀಡಿದೆ. ಸರ್ಕಾರದ ಅವಧಿ ಮುಗಿಯುವವರೆಗೂ ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟುವಲ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶ್ರಮಿಸಿರುವ ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ನಾಯಕರಾಗಿಯೇ ಮುಂದುರೆಯಲಿದ್ದಾರೆ. ಅವರಿಗೆ ರಾಷ್ಟ್ರ ನಾಯಕತ್ವವು ಪೂರ್ಣ ಪ್ರಮಾಣದ ಬೆಂಬಲ ನೀಡಲಿದೆ ಎಂದು ಬಿಜೆಪಿ ಹೈಕಮಾಂಡ್ ತಿಳಿಸಿದೆ.
ಇದನ್ನೂ ಓದಿ: ಕರ್ನಾಟಕ: ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ- ಯಾರಿಗೆ ಸಿಗಲಿದೆ ಸಚಿವ ಸ್ಥಾನ?
“ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಪಕ್ಷವು ಹಲವಾರು ಚುನಾವಣೆಗಳಲ್ಲಿ ಜಯಗಳಿಸಿದೆ. ಇದು ಯಡಿಯೂರಪ್ಪ ನೇತೃತ್ವದ ಸರ್ಕಾರವು ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ ಎಂಬುದನ್ನು ತೋರಿಸುತ್ತದೆ” ಎಂದು ಬಿಜೆಪಿಯ ಹಿರಿಯ ಕಾರ್ಯಕಾರಿಣಿ ಹೇಳಿದ್ದಾರೆ.
ಇತ್ತೀಚಿನ, ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಎರಡನ್ನೂ ಗೆದ್ದಿದೆ. ಅಲ್ಲದೆ, ಕೆಲವು ತಿಂಗಳುಗಳ ಹಿಂದೆ ನಡೆದಿದ್ದ 15 ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷವು 12 ಸ್ಥಾನಗಳನ್ನು ಗೆದ್ದಿದೆ. ಈ ಗೆಲುವು ಯಡಿಯೂರಪ್ಪ ಪರವಾದ ಒಲವನ್ನು ತೋರಿಸಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲಲು ಅವರ ನೇತೃತ್ವ ಯಶಸ್ವಿಯಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಮುಚ್ಚಿಟ್ಟ ಆರೋಪ: BJP ಸಂಸದ ಪಿ.ಸಿ. ಮೋಹನ್ ವಿರುದ್ಧ ವಿಚಾರಣೆ
ಭಾನುವಾರ, ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಯಡಿಯೂರಪ್ಪ ಸಭೆ ನಡೆಸಿದ್ದು, ಬುಧವಾರ ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ 34 ಸಚಿವ ಸ್ಥಾನದ ಪೈಕಿ 27 ಸ್ಥಾನಗಳಿಗೆ ಸಚಿವರಿದ್ದು, 07 ಸ್ಥಾನಗಳಿಗೆ ಬುಧವಾರ ಆಯ್ಕೆ ನಡೆಯಲಿದೆ. ಆದರೆ ಈಗಾಗಲೇ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಎಸ್ ಅಂಗಾರ, ಆರ್ ಶಂಕರ್, ಎಂಟಿಬಿ ನಾಗರಾಜ್ ಮತ್ತು ಸಿ.ಪಿ. ಯೋಗೇಶ್ವರ್ ಸಂಪುಟಕ್ಕೆ ಸೇರ್ಪಡೆ ಆಗುವುದು ಖಚಿತ ಎನ್ನಲಾಗಿದೆ.
ಇದನ್ನೂ ಓದಿ: ವಾಸ್ತವ ತಿಳಿಯದೆ ಕೋತಿಯಂತೆ ಮಾತನಾಡುವ ತೇಜಸ್ವಿ ಸೂರ್ಯನಿಗೂ ಉತ್ತರಿಸುತ್ತೇನೆ: ಬಡಗಲಪುರ ನಾಗೇಂದ್ರ


